ರವಿ ಹಂಜ್‍ಗೆ ಕಠಿಣ ಶಿಕ್ಷೆಯಾಗಲಿ : ಲಿಂಗಾಯತ ಮಹಾಮಠ

281ನೇ ಶರಣ ಸಂಗಮ ಕಾರ್ಯಕ್ರಮ

ಬೀದರ :

ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಲೇಖಕ ರವಿ ಹಂಜ್ ಅವರನ್ನು ಸರ್ಕಾರ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಬಸವಗಿರಿಯ ಲಿಂಗಾಯತ ಮಹಾಮಠ ಆಗ್ರಹಿಸಿದೆ.

ಶರಣ ಸಂಗಮದಲ್ಲಿ ಮಾತನಾಡಿದ ಹಿರಿಯ ಸಾಹಿತಿ ರಮೇಶ ಮಠಪತಿ ಅವರು, ರವಿ ಹಂಜ್ ಬಸವಣ್ಣನವರಿಗೆ ಅವಮಾನ ಮಾಡಿರುವುದನ್ನು ಲಿಂಗಾಯತ ಮಹಾಮಠದಿಂದ ತೀವ್ರವಾಗಿ ಖಂಡಿಸಲಾಗುತ್ತದೆ ಎಂದು ಹೇಳಿದರು.

ಬಸವಣ್ಣನವರು ಲಿಂಗಾಯತ ಧರ್ಮದ ಸಂಸ್ಥಾಪಕರು. ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕರು. ಕೋಟ್ಯಾನುಕೋಟಿ ಜನರ ಆರಾಧ್ಯರು. ವಿಶ್ವಕ್ಕೆ ಪ್ರಜಾಪ್ರಭುತ್ವದ ಬೀಜ ಬಿತ್ತಿದವರು. ಇಂಥ ಮಹಾನುಭಾವ ಕುರಿತು ರವಿ ಹಂಜ್ ಅವಹೇಳನದ ಕೃತಿ ಹೊರ ತಂದಿರುವುದು ಅಕ್ಷಮ್ಯ ಎಂದು ತಿಳಿಸಿದರು.

ಈಗಾಗಲೇ ವಿವಾದಿತ ಬಸವ ಮಂಟಪ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಸರ್ಕಾರದ ಕ್ರಮವನ್ನು ಶ್ರೀಮಠದಿಂದ ಸ್ವಾಗತಿಸಲಾಗುತ್ತದೆ ಎಂದು ಹೇಳಿದರು.

ಸಾಮಾಜಿಕ ನ್ಯಾಯ ಪ್ರತಿಷ್ಠಾಪಿಸಲು ಪರಿಶ್ರಮಿಸಿದ ಬುದ್ಧ, ಬಸವ, ಅಂಬೇಡ್ಕರ್ ಮೊದಲಾದ ಮಹನೀಯರನ್ನು ಅಪಮಾನಿಸುವ ಮೂಲಕ ರಾತ್ರೋ ರಾತ್ರಿ ಪ್ರಸಿದ್ಧರಾಗ ಬಯಸುವ ನೀಚ ಮನೋಸ್ಥಿತಿಯವರು ಮತ್ತೆ ಮತ್ತೆ ಇಂಥ ಕೃತಿಗಿಳಿಯದಂತೆ ಸರ್ಕಾರ ಸೂಕ್ತ ಕಾನೂನು ರೂಪಿಸಬೇಕು ಎಂದು ಬೇಡಿಕೆ ಮಂಡಿಸಿದರು.

ಷಟಸ್ಥಲ ಸಿದ್ಧಾಂತ ಆಧ್ಯಾತ್ಮದ ಮೇರು ಪರ್ವ ಬಸವಾದಿ ಶರಣರ ಷಟಸ್ಥಲ ಸಿದ್ಧಾಂತ ಆಧ್ಯಾತ್ಮ ಜಗತ್ತಿನ ಮೇರು ಪರ್ವತ ಎಂದು ನೌಬಾದ್‍ನ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಡಾ. ಸಂತೋಷ ಹಂಗರಗಿ ಅಭಿಪ್ರಾಯಪಟ್ಟರು.

ಲಿಂಗಾಯತ ಮಹಾಮಠದ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಸೋಮವಾರ ಆಯೋಜಿಸಿದ್ದ 281ನೇ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಅನುಭಾವ ಮಂಡಿಸಿದರು.

ಹಂತ ಹಂತವಾಗಿ ಪರಮಾತ್ಮನಲ್ಲಿ ಬೆರೆಯುವ ಕ್ರಮವೇ ಷಟಸ್ಥಲ ಸಿದ್ಧಾಂತ ಎಂದು ಹೇಳಿದರು. ದೇವಶಕ್ತಿಯಲ್ಲಿ ವಿಶ್ವಾಸದಿಂದ ಭಕ್ತನಾಗಬೇಕು. ನಿಷ್ಠೆಯಿಂದ ಮಹೇಶ್ವರನಾಗಬೇಕು. ಸಾವಧಾನದಿಂದ ಪ್ರಸಾದಿ, ಸ್ವಾನುಭಾವದಿಂದ ಪ್ರಾಣಲಿಂಗಿಯಾಗಬೇಕು. ಅರಿವಿನಿಂದ ಶರಣನಾಗಿ ಐಕ್ಯ ಸ್ಥಳದತ್ತ ಸಾಗಬೇಕು ಎಂದು ತಿಳಿಸಿದರು. ಪರಮಾತ್ಮನನ್ನು ಸದಾ ಅನುಭವಿಸುತ್ತಿರಬೇಕು. ಹೊಟ್ಟೆಕಿಚ್ಚಿಗಾಗಿ ಬದುಕದೇ ಭಕ್ತಿಗಾಗಿ ಬದುಕಬೇಕು ಎಂದರು.

ಉದ್ಘಾಟನೆ ನೆರವೇರಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ರಾಜಕುಮಾರ ಪಾಟೀಲ ಮಾತನಾಡಿ, ಬಸವಾದಿ ಶರಣರ ವಚನ ಸಂದೇಶ ಸಾರಲು ಜನ್ಮ ತಳೆದವರು ಅಕ್ಕ ಅನ್ನಪೂರ್ಣತಾಯಿ. ಅವರು ಪ್ರವಚನಗಳ ಮೂಲಕ ನಾಡಿನಾದ್ಯಂತ ಬಸವ ಸಂದೇಶ ಸಾರಿದರು ಎಂದು ತಿಳಿಸಿದರು.

ವಾರದ ಅನುಭವ ಮಂಟಪ, ಮಾಸಿಕ ಶರಣ ಸಂಗಮ, ಗುರುವಚನ ಪರುಷ ಕಟ್ಟೆ, ಲಿಂಗಾಯತ ಧರ್ಮ ಗ್ರಂಥ, ಮರಣವೇ ಮಹಾನವಮಿ ಉತ್ಸವ, ವಚನ ವಿಜಯೋತ್ಸವ ಅವರ ಕೊಡುಗೆಗಳಾಗಿವೆ. ಅಕ್ಕನವರ ಋಣ ತೀರಿಸಲು ಅವರು ತೋರಿದ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಪರುಷ ಕಟ್ಟೆಯ ಚನ್ನಬಸವಣ್ಣ ಮಾತನಾಡಿ, ಬಸವಾದಿ ಶರಣರು ಸೂರ್ಯನಂತೆ ಲೋಕಕ್ಕೆ ಸದಾ ಬೆಳಕು ನೀಡುವವರು. ಸೂರ್ಯನಿಗೆ ಮಸಿ ಬಳಿಯಲು ಯಾರಿಂದಲೂ ಸಾಧ್ಯವಿಲ್ಲ. ಹಾಗೆಯೇ ಶರಣರ ಪ್ರಖರತೆ ನಂದಿಸಲು ಆಗುವುದಿಲ್ಲ. ಶರಣರು ಮೆಚ್ಚುವಂತೆ ಬದುಕಿದರೆ ಮಾತ್ರ ಅವರ ಕೃಪೆ ಸಾಧ್ಯ ಎಂದು ತಿಳಿಸಿದರು.

ಸಂತೆಗೆ ಬಂದವರೆಲ್ಲ ಬೆಲ್ಲದ ವ್ಯಾಪಾರಿಗಳಲ್ಲ. ಅದರಂತೆ ಭೂಮಿಗೆ ಬಂದ ನರ ಮನುಜರೆಲ್ಲ ಭಕ್ತರಲ್ಲ. ಇವರಿಗೆ ದೇವರು ಕೊಡುವ ವಸ್ತುಗಳು ಬೇಕೇ ವಿನಃ ದೇವರು ಬೇಕಿಲ್ಲ. ಭಕ್ತನ ಗುರಿ ದೇವ ಸಂಪಾದನೆ. ಅದು ಎಲ್ಲರಿಗೂ ಸಾಧ್ಯವಿಲ್ಲ ಎಂದು ಹೇಳಿದರು.

ಶರಣನ ಸಂಭ್ರಮ ಲಿಂಗಪೂಜೆ, ಜಂಗಮ ಸೇವೆ ಹಾಗೂ ಅನುಭಾವಿಯಾಗಿ ಭವ ಗೆಲ್ಲುವುದಾಗಬೇಕು ಎಂದು ತಿಳಿಸಿದರು.

ಸಾಹಿತಿ ರಮೇಶ ಮಠಪತಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ನಿವೃತ್ತ ವ್ಯವಸ್ಥಾಪಕ ಉಮೇಶ ಪಾಟೀಲ ಸಮ್ಮುಖ ವಹಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ನಾಗಶೆಟ್ಟಿ ಸಿರ್ಸೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಚನ್ನಬಸಪ್ಪ ಹಂಗರಗಿ, ಆರ್.ಕೆ. ಪಾಟೀಲ, ಅಶೋಕ್ ಎಲಿ ಇದ್ದರು.

ಶ್ಯಾಮಲಾ ಎಲಿ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ನಿಷ್ಕಲಾ ರವಿ ಮುತ್ತಂಗೆ ಗುರು ಪೂಜೆ ನೆರವೇರಿಸಿದರು. ರೇಷ್ಮಾ ವೀರಶಟ್ಟಿ ಮುತ್ತಂಗೆ, ಹೈದರಾಬಾದ ಭಕ್ತಿ ದಾಸೋಹಗೈದರು. ಕದಳಿಶ್ರೀ ಮುತ್ತಂಗೆ ಸ್ವಾಗತಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *