ಸಿಂಧನೂರು :
ರವಿ ಹಂಜಿಮಠ ಎನ್ನುವ ಅನಿವಾಸಿ ಭಾರತೀಯ ಬಸವಣ್ಣನವರು, ಬಸವಾಭಿಮಾನಿಗಳು ಹಾಗೂ ಬಸವಭಕ್ತರ ಕುರಿತು ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಖಂಡನಾರ್ಹ ಎಂದು ತಾಲೂಕಿನ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ಸ್ವಾಮೀಜಿ, ಸಕಲ ಜೀವಿಗಳಿಗೆ ಈ ಭೂಮಿಯ ಮೇಲೆ ಬದುಕುವ ಹಕ್ಕು ಇದೆ ಎಂದು ಸಾರಿದ ನಾಡಿನ ಸಾಂಸ್ಕೃತಿಕ ನಾಯಕ, ಮಹಾತ್ಮ ಶ್ರೀ ಬಸವೇಶ್ವರರಾಗಿದ್ದಾರೆ. ಅಂತಹ ಮಹಾಪುರುಷರಿಗೆ ಬಾಯಲ್ಲಿ ಹೇಳಲು ಅಸಾಧ್ಯವೆನಿಸುವ ಪದಪ್ರಯೋಗ ಮಾಡಿರುವುದು ಅತೀವ ನೋವನ್ನುಂಟು ಮಾಡಿದೆ.
“ಊರ ಮುಂದೆ ಹಾಲ ಹಳ್ಳ ಹರಿಯುತ್ತಿರಲು ಬಿಜ್ಜಳನ ಬಂಡಾರದ ಹಂಗು ನನಗೇಕೆ,” “ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ”, “ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯ” ಎನ್ನುವ ವಚನಗಳನ್ನು ಹೇಳುವ ಮೂಲಕ ದರೋಡೆ, ಸುಲಿಗೆಯಂತಹ ದುಷ್ಕೃತ್ಯಗಳನ್ನು ವಿರೋಧಿಸಿದವರು ಬಸವ ತಂದೆಯವರು. ಒಬ್ಬ ಬರಹಗಾರನಿಗೆ ಇಂತಹ ಸಣ್ಣ ಸಾಮಾನ್ಯ ಜ್ಞಾನವಿಲ್ಲದಿರುವುದು ದುರದೃಷ್ಟಕರ!
ಲಿಂಗಾಯತಪದ ಅತ್ಯಂತ ಅಮೂಲ್ಯವಾದಂತಹದ್ದು. ಇದು ಜಾತಿ ಸೂಚಕ ಪದವೇ ಅಲ್ಲ. ಶಿವಶರಣ ಮಾದರ ಚೆನ್ನಯ್ಯರ ಆದಿಯಾಗಿ ಶ್ರೀ ಬಸವೇಶ್ವರರವರೆಗೆ ಎಲ್ಲರೂ ಲಿಂಗಧಾರಿಗಳಾಗಿದ್ದರು. ಈಗಲೂ ತಳ ಸಮುದಾಯದವರು ಒಳಗೊಂಡಂತೆ ಲಿಂಗ ಧರಿಸುತ್ತಿದ್ದಾರೆ.
ಲಿಂಗಾಯತ ಪದವನ್ನು ವಿಕೃತಗೊಳಿಸಿ ‘ಲಿಂಗಹತ’ ಎಂದು ಸಂಬೋಧನೆ ಮಾಡಿರುವುದು ರವಿ ಹಂಜಿಮಠ ಅವರ ಕೀಳು ಅಭಿರುಚಿಯನ್ನು ಬಿಂಬಿಸುತ್ತಿದೆ. ಒಟ್ಟಾರೆ ಅವರು ಬಳಸಿದ ಮೂರು ಪದಗಳು ಹಾಗೂ ಬಸವ ಮಂಟಪ ಪುಸ್ತಕ ಪ್ರಕಟಣೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ.
ಇದೇ ಸಂದರ್ಭದಲ್ಲಿ ಬಸವ ಮಂಟಪ ಪುಸ್ತಕವನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡಿರುವುದು ಅತ್ಯಂತ ಸಂತೋಷದ ವಿಚಾರ ಹಾಗೂ ಲೇಖಕರ ಮೇಲೆ ಮತ್ತು ಪ್ರಕಾಶಕ ವಿಶ್ವೇಶ್ವರ ಭಟ್ಟರ ಮೇಲೆ ಕೇಸ್ ದಾಖಲಾಗಿರುವುದು ಸ್ವಾಗತಾರ್ಹ, ಕೂಡಲೇ ಅವರ ಮೇಲೆ ಕಾನೂನು ಕ್ರಮ ಜರುಗಲಿ ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh
