ರವಿ ಹಂಜ್, ವಿಶ್ವೇಶ್ವರ ಭಟ್ಟರ ಪ್ರಚೋಧನೆಗೆ ಲಿಂಗಾಯತ ಸಮಾಜದಿಂದ ದೊಡ್ಡ ಪ್ರತಿಕ್ರಿಯೆ ಬಂದಿದೆ. ಇದನ್ನು ನಾವು ಹೇಗೆ ಅರ್ಥೈಸಬೇಕು? ಮುಂದೇನು ಮಾಡಬೇಕು? ಬಸವ ಮೀಡಿಯಾ ಕೇಳಿದ ಐದು ಪ್ರಶ್ನೆಗಳಿಗೆ ಇಂದು ಕಲ್ಯಾಣ ಮಹಾಮನೆ ಮಹಾಮಠದ ಪೂಜ್ಯ ಬಸವಪ್ರಭು ಸ್ವಾಮೀಜಿ
ಪ್ರತಿಕ್ರಿಯೆ ನೀಡಿದ್ದಾರೆ.
ಬಸವ ಕಲ್ಯಾಣ
1)ರವಿ ಹಂಜ್, ವಿಶ್ವೇಶ್ವರ ಭಟ್ಟ ವಿರುದ್ಧ ಇಷ್ಟೊಂದು ದೊಡ್ಡ ಆಕ್ರೋಶ ವ್ಯಕ್ತವಾಗುತ್ತಿರುವುದಕ್ಕೆ ಕಾರಣವೇನು?
ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ಟ ಅವರ ವಿಚಾರವಾಗಿ ಇಂದು ವ್ಯಕ್ತವಾಗುತ್ತಿರುವ ಆಕ್ರೋಶವನ್ನು ಕೇವಲ ಒಂದು ಪುಸ್ತಕದ ವಿವಾದ ಎಂದು ನೋಡುವುದು ಸರಿಯಲ್ಲ.
ಇದು ಗುರು ಬಸವಣ್ಣನವರ ವ್ಯಕ್ತಿತ್ವ, ಶರಣ ಪರಂಪರೆಯ ಇತಿಹಾಸ, ಲಿಂಗಾಯತ ಧರ್ಮದ ಅಸ್ಮಿತೆ ಮತ್ತು ಸಮಾಜದ ಸ್ವಾಭಿಮಾನದ ಜೊತೆಗೆ ಬೆಸೆದುಕೊಂಡಿರುವ ವಿಚಾರವಾಗಿದೆ.
ಲಿಂಗಾಯತ ಸಮಾಜದಲ್ಲಿ ಗುರು ಬಸವಣ್ಣನವರು ಕೇವಲ ಒಬ್ಬ ಐತಿಹಾಸಿಕ ವ್ಯಕ್ತಿಯಲ್ಲ. ಅವರು ಒಂದು ಧರ್ಮದ ದಾರ್ಶನಿಕರು, ಸಾಮಾಜಿಕ ಕ್ರಾಂತಿಯ ಹರಿಕಾರರು, ಸಮಾನತೆಯ ಪ್ರತಿಪಾದಕರು, ಕನ್ನಡ ನೆಲದ ಸಾಂಸ್ಕೃತಿಕ ನಾಯಕರು, ವಿಶ್ವ ಸಂವಿಧಾನ ಶಿಲ್ಪಿ ಮತ್ತು ಶರಣ ಸಂಸ್ಕೃತಿಯ ಜೀವಾಳವಾಗಿದ್ದಾರೆ.
‘ಬಸವ ಮಂಟಪ’ ಕೃತಿಯಲ್ಲಿನ ಕೆಲವು ಬರಹಗಳು ಗುರು ಬಸವಣ್ಣನವರ ವ್ಯಕ್ತಿತ್ವ ಹಾಗೂ ವಿಚಾರಧಾರೆಗೆ ಅವಮಾನ ಮಾಡಿವೆ ಎಂಬ ಆರೋಪದಿಂದ ಮತ್ತು ಖಾಸಗಿ ಚಾನೆಲ್ ಸಂದರ್ಶನ ಒಂದರಲ್ಲಿ ಹಂಜ್ ಗುರು ಬಸವಣ್ಣನವರ ನೈತಿಕತೆ ಪ್ರಶ್ನಿಸಿ ಆಕ್ಷೇಪಾರ್ಹ ಹೇಳಿಕೆಯಿಂದ ಈ ಆಕ್ರೋಶ ಆರಂಭವಾಗಿದೆ.
ಆದರೆ ಈ ವಿವಾದ ಕೇವಲ ಪುಸ್ತಕದ ಪುಟಗಳಿಗೆ ಸೀಮಿತವಾಗದೆ, ಲೇಖಕರ ಹಿಂದಿನ ಬರಹಗಳು, ಸಂದರ್ಶನಗಳು ಮತ್ತು ವೀರಶೈವ-ಲಿಂಗಾಯತ ಸಂಬಂಧದ ಕುರಿತ ಅವರ ಪ್ರತಿಪಾದನೆಗಳಿಗೂ ವಿಸ್ತರಿಸಿದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಈ ಬಾರಿ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳು ಮಾತ್ರವಲ್ಲದೆ, ಬೇರೆ ಬೇರೆ ರಾಜಕೀಯ ಪಕ್ಷಗಳ ನಾಯಕರು, ಸಚಿವರು, ಶಾಸಕರು, ಮಠಾಧೀಶರು ಮತ್ತು ಬಸವಪರ ಚಿಂತಕರು ಕೂಡ ಪ್ರತಿಕ್ರಿಯಿಸಿದ್ದು ಗುರು ಬಸವಣ್ಣನವರ ಸಂದೇಶದ ವ್ಯಾಪ್ತಿ ಎಂತಹದ್ದು ಎಂದು ಗೊತ್ತಾಗುತ್ತದೆ ಅಲ್ಲದೆ ಇದರಿಂದ ಈ ಹೋರಾಟಕ್ಕೆ ಪಕ್ಷಾತೀತವಾದ ಸಾಮಾಜಿಕ ಸ್ವರೂಪ ಬಂದಿದೆ.
ನನ್ನ ಅಭಿಪ್ರಾಯದಲ್ಲಿ, ಈ ಬೆಳವಣಿಗೆಯ ಹಿಂದೆ ಮೂರು ಪ್ರಮುಖ ಕಾರಣಗಳಿವೆ.
- * ಬಸವಣ್ಣನವರ ಬಗ್ಗೆ ಎಲ್ಲಾ ಕಾಯಕದ ಸಮಾಜಕ್ಕಿರುವ ಆಳವಾದ ಗೌರವ ಮತ್ತು ಭಾವನಾತ್ಮಕ ಸಂಬಂಧ ಹಾಗೂ ಜನಸಾಮಾನ್ಯರ ಪೂಜ್ಯ ಭಾವನೆ.
- * ಲಿಂಗಾಯತ ಧರ್ಮದ ಅಸ್ಮಿತೆ ಮತ್ತು ಸ್ವತಂತ್ರ ಧಾರ್ಮಿಕ ಪರಂಪರೆಯ ಕುರಿತು ದೀರ್ಘಕಾಲದಿಂದ ನಡೆಯುತ್ತಿರುವ ಚರ್ಚೆ.
- * ಗುರು ಬಸವಣ್ಣನವರ ಇತಿಹಾಸ ಮತ್ತು ವಚನ ಪರಂಪರೆಯ ಕುರಿತು ಮಾತನಾಡುವಾಗ ಜವಾಬ್ದಾರಿಯುತ ಅಧ್ಯಯನ ಇರಬೇಕು ಎಂಬ ಸಮಾಜದ ನಿರೀಕ್ಷೆ.
ಹಿಂದೆ ಅನೇಕ ಸಂದರ್ಭಗಳಲ್ಲಿ ಲಿಂಗಾಯತರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಈ ಬಾರಿ ವಿವಿಧ ಸಂಘಟನೆಗಳು ಮತ್ತು ರಾಜಕೀಯ ವಲಯಗಳ ಪ್ರತಿಕ್ರಿಯೆ ಒಂದೇ ಕಾಲದಲ್ಲಿ ವ್ಯಕ್ತವಾಗಿರುವುದು ವಿಶೇಷ.
2) ಹಿಂದಿನ ಪುಸ್ತಕಗಳ ವಿವಾದಕ್ಕೂ ಈಗಿನ ಪ್ರತಿಭಟನೆಗೂ ವ್ಯತ್ಯಾಸವಿದೆಯೇ?
ಖಂಡಿತವಾಗಿಯೂ ಕೆಲವು ಪ್ರಮುಖ ವ್ಯತ್ಯಾಸಗಳು ಕಾಣಿಸುತ್ತವೆ. ಹಿಂದಿನ ಕೆಲವು ಪುಸ್ತಕಗಳ ವಿಚಾರದಲ್ಲಿ ಆಕ್ಷೇಪಗಳು ನಿರ್ದಿಷ್ಟ ಲೇಖಕರ ಬರಹ, ಐತಿಹಾಸಿಕ ನಿರೂಪಣೆ ಅಥವಾ ಧಾರ್ಮಿಕ ವ್ಯಾಖ್ಯಾನಗಳಿಗೆ ಸೀಮಿತವಾಗಿದ್ದವು ಮತ್ತು ಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಅಷ್ಟೇನು ಕಳಂಕ ತರುವಂತವುಗಳಾಗಿದ್ದಿರಲಿಲ್ಲ.
ಆ ಸಂದರ್ಭದಲ್ಲಿ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೂ, ಎಲ್ಲ ಸಂಘಟನೆಗಳೂ ಒಂದೇ ವೇದಿಕೆಯಲ್ಲಿ ಬಂದು ಹೋರಾಡಿದ ಉದಾಹರಣೆಗಳು ಕಡಿಮೆ.
ಆದರೆ ಈಗಿನ ವಿವಾದದಲ್ಲಿ ಮೂರು ಆಯಾಮಗಳಿವೆ.
ಮೊದಲನೆಯದು: ಗುರು ಬಸವಣ್ಣನವರ ವ್ಯಕ್ತಿತ್ವದ ಪ್ರಶ್ನೆ.
ಗುರು ಬಸವಣ್ಣನವರ ಕುರಿತು ಮಾಡಲಾಗಿದೆ ಎನ್ನಲಾದ ಅವಹೇಳನಕಾರಿ ನಿರೂಪಣೆಗಳು ಸಮಾಜದ ಭಾವನೆಗೆ ನೋವುಂಟು ಮಾಡಿವೆ.
ಎರಡನೆಯದು: ಲಿಂಗಾಯತ ಧರ್ಮದ ಅಸ್ಮಿತೆಯ ಪ್ರಶ್ನೆ.
ಈ ವಿವಾದದ ಸಂದರ್ಭದಲ್ಲಿ ವೀರಶೈವ ಮತ್ತು ಲಿಂಗಾಯತ ಒಂದೇ ಎಂಬ ಲೇಖಕರ ಪ್ರತಿಪಾದನೆಯೂ ಚರ್ಚೆಗೆ ಬಂದಿದೆ.
ಹೀಗಾಗಿ ಇದು ಕೇವಲ ವ್ಯಕ್ತಿ ಅಥವಾ ಪುಸ್ತಕದ ವಿರುದ್ಧದ ಆಕ್ರೋಶವಾಗಿ ಉಳಿದಿಲ್ಲ. ಲಿಂಗಾಯತ ಧರ್ಮದ ಸ್ವತಂತ್ರ ಅಸ್ಮಿತೆಯ ಕುರಿತ ಚರ್ಚೆಯೂ ಇದರೊಂದಿಗೆ ಬೆಸೆದುಕೊಂಡಿದೆ.
ಮೂರನೆಯದು: ಸಾಮಾಜಿಕ ಮತ್ತು ರಾಜಕೀಯ ಒಗ್ಗಟ್ಟಿನ ಪ್ರಶ್ನೆ.
ಈ ಬಾರಿ ಬಸವಪರ ಸಂಘಟನೆಗಳು, ವೀರಶೈವ-ಲಿಂಗಾಯತ ಮಹಾಸಭೆ, ವಿವಿಧ ಮಠಗಳ ಪ್ರತಿನಿಧಿಗಳು ಹಾಗೂ ರಾಜಕೀಯ ನಾಯಕರು ಪ್ರತಿಕ್ರಿಯಿಸಿರುವುದು ಗಮನಾರ್ಹ.
ಹೀಗಾಗಿ ಹಿಂದಿನ ಕೆಲವು ಪುಸ್ತಕಗಳ ವಿವಾದಗಳಿಗಿಂತ ಈಗಿನ ಬೆಳವಣಿಗೆ ಹೆಚ್ಚು ವ್ಯಾಪಕವಾದ ಸಾಮಾಜಿಕ ಮತ್ತು ಸೈದ್ಧಾಂತಿಕ ಚರ್ಚೆಯ ಸ್ವರೂಪ ಪಡೆದುಕೊಂಡಿದೆ ಎಂಬುದು ನನ್ನ ಅಭಿಪ್ರಾಯ.
3) ಲಿಂಗಾಯತ ಧರ್ಮದ ಹೋರಾಟದ ಮೇಲೆ, ಬಸವ ಸಂಘಟನೆಗಳ ಮೇಲೆ, ಒಟ್ಟಾರೆ ಲಿಂಗಾಯತ ಸಮಾಜದ ಮೇಲೆ ಈ ಘಟನೆ ಯಾವ ಪರಿಣಾಮ ಬೀರಬಹುದು?
ನನ್ನ ದೃಷ್ಟಿಯಲ್ಲಿ ಈ ಘಟನೆ ಲಿಂಗಾಯತ ಸಮಾಜಕ್ಕೆ ಆತ್ಮಾವಲೋಕನ ಮಾಡಿಕೊಳ್ಳಲು ಒಂದು ಅವಕಾಶವೂ ಹೌದು. ಸಕಾಲದಲ್ಲಿ ಮಠಾಧೀಶರು ಮತ್ತು ಬಸವಪರ ಸಂಘಟನೆಗಳ ಮುಖ್ಯಸ್ಥರು ಎಚ್ಚೆತ್ತುಕೊಂಡು ಪ್ರತಿಕ್ರಿಯೆ ನೀಡದಿದ್ದರೆ ಜನಸಾಮಾನ್ಯ ಬಸವಭಕ್ತರು ತಮ್ಮ ವಿರುದ್ಧವೇ ತಿರುಗಿ ಬೀಳಬಹುದೆಂಬ ಎಚ್ಚರಿಕೆಯನ್ನು ಮೂಡಿಸಿದೆ.
ಇದುವರೆಗೆ ಲಿಂಗಾಯತ ಧರ್ಮದ ಮಾನ್ಯತೆ, ಧಾರ್ಮಿಕ ಸ್ವಾತಂತ್ರ್ಯ, ಬಸವತತ್ವದ ಪ್ರಸಾರ, ವಚನ ಸಾಹಿತ್ಯದ ಸಂರಕ್ಷಣೆ ಮತ್ತು ಸಾಮಾಜಿಕ ನ್ಯಾಯದ ವಿಚಾರಗಳಲ್ಲಿ ಹೋರಾಟಗಳು ನಡೆದಿವೆ.
ಆದರೆ ಈ ಹೋರಾಟಗಳ ನಡುವೆ ಸಂಘಟನೆಗಳಲ್ಲಿನ ಭಿನ್ನಾಭಿಪ್ರಾಯಗಳು ಮತ್ತು ಪರಸ್ಪರ ಸಮನ್ವಯದ ಕೊರತೆಯೂ ಕಾಣಿಸಿಕೊಂಡಿದೆ. ಈ ಘಟನೆ ಕನಿಷ್ಠ ಕೆಲವು ವಿಚಾರಗಳಲ್ಲಿ ಹೊಸ ಚಿಂತನೆಯನ್ನು ಹುಟ್ಟುಹಾಕಿದೆ.
ಪೂಜ್ಯ ಮಾತೆ ಮಹಾದೇವಿಯವರ ಹೋರಾಟ ಕ್ರಮವನ್ನು ಅನುಸರಿಸುವಂತೆ ಸೂಚಿಸುತ್ತದೆ.
- * ಬಸವ ಸಂಘಟನೆಗಳ ನಡುವೆ ಸಮನ್ವಯ ಬೆಳೆಯುವ ಸಕಾಲ.
ಬೇರೆ ಬೇರೆ ಹೆಸರಿನಲ್ಲಿ, ಬೇರೆ ಬೇರೆ ವೇದಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸವಪರ ಸಂಘಟನೆಗಳು ಬಸವತತ್ವದ ವಿಚಾರದಲ್ಲಿ ಒಂದಾಗುವ ಅಗತ್ಯವನ್ನು ಈ ಘಟನೆಯು ನಮಗೆ ಮನವರಿಕೆ ಮಾಡುತ್ತದೆ.
- * ಲಿಂಗಾಯತ ಧರ್ಮದ ಹೋರಾಟಕ್ಕೆ ಹೊಸ ಚರ್ಚೆ ಆರಂಭವಾಗಿದೆ.
ಇನ್ನುಮುಂದೆ ಲಿಂಗಾಯತ ಧರ್ಮದ ಇತಿಹಾಸ, ತಾತ್ವಿಕ ಸ್ವರೂಪ, ವಚನ ಸಾಹಿತ್ಯ ಮತ್ತು ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಕುರಿತು ಅಧ್ಯಯನಪೂರ್ಣ ಚರ್ಚೆಗಳು ಹೆಚ್ಚಾಗಬೇಕು
- * ಯುವ ಪೀಳಿಗೆಯಲ್ಲಿ ಬಸವಣ್ಣನವರ ಕುರಿತು ಅಧ್ಯಯನದ ಆಸಕ್ತಿ ಹುಟ್ಟು ಹಾಕಿದೆ.
ನನ್ನ ಪ್ರಕಾರ ಇದು ಅತ್ಯಂತ ಮಹತ್ವದ ಸಂಗತಿ. ಕೇವಲ ಪ್ರತಿಭಟನೆ ಮಾಡುವುದರಿಂದ ಬಸವತತ್ವ ಉಳಿಯುವುದಿಲ್ಲ. ಬಸವಣ್ಣನವರ ವಚನಗಳನ್ನು ಓದುವ, ಅರ್ಥೈಸುವ, ಸಂಶೋಧಿಸುವ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳುವ ಪೀಳಿಗೆಯನ್ನು ನಾವು ಸಿದ್ಧಪಡಿಸಬೇಕೊಳ್ಳಬೇಕಾಗಿದೆ.
ಈ ನಿಟ್ಟಿನಲ್ಲಿ ರಾಜ್ಯಾದ್ಯಾಂತ ಬಸವ ಮೀಡಿಯಾ ಹಮ್ಮಿಕೊಂಡ ‘ಬಸವ ಶಕ್ತಿ’ ಶಿಬಿರದಲ್ಲಿ ಯುವಕರು ಹೆಚ್ಚು ಹೆಚ್ಚು ಭಾಗಿಯಾಗುತ್ತಿದ್ದಾರೆ.
- * ಸಂಘಟನೆಗಳು ವ್ಯಕ್ತಿಕೇಂದ್ರಿತವಾಗದೆ ತತ್ವಕೇಂದ್ರಿತವಾಗಬೇಕು.
ಗುರು ಬಸವಣ್ಣನವರ ಹೆಸರಿನಲ್ಲಿ ಸಂಘಟನೆ ಕಟ್ಟುವುದು ಸುಲಭ. ಆದರೆ ಬಸವಣ್ಣನವರ ವಿಚಾರಗಳನ್ನು ಬದುಕಿನಲ್ಲಿ ಅನುಷ್ಠಾನಗೊಳಿಸುವುದು ಮುಖ್ಯ. ಜಾತಿಭೇದ, ವರ್ಣಭೇದ, ಲಿಂಗಭೇದ ಮತ್ತು ಶೋಷಣೆಗಳ ವಿರುದ್ಧ ನಿಲ್ಲುವುದೇ ನಿಜವಾದ ಬಸವಪರ ಚಳವಳಿಯಾಗಿದೆ.
ಆದ್ದರಿಂದ ಈ ಘಟನೆಯಿಂದ ಲಿಂಗಾಯತ ಸಮಾಜ ಕೇವಲ ತಾತ್ಕಾಲಿಕ ಆಕ್ರೋಶಕ್ಕೆ ಸೀಮಿತವಾಗದೆ, ಶಾಶ್ವತವಾದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಜಾಗೃತಿಯ ಕಡೆಗೆ ಸಾಗಬೇಕು. ನಾವು ಬಸವಣ್ಣನವರನ್ನು ಟೀಕೆಯಿಂದ ರಕ್ಷಿಸುವುದಷ್ಟೇ ಅಲ್ಲ, ಅವರ ವಿಚಾರಗಳನ್ನು ಜಗತ್ತಿಗೆ ಪರಿಚಯಿಸುವ ಜವಾಬ್ದಾರಿಯನ್ನೂ ಹೊರಬೇಕು. ನಿಮ್ನ ವರ್ಗದವರನ್ನು ಒಳಗೊಳ್ಳಬೇಕು.
4) ಲಿಂಗಾಯತ-ವೀರಶೈವ ಸಂಬಂಧದ ಮೇಲೆ ಈ ಘಟನೆ ಪರಿಣಾಮ ಬೀರುತ್ತದೆಯೇ?
ಈ ಪ್ರಶ್ನೆ ಬಹಳ ಸೂಕ್ಷ್ಮವಾದುದು. ಇದನ್ನು ಅತ್ಯಂತ ಜವಾಬ್ದಾರಿಯಿಂದ ಚರ್ಚಿಸಬೇಕಾಗಿದೆ. ಲಿಂಗಾಯತ ಮತ್ತು ವೀರಶೈವ ಸಂಬಂಧದ ವಿಚಾರ ದೀರ್ಘಕಾಲದಿಂದ ಚರ್ಚೆಯಲ್ಲಿದೆ. ಈ ಎರಡೂ ಪರಂಪರೆಗಳ ನಡುವಿನ ಸಂಬಂಧದ ಬಗ್ಗೆ ವಿಭಿನ್ನ ಐತಿಹಾಸಿಕ, ಧಾರ್ಮಿಕ ಮತ್ತು ತಾತ್ವಿಕ ನಿಲುವುಗಳಿವೆ.
ಈ ವಿವಾದದ ಸಂದರ್ಭದಲ್ಲಿ ಒಂದು ಕಡೆ ಲಿಂಗಾಯತ ಧರ್ಮದ ಸ್ವತಂತ್ರ ಅಸ್ಮಿತೆಯನ್ನು ಪ್ರತಿಪಾದಿಸುವ ಸಂಘಟನೆಗಳಿವೆ. ಇನ್ನೊಂದು ಕಡೆ ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ನಿಲುವನ್ನು ಹೊಂದಿರುವ ಸಂಘಟನೆಗಳೂ ಇವೆ. ಆದರೆ ಈ ವಿವಾದದಲ್ಲಿ ಒಂದು ಗಮನಾರ್ಹ ಸಂಗತಿಯಿದೆ. ಬಸವಣ್ಣನವರ ಗೌರವದ ವಿಚಾರ ಬಂದಾಗ ಈ ಎರಡೂ ನಿಲುವುಗಳನ್ನು ಹೊಂದಿರುವ ಅನೇಕ ನಾಯಕರು ಮತ್ತು ಸಂಘಟನೆಗಳು ಒಟ್ಟಾಗಿ ಪ್ರತಿಕ್ರಿಯಿಸಿವೆ. ಇದು ಸಾಮಾಜಿಕವಾಗಿ ಗಮನಿಸಬೇಕಾದ ಬೆಳವಣಿಗೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದವರು ರಾಮನಿಗೆ ಅಪಚಾರವಾದಾಗ ಹೋರಾಡುತ್ತಾರೆ. ಆದರೆ ಮೊಟ್ಟಮೊದಲು ವಿಶ್ವದ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ ಭಾರತದ ಮಣ್ಣಿನ ದಾರ್ಶನಿಕ ಗುರು ಬಸವಣ್ಣನಿಗೆ ಅಪಚಾರವಾದಾಗ ತಟಸ್ಥವಾಗಿ ಕೂಡುತ್ತಾರೆ. ಇವರಿಗೆ ರಾಮ ಮಾತ್ರ ಬೇಕಾ ಬಸವಣ್ಣ ಬೇಡವಾ? ಇವರ ಇಬ್ಬಗೆಯ ಈ ನೀತಿಯನ್ನು ನಾವೆಲ್ಲಾ ಒಟ್ಟಾಗಿ ಖಂಡಿಸಬೇಕು. ಇವರ ನಡೆ ಇಂದು ವ್ಯಾಪಕವಾಗಿ ಚರ್ಚೆಯಾಗಿ ಇವರ ರಾಷ್ಟ್ರೀಯ ಸ್ವಯಂಸೇವಕರೆಂಬ ಹಣೆ ಪಟ್ಟಿ ಕಳಚಬೇಕು.
ನನ್ನ ಅಭಿಪ್ರಾಯದಲ್ಲಿ, ಬಸವಣ್ಣನವರ ಗೌರವದ ವಿಚಾರದಲ್ಲಿ ಲಿಂಗಾಯತರು ಒಗ್ಗಟ್ಟಾಗಿರುವುದು ಒಳ್ಳೆಯದು. ಆದರೆ ಆ ಒಗ್ಗಟ್ಟಿನ ಹೆಸರಿನಲ್ಲಿ ಲಿಂಗಾಯತ ಧರ್ಮದ ಸ್ವತಂತ್ರ ಅಸ್ಮಿತೆಯ ಕುರಿತ ಚರ್ಚೆಯನ್ನು ಕೈಬಿಡಬಾರದು. ಹಾಗೆಯೇ ಭಿನ್ನ ತಾತ್ವಿಕ ನಿಲುವುಗಳನ್ನು ಹೊಂದಿರುವವರನ್ನು ಶತ್ರುಗಳಂತೆ ನೋಡುವುದೂ ಸರಿಯಲ್ಲ.
ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ಗೌರವದಿಂದ ಚರ್ಚಿಸುವ ಪ್ರಜಾಪ್ರಭುತ್ವದ ಸಂಸ್ಕೃತಿ ನಮಗೆ ಬೇಕು.
ಲಿಂಗಾಯತ ಮತ್ತು ವೀರಶೈವ ಸಂಬಂಧದ ಪ್ರಶ್ನೆಗೆ ಪರಿಹಾರವು ಭಾವನಾತ್ಮಕ ಘೋಷಣೆಗಳಿಂದ ಬರಲು ಸಾಧ್ಯವಿಲ್ಲ. ಅದು ಇತಿಹಾಸ, ವಚನ ಸಾಹಿತ್ಯ, ಧರ್ಮದ ಮೂಲತತ್ವಗಳು ಮತ್ತು ಸಂಶೋಧನೆಗಳ ಆಧಾರದ ಮೇಲೆ ನಿರ್ಧಾರವಾಗಬೇಕಾದ ವಿಷಯ.
ನನ್ನ ಅಂತಿಮ ನಿಲುವು: ನಾನು ಈ ಇಡೀ ಬೆಳವಣಿಗೆಯನ್ನು ಕೇವಲ ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ವಿರುದ್ಧದ ಪ್ರತಿಭಟನೆಯಾಗಿ ನೋಡುವುದಿಲ್ಲ. ಇದು ಗುರು ಬಸವಣ್ಣನವರ ಇತಿಹಾಸವನ್ನು ಯಾರು ಹೇಗೆ ಅಧ್ಯಯನ ಮಾಡಬೇಕು, ಶರಣ ಪರಂಪರೆಯನ್ನು ಹೇಗೆ ಅರ್ಥೈಸಬೇಕು ಮತ್ತು ಲಿಂಗಾಯತ ಧರ್ಮದ ಅಸ್ಮಿತೆಯನ್ನು ಹೇಗೆ ಗ್ರಹಿಸಬೇಕು ಎಂಬ ದೊಡ್ಡ ಚರ್ಚೆಗೆ ನಾಂದಿಯಾಗಬೇಕಾಗಿದೆ.
ಗುರು ಬಸವಣ್ಣನವರನ್ನು ಕಾಪಾಡುವುದು ಎಂದರೆ ಅವರ ಹೆಸರಿನಲ್ಲಿ ಕೇವಲ ಪ್ರತಿಭಟನೆ ಮಾಡುವುದು ಅಲ್ಲ. ಬಸವಣ್ಣನವರ ವಿಚಾರಗಳನ್ನು ವೈಜ್ಞಾನಿಕವಾಗಿ, ಐತಿಹಾಸಿಕವಾಗಿ ಮತ್ತು ತಾತ್ವಿಕವಾಗಿ ಸಮರ್ಥಿಸುವ ಜ್ಞಾನಶಕ್ತಿಯನ್ನು ಬೆಳೆಸುವುದು.
ಯಾರಾದರೂ ಬಸವಣ್ಣನವರ ಕುರಿತು ತಪ್ಪು ಮಾಹಿತಿ ನೀಡಿದರೆ ಅದಕ್ಕೆ ದಾಖಲೆಗಳ ಮೂಲಕ ಉತ್ತರಿಸಬೇಕು. ಆಕ್ಷೇಪಾರ್ಹ ಬರಹಗಳಿದ್ದರೆ ಕಾನೂನುಬದ್ಧವಾಗಿ ಪ್ರಶ್ನಿಸಬೇಕು. ಅದೇ ಸಮಯದಲ್ಲಿ ಲೇಖಕರಿಗೆ ತಮ್ಮ ವಾದ ಮಂಡಿಸುವ ಮತ್ತು ಸಮಾಜಕ್ಕೆ ಅದನ್ನು ವಿಮರ್ಶಿಸುವ ಅವಕಾಶವಿರಬೇಕು. ಬೆದರಿಕೆ, ಹಿಂಸೆ ಮತ್ತು ಹತ್ಯೆಯ ಬೆದರಿಕೆಗಳಿಗೆ ಯಾವುದೇ ಸ್ಥಾನವಿರಬಾರದು. ನನ್ನ ದೃಷ್ಟಿಯಲ್ಲಿ ಬಸವಣ್ಣನವರನ್ನು ವಿರೋಧಿಸುವವರನ್ನು ಮೌನಗೊಳಿಸುವುದಕ್ಕಿಂತ, ಬಸವಣ್ಣನವರನ್ನು ಸಮರ್ಥಿಸುವ ಸಾವಿರಾರು ವಿದ್ವಾಂಸರನ್ನು ಸಿದ್ಧಪಡಿಸುವುದು ಬಹಳ ಮುಖ್ಯ. ಬಸವಣ್ಣನವರು ಒಂದು ಸಮಾಜದ ಆಸ್ತಿಯಲ್ಲ; ಇಡೀ ಮಾನವಕುಲದ ಜ್ಞಾನಸಂಪತ್ತು. ಅವರ ವಿಚಾರಗಳನ್ನು ಜಗತ್ತಿಗೆ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ.
ಪ್ರತಿಭಟನೆ ತಾತ್ಕಾಲಿಕವಾಗಿರಬಹುದು. ಆದರೆ ಬಸವತತ್ವದ ಅಧ್ಯಯನ, ಅನುಷ್ಠಾನ ಮತ್ತು ಪ್ರಸಾರ ಶಾಶ್ವತವಾಗಬೇಕು. ಇದೇ ಈ ಘಟನೆಯಿಂದ ಲಿಂಗಾಯತ ಸಮಾಜ ಕಲಿಯಬೇಕಾದ ಬಹುದೊಡ್ಡ ಪಾಠ ಎಂದು ನಾನು ಭಾವಿಸುತ್ತೇನೆ.
5) ರವಿ ಹಂಜ್ ಹಿಂದೆ ಯಾವುದಾದರು ಸಂಘಟನೆಗಳಿವೆಯಾ? ಅವರ ಉದ್ಧೇಶವೇನು? ಅವರನ್ನು ಲಿಂಗಾಯತರು ಹೇಗೆ ನಿಭಾಯಿಸಬೇಕು?
ರವಿ ಹಂಜಿಮಠ ಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ತೇಜೋವಧೆ ಮಾಡುವ ಏಕೈಕ ದುರುದ್ಧೇಶದಿಂದಲೇ ಈ ಬಸವ ಮಂಟಪ ಎಂಬ ವಿಕೃತ ಕೃತಿಯನ್ನು ರಚಿಸಿದ್ದಾನೆ.
ಮುಂಗೈ ಹುಣ್ಣಿಗೆ ಕನ್ನಡಿ ಅವಶ್ಯಕತೆ ಬೇಕಿಲ್ಲ. ಈ ಮಾನಸಿಕ ಅಸ್ವಸ್ಥನ ಹಿಂದೆ ವಿಶ್ವೇಶ್ವರ ಭಟ್ಟ ಎನ್ನುವ ವೈದಿಕ ವ್ಯಕ್ತಿ ಇದ್ದು, ಬಸವಣ್ಣನವರ ಮೇಲಿನ ಸಿಟ್ಟನ್ನು ರವಿ ಹಂಜಿಮಠ ಅವರ ಮೂಲಕ ಹೊರಹಾಕಿದ್ದು ಎದ್ದು ತೋರುತ್ತದೆ.
ರಾಜ್ಯಾಧ್ಯಂತ ಬಸವಪರ ಸಂಘಟನೆಗಳು ಇಷ್ಟೆಲ್ಲ ಹೋರಾಟ ಮಾಡುತ್ತಿದ್ದಾರೆ. ಆದರೆ ಈ ವರೆಗೂ ಆರ್ ಎಸ್ ಎಸ್ ಮುಖ್ಯಸ್ಥರು ಒಂದೇ ಒಂದು ಹೇಳಿಕೆ ನೀಡಿಲ್ಲ ಅಂದರೆ ಅದರ ಅರ್ಥ ಸ್ಪಷ್ಟ. ಆರ್ ಎಸ್ ಎಸ್ ನವರ ಕೈವಾಡ ಇದ್ದೇ ಇದೆ.
ಆವರ ಉದ್ಧೇಶ ಏನೆಂದರೆ;
- ಜಾಗತಿಕವಾಗಿ ಬಸವತತ್ವವು ವೇಗವಾಗಿ ಬೆಳೆಯುತ್ತಿರುವುದು.
- ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಸರಕಾರ ಘೋಷಿಸದ್ದು.
ಈ ಎರಡು ಕಾರಣದಿಂದ ಅವರು ಬಸವಣ್ಣನವರನ್ನು ತೇಜೋವಧೆ ಮಾಡಿದರೆ, ಅವರ ಅನುಯಾಯಿಗಳ ಶಕ್ತಿ ಕುಗ್ಗಿಸಬೇಕೆಂಬುದಾಗಿದೆ.
ಲಿಂಗಾಯತರು ಅವರ ಕುತಂತ್ರವನ್ನು ತಿಳಿದು, ಶರಣ ಜ್ಞಾನವನ್ನು ಶಿಬಿರಗಳ ಮೂಲಕ ಯುವಕ-ಯುವತಿಯರಿಗೆ ಮುಟ್ಟಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮಠಗಳ ಉತ್ಸವ ಕಾರ್ಯಕ್ರಮಗಳಲ್ಲಿ ಆಡಂಬರತೆಗೆ ಹೆಚ್ಚು ಹೊತ್ತುಕೊಡದೆ, ಬಸವತತ್ವ ಶಿಬಿರ ಹಮ್ಮಿಕೊಳ್ಳಬೇಕು.
