ಮಹಾತ್ಮ ಬಸವೇಶ್ವರರ ಅವಮಾನಕ್ಕೆ ಸೊಲ್ಲಾಪುರದಲ್ಲಿ ತೀವ್ರ ಪ್ರತಿಭಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಸೊಲ್ಲಾಪುರ :

ಬಸವ ಮಂಟಪ ಪುಸ್ತಕದ ಮೂಲಕ ಮಹಾತ್ಮ ಬಸವೇಶ್ವರರನ್ನು ಅಪಮಾನಿಸಿದ ಲೇಖಕ ರವಿ ಹಂಜ್ ಹಾಗೂ ಪ್ರಕಾಶಕ ವಿಶ್ವೇಶ್ವರ ಭಟ್ಟ ಅವರ ಭಾವಚಿತ್ರಗಳಿಗೆ ಚಪ್ಪಲಿಯಲ್ಲಿ ಹೊಡೆದು ತೀವ್ರ ಪ್ರತಿಭಟನೆ ಮಾಡಿ ಲೇಖಕ ಮತ್ತು ಪ್ರಕಾಶಕರ ವಿರುದ್ಧ ತೀವ್ರ ಕಾನೂನು ಕ್ರಮಕ್ಕೆ ಆಗ್ರಹ ಮಾಡಲಾಯಿತು.

ಜಗಜ್ಯೋತಿ ಮಹಾತ್ಮ ಬಸವೇಶ್ವರರ ಕುರಿತು ಮಾಡಲಾದ ಆಕ್ಷೇಪಾರ್ಹ ಹೇಳಿಕೆಗಳು ಹಾಗೂ ‘ಬಸವ ಮಂಟಪ’ ಎಂಬ ಪುಸ್ತಕದಲ್ಲಿನ ಆಕ್ಷೇಪಾರ್ಹ ಬರಹದ ವಿರುದ್ಧ ಪ್ರತಿಭಟಿಸಲಾಯಿತು.

ಮಾಜಿ ಶಾಸಕ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಪ್ರದೇಶಾಧ್ಯಕ್ಷ ವಿಶ್ವನಾಥ ಚಾಕೋತೆ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ಆರಂಭದಲ್ಲಿ ಜಗಜ್ಯೋತಿ ಮಹಾತ್ಮ ಬಸವೇಶ್ವರರ ಪ್ರತಿಮೆಗೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ನಂತರ ‘ಬಸವ ಮಂಟಪ’ ಪುಸ್ತಕದ ಲೇಖಕ ರವಿ ಹಂಜಿಮಠ ಹಾಗೂ ಪ್ರಕಾಶಕ ವಿಶ್ವೇಶ್ವರ ಭಟ್ ಅವರ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿ ಮಾತನಾಡಲಾಯಿತು.

ಮಹಾತ್ಮ ಬಸವೇಶ್ವರರು ಇಡೀ ಜಗತ್ತಿಗೆ ಸಮಾನತೆ, ಸಹೋದರತ್ವ, ಮಾನವೀಯತೆ, ಸಾಮಾಜಿಕ ನ್ಯಾಯ ಮತ್ತು ಶ್ರಮದ ಗೌರವದ ಮಹಾನ್ ಸಂದೇಶವನ್ನು ಸಾರಿದವರು.

ಅವರ ಕ್ರಾಂತಿಕಾರಿ ವಿಚಾರಗಳು ಸಮಾಜಕ್ಕೆ ಹೊಸ ದಿಕ್ಕನ್ನು ನೀಡಿವೆ. ಇಂತಹ ಮಹಾನ್ ವ್ಯಕ್ತಿಯ ಕುರಿತು ಅವಮಾನಕರ ಹೇಳಿಕೆಗಳನ್ನು ನೀಡುವುದು ಹಾಗೂ ಅವರ ವಿಚಾರಗಳ ಬಗ್ಗೆ ಆಕ್ಷೇಪಾರ್ಹ ಬರಹಗಳನ್ನು ಪ್ರಕಟಿಸುವುದು ಅತ್ಯಂತ ಖಂಡನೀಯ ಸಂಗತಿಯಾಗಿದೆ.

ಇದರಿಂದ ಸಮಸ್ತ ಬಸವಪ್ರೇಮಿಗಳು ಹಾಗೂ ಲಿಂಗಾಯತ ಸಮಾಜದ ಬಂಧುಗಳ ಭಾವನೆಗಳಿಗೆ ನೋವುಂಟಾಗಿದೆ ಎಂಬ ಅಭಿಪ್ರಾಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.

ಬಸವ ಮಂಟಪ ಕೃತಿಯ ಲೇಖಕ ಹಾಗೂ ಪ್ರಕಾಶಕರ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪುಸ್ತಕದಲ್ಲಿನ ಆಕ್ಷೇಪಾರ್ಹ ಬರಹದ ಕುರಿತು ತಕ್ಷಣವೇ ತನಿಖೆ ನಡೆಸಬೇಕು. ಮಹಾತ್ಮ ಬಸವೇಶ್ವರರ ವಿಚಾರಗಳು ಹಾಗೂ ಅವರ ಅನುಯಾಯಿಗಳ ಭಾವನೆಗಳಿಗೆ ಗೌರವ ನೀಡಬೇಕು ಎಂದು ಒತ್ತಾಯಿಸಲಾಯಿತು.

ಮಹಾತ್ಮ ಬಸವೇಶ್ವರರ ವಿಚಾರಗಳು ಸಮಾನತೆ, ಸಾಮಾಜಿಕ ಪರಿವರ್ತನೆ ಮತ್ತು ಮಾನವೀಯತೆಯ ಪ್ರತೀಕವಾಗಿವೆ. ಅವರ ವಿಚಾರಗಳ ಅವಮಾನವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂಬ ದೃಢ ಸಂಕಲ್ಪವನ್ನು ಈ ಸಂದರ್ಭದಲ್ಲಿ ಉಪಸ್ಥಿತರಿದ್ದವರು ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಸವ ಸೆಂಟರ್‌ನ ಸಿಂಧುತಾಯಿ ಕಾಡಾದಿ, ಶಂಕರಲಿಂಗ ಮಹಿಳಾ ಮಂಡಳಿಯ ರಾಜಶ್ರೀ ಥಳಂಗೆ, ಸಂಗಮೇಶ್ವರ ಕಾಡಾದಿ, ಜಾಗತಿಕ ಲಿಂಗಾಯತ ಮಹಾಸಭೆಯ ಪ್ರದೇಶ ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತೂರೆ, ಸೊಲ್ಲಾಪುರ ಜಿಲ್ಲಾಧ್ಯಕ್ಷ ವೀರೇಂದ್ರ ಹಿಂಗಮಿರೆ, ವೀರಶೈವ ವಿಷನ್ ಅಧ್ಯಕ್ಷ ರಾಜಶೇಖರ ಬುರಕುಲೆ, ಬಸವಕಲ್ಯಾಣ ಕ್ಷೇತ್ರ ಸಮಿತಿಯ ಜಿಲ್ಲಾಧ್ಯಕ್ಷ ಬಸವರಾಜ ದಿಂಡೋರೆ, ನಗರಾಧ್ಯಕ್ಷ ಚನ್ನಪ್ಪ ಗುರುಭೇಟಿ, ನಾಮದೇವ ಫುಲಾರಿ, ಬಸವ ಬ್ರಿಗೇಡ್‌ನ ಅಮಿತ್ ರೋಡಗೆ, ಬಸವರಾಜ ಚಾಕಾಯಿ, ಶ್ರೀ ಸಿದ್ಧ ಮಲ್ಲಿಕಾರ್ಜುನ ಪ್ರತಿಷ್ಠಾನದ ಅಧ್ಯಕ್ಷ ಗಣೇಶ ಚಿಂಚೋಳಿ, ಬಸವರಾಜ ರೋಡಗೀಕರ ಸೇರಿದಂತೆ ಲಿಂಗಾಯತ ಸಮಾಜದ ಬಂಧುಗಳು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
1 Comment
  • ಒಳ್ಳೆಯ ಸಂದೇಶ ರವಾನಿಸಿದ್ದಾರೆ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ನಿಮ್ಮ ಹೋರಾಟ ಮುಂದುವರಿಲಿ . ನಮಗೆ ನಮ್ಮ ಬೆಂಬಲವಿದೆ.ಜೈಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *