ಮುಂಡಗೋಡ :
ಧರ್ಮಗುರು ಬಸವಣ್ಣನವರ ಕುರಿತು ಅವಹೇಳನ, ನಿಂದನೆ ಹಾಗೂ ಇತಿಹಾಸಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಅಂಶಗಳನ್ನು ಒಳಗೊಂಡಿದೆ ಎನ್ನಲಾದ ‘ವಿವಾದಿತ ಬಸವ ಮಂಟಪ’ ಪುಸ್ತಕದ ಕುರಿತು ಸಮಗ್ರ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಬಸವಧಾಮದ ಮಾತೆ ಬಸವೇಶ್ವರಿ ಹಾಗೂ ತಾಲೂಕಿನ ಸರ್ವಸಮಾಜ ಸಂಘಟನೆಗಳು ಒತ್ತಾಯಿಸಿವೆ.
ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಬಸವಧಾಮದ ಬಸವೇಶ್ವರಿ ಮಾತಾಜಿ ಮಾತನಾಡಿದರು.
ಕರ್ನಾಟಕ ಸರ್ಕಾರವು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ, ತತ್ವಾದರ್ಶಗಳು, ವಚನ ಸಾಹಿತ್ಯ ಹಾಗೂ ಸಾಮಾಜಿಕ ಸುಧಾರಣೆಯ ಚಳವಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹಾಗೂ ಅವಹೇಳನ, ನಿಂದನಾತ್ಮಕ ಅಂಶಗಳು ಪ್ರಕಟವಾಗಿರುವುದರ ಕುರಿತು ನಾಡಿನಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಗೊಂದಲದ ಬಸವ ಮಂಟಪ’ ಪುಸ್ತಕದಲ್ಲಿನ ವಿವಾದಾತ್ಮಕ
ಅಂಶಗಳು, ರವಿ ಹಂಜ್ ಅವರ ಬರಹಗಳು ಹಾಗೂ ವಿಶ್ವವಾಣಿ ಪತ್ರಿಕೆಯಲ್ಲಿ ಈ ವಿಷಯಗಳು ಪ್ರಕಟವಾಗಲು ಸಹಕರಿಸಿದ್ದಾರೆ ಎನ್ನಲಾಗುತ್ತಿರುವ ವಿಶ್ವೇಶ್ವರ ಭಟ್ ಸೇರಿದಂತೆ ಸಂಬಂಧಪಟ್ಟವರ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ.

ಬಸವಣ್ಣನವರ ಇತಿಹಾಸ ಮತ್ತು ಧಾರ್ಮಿಕ ಭಾವನೆಗಳಿಗೆಧಕ್ಕೆ ಉಂಟುಮಾಡುವಂತಹ ಅಂಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಸಮಾಜದಲ್ಲಿ ಗೊಂದಲ, ಅಶಾಂತಿ ಹಾಗೂ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆಯಾಗದಂತೆ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ತಹಶೀಲದಾರ ಅವರಿಗೆ ಮನವಿ :
ನಂತರ ತಹಶೀಲದಾರ ಅವರಿಗೆ ತಾಲೂಕಾ ಸರ್ವ ಸಮಾಜದ ಮುಖಂಡರು ಹಾಗೂ ಬಸವಪರ ಸಂಘಟನೆಯವರು ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
ವಿವಾದಾತ್ಮಕ ಅಂಶಗಳನ್ನು ಒಳಗೊಂಡಿದೆ ಎನ್ನಲಾದ ‘ಬಸವ ಮಂಟಪ’ ಪುಸ್ತಕವನ್ನು ಕಾನೂನುಬದ್ದವಾಗಿ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಪುಸ್ತಕದ ಪ್ರಕಟಣೆ, ಬರವಣಿಗೆ ಮತ್ತು ಪ್ರಸಾರದಲ್ಲಿ ಭಾಗಿಯಾಗಿರುವವರ ಪಾತ್ರದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸಂಬಂಧಿತ ವಿಷಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು.
ಬಸವಣ್ಣನವರ ಇತಿಹಾಸ ಹಾಗೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಅಂಶಗಳಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಸಮಾಜದಲ್ಲಿ ಧಾರ್ಮಿಕ ಸಾಮರಸ್ಯ, ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್. ಪಾಟೀಲ, ಜಿ.ಪಂ.ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಸಮಾಜದ ಮುಖಂಡ ಬಿ.ಕೆ. ಪಾಟೀಲ, ಸಂಗಪ್ಪ ಕೋಳೂರ, ವಸಂತ ಕೊಣಸಾಲಿ, ಎಸ್.ಬಿ. ಹೂಗಾರ, ಚಿದಾನಂದ ಹರಿಜನ, ಎಸ್. ಫಕ್ಕೀರಪ್ಪ, ಸುರೇಶ ಕುಲ್ಲೊಳ್ಳಿ, ಬಿ.ಡಿ. ಹೊತಗಣ್ಣವರ, ಬಸವರಾಜ ಓಶಿಮಠ, ಆರ್.ಜೆ. ಬೆಳ್ಳೆನವರ, ಬಸವರಾಜ ಸಂಗಮೇಶ್ವರ, ಕೆಂಜೋಡಿ ಗಲಬಿ ಮತ್ತಿತರರು ಹಾಜರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh
