ರಾಯಚೂರು :
ನಗರದ ಬಸವ ಕೇಂದ್ರದಲ್ಲಿ ಅವಿರಳಜ್ಞಾನಿ ಚನ್ನಬಸವಣ್ಣ ಅವರ ಜಯಂತಿ ಆಚರಣೆ ಪ್ರಯುಕ್ತ ವಿಶೇಷ ಚಿಂತನ ಗೋಷ್ಠಿ ನಡೆಯಿತು.
ಬೆಟ್ಟಪ್ಪ ಕಸ್ತೂರಿ ಅವರು ಚಿಂತನೆಗೈಯುತ್ತ, ಪ್ರಭುದೇವರ ದೃಷ್ಟಿಯಲ್ಲಿ ಚನ್ನಬಸವಣ್ಣನವರು ಅವಿರಳಜ್ಞಾನಿ, ಸ್ವಯಂಜ್ಞಾನಿ. ಬಸವಣ್ಣನವರ ಅಭಿಪ್ರಾಯದ ಪ್ರಕಾರ ಚೆನ್ನಬಸವಣ್ಣನವರು ಜನ್ಮತ: ಜ್ಞಾನಪರಿಮಳಭರಿತ, ಅಕ್ಕಮಹಾದೇವಿಯವರು ಚನ್ನಬಸವಣ್ಣನವರನ್ನು ಸಮ್ಯಕ್ ಜ್ಞಾನಿಯೆಂದು ಸಂಭೋಧಿಸಿದ್ದಾಳೆ.

ಷಟಸ್ಥಲ ಸಿದ್ಧಾಂತದ ಕರ್ತೃ ಚನ್ನಬಸವಣ್ಣನವರು ಕಲ್ಯಾಣಕ್ರಾಂತಿ ಆರಂಭವಾದ ನಂತರ ಅಮೂಲ್ಯವಾದ ವಚನ ಸಾಹಿತ್ಯದ ರಕ್ಷಣೆಗಾಗಿ ಮಾತೆ ಅಕ್ಕನಾಗಮ್ಮ, ಗಂಗಾಂಬಿಕೆ, ನೂಲಿ ಚಂದಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ ಮುಂತಾದ ಶರಣ ಸಂಕುಲವನ್ನು ಕಟ್ಟಿಕೊಂಡು ಬಿಜ್ಜಳನ ಸೈನಿಕರೊಡನೆ ಹೋರಾಡಿ ಅಮೂಲ್ಯವಾದ ವಚನ ಸಾಹಿತ್ಯವನ್ನು ಉಳಿಸಿದ ಮೇರು ವ್ಯಕ್ತಿತ್ವದ ಮಹಾಶರಣರೆಂದರು.
ಪಾರ್ವತಿ ಪಾಟೀಲ ಮಾತನಾಡಿ, ಚಿನ್ಮಯಜ್ಞಾನಿ ಚನ್ನಬಸವಣ್ಣನವರು ರಚಿಸಿದ ‘ಕರಣ ಹಸಿಗೆ’ ಆಧ್ಯಾತ್ಮಿಕವಾಗಿ, ವೈಜ್ಞಾನಿಕವಾಗಿ, ಶಾರೀರಿಕವಾಗಿ ಪ್ರಸ್ತುತವಾಗಿದೆ. ಅದರ ಅಧ್ಯಯನ ಅಂತರಂಗದ ಅನುಭವ ಮತ್ತು ಅನುಭಾವಗಳನ್ನು ಹೆಚ್ಚಿಸುತ್ತದೆ. ದೇಹ ಮನಸ್ಸಿನ ಜೊತೆಗೂಡಿ ತಾನು ದೊರಕಿಸಿಕೊಂಡ ವಿಷಯಗಳಲ್ಲಿ ಅಡಗಿದ ಚೈತನ್ಯಶಕ್ತಿಯ ಬಗ್ಗೆ ವಿಚಾರಿಸುತ್ತದೆಂದರು.

ಮುಕ್ತಾ ನರಕಲದಿನ್ನಿ ಅವರು ಮಾತನಾಡಿ, ಚಿನ್ಮಯಜ್ಞಾನಿ ಚನ್ನಬಸವಣ್ಣನವರು ರಚಿಸಿದ
“ಕರಣ ಹಸಿಗೆ” ತುಂಬಾ ಮೌಲ್ಯಯುತವಾದದ್ದು. ಹಾಲಿನಲ್ಲಿ ತುಪ್ಪವಿರುವಂತೆ, ಕಟ್ಟಿಗೆಯಲ್ಲಿ ಅಗ್ನಿ ಇರುವಂತೆ, ಬೀಜದಲ್ಲಿ ವೃಕ್ಷ ಇರುವಂತೆ ಪ್ರತಿಯೊಬ್ಬ ಮಾನವರ ಅಂತರಂಗದಲ್ಲಿ ದೇವನಿದ್ದಾನೆಂದು ಅರಿಯುವುದು. ಶಿವಯೋಗ ಅಂದರೆ ಇಷ್ಟಲಿಂಗದಲ್ಲಿ ಮನಸ್ಸನ್ನು ನೆಲೆಗೊಳಿಸಿದರೆ ಶಿವಸಾಕ್ಷಾತ್ಕಾರಾಗಿ ತಾನೇ ಶಿವನಾಗುತ್ತಾನೆ. ಈ ಅಂಶಗಳನ್ನು ಕರಣ ಹಸಿಗೆಯ ಮೂಲಕ ಚೆನ್ನಬಸವಣ್ಣನವರು ಬಿಚ್ಚಿ ತೋರಿಸಿದ್ದಾರೆ.
ಹಾಗೂ ಚನ್ನಬಸವಣ್ಣನವರು ಅಂಗಭೋಗವನ್ನು ಲಿಂಗಭೋಗವನ್ನಾಗಿ ಮಾಡಿ ತೋರಿಸಿದರು. ಲಿಂಗಭೋಗವೆಂದರೆ ಪ್ರಸಾದ. ಬಸವಾದಿ ಶರಣರು ಕರುಣಿಸಿದ ಪ್ರಸಾದ ಪ್ರಾಣಲಿಂಗಾನುಸಂಧಾನದ ಮೂಲಕ ಪ್ರಸಾದ ಕಾಯವನ್ನಾಗಿ ಮಾಡುವುದು ಎಂದರು.

ನಾವು ಬೆಳಕಿನ ಹಬ್ಬ ದೀಪಾವಳಿಯನ್ನು ಒಂದು ದಿನ ಮಾತ್ರ ಆಚರಿಸುತ್ತೇವೆ. ಸದಾಕಾಲ ಬೆಳಕನ್ನು ಕೊಡುವ ಲಿಂಗಾನುಸಂಧಾನದ ಮೂಲಕ ಸದಾ ಮಹಾಬೆಳಗಿನಲ್ಲಿ ಜೀವನಪಯಣ ಸಾಗಿಸಬಹುದೆಂದು ಮುಕ್ತಾ ಹೇಳಿದರು.
ಸಿ.ಬಿ. ಪಾಟೀಲ ವಕೀಲರು ಮಾತನಾಡಿ, ಜ್ಞಾನವೇ ಕ್ರಿಯೆ, ಕ್ರಿಯೆಯೇ ಜ್ಞಾನ ಎಂಬಂತೆ ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದಲ್ಲಿ ಮಾತ್ರ ಜೀವನ ಸಾರ್ಥಕವೆಂದರು.
ಸಿದ್ದಣ್ಣ ನಿಲೋಗಿ ಅವರು ಮಾತನಾಡುತ್ತಾ, ಕಲ್ಯಾಣ ಕ್ರಾಂತಿಯಲ್ಲಿ ವಚನ ಸಾಹಿತ್ಯದ ಉಳಿವಿಗಾಗಿ ಶರಣರು ಜೀವನವನ್ನೇ ತ್ಯಾಗ ಮಾಡಿದ್ದನ್ನು ನೆನಪಿಸಿದರು. ಚನ್ನಬಸವಣ್ಣನವರು ಶರಣಧರ್ಮ ಪ್ರಚಾರ ಮಾಡುತ್ತಾ, ಉಳಿವಿಯಲ್ಲಿ ಲಿಂಗೈಕ್ಯರಾದರೆಂದರು.

ಜೆ. ಬಸವರಾಜ ವಕೀಲರು ಪ್ರಾಸ್ತಾವಿಕ ನುಡಿನ್ನಾಡಿದರು. ರತ್ನಾಕರ್ ಮತ್ತು ನಾಗೇಶ್ವರಪ್ಪ ವಚನ ಗಾಯನ ಮಾಡಿದರು. ಪಾರ್ವತಿ ಪಾಟೀಲ ಸಾಮೂಹಿಕ ಬಸವ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ವೆಂಕಣ್ಣ ಆಶಾಪೂರ ಸ್ವಾಗತಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ, ನಿರೂಪಿಸಿದರು. ಪಿ. ಸೋಮಶೇಖರ ವಂದಿಸಿದರು.
