ಬಸವ ಜನ್ಮಭೂಮಿಯಲ್ಲಿ ಬಸವತತ್ವ ಸಾರಿದ 22ನೇ ಶರಣತತ್ವ ಕಮ್ಮಟ

ನಾಲ್ಕು ದಿನಗಳ ಕಾರ್ಯಕ್ರಮದ ವರದಿ

ವಿಜಯಪುರ

ಲಿಂಗೈಕ್ಯ ಶರಣೆ ಪುಟ್ಟಮ್ಮ, ಲಿಂಗೈಕ್ಯ ಶರಣ ಬಸವರಾಜಪ್ಪ, ಅಜ್ಜಂಪುರಶೆಟ್ರು ಸೇವಾಟ್ರಸ್ಟ್ ಮತ್ತು ದಾವಣಗೆರೆಯ ಬಸವಬಳಗ ಆಯೋಜಿಸಿದ 22ನೇ ಶರಣತತ್ವ ಕಮ್ಮಟ ಬಸವಣ್ಣನವರ ಜನ್ಮಭೂಮಿಯಲ್ಲಿ ಯಶಸ್ವಿಯಾಗಿ ನಡೆಯಿತು.

ನಗರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಅಕ್ಟೋಬರ್ 29 ರಿಂದ ನವೆಂಬರ್ 1 ರವರೆಗೆ ನಾಲ್ಕು ದಿನವೂ ಇಷ್ಟಲಿಂಗಯೋಗ, ಅನುಭಾವ, ಸಂವಾದ, ಸಾರ್ವಜನಿಕ ಸಮಾರಂಭಗಳೊಂದಿಗೆ ಅರ್ಥಪೂರ್ಣ, ಅದ್ಧೂರಿಯಾಗಿ ನಡೆಯಿತು.

ಇದಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ನೀಲಮ್ಮನ ಬಳಗ, ಅಕ್ಕನ ಬಳಗ, ರಾಷ್ಟ್ರೀಯ ವೀರ ಗಣಾಚಾರ ಸಂಘ ವಿಜಯಪುರ, ಬಸವ ಮಹಾಮನೆ ಸಮಿತಿ ಮುದ್ದೇಬಿಹಾಳ, ಬಸವ ಕೇಂದ್ರ ಜಮಖಂಡಿ ಮತ್ತು ಮರೆಗುದ್ದಿ ಎಲ್ಲಾ ಬಸವಪರ ಸಂಘಟನೆಗಳು ಸಹಕಾರ ನೀಡಿದರು.

ಉದ್ಘಾಟನೆ

29 ಗುರುವಾರ ಸಂಜೆ ಷಟಸ್ಥಲ ಧ್ವಜಾರೋಹಣವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷರಾದ ವಿ.ಸಿ. ನಾಗಠಾಣ ಅವರು ನೆರವೇರಿಸಿ ಕಮ್ಮಟಕ್ಕೆ ಚಾಲನೆ ನೀಡಿದರು.

7 ಗಂಟೆಯಿಂದ ಉದ್ಘಾಟನಾ ಸಮಾರಂಭ ನಡೆಯಿತು. ಧರ್ಮಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವೇದಿಕೆ ಮೇಲಿದ್ದ ಹಿರಿಯರು ಅನುಭಾವಿಗಳು ಗೌರವ ಸಮರ್ಪಿಸಿದರು.

ನಂತರ ಪೂಜ್ಯ ಬಸವಲಿಂಗ ಸ್ವಾಮೀಜಿ ಜ್ಞಾನ ಯೋಗಾಶ್ರಮ, ವಿಜಯಪುರ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟನೆ ಮಾಡಿದರು.

ಬಸವಕಲಾಲೋಕದ ಅರುಣ ಅವರಿಂದ ವಚನ ಪ್ರಾರ್ಥನೆ ಭಕ್ತಿಪೂರ್ವಕವಾಗಿ ನಡೆಯಿತು. ಟ್ರಸ್ಟ್ ನ ಸದಸ್ಯ ಸಿಂಧನೂರಿನ ಪಿ. ರುದ್ರಪ್ಪ ಅವರು ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಟ್ರಸ್ಟ್ ನ ಮೂಲಪುರುಷ ಸಿದ್ಧಮಲ್ಲಣ್ಣ ಅಜ್ಜಂಪುರಶೆಟ್ರು ಅವರೊಂದಿಗಿನ ಒಡನಾಟ ಜ್ಞಾಪಿಸಿಕೊಂಡು, ಅವರ ಘನವ್ಯಕ್ತಿತ್ವವನ್ನು ಸಭೆಗೆ ತಿಳಿಸಿದರು.

ನಂತರ ಶಿಬಿರಾರ್ಥಿಗಳು ಶಿಬಿರದ ಅವಧಿಯಲ್ಲಿ ಪಾಲಿಸಬೇಕಾದ ಶಿಸ್ತಿನ ಪಾಲನೆಗಳನ್ನು ನೆನಪಿಸಿದರು. ಎಲ್ಲೆಂದರಲ್ಲಿ ಕಸ ಬೀಸಾಡುವದು, ತಟ್ಟೆಯಲ್ಲಿ ಅನ್ನವನ್ನು ಬಿಟ್ಟು ಶರಣರ ಪ್ರಸಾದ ತತ್ವಕ್ಕೆ ಅಪಚಾರ ಮಾಡುವದು, ಸಭೆಯ ಸಂಧರ್ಭದಲ್ಲಿ ಶಾಂತತೆ ಕಾಪಾಡಿಕೊಳ್ಳುವದು, ಬಂದ ಎಲ್ಲರನ್ನು ಭಕ್ತಿ ಭಾವದಿಂದ ಗೌರವಿಸುವದು, ಇತ್ಯಾದಿ ವಿಷಯಗಳನ್ನು ನೆನಪಿಸಿದರು.

ನಂತರ “ಸಾರ್ಥಕ ಬದುಕಿಗಾಗಿ ಶರಣ ಧರ್ಮ ” ಕುರಿತು ಮನಗೂಳಿ ವಿರಕ್ತಮಠದ ಪೂಜ್ಯ ವಿರತೀಶಾನಂದ ಸ್ವಾಮೀಜಿ ಅವರು ಶರಣರ ಸಂದೇಶಗಳು ಹೇಗೆ ಬದುಕನ್ನು ಸಾರ್ಥಕ ಗೊಳಿಸುತ್ತವೆ ಎಂದು ತಿಳಿಯಪಡಿಸಿದರು.

ನಂತರ “ಶರಣರು ಕಂಡ ದೇವರ ಸ್ವರೂಪ” ಕುರಿತು ವಿಜಯಪುರದ ಅನುಭಾವಿ, ಚಿಂತಕ ಜೆ.ಎಸ್. ಪಾಟೀಲ ಅವರು, ಶರಣರು ಕಂಡ ಭಿನ್ನ ಸ್ವರೂಪದ ಬಗ್ಗೆ ಮಾರ್ಮಿಕವಾಗಿ ವ್ಯತ್ಯಾಸ ಗುರುತಿಸಿ ತಿಳಿಯಪಡಿಸಿದರು.

ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಬಸವಲಿಂಗ ಸ್ವಾಮೀಜಿ “ಓಂ ಶ್ರೀ ಗುರು ಬಸವಲಿಂಗಾಯ ನಮ:” ಎಂದು ಬಸವ ಗುರುವನ್ನು ಸ್ತುತಿಸಿ, ಶರಣತತ್ವಗಳ ಪಾಲನೆ ಎಷ್ಟು ಅವಶ್ಯವಿದೆ ಎನ್ನುವದರ ಬಗ್ಗೆ ಹೃದಯಾಂತರಾಳದ ಮಾತುಗಳನ್ನು ಹಂಚಿಕೊಂಡರು.

ಶರಣ ಜಂಬೂನಾಥ ಕಂಚಾಣಿ ಅಧ್ಯಕ್ಷರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅವರು ಮಾತನಾಡಿ, ಅಮೂಲ್ಯ ನುಡಿಗಳನ್ನು ಹಂಚಿಕೊಂಡರು.

ದಾವಣಗೆರೆ ಬಸವ ಬಳಗದ ಅಧ್ಯಕ್ಷೆ ಶರಣೆ ಭುವನೇಶ್ವರಿ ತಾಯಿ ಅಧ್ಯಕ್ಷೀಯ ನುಡಿಗಳನ್ನಾಡಿದರು.

ವಚನ ಪ್ರಾರ್ಥನೆಯೊಂದಿಗೆ ಮೊದಲ ದಿನದ ಕಮ್ಮಟ ಕಾರ್ಯಕ್ರಮ ಮಂಗಲಗೊಂಡಿತು.

ಶಿವಯೋಗ ಪ್ರಾತ್ಯಕ್ಷಿಕೆ , ಶರಣಜಾಗೃತಿ ಪ್ರಜ್ಞಾನಡೆ

30 ಶುಕ್ರವಾರ ಬೆಳಿಗ್ಗೆ 6 ರಿಂದ 7.30 ರವರೆಗೆ ಪೂಜ್ಯ ಇಳಕಲ್ಲ ವಿಜಯ ಮಹಾಂತೇಶ್ವರ ಮಠದ ಗುರುಮಹಾತ ಸ್ವಾಮೀಜಿ ಅವರು ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಸ್ವಾಮೀಜಿ ಅನುಭಾವ ನೀಡುತ್ತ , ಇಷ್ಟಲಿಂಗದ ಪ್ರಯೋಗ ದೇಹದ ಮೇಲೆ ಹೇಗೆ ಧನಾತ್ಮಕ ಬದಲಾವಣೆ ಉಂಟು ಮಾಡುತ್ತದೆ ಎನ್ನುವ ವಿಷಯವನ್ನು ಮನವರಿಕೆ ಮಾಡಿಕೊಟ್ಟರು.

ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ವಿಜಯಪುರ ನಗರದ ಪ್ರಮುಖ ಬಡಾವಣೆಯಲ್ಲಿ ಶರಣಜಾಗೃತಿ ಪ್ರಜ್ಞಾನಡೆಯಲ್ಲಿ ನೂರಾರು ಬಸವಭಕ್ತರು ವಚನಗಳನ್ನು ಹಾಡುತ್ತಾ, ಭಕ್ತಿಯಿಂದ ಪಾಲ್ಗೊಂಡರು. ಬಸವ ಕಲಾಲೋಕದ ಕಲಾವಿದರು ಶುಶ್ರಾವ್ಯವಾಗಿ ವಚನ ಹಾಡುತ್ತಾ, ಭಕ್ತಿಭಾವಕ್ಕೆ ಇಂಬುಕೊಟ್ಟದ್ದು ಎದ್ದು ಕಾಣುತ್ತಿತ್ತು.

ಬೆಳಿಗ್ಗೆ 10 ರಿಂದ 11 ಗಂಟೆಗೆ ಅನುಭಾವ ಪಾಠ -1 “ಕಾಣುವ ಸೃಷ್ಟಿ ಮಿಥ್ಯವೇ? ” (ವಚನಗಳಲ್ಲಿ ಸೃಷ್ಟಿಯ ಸ್ವರೂಪ) ವಿಷಯದ ಬಗ್ಗೆ ಶರಣೆ ಭಾರತಿ ಕೆಂಪಯ್ಯ, ಬೆಂಗಳೂರು ಅವರು ವಿಷಯ ಪ್ರವೇಶ ಮಾಡಿದರು.

‘ಕಾಣುವ ಸೃಷ್ಟಿ ಮಿಥ್ಯ, ಬ್ರಹ್ಮ ಮಾತ್ರ ಸತ್ಯ’ ಎನ್ನುವ ಬಸವಪೂರ್ವದ ನಂಬಿಕೆಯನ್ನು ಶರಣರು ಹೇಗೆ ಸತ್ಯದ ನೆಲೆಯಲ್ಲಿ ಕಂಡರು ಎನ್ನುವ ಕುರಿತು ವಚನಧಾರಿತವಾಗಿ ವಿವರಿಸಿದರು.

11 ರಿಂದ 11.15 ಸಂವಾದ ನಡೆಯಿತು. ವಿಷಯದ ಕುರಿತು ಸಭಿಕರು ಕಳುಹಿಸಿದ ಪ್ರಶ್ನೆಗಳಿಗೆ ತೃಪ್ತಿಕರ ಉತ್ತರಗಳನ್ನು ನೀಡಿದ್ದು ಗಮನಾರ್ಹವೆನಿಸಿತು.

ಬೆಳಿಗ್ಗೆ 11.15 ರಿಂದ 12.15 ಕ್ಕೆ ಅನುಭಾವ ಪಾಠ -2, “ಸೃಷ್ಟಿ ಮತ್ತು ಮಾನವ ಜೀವಿಯ ಸಂಬಂಧ ” ವಿಷಯ (ಮಾನವ ಜನ್ಮದ ಶ್ರೇಷ್ಠತೆ) ಕುರಿತು ಹೊಸಪೇಟೆಯ ಕೃಪಾನಿಧಿ ಆಶ್ರಮದ ಶರಣ ಬಸವ ಕಿರಣ ಅವರು ವಿಷಯ ಪ್ರವೇಶಮಾಡಿ ಮಾತನಾಡಿದರು.

ಮಾನವಜೀವಿ ಹೇಗೆ ಸತತವಾಗಿ ಬಿಟ್ಟೂಬಿಡದಂತೆ ಸೃಷ್ಟಿಯ ಜೊತೆ ಹೇಗೆ ಸಂಬಂಧ ಹೊಂದಿದ್ದಾನೆ ಎಂದು ತಿಳಿಸಿ, ಇಷ್ಟಲಿಂಗಯೋಗ ಈ ಸಂಬಂಧವನ್ನು ಹೇಗೆ ಏರ್ಪಡಿಸುತ್ತದೆ ಎನ್ನುವುದರ ಬಗ್ಗೆ ಮನ ಮುಟ್ಟುವಂತೆ ತಿಳಿಸಿದರು.

12.15 ರಿಂದ 12.30ರವರೆಗೆ ಸಂವಾದ ನಡೆದು, ಸಭಿಕರ ಪ್ರಶ್ನೆಗಳಿಗೆ ಸಮಂಜಸ ಉತ್ತರ ಕಂಡುಕೊಳ್ಳಲಾಯಿತು.

ಮಧ್ಯಾನ್ಹ 12.30 ರಿಂದ 1.15 ಅನುಭಾವ ಪಾಠ -3 “ಅರಿವಿನ ಪ್ರಜ್ಞಾ ಜಾಗೃತಿಯೇ ಗುರು” ಎನ್ನುವ ಕುರಿತು ಶಶಿಧರ ಕರವೀರ ಶೆಟ್ಟರ, ಹುಬ್ಬಳ್ಳಿ ಅವರು ವಿಷಯ ಪ್ರವೇಶ ಮಾಡಿದರು.

ಸೃಷ್ಟಿಯಲ್ಲಿನ ಗುರು ತತ್ವ, ಪಿಂಡಾಡದಲ್ಲಿಯೂ ಹೇಗೆ ಕಾರ್ಯ ನಿರ್ವಹಿಸುತ್ತದೆ, ಎನ್ನುವುದನ್ನು ತಿಳಿಸಿ, ಆ ಅಂತರಂಗದ ಬೆಳಗನ್ನು ಕಂಡ ವ್ಯಕ್ತಿ ಗುರು ಆಗಬಲ್ಲನೆ ಹೊರತು, ಅದು ಹುಟ್ಟಿನಿಂದ, ಪರಂಪರೆಯಿಂದ, ಉಡುವ ಬಟ್ಟೆಯಿಂದ, ಬಾಹ್ಯದ ಮಾತುಗಳಿಂದ, ಬರುವುದಲ್ಲ ಎನ್ನುವ ವಿಷಯ ತಿಳಿಸಿ, ಅದು ಲಭ್ಯವಾಗುವದು ಪ್ರಜ್ಞೆಯ ಅರಳುವಿಕೆಯಿಂದ ಮಾತ್ರ ಸಾಧ್ಯ, ಅದಕ್ಕೆ ಸಾಧನೆ ಬೇಕು ಎಂದು ತಿಳಿಸಿದರು.

ನಂತರ 1.15 ರಿಂದ 1.30 ಸಂವಾದ ನಡೆದು ಎಷ್ಟೋ ಅಂತರ್ಗತ ವಿಷಯಗಳ ಚರ್ಚೆಗೊಂಡವು.

1.30 ರಿಂದ 3 ಗಂಟೆಯವರೆಗೆ ಬಸವ ಪ್ರಸಾದ ವಿತರಣೆ ನಡೆಯಿತು. ಎಲ್ಲರೂ ತಟ್ಟೆಯಲ್ಲಿ ಒಂದಗುಳು ಬಿಡದೆ ಪ್ರಸಾದ ಸ್ವೀಕರಿಸಿದ್ದು ವಿಶೇಷ ನಡೆ ಎನಿಸಿತು.

ಮಧ್ಯಾನ್ಹ 3 ರಿಂದ 4 ಗಂಟೆ ಅನುಭಾವ ಪಾಠ -4, ವಿಷಯ, “ಗುರು ತೋರಿದ ಪರಮನ ನೆಲೆಯೇ ಇಷ್ಟಲಿಂಗ ” ಎನ್ನುವ ಕುರಿತು ರುದ್ರೇಶ ಕಿತ್ತೂರ, ಮುದ್ದೇಬಿಹಾಳ ಅವರು ವಿಷಯ ಪ್ರವೇಶ ಮಾಡಿದರು. 4.ರಿಂದ 4.15 ಸಂವಾದ ನಡೆಯಿತು.

4.15 ರಿಂದ 4.45 ರವರೆಗೆ ಅನುಭಾವ ಪಾಠ -5, “ಕಾಯ ಜೀವ ಸೃಷ್ಟಿಯಲ್ಲಿ ಅಂತರ್ಗತವಾಗಿರುವ ಶಿವ ಚೇತನವೇ ಜಂಗಮ ” ಎನ್ನುವ ವಿಷಯ ಕುರಿತು ಶಶಿಧರ ಕರವೀರಶೆಟ್ಟರ, ಹುಬ್ಬಳ್ಳಿ ಅವರು ಅನುಭಾವ ನೀಡಿದರು. ನಂತರ ನಡೆದ ಸಂವಾದದಲ್ಲಿ “ಜಂಗಮ ತತ್ವ ” ಸೃಷ್ಟಿಯಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವ ಕುರಿತು ಅದ್ಭುತವಾಗಿ ವಿವರಣೆ ನೀಡಿ ಅದರ ಬೃಹತ್ ವ್ಯಾಪ್ತಿಯ ಬಗ್ಗೆ ತಿಳಿಸಿದ್ದು ಹೊಸ ಹೊಳವನ್ನು ನೀಡಿತು.

ಲಿಂಗಾಯತರಲ್ಲಿ ಇರುವ ಧರ್ಮಪ್ರಜ್ಞೆಯ ಕೊರತೆ

ಸಾಯಂಕಾಲ 6 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ಬಸವಕಲಾಲೋಕದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ವೀರಣ್ಣ ತೊಂಡಿಗಟ್ಟಿ ಸರ್ವರನ್ನು ಸ್ವಾಗತಿಸಿದರು. ಅನುಭಾವದ ಅತಿಥಿಗಳಾಗಿ ಆಗಮಿಸಿದ ಆಳಂದದ ತೋಂಟದ ಸಿದ್ಧಲಿಂಗೇಶ್ವರ ಅನುಭವ ಮಂಟಪದ ಪೂಜ್ಯ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ಶರಣತತ್ವ ಶುದ್ಧವಾಗಿ ಉಳಿಸಿಕೊಳ್ಳಲು ಲಿಂಗಾಯತ ಸಮಾಜ ವಹಿಸಬೇಕಾದ ಎಚ್ಚರಿಕೆಯ ಕುರಿತು ಜಾಗೃತಿ ಮೂಡಿಸಿದರು.

ಶಂಕರ ಗುಡಸ, ಬೆಳಗಾವಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಬಸವಭಕ್ತರ ಕರ್ತವ್ಯಗಳನ್ನು ನೆನಪಿಸಿದರು. ಷಣ್ಮುಖೇಶ್ವರ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಆಗಮಿಸಿ, ಶರಣರ ನಿಲುವುಗಳನ್ನು ಕೊಂಡಾಡಿದರು.

ಸಾನಿಧ್ಯ ವಹಿಸಿದ್ದ ಪೂಜ್ಯ ಪಂಚಮಲಿಂಗೇಶ್ವರ ಸ್ವಾಮೀಜಿ, ದುರದುಂಡೇಶ್ವರಮಠ, ನೀಡಶೇಶಿ ಅವರು, ಲಿಂಗಾಯತರಲ್ಲಿ ಇರುವ ಧರ್ಮಪ್ರಜ್ಞೆಯ ಕೊರತೆಯನ್ನು ವಿವರಿಸಿ, ಅದು ಹೇಗೆ ಭಿನ್ನಧರ್ಮಿಯರಲ್ಲಿ ಅಚ್ಚೊತ್ತಿದೆ ಎನ್ನುವ ವಿಷಯವನ್ನು ಉದಾಹರಣೆ ಸಹಿತ ವಿವರಣೆ ನೀಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅವರ ನುಡಿಗಳು ಹಾಜರಿದ್ದ ಸಭೀಕರ ಹೃದಯಕ್ಕೆ ತಾಗುವಂತಿದ್ದವು. ಕೆಲವು ಕ್ಷಣ ಇಡೀ ವೇದಿಕೆ ಗಂಭೀರ ಕ್ಷಣಗಳಿಗೆ ಸಾಕ್ಷಿಯಾಯಿತು.

ಜಾಗತಿಕ ಲಿಂಗಾಯತ ಮಹಾಸಭೆ, ವಿಜಯಪುರ ಜಿಲ್ಲಾಧ್ಯಕ್ಷರಾದ ಬಸನಗೌಡ ಹರನಾಳ ಮತ್ತು ಶಶಿಕಲಾ ಕೊಟಗಿ, ಅಧ್ಯಕ್ಷರು ನೀಲಮ್ಮನ ಬಳಗ, ವಿಜಯಪುರ ಅವರು ಅತಿಥಿಗಳಾಗಿ ವೇದಿಕೆಯಲ್ಲಿದ್ದರು.

ಜನಜಾಗೃತಿ ಪ್ರಜ್ಞಾನಡೆ

31 ಶನಿವಾರ ಬೆಳಿಗ್ಗೆ ಎಂದಿನಂತೆ ಶಿವಯೋಗ ಪ್ರಾತ್ಯಕ್ಷಿಕೆಯನ್ನು ಪೂಜ್ಯ ಗುರುಮಹಾಂತ ಸ್ವಾಮೀಜಿ, ಇಲಕಲ್ಲ ಅವರು ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ನಂತರ ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ವಿಜಯಪುರ ನಗರದ ಪ್ರಮುಖ ಬಡಾವಣೆಯಲ್ಲಿ “ಜನಜಾಗೃತಿ ಪ್ರಜ್ಞಾನಡೆ”ಯಲ್ಲಿ ನೂರಾರು ಬಸವಭಕ್ತರು ವಚನ ಹಾಡುತ್ತಾ, ಭಕ್ತಿಯಿಂದ ಪಾಲ್ಗೊಂಡರು.

ದಾರಿಯುದ್ಧಕ್ಕೂ ನಗರದ ಜನರು ಮನೆಯ ಮುಂದೆ ರಂಗೋಲಿ ಹಾಕಿ ಸ್ವಾಗತಿಸಿ, ಬಸವಮೂರ್ತಿಯ ಮುಂದೆ ಭಕ್ರಿಯಿಂದ ನೀರುಹಾಕಿ, ಧರ್ಮಗುರು ಬಸವರ ಭಾವಚಿತ್ರಕ್ಕೆ ಕೈಮುಗಿದು ನಿಂತಿದ್ದು, ಬಸವಣ್ಣ ನವರ ಬಗ್ಗೆ ಜನರಲ್ಲಿ ಇರುವ ಭಕ್ತಿ, ಗೌರವ ವನ್ನ ಸೂಚಿಸುತ್ತಿತ್ತು.

ನಂತರ 11 ರಿಂದ 11.15 ವಿಷಯದ ಕುರಿತು ಸಂವಾದ ನಡೆಯಿತು.

11.15 ರಿಂದ ಅನುಭಾವ ಪಾಠ -7, ” ಶಿವಚೇತನದ ಪ್ರಹವಿಸುವಿಕೆಯ ಶಬ್ದವೇ ಮಂತ್ರ ” ವಿಷಯ ಕುರಿತು
ಶರಣ ಮಹಾಂತೇಶ ಕುಂಬಾರ, ಕಲಬುರಗಿ, ವಿಷಯ ಪ್ರವೇಶ ಮಾಡಿದರು.

ಸೃಷ್ಟಿಯಲ್ಲಿ ಅಂತರ್ಗತವಾದ ಅಹತ ಅನಾಹತ ನಾದಗಳ ಜೊತೆ ಸಾಮರಸ್ಯ ಸಾಧಿಸಲು ನಮ: ಶಿವಾಯ ಮಂತ್ರ ಹೇಗೆ ಸಹಾಯವಾಗುತ್ತದೆ ಎನ್ನುವದನ್ನು ಉದಾಹರಣೆ ಸಮೇತ ವಿವರಣೆ ನೀಡಿದರು.

ವಿಷಯದ ಕುರಿತು 12.15 ರಿಂದ 12.30 ರವರೆಗೆ ಸಂವಾದ ನಡೆಯಿತು. ಸಭಿಕರು ಮುಕ್ತವಾಗಿ ಪ್ರಶ್ನೆ ಕೇಳಿ ವಿಷಯದ ವಿಸ್ತಾರಕ್ಕೆ ಮೆರಗುಕೊಟ್ಟರು.

12.30 ರಿಂದ 1 15 ಅನುಭಾವ ಪಾಠ -8, “ಲಿಂಗದ ಕರುಣೆಯೇ ಪಾದೋದಕ ಪ್ರಸಾದ” ವಿಷಯ ಕುರಿತು ಬೈಲಹೊಂಗಲದ ಶಿವಾನಂದ ಅರಭಾವಿ ಅವರು ವಿಷಯ ಪ್ರವೇಶಕ್ಕೆ ಅನುವು ಮಾಡಿದರು. ಪಾದೋದಕ, ಪ್ರಸಾದ ತತ್ವಗಳು ಶಿವನ ಮುಖಗಳು ಎನ್ನುವುದರ ಕುರಿತು ವಿವರಣೆ ನೀಡಿದರು.

ಲಿಂಗಾಯತ ಧರ್ಮ ನಮ್ಮ ಅಸ್ಮಿತೆ

ಬೆಳಿಗ್ಗೆ 10 ರಿಂದ ಅನುಭಾವ ಪಾಠ -6 ”ಶಿವನ ಅಂತರ್ಗತ ಶಕ್ತಿಯ ಸ್ವರೂಪವೇ ವಿಭೂತಿ, ಆ ಚೇತನವನ್ನ ಎಚ್ಚರದಿಂದ ಧರಿಸಿಕೊಂಡಿರುವದೇ ರುದ್ರಾಕ್ಷಿ” ಎನ್ನುವ ವಿಷಯ ಕುರಿತು ಮಂಜುನಾಥ ನೇಗಿನಾಳ ಅನುಭಾವ ನೀಡಿ, ಶರಣತತ್ವದಲ್ಲಿ ವಿಭೂತಿ, ರುದ್ರಾಕ್ಷಿ ತತ್ವಗಳು ಹೇಗೆ ಸೃಷ್ಟಿಯಲ್ಲಿ ಅಡಗಿವೆ, ಅದನ್ನ ಧರಿಸಿ ಹೇಗೆ ಮುಕ್ತರಾಗಲು ಸಾಧ್ಯ ಎನ್ನುವುದರ ಕುರಿತು ಸುಂದರವಾಗಿ ವಿವರಣೆ ನೀಡಿದರು.

1.15 ರಿಂದ 1.30 ರವರೆಗೆ ವಿಷಯ ಕುರಿತು ಸಂವಾದ ನಡೆಯಿತು. ಪಾದೋದಕ ಎಂದರೆ ಶಿವನ ಕರುಣೆ, ವಿನಯ ಸಮತೆಗಳ ಭಾವ ಎಂದು ತಿಳಿಯಲಾಯಿತು.

ಮಧ್ಯಾನ್ಹ 3 ಗಂಟೆಗೆ ಅನುಭಾವ ಪಾಠ -9, “ಅಂತರಂಗದ ಜ್ಞಾನ ಸುಜ್ಞಾನವಾಗುವದು ಆಚಾರದಿಂದ ” ಎನ್ನುವ ವಿಷಯದ ಮೇಲೆ ವಿಷಯ ಪ್ರವೇಶ ರಾಮದುರ್ಗದ ಹಿರಿಯಜೀವಿ ಸಿದ್ದಣ್ಣ ಲಂಗೋಟಿ ಮಂಡಿಸಿದರು.

ಸಂಜೆ 4.15 ರಿಂದ ಅನುಭಾವ ಪಾಠ -10, “ಅಷ್ಟಾ0ಗ ಯೋಗ ಮತ್ತು ಇಷ್ಟಲಿಂಗಯೋಗಗಳ ತುಲನಾತ್ಮಕ ವಿಮರ್ಶೆ ” ವಿಷಯದ ಕುರಿತು ಗುಳೇದಗುಡ್ಡದ ಡಾ. ಗಿರೀಶ ನೀಲಕಂಠಮಠ ಅವರು ವಿಷಯ ಪ್ರವೇಶ ಮಾಡಿದರು.

ನಂತರ 4.45 ರಿಂದ 5.00 ರ ವರೆಗೆ ಸಂವಾದ ನಡೆಯಿತು. ಅಷ್ಟಾಂಗಯೋಗ ಮಾರ್ಗ ಹೇಗೆ ಶಿವಯೋಗದಲ್ಲಿ ವಿಲೀನವಾಗಿ ಪೂರ್ಣತೆಯನ್ನು ನೀಡುತ್ತದೆ ಎನ್ನುವ ವಿಷಯವನ್ನು ಮನೋಜ್ಞ ವಾಗಿ ವಿವರಿಸಿದರು.

ಸಂಜೆ 6 ಗಂಟೆಯಿಂದ 8 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ, ಬಸವ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪೂಜ್ಯ ಬಸವಲಿಂಗಸ್ವಾಮೀಜಿ ಜ್ಞಾನಯೋಗಶ್ರಮ, ವಿಜಯಪುರ ಅವರು ಸಮ್ಮುಖ ವಹಿಸಿದ್ದರು.

ಅನುಭಾವದ ಅತಿಥಿಯಾಗಿ ಆಗಮಿಸಿದ್ದ ನಿತಿನ್ ಕಲ್ಯಾಣಕುಮಾರ ಸಾಫ್ಟ್ವೆರ್ ಇಂಜಿನಿಯರ್, ಬೆಂಗಳೂರು ಅವರು “ಲಿಂಗಾಯತರಲ್ಲಿ ಬಸವಪ್ರಜ್ಞೆ ” ಕುರಿತು ಅನುಭಾವ ಹಂಚಿಕೊಂಡರು.

ಅತಿಥಿಗಳಾಗಿ ಡಾ. ಎಂ. ಬಿ. ಪಾಟೀಲ, ಬೃಹತ್ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಅಭಿವೃದ್ದಿ ಸಚಿವರು ಆಗಮಿಸಿದ್ದರು. ಅವರು ಮಾತನಾಡಿ, ಲಿಂಗಾಯತರು ಉಪ ಪಂಗಡಗಳಾಗಿ ಒಡೆದು ಹೋಗದೆ, ಲಿಂಗಾಯತ ಧರ್ಮ ನಮ್ಮ ಅಸ್ಮಿತೆ ಎಂಬುದು ಗಟ್ಟಿಯಾಗಬೇಕು ಎಂದು ಹೇಳಿದರು.

ಅತಿಥಿಗಳಾಗಿ ಶಾರದಾ ಕೊಪ್ಪ ಅಧ್ಯಕ್ಷರು ಕದಳಿ ವೇದಿಕೆ ವಿಜಯಪುರ, ಭಾರತಿ ಭಯ್ಯಾರ್ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಿಳಾ ವೇದಿಕೆ ವಿಜಯಪುರ ಮತ್ತು ಮಹಾದೇವಿ ಗೋಕಾಕ ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭೆ ವಿಜಯಪುರ ವಹಿಸಿದ್ದರು.

ಇಳಕಲ್ಲಿನ ಪೂಜ್ಯ ಗುರುಮಹಾಂತ ಸ್ವಾಮೀಜಿ ಸಮ್ಮುಖ ವಹಿಸಿ ಮಾತನಾಡಿ, ಸಚಿವರು ಲಿಂಗಾಯತ ಧರ್ಮದ ಹೋರಾಟಕ್ಕೆ ಮುಂದೆಯೂ ಬೆನ್ನೆಲುಬಾಗಿ ನಿಂತರೆ ಇತಿಹಾಸದಲ್ಲಿ ನಿಲ್ಲುತ್ತಾರೆ. ಅವರಿಗೆ ಬಸವ ಗುರುವಿನ ಶ್ರೀರಕ್ಷೆ ಸದಾ ಬೆಂಗಾವಲಾಗಿ ಇರುತ್ತದೆ ಎಂದು ಮನಮುಟ್ಟುವಂತೆ ವಿವರಿಸಿದರು.

ನವೆಂಬರ್ 1 ರವಿವಾರ ಬೆಳಿಗ್ಗೆ 6 ಗಂಟೆಗೆ ಎಂದಿನಂತೆ, ಪೂಜ್ಯ ಗುರುಮಹಾಂತ ಸ್ವಾಮೀಜಿ, ಇಲಕಲ್ಲ ಅವರು ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಮಾನವೀಯತೆಯ ಮಹಾ ಸಂಪಾದವೇ ಬಸವತತ್ವ

ನಂತರ ಬೆಳಿಗ್ಗೆ 8.0 ಗಂಟೆಯಿಂದ 9 ಗಂಟೆಯವರೆಗೆ ವಿಜಯಪುರ ನಗರದ ಪ್ರಮುಖ ಬಡಾವಣೆಯಲ್ಲಿ “ಜನಜಾಗೃತಿ ಪ್ರಜ್ಞಾನಡೆ” ಯಲ್ಲಿ ನೂರಾರು ಬಸವ ಭಕ್ತರು ವಚನ ಹಾಡುತ್ತಾ, ಭಕ್ತಿಯಿಂದ ಪಾಲ್ಗೊಂಡರು. ದಾರಿಯುದ್ಧಕ್ಕೂ ನಗರದ ಜನರು ಮನೆಯ ಮುಂದೆ ರಂಗೋಲಿ ಹಾಕಿ ಸ್ವಾಗತಿಸಿದರು. ದಾರಿಯ ಇಕ್ಕೆಲಗಳಲ್ಲಿ ಜನರು, ಧರ್ಮಗುರು ಬಸವರ ಭಾವ ಚಿತ್ರಕ್ಕೆ ಕೈಮುಗಿದು ನಿಂತಿದ್ದು ಎಲ್ಲರನ್ನು ಸೆಳೆಯಿತು.

ಬೆಳಿಗ್ಗೆ 10 ಗಂಟೆಗೆ ಸಮಾರೋಪ ಸಮಾರಂಭವು ಬಸವ ಕಲಾಲೋಕದ ಕಲಾವಿದರ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಅಧ್ಯಕ್ಷತೆಯನ್ನು ಅಜ್ಜಂಪುರ ಟ್ರಸ್ಟ್ ನ ಕಾರ್ಯಧ್ಯಕ್ಷ ಶಂಭುಲಿಂಗಪ್ಪ ಅಜ್ಜಂಪುರಶೆಟ್ರು ವಹಿಸಿದ್ದರು. “ಮಾನವೀಯತೆಯ ಮಹಾ ಸಂಪಾದವೇ ಬಸವತತ್ವ ” ಎನ್ನುವ ವಿಷಯ ಕುರಿತು ಸೊಲ್ಲಾಪುರದ ನಿವೃತ್ತ ಉಪನ್ಯಾಸಕ ಬಿ.ಬಿ. ಪೂಜಾರಿ ಅವರು ವಿಷಯ ಹಂಚಿಕೊಂಡರು.

ಶರಣಧರ್ಮದ ವಿಶೇಷತೆಗಳ ಬಗ್ಗೆ ಪಿ. ರುದ್ರಪ್ಪ, ಸಿಂಧನೂರು ಅವರು ಅನುಭಾವ ನೀಡಿ, ಶರಣಧರ್ಮದ ವಿವಿಧ, ಭಿನ್ನ ಆಯಾಮಗಳನ್ನು, ಇತರ ಧರ್ಮಗಳ ನಿಲುವಿಗೆ ಹೋಲಿಸಿ ವಿಷಯ ಹಂಚಿಕೊಂಡರು.

ಶ್ರೇಷ್ಠ ಲಿಂಗಾಯತ ಧರ್ಮ ಸೂತ್ರಗಳನ್ನ ತಿಳಿಸಿ, ಅವರನ್ನ ಭಕ್ತರನ್ನಾಗಿಸುವ ಕಾರ್ಯ ಆಗಬೇಕು. ಜನಸಾಮಾನ್ಯರಲ್ಲಿರುವ ಮೌಢ್ಯಾಚರಣೆಗಳ ಬಗ್ಗೆ ಟೀಕೆ ಟಿಪ್ಪಣಿಗಳ ಪ್ರಮಾಣ ಕಡಿಮೆಯಾಗಬೇಕು ಎನ್ನುವ ಮಾತನ್ನು ರುದ್ ಅವರು ತಿಳಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಎಂ.ಎಸ್. ಮದಭಾವಿ ಕಾರ್ಯದರ್ಶಿಗಳು, ಫ.ಗು. ಹಳಕಟ್ಟಿ ಸಂಶೋಧನೆ ಸಂಸ್ಥೆ, ವಿಜಯಪುರ ಅವರು, ಹಳಕಟ್ಟಿಯವರ ತ್ಯಾಗದ ಬದುಕನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ಶಕುಂತಲಾ ಮೋಸಳಗಿ ಅಕ್ಕನ ಬಳಗದ ಅಧ್ಯಕ್ಷರು, ಮತ್ತು ಸೊಲ್ಲಾಪುರದ ಸಿಂಧುತಾಯಿ ಕಾಡಾದಿ ಅತಿಥಿಗಳಾಗಿ ವೇದಿಕೆ ಹಂಚಿಕೊಂಡರು.

ನಂತರ ಹಾಜರಿದ್ದ ಶಿಬಿರಾರ್ಥಿಗಳು, ಶಿಬಿರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಮತ್ತು ಮೂರು ದಿನದ ಅನುಭಗಳನ್ನು ಹಂಚಿಕೊಂಡರು. ಕೆಲವರು ಬಸವತತ್ವ ಪ್ರಸಾರದಲ್ಲಿ ದಾವಣಗೆರೆಯ ಅಜ್ಜಂಪುರಶೆಟ್ರು ಕುಟುಂಬದ ಕೊಡುಗೆಯನ್ನು ಸ್ಮರಿಸಿದರು.

ಇನ್ನು ಕೆಲವರು ಈ ರೀತಿಯ ತತ್ವ ಆಧಾರಿತ ಧರ್ಮ ಪ್ರಸಾರ ಇಂದಿನ ಅವಶ್ಯಕತೆ ಅಗಿದ್ದು, ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ನಡೆಯುವಂತೆ ರೂಪಿಸಬೇಕು ಎಂದು ವಿನಂತಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವಿಜಯಪುರ ಅವರು ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ವಿಜಯಪುರ, ಬಿ ಎಲ್ ಡಿ ಇ ಸಂಸ್ಥೆ ವಿಜಯಪುರ ಅವರು , ಅಜ್ಜಂಪುರ ಟ್ರಸ್ಟ್ ನ ಸದಸ್ಯರನ್ನು ಗೌರವಿಸಿದರು. ಎಲೆ ಮರೆಯ ಕಾಯಿಯಂತೆ ನಿಂತು ಸೇವೆ ಮಾಡಿದ ಅಜ್ಜಂಪುರ ಟ್ರಸ್ಟ್ ನ ಸದಸ್ಯರ ನಡೆ ಎಲ್ಲರ ಪ್ರಶಂಶಗೆ ಪಾತ್ರವಾಯಿತು.

ನಾಲ್ಕು ದಿನವೂ ದಾವಣಗೆರೆಯ ಬಸವ ಕಲಾಲೋಕದ ಸಂಗೀತ ಜನರನ್ನು ಸೆಳೆಯಿತು. ದಾವಣಗೆರೆ ಬಾಣಸಿಗರ ಕೈರುಚಿಯ ಬಗ್ಗೆಯೊ ಎಲ್ಲೆಡೆ ಹೊಗಳಿಕೆ ಕೇಳಿಬರುತ್ತಿತ್ತು. ಈ ಕಮ್ಮಟದ ವಿಶೇಷತೆ ಎಂದರೆ ಶಿಬಿರಾರ್ಥಿಗಳು ತಟ್ಟೆಯಲ್ಲಿ ಪ್ರಸಾದ ಉಳಿಸದೇ ಸ್ವೀಕರಿಸಿದ್ದು, ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅವರು ಭೇದಮರೆತು ಬಸವಪ್ರಣೀತ ಕಾರ್ಯವನ್ನು ನಡೆಸಿ ಇತರ ಜಿಲ್ಲೆಯವರಿಗೆ ಮಾದರಿಯಾದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
3 Comments
  • ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ಸಂದೇಶ ರವಾನಿಸಿದ್ದಿರಿ ಜೈ ಬಸವ ಶರಣು ಶರಣಾರ್ಥಿ

  • ಪ್ರತಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆದಲ್ಲಿ ಬಸವ ತತ್ವ ಹಾಗೂ ಲಿಂಗಾಯತ ಧರ್ಮದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಿದಲ್ಲಿ ಸಮಾಜದಲ್ಲಿ ಬದಲಾವಣೆಯ ಗಾಳಿ ಬಿಸಬಹುದು ಓಂ ಬಸವ ಲಿಂಗಾಯ ನಮಃ ಶರಣು ಶರಣಾರ್ಥಿ ಗಳು

Leave a Reply

Your email address will not be published. Required fields are marked *