ವಚನಗಳು ಉಪನಿಷತ್ತು, ಗಾಯತ್ರಿ ಮಂತ್ರಕ್ಕಿಂತ ಶ್ರೇಷ್ಠ: ಪ್ರೊ. ಲಿಂಗಪ್ಪ ಗೋನಾಳ

ಪ್ರಥಮದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ಕಮಲಾಪುರ :

ಶರಣರು, ತತ್ವಪದಕಾರರ ಸಾತ್ವಿಕ ಚಿಂತನೆ, ಸಾಮಾಜಿಕ ಕಾಳಜಿ, ಮೌಢ್ಯ ನಿರಾಕರಣೆ, ಸಮಾನತೆ ತತ್ವ, ಜೀವನಾನುಭವ ಒಳಗೊಂಡಿರುವ ವಚನ ಹಾಗೂ ತತ್ವಪದ ವೈಚಾರಿಕ ನೆಲೆಗಟ್ಟಿನ ಸಾಹಿತ್ಯವಾಗಿದೆ ಎಂದು ಪ್ರೊ. ಲಿಂಗಪ್ಪ ಗೋನಾಳ ತಿಳಿಸಿದರು.

ಕಮಲಾಪುರ ತಾಲ್ಲೂಕಿನ ಮಹಾಗಾಂವ ಕ್ರಾಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ವಚನ ಸಾಹಿತ್ಯ ಮತ್ತು ತತ್ವ ಪದಗಳ ರಾಚನಿಕತೆ ಕುರಿತು ಒಂದು ದಿನದ ರಾಷ್ಟೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ವಚನಗಳು ಉಪನಿಷತ್ತು, ಗಾಯತ್ರಿ ಮಂತ್ರಕ್ಕಿಂತಲೂ ಶ್ರೇಷ್ಠ. ದೇವರ ಮೇಲಿನ ಭಕ್ತಿಗೆ ಮಧ್ಯವರ್ತಿ ಬೇಕಿಲ್ಲ ಎಂಬುದು ವಚನಗಳ ಸಂದೇಶ. ಗದ್ಯದ ಗಂಧ, ಪದ್ಯದ ಅಂದವನ್ನು ವಚನಗಳು ಒಳಗೊಂಡಿವೆ. ವಚನ ತತ್ವಪದಗಳಲ್ಲಿ ಚಿಕಿತ್ಸಕ ಪದ್ಧತಿಯೂ ಅಡಗಿದೆ. ವಚನ ಭಾಷೆ ಅಚ್ಚಗನ್ನಡ ಎಂದು ಅವರು ವಿವರಿಸಿದರು.

ಸೊಲ್ಲಾಪುರದ ಶರಣ ಚಿಂತಕಿ ರಾಜೇಶ್ವರಿ ಲೋಕಾಪುರ ಅವರು ‘ವಚನ ಹಾಗೂ ತತ್ವಪದದಲ್ಲಿ ಕಾಯಕ ನಿಷ್ಠೆ’ ವಿಷಯ ಕುರಿತು ವಿಚಾರ ಮಂಡಿಸಿದರು. ಕಾಯಕ ನಿರತನಾದರೆ ದೇವರನ್ನೂ ಮರೆಯಬೇಕು. ಕಾಯಕ ಮಾಡಿಯೇ ಪ್ರಸಾದ ಸ್ವೀಕರಿಸಬೇಕು ಎಂಬುದು ಶರಣರ ಸಂದೇಶ ಎಂದು ಅವರು ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಚಿದಾನಂದ ಚಿಕ್ಕಮಠ ಅವರು ‘ವಚನ ಹಾಗೂ ತತ್ವಪದ ಸಾಹಿತ್ಯದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು’ ಕುರಿತು ಮಾತನಾಡಿದರು.

ಶಾಸಕ ಬಸವರಾಜ ಮತ್ತಿಮಡು ಅವರು,
ಬಸವಣ್ಣ ಹಾಗೂ ಅಂಬೇಡ್ಕರ್ ಅವರ ತಾತ್ವಿಕ ಚಿಂತನೆಗಳು ಭಾರತದ ಪ್ರಜಾಸತ್ತಾತ್ಮ ವ್ಯವಸ್ಥೆಯನ್ನು ಬಲಪಡಿಸಿವೆ. ಸಂಸತ್ತಿನ ಪರಿಕಲ್ಪನೆ, ಸಂವಿಧಾನ ನಿಯಮಗಳು 12ನೇ ಶತಮಾನದಲ್ಲಿಯೇ ಶರಣರು ಪ್ರತಿಪಾದಿಸಿದ್ದಾರೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ ಪಸಾರ, ಮಲ್ಲಿಕಾರ್ಜುನ ಮರತೂರಕರ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ವಡ್ಡನಕೇರಿ, ಲಕ್ಷ್ಮಣ ಬೋಸ್ಲೆ, ಪತ್ರಕರ್ತ ತೀರ್ಥಕುಮಾರ ಬೆಳಕೋಟಾ, ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸಪ್ಪ ವಡ್ಡನಕೇರಿ, ಪ್ರಾಧ್ಯಾಪಕ ಅನಿಲಕುಮಾರ ಹಾಲು, ಕರಿಗುಳೇಶ್ವರ, ಶ್ರೀಕಾಂತ ಪಾಟೀಲ, ಉಮೇಶ ಸಾಗರ, ಪ್ರಕಾಶ ಖೋಬ್ರೆ, ಕಾಶಿನಾಥ ಪಾಟೀಲ, ಸಾವಿತ್ರಿ ಮಠ, ಶಿಲ್ಪಾ ಗಾಂವಕರ, ಜ್ಯೋತಿರ್ಮಯ ಖಡಕೆ ಮತ್ತಿತರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *