ಕಲಬುರಗಿ :
ಚಿತ್ತಾಪುರ ತಾಲ್ಲೂಕಿನ ರಾವೂರ ರಸ್ತೆಯಲ್ಲಿ ಶ್ರೀ ಬಸವೇಶ್ವರ ಚಾರಿಟೆಬಲ್ ವತಿಯಿಂದ ನಿರ್ಮಾಣವಾಗಿರುವ ಬಸವ ಭವನ ಹಾಗೂ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿ ನಿಲಯ ನವೆಂಬರ್ 28ರಂದು ಲೋಕಾರ್ಪಣೆಗೊಳ್ಳಲಿವೆ ಎಂದು ಟ್ರಸ್ಟ್ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ತಿಳಿಸಿದರು.
ಚಿತ್ತಾಪುರದಲ್ಲಿ ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 4 ಕೋಟಿ ರೂ. ವೆಚ್ಚದಲ್ಲಿ ಬಸವ ಭವನ ಮತ್ತು 75 ಲಕ್ಷ ರೂ. ವೆಚ್ಚದಲ್ಲಿ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಅಂದು ಬೆಳಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಪೂಜೆ ನಂತರ ಸನ್ಮಾನ ಸಮಾರಂಭ, 11 ಗಂಟೆಗೆ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .
ನಾಲವಾರದ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ತಾಲೂಕಿನ ವಿವಿಧ ಮಠಾಧೀಶರು ಸಾನಿಧ್ಯ ವಹಿಸಲಿದ್ದಾರೆ ಎಂದರು.
ಬಸವ ಭವನವನ್ನು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಉದ್ಘಾಟಿಸಲಿದ್ದಾರೆ. ವಿದ್ಯಾರ್ಥಿ ನಿಲಯವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಸಚಿವ ಈಶ್ವರ್ ಖಂಡ್ರೆ ಮತ್ತು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದಾರೆ. ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಅಧ್ಯಕ್ಷತೆ ವಹಿಸಲಿದ್ದಾರೆ.

ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಧಾಕೃಷ್ಣ ದೊಡ್ಡಮನಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಸೇರಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಮಾಜದ ಮುಖಂಡರು, ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ನಾಗರಾಜ ಬಂಕಲಗಿ, ಖಜಾಂಚಿ ಅಣ್ಣಾರಾವ ಪಾಟೀಲ ಮೂಡಬೂಳ, ಪ್ರಮುಖರಾದ ಚಂದ್ರಶೇಖರ ಸಾತನೂರ, ಪ್ರಭುದೇವ ಬೊಮ್ಮನಳ್ಳಿ, ಶರಣು ಸಜ್ಜನಶೆಟ್ಟಿ ದಿಗ್ಗಾಂವ, ಚಂದ್ರಕಾಂತ ಪಾಟೀಲ ಬೆಳಗುಂಪಾ, ಶರಣಗೌಡ ಪಾಟೀಲ, ಅಶೋಕ ನಿಪ್ಪಾಣಿ, ಅನಿಲ ವಡ್ಡಡಗಿ ಮತ್ತಿತರರು ಇದ್ದರು.
