ಗಜೇಂದ್ರಗಡ: ಬಸವ ನಿಂದನೆ ಪ್ರಕರಣ ಎಸ್ಐಟಿಗೆ ಒಳಪಡಿಸಲು ಒತ್ತಾಯ

ಬಸವ ಮೀಡಿಯಾ
ಬಸವ ಮೀಡಿಯಾ

ಗಜೇಂದ್ರಗಡ :

ರವಿ ಹಂಜಗಿಮಠ(ಹಂಜ್)ನನ್ನು ಬಂಧಿಸಿ, ‘ಬಸವ ಮಂಟಪ’ ಕೃತಿಯನ್ನು ಶಾಶ್ವತವಾಗಿ ನಿಷೇಧಿಸಬೇಕು ಮತ್ತು ಪ್ರಕರಣವನ್ನು ಎಸ್.ಐ.ಟಿ. ತನಿಖೆಗೆ ಒಳಪಡಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹಿಸಿದೆ.

ಮಹಾ ಮಾನವತಾವಾದಿ ವಿಶ್ವಗುರು ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು. ಮಾನವ ಕುಲದ ಕಲ್ಯಾಣಕ್ಕಾಗಿ ಅವರು ಮತ್ತು ಶರಣರೆಲ್ಲ ನೀಡಿದ ಸಮತೆ, ಸ್ವಾತಂತ್ರ್ಯ, ಕಾಯಕ, ದಾಸೋಹ, ಬಂಧುತ್ವ, ಮೊದಲಾದ ತತ್ವ ಸಿದ್ದಾಂತಗಳು ವಿಶ್ವ ಮಾನ್ಯವಾಗಿವೆ. ಹೀಗಾಗಿ ಕರ್ನಾಟಕದ ಸಾಂಸ್ಕೃತಿಕ ನಾಯಕ ‘ವಿಶ್ವಗುರು ಬಸವಣ್ಣನವರು’ ಎಂದು ಸರ್ಕಾರ ಘೋಷಣೆ ಮಾಡಿದ್ದು ಇತಿಹಾಸ.

ರವಿ ಹಂಜಗಿಮಠ ಎಂಬ ವ್ಯಕ್ತಿ ಬಸವ ಮಂಟಪ ಕೃತಿ ರಚಿಸಿ, ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ದುಷ್ಟ ಕೆಲಸ ಮಾಡಿದ್ದಾನೆ. ತನ್ನ ವಿಕೃತ ಮನಸ್ಸಿನಿಂದ ಇತಿಹಾಸ ತಿರುಚಲು ಪ್ರಯತ್ನಿಸಿದ್ದಾನೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ, ಇದರಲ್ಲಿ ದುರುದ್ದೇಶವಿದೆ.

ಬಸವಣ್ಣನವರ ವಚನಗಳನ್ನು ತಮ್ಮ ತಾಳಕ್ಕೆ ಅರ್ಥೈಸಿ, ಮಹಾ ಅಪರಾಧ ಎಸಗಿದ್ದಾನೆ. ಬಸವಾಭಿಮಾನಿಗಳ ಮನಸ್ಸಿಗೆ ತುಂಬಾ ನೋವುಂಟು ಮಾಡಿದ್ದಾನೆ. ಆದ್ದರಿಂದ ರವಿ ಹಂಜಗಿಮಠ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಸಂಘಟನೆ ಹೇಳಿದೆ.

ಸರ್ಕಾರ ತಕ್ಷಣ ಈ ದುಷ್ಟ ವ್ಯಕ್ತಿಯನ್ನು ಬಂಧಿಸಬೇಕು. ಆತನ ಬಸವ ಮಂಟಪ ಕೃತಿಯನ್ನು ಶಾಶ್ವತ ನಿಷೇಧಿಸಿ ಮತ್ತು ಈ ಹುನ್ನಾರದ ಹಿಂದಿರುವ ನಿಗೂಢ ಶಕ್ತಿಯನ್ನು ಪತ್ತೆಹಚ್ಚಲು ಎಸ್.ಐ.ಟಿ ತನಿಖೆ ಮಾಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕಗಳು ಸರ್ಕಾರವನ್ನು ಆಗ್ರಹಿಸಿವೆ.

ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ಗುರುಲಿಂಗಯ್ಯ ಓದಸುಮಠ, ಬಸವರಾಜ ಅಂಗಡಿ, ಎ.ಎಸ್. ರೋಣದ, ಕೆ.ಎಸ್. ಪತಂಗರಾಯ, ಕಳಕಯ್ಯ ಸಾಲಿಮಠ, ರವಿ ಹಾಸಿಗಲ್, ಮಂಜುನಾಥ ಹೂಗಾರ, ಉಮೇಶ ಬೆನ್ನೂರ, ರವಿ ಗಡೇದವರ, ಶರಣು ಪೂಜಾರ, ಎಂ. ಬಿ. ಸೋಂಪುರ, ಶಶಿಧರ ಹೂಗಾರ, ಬಸವರಾಜ ಕೊಟಗಿ, ಎಂ.ಎಸ್. ಹಡಪದ, ಬಾಲು ರಾಠೋಡ, ಬಸವರಾಜ ಹೂಗಾರ ಮತ್ತಿತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
Leave a comment

Leave a Reply

Your email address will not be published. Required fields are marked *