ಲಿಂಗಾಯತ ಸಮಾಜ ಬದಲಾಗುತ್ತಿದೆ, ಅದಕ್ಕೆ ಹಿಂದುತ್ವದ ದಾಳಿ ನಡೆಯುತ್ತಿದೆ (ಭಾಗ 4)

ಎಂ. ಎ. ಅರುಣ್
ಎಂ. ಎ. ಅರುಣ್

ಜಾಗೃತವಾಗುತ್ತಿರುವ ಲಿಂಗಾಯತ ಪ್ರಜ್ಞೆಯನ್ನು ಚಿವುಟು ಹಾಕಲು ಪ್ರಯತ್ನಿಸುತ್ತಿದ್ದಾರೆ

ಬೆಂಗಳೂರು

ಕೆಲವು ತಿಂಗಳ ಹಿಂದೆ ಪೂಜ್ಯ ಗಂಗಾ ಮಾತಾಜಿ ಅವರನ್ನು ಬಸವ ಶಕ್ತಿ ಶಿಬಿರಗಳ ಬಗ್ಗೆ ಚರ್ಚಿಸಲು ಭೇಟಿಯಾಗಿದ್ದಾಗ ಅವರು ಒಂದು ಘಟನೆಯನ್ನು ನೆನಪು ಮಾಡಿಕೊಂಡಿದ್ದರು.

ಸುಮಾರು 1972-73ರ ಸಮಯ. ಪೂಜ್ಯ ಲಿಂಗಾನಂದ ಅಪ್ಪಾಜಿಯವರು ಒಂದು ತಿಂಗಳು ಪ್ರವಚನ ಮಾಡುತ್ತಾ ಮಡಿಕೇರಿಯಲ್ಲಿ ಉಳಿದುಕೊಂಡಿದ್ದರು.

ಒಂದು ದಿನ ಅವರು ಬಹಳ ಬೇಜಾರಿನಲ್ಲಿದ್ದ ಹಾಗೆ ಕಾಣಿಸಿತು. ಯಾಕೆಂದು ಕೇಳಿದಾಗ, ಅವರು ಬಹಳ ಹತಾಶೆಯಿಂದ ಹೇಳಿದ್ದು:

“ಇವತ್ತು ಬಸವ ಜಯಂತಿ, ಪೇಪರಿನಲ್ಲಿ, ರೇಡಿಯೋದಲ್ಲಿ ಒಂದು ಸಣ್ಣ ಸುದ್ದಿಯಿಲ್ಲ. ಇಲ್ಲಿ ಸುತ್ತಲೂ ಲಿಂಗಾಯತರು ಎನಿಸಿಕೊಂಡಿರುವವರು ಇದ್ದಾರೆ, ಅವರಿಗೂ ಇದರ ನೆನಪಿಲ್ಲ.”

ಆ ಘಟನೆ ನಡೆದು 50 ವರ್ಷಗಳಾಗಿವೆ. ಈಗಿನ ಲಿಂಗಾಯತ ಸಮಾಜ ಎಷ್ಟು ಬದಲಾಗಿದೆ ನೋಡೋಣ.

ಇಂದು ಎಲ್ಲೆಲ್ಲಿ ನಡೆಯುತ್ತಿದೆ ಎಂದು ಲೆಕ್ಕವಿಡಲೂ ಸಾಧ್ಯವಾಗದ ರೀತಿಯಲ್ಲಿ ಬಸವ ಜಯಂತಿ ನಾಡಿನ ಮೂಲೆ ಮೂಲೆಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿದೆ.

ನೂರಾರು ಸಂಘಟನೆಗಳು ನಿರಂತರವಾಗಿ ವಚನಗಳ ಪ್ರಚಾರ, ಪ್ರಸಾರ ಮಾಡುತ್ತಿವೆ. ಇವರುಗಳು ಹಚ್ಚುತ್ತಿರುವ ದೀಪದ ಬೆಳಕಿನಲ್ಲಿ ಲಿಂಗಾಯತ ಧರ್ಮದ ನಿಜ ಸ್ವರೂಪ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಬಸವಣ್ಣ ಕರ್ನಾಟಕದ ಅಧಿಕೃತ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಲಂಡನ್ ಸಂಸತ್ತಿನ ಕಟ್ಟಡದ ಬಳಿ, ದೆಹಲಿ ಸಂಸತ್ತಿನ ಆವರಣದೊಳಗೆ ಬಸವಣ್ಣನವರ ಪ್ರತಿಮೆ ಸ್ಥಾಪನೆಯಾಗಿದೆ.

ಮತಾಂಧರ, ದ್ವೇಷದ ಕಿಚ್ಚು ಹಚ್ಚುವವರ ಕೈ ಸಿಲುಕಿ ನೊಂದಿರುವ ಸಮಾಜಕ್ಕೆ ಬಸವತತ್ವ ಆಶಾಕಿರಣವಾಗಿ ಕಾಣುತ್ತಿದೆ, ಜಾಗತಿಕ ಮಟ್ಟದಲ್ಲಿ ಬಸವಾದಿ ಶರಣರ ಚಿಂತನೆಯನ್ನು ಪ್ರಚಾರ ಮಾಡುವ ಕರೆ ದಿನೇ ದಿನೇ ಕೇಳುತ್ತಿದೆ.

ಲಿಂಗಾಯತ ಸಮಾಜದಲ್ಲಿ ಇಷ್ಟು ದೊಡ್ಡ ಬದಲಾವಣೆ ತರುವಲ್ಲಿ 2017-18ರ ಬೃಹತ್ ರ್ಯಾಲಿಗಳು ಮಹತ್ವದ ಪಾತ್ರ ವಹಿಸಿದವು.

ಆಗ ನಡೆದ ಲಿಂಗಾಯತ ರ್ಯಾಲಿಗಳು ಕಾಂಗ್ರೆಸ್ ಅಪೇಕ್ಷಿಸಿದಂತೆ ಮತ ಹಾಕಿಸಲಿಲ್ಲ. ಆರೆಸ್ಸೆಸ್-ಬಿಜೆಪಿ ಅಪೇಕ್ಷಿಸಿದಂತೆ ‘ಧರ್ಮ ಒಡೆದ’ ಕಾರಣಕ್ಕೆ ಲಿಂಗಾಯತರು ಸಿಟ್ಟಾಗಿ ಕಾಂಗ್ರೆಸ್ ವಿರುದ್ದವೂ ತಿರುಗಿಬೀಳಲಿಲ್ಲ.

ಹಾಗಾದರೆ 2017-18ರ ಬೃಹತ್ ರ್ಯಾಲಿಗಳು ಸಾಧಿಸಿದ್ದೇನು ಎಂದು ಕೆಲವರು ಕೇಳುತ್ತಾರೆ.

ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಬಹುದು.

ಲಿಂಗಾಯತ ಧರ್ಮ ಹೋರಾಟಕ್ಕೆ ಮರು ಚಾಲನೆ

ಭಾರತದ ಸ್ವಾತಂತ್ರ್ಯ ಹೋರಾಟ ಸಂಘಟಿತವಾಗಿ ಶುರುವಾಗಿದ್ದು 1885ರಲ್ಲಿ. ಕೆಲವು ಪ್ರತಿಷ್ಠರಿಗೆ ಸೀಮಿತವಾಗಿದ್ದ ಅದು ಜನಸಮೂಹ ಚಳುವಳಿಯಾಗಿ ಬದಲಾಗಿದ್ದು 1920ರಲ್ಲಿ, ಗಾಂಧೀಜಿಯವರ ನೇತೃತ್ವದ ನಾಗರೀಕ ಅಸಹಕಾರ ಆಂದೋಲನದ ಮೂಲಕ.

ಲಿಂಗಾಯತ ಹೋರಾಟದಲ್ಲಿ 2017-18ರ ರ್ಯಾಲಿಗಳು ಇದೇ ರೀತಿಯ ಪರಿವರ್ತನೆ ತಂದವು.

ಮೊದಲ ಬಾರಿಗೆ ಲಿಂಗಾಯತ ಹೋರಾಟ ಗಂಭೀರವಾಗಿ ಜನರ ಗಮನ ಸೆಳೆಯುವತ್ತ ಸಫಲವಾಯಿತು.

ದಶಕಗಳಿಂದ ಲಿಂಗಾಯತ ಹೋರಾಟ ಸಣ್ಣದಾಗಿ ಜೀವಂತವಾಗಿದ್ದರೂ ಅದು ಭುಗಿಲೆದ್ದುದ್ದು 2017-18ರಲ್ಲಿ.

ಅದರ ಹಿಂದಿನ 30-40 ವರ್ಷಗಳಿಂದ ಲಿಂಗಾಯತ, ವೀರಶೈವರ ಬಗ್ಗೆ ವಿದ್ವಾಂಸರು, ಪೂಜ್ಯರು ತಲೆ ಕೆಡಸಿಕೊಂಡಿದ್ದರೂ ಮೊದಲ ಬಾರಿಗೆ ಈ ವಿಷಯ ಜನರ ಮಟ್ಟದಲ್ಲಿ ವ್ಯಾಪಕವಾಗಿ ಚರ್ಚೆಯಾಗಲು ಶುರುವಾಗಿದ್ದು ಈ ರ್ಯಾಲಿಗಳ ಮೂಲಕ.

ಒಂದು ಕೋಟಿ ಸಂಖ್ಯೆಯಲ್ಲಿರುವ ದೊಡ್ಡ ಸಮುದಾಯಕ್ಕೆ ತನ್ನ ಅಸ್ಮಿತೆಯ ಬಗ್ಗೆ ಜಾಗೃತವಾಗಲು ಒಂದು ಕರೆಂಟ್ ಹೊಡೆಯುವ ಅಗತ್ಯವಿತ್ತು. ಲಿಂಗಾಯತ ಧರ್ಮದ ರ್ಯಾಲಿಗಳು ಆ ಕೆಲಸ ಮಾಡಿದವು.

ಬಸವ ಸಂಘಟನೆಗಳಲ್ಲಿ ಜಾಗೃತಿ

ಇಂದು ಜಿಲ್ಲಾ, ತಾಲೂಕು, ಹೋಬಳಿ ಮಟ್ಟದಲ್ಲಿ ನೂರಾರು ಬಸವ ಸಂಘಟನೆಗಳು, ಸಾವಿರಾರು ಕಾರ್ಯಕರ್ತರಿದ್ದಾರೆ. ಇವರೆಲ್ಲ ಸಂಪೂರ್ಣವಾಗಿ ಬಸವ ಬದ್ಧತೆಯಿಂದ ಧರ್ಮ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಆದರೆ ಇವರು ಭೌಗೋಳಿಕವಾಗಿ ಹಂಚಿಹೋಗಿದ್ದಾರೆ, ಇವರಲ್ಲಿ ಸಾಂಸ್ಕೃತಿಕ, ಸೈದ್ಧಾಂತಿಕ ಭಿನ್ನತೆಗಳೂ ಕಾಣಿಸುತ್ತವೆ.

ಇಂದೂ ಕೂಡ ವಿವಿಧ ಜಿಲ್ಲೆಗಳ ಬಸವ ಸಂಘಟನೆಗಳ ನಡುವೆ ಸಂಪರ್ಕದ ಕೊರತೆಯಿದೆ. ಒಂದೇ ರಾಜ್ಯ ಸಂಘಟನೆಯ ವಿವಿಧ ಜಿಲ್ಲಾ ಘಟಕಗಳ ನಡುವೆಯೂ ಹತ್ತಿರದ ಒಡನಾಟ ಕಾಣುವುದು ಅಪರೂಪ.

ಆದರೆ ಇಂದು ವಿವಿಧ ಜಿಲ್ಲೆಗಳ ಬಸವ ಸಂಘಟನೆಗಳು ಬಹುತೇಕವಾಗಿ ಸ್ವತಂತ್ರ ಲಿಂಗಾಯತ ಧರ್ಮದ ಬೇಡಿಕೆಯನ್ನು ಸ್ವೀಕರಿಸಿ ಹೋರಾಟಕ್ಕೆ ಕೈ ಜೋಡಿಸಿವೆ.

ಲಿಂಗಾಯತ ಹೋರಾಟದ ಬಗ್ಗೆ ಅವುಗಳಲ್ಲಿ ದೊಡ್ಡ ಮಟ್ಟದ ಜಾಗೃತಿ, ಒಮ್ಮತ ಮೂಡಿಸಿದ್ದು 2017-18 ರ್ಯಾಲಿಗಳ ದೊಡ್ಡ ಸಾಧನೆ.

ಬಸವ ಸಂಸ್ಕೃತಿ ಅಭಿಯಾನ

2017-18ರ ರ್ಯಾಲಿಗಳ ಮುಂದುವರೆದ ಭಾಗವಾಗಿಯೇ ಬಸವ ಸಂಸ್ಕೃತಿ ಅಭಿಯಾನ ನಡೆಯಿತು ಎಂದು ಪರಿಗಣಿಸಬೇಕು.

ಒಂದು ತಿಂಗಳು ಪೂರ್ತಿ ಜಿಲ್ಲೆ ಜಿಲ್ಲೆಗಳಲ್ಲಿ ಸಾವಿರಾರು ಬಸವ ಭಕ್ತರನ್ನು ಸೆಳೆದ ಅಭಿಯಾನ ಲಿಂಗಾಯತ ಧರ್ಮ, ಸಿದ್ದಾಂತ, ಪ್ರತ್ಯೇಕ ಧರ್ಮದ ಬೇಡಿಕೆ ಮುಂತಾದ ವಿಷಯಗಳನ್ನು ಜನರ ಸಮೀಪ ಮತ್ತಷ್ಟು ತೆಗದುಕೊಂಡು ಹೋಗುವಲ್ಲಿ ಯಶಸ್ವಿಯಾಯಿತು.

ಅಭಿಯಾನದ ಎರಡು ಸಾಧನೆಗಳನ್ನು ಇಲ್ಲಿ ಗಮನಿಸಬೇಕು:

ಒಂದು, ಅಭಿಯಾನ ಲಿಂಗಾಯತ ಮಠಾಧೀಶರ ಹಾಗೂ ಬಸವ ಸಂಘಟನೆಗಳ ಸಂಘಟನಾ ಸಾಮರ್ಥ್ಯ ಸಾಬೀತುಪಡಿಸಿತು. ಹಣ ಚೆಲ್ಲದೆ, ಯಾವುದೇ ಪಕ್ಷದ ಬೆಂಬಲವಿಲ್ಲದೆ ಲಕ್ಷಾಂತರ ಜನರ ಸೇರಿಸಿದ ಅಭಿಯಾನ ನೋಡಿ ರಾಜಕಾರಣಿಗಳು ಸುಸ್ತಾದರು.

ಒಂದು ಅಂದಾಜಿನ ಪ್ರಕಾರ ಬೆಂಗಳೂರು ಹೊರತುಪಡಿಸಿ ಇಡೀ ರಾಜ್ಯದ ಅಭಿಯಾನದ ವೆಚ್ಚ ಎರಡು ಕೋಟಿಗೂ ಕಡಿಮೆ. ಇವನ್ನೆಲ್ಲಾ ಸ್ಥಳೀಯ ಸಂಘಟನೆಗಳು ಸ್ಥಳೀಯ ಸಂಪನ್ಮೂಲಗಳಿಂದ ಮಾಡಿದವು ಎನ್ನುವುದು ಗಮನಾರ್ಹ.

ಎರಡು, ಅಭಿಯಾನದಲ್ಲಿ ಕೊನೆಗೂ ಮಠಾದೀಶರು, ಬಸವ ಸಂಘಟನೆಗಳು ಸ್ವತಂತ್ರ ಧರ್ಮದ ಹೋರಾಟವನ್ನು ಸಾಮಾನ್ಯ ಲಿಂಗಾಯತರಿಗೆ ಸರಳವಾಗಿ ನಿರೂಪಿಸುವ ಸೂತ್ರವನ್ನು ರೂಪಿಸಿದರು.

ನಾವು ಹಿಂದೂ ಧರ್ಮದಲ್ಲಿ ಉಳಿದರೆ ಶೂದ್ರರಾಗಿಯೇ ಇರಬೇಕಾಗುತ್ತದೆ ಎನ್ನುವ ಸತ್ಯ ಮತ್ತು ಲಿಂಗಾಯತ ಸ್ವತಂತ್ರ ಧರ್ಮವಾದರೆ ನಮ್ಮ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ ಎನ್ನುವ ಸಾಧ್ಯತೆ ಎಲ್ಲಾ ಜಿಲ್ಲೆಗಳಲ್ಲಿ ಎದ್ದುಕಾಣುವಂತೆ ಚರ್ಚೆಯಾದವು.

ಇವೆರಡೂ ಜನರ ಮೇಲೆ ಬಹಳ ಪ್ರಭಾವ ಬೀರಿದ ಸಂದೇಶಗಳು. ಯಾವ ಜಿಲ್ಲೆಯಲ್ಲಿಯೂ ‘ಧರ್ಮ ಒಡೆಯಬೇಡಿ’ ಎಂಬ ಮಾತು ಸಣ್ಣ ಧ್ವನಿಯಲ್ಲಿಯೂ ಕೇಳಿಸದಿದ್ದುದ್ದು ಅಭಿಯಾನದ ವಿಶೇಷವಾಗಿತ್ತು.

ಅಭಿಯಾನ ಅನೀರೀಕ್ಷಿತ ಯಶಸ್ಸು ಕಂಡಿದ್ದು ಚಾಮರಾಜನಗರದಲ್ಲಿ. ಅಲ್ಲಿನ ಮೆರವಣಿಗೆಯಲ್ಲಿ ಒಬ್ಬ ರೈತರು ‘ವೀರಶೈವ ಧರ್ಮಕ್ಕೆ ಜಯವಾಗಲಿ’ ಎಂದು ಕೂಗಿದರು. ಅಲ್ಲೇ ಅವರ ಸುತ್ತ ಇದ್ದವರು, ವೀರಶೈವ ಅನ್ನಬೇಡಿ, ಲಿಂಗಾಯತ ಅನ್ನಿ ಎಂದು ಅವರನ್ನು ತಿದ್ದಿದರು.

ಅಭಿಯಾನದ ಯಶಸ್ಸು ಮತ್ತು ಲಿಂಗಾಯತರಲ್ಲಿ ಪ್ರತ್ಯೇಕ ಧರ್ಮಕ್ಕೆ ಬೆಳೆಯುತ್ತಿರುವ ಬೆಂಬಲ ನೋಡಿಯೇ ಆರೆಸ್ಸೆಸ್ ಕಂಗಾಲಾಗಿರುವುದು.

ಅದಕ್ಕೆ ಅಭಿಯಾನ ನಡೆದು ಒಂದು ವರ್ಷವಾದರೂ ನಿದ್ದೆ ಮಾಡದೇ ಕನ್ನೇರಿ ಸ್ವಾಮಿಯಂತಹ ಬಾಡಿಗೆ ಬಂಟನನ್ನು ತಂದು ಬಸವಾದಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ಮಾಡಿಸುತ್ತಿದ್ದಾರೆ.

ಸಮಾನ್ಯವಾಗಿ ಬಿಜೆಪಿಯಲ್ಲಿರುವ ಲಿಂಗಾಯತ ರಾಜಕಾರಣಿಗಳ ಮೇಲೆ ಒತ್ತಡ ತಂದು, ಅವರ ಕೈಯಲ್ಲಿ ಹಣ ಹಾಕಿಸಿ, ಜನ ಸೇರಿಸಿ ಅಭಿಯಾನಕ್ಕೆ ಉತ್ತರ ಕೊಡುವ ಪ್ರಯತ್ನ ನಡೆಯುತ್ತಿದೆ.

ಲಿಂಗಾಯತ ಮಠಾಧೀಶರನ್ನು ನಿಂದಿಸುತ್ತಿರುವುದು, ಬಸವ ಕಾರ್ಯಕರ್ತರನ್ನು ತಾಲಿಬಾನ್ ಎಂದು ಕರೆಯುತ್ತಿರುವುದು, ನೂತನ ಅನುಭವ ಮಂಟಪಕ್ಕೆ ಕೌಂಟರ್ ಆಗಿ ಬಸವ ಜನ್ಮಭೂಮಿಯಲ್ಲಿ ಮ್ಯೂಸಿಯಂ ನಿರ್ಮಿಸುತ್ತಿರುವುದು – ಇವೆಲ್ಲಾ ಜಾಗೃತವಾಗುತ್ತಿರುವ ಲಿಂಗಾಯತ ಪ್ರಜ್ಞೆಯನ್ನು ಚಿವುಟುಹಾಕಲು ನಡೆಯುತ್ತಿರುವ ಹತಾಶೆಯ ಪ್ರಯತ್ನಗಳ ಕೆಲವು ಉದಾಹರಣೆಗಳಷ್ಟೇ.

ಜೊತೆಗೆ ಈಗ ನೇರವಾಗಿ ರವಿ ಹಂಜ್ ಅನ್ನುವ ವ್ಯಕ್ತಿಯ ಮೂಲಕ ನೇರವಾಗಿ ಬಸವ ನಿಂದನೆ ಮಾಡಿಸುವ ಹಂತಕ್ಕೆ ಬಂದಿದ್ದಾರೆ.

ಯಾವುದೇ ಚಳುವಳಿ ಶಕ್ತಿಯುತವಾಗಿ ಮುಂದುವರೆಯಬೇಕಾದರೆ ಒಂದು ಗಣನೀಯ ಪ್ರಮಾಣದ ಜನ, ಸಂಘಟನೆಗಳು ಅದಕ್ಕೆ ದುಮುಕಬೇಕು.

ಲಿಂಗಾಯತ ಚಳುವಳಿಗೆ ಈ ಪ್ರಮಾಣದ ಸಂಘಟಿತ ಬೆಂಬಲ ಈಗ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಐತಿಹಾಸಿಕ ಜವಾಬ್ದಾರಿ ಲಿಂಗಾಯತ ಮಠಾಧೀಶರ, ಸಂಘಟನೆಗಳ ಮೇಲಿದೆ.

(ಮುಂದುವರೆಯುವುದು)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
2 Comments
  • ಮೊದಲು ಪ್ರತಿ ವರುಷ , ಪ್ರತಿ ಶಾಲೆಗಳಲ್ಲಿ ವಚನಗಾಯನ, ವಚನ ವಿಶ್ಲೇಷಣೆ ಗಳ ಸ್ಪರ್ಧೆ ನಡೆಯುತ್ತಿದ್ದವು. ಸಂಗೀತ ಶಾಲೆಗಳಲ್ಲಿ ವಚನ ಗಾಯನ ಹೇಳಿ ಕೊಡುತ್ತಿದ್ದರು.
    ಈಗ ಅವು ಮಾಯ ಆಗಿವೆ.
    ಆದರೆ ಅಲ್ಲಲ್ಲಿ ಲಿಂಗಾಯತ ಸಂಘಟನೆಗಳು ಸ್ಪರ್ಧೆಗಳನ್ನು ನಡೆಸಿ ಕೊಡುತ್ತಿದ್ದಾರೆ.
    ಲಿಂಗಾಯತರು ಬೇರೆ ಧರ್ಮದ ದೇವಸ್ಥಾನ, ಕಾರ್ಯಕ್ರಮಕ್ಕೆ ದೇಣಿಗೆ ಕೊಟ್ಟಷ್ಟು ಈ ಕಾರ್ಯಕ್ರಮಗಳಿಗೆ ಕೊಡುತ್ತಿಲ್ಲ.

    ಆದರೂ ಲಿಂಗಾಯತ ಜನರಲ್ಲಿ ಜಾಗೃತಿ ಹೆಚ್ಚಾಗಿದೆ. ಅದು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇದು ನೀಚ ಜನರ ನಿದ್ದೆ ಕೆಡಿಸಿದೆ.
    ಅವರಿಗೆ ನೀಚತನದ ಅಸ್ತಿತ್ವ ಇಲ್ಲದಂತೆ ಲಿಂಗಾನಂದರ ಎಂಬ ಶಿಷ್ಯರು ಮಾಡುತ್ತಾರೆ ಅನ್ನುವ ಭಯ ಕಾಡುತ್ತಿದೆ. ಅದಕ್ಕಾಗಿ ಬೆರಳೆಣಕೆ ಅಷ್ಟು ಇರುವ ಈ ಆರ್ಯ ತಳಿಯು ಲಿಂಗಾಯತ ಜನರಲ್ಲೇ ತಲೆ ಕೆಡಿಸಿ ಲಿಂಗಾಯತ ಧರ್ಮದ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ.

    ನಾವು ಸಂಘಟಿತರಾಗಿ, ಪ್ರತಿ ಮನೆಗೂ, ಪ್ರತಿ ಮನಸ್ಸಿಗೂ ವಚನಗಳನ್ನು, ಶಿವಶರಣರ ಪೋಟೋ ಗಳನ್ನು ತಲುಪಿಸಬೇಕು.
    ಅದಕ್ಕಾಗಿ gift ರೂಪದಲ್ಲಿ ಕೊಡುವಂತೆ ವಚನಗಳ photo ಅದನ್ನು ಬರೆದ ಶರಣರ photo ದೊಂದಿಗೆ ಇರುವಂತೆ ಮುದ್ರಿಸುವ ಕಾರ್ಖಾನೆ ಹಾಕಬೇಕು. ಲಾಭ ಇಲ್ಲದಂತೆ ಮಾರಾಟ ಮಾಡಬೇಕು.

  • ನಾವು ಸಂಘಟಿತರಾಗಿ, ಎಲ್ಲಾ ಬಸವಪರ ಸಂಘಟನೆಗಳು ಒಗ್ಗೂಡಿ ರವಿ ಹಂಜ ಅಲ್ಲ ಆತ ಹುಂಬ ಮತ್ತು ವಿಶ್ವೇಶ್ವರ ಭಟ್ ವಿರುದ್ಧ ಪ್ರತಿಭಟನೆ ನಡೆಸಬೇಕು.ಜೈ ಬಸವ.

Leave a Reply

Your email address will not be published. Required fields are marked *