ಧಾರವಾಡ :
ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಧಾರವಾಡ ಇದರ ವತಿಯಿಂದ ದಿನಾಂಕ: ೨೮.೧೧.೨೦೨೬ರಂದು ಶನಿವಾರ ಬೆಳಗ್ಗೆ ೧೦ ಗಂಟೆಗೆ ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಡಾ. ಎಂ. ಎಂ. ಕಲಬುರ್ಗಿ ಅವರ ೮೮ನೇ ಜನ್ಮದಿನೋತ್ಸವ ಪ್ರಯಕ್ತ ‘ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಗ್ರಂಥ ಬಿಡುಗಡೆ ಸಮಾರಂಭ’ವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ವತಿಯಿಂದ ಚಿತ್ರದುರ್ಗದ ಹಿರಿಯ ಸಂಶೋಧಕರಾದ ಡಾ. ಲಕ್ಷ್ಮಣ ತೆಲಗಾವಿ ಅವರಿಗೆ ೨೦೨೬ನೇ ಸಾಲಿನ ‘ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಸಂಶೊಧನ ಪ್ರಶಸ್ತಿ’ ಮತ್ತು ಸಂಗೀತ ಕಲಾವಿದರಾದ ಬಸವರಾಜ ಜೆ. ಪೂಜಾರಿ(ಭಂಟನೂರ), ಕೆಂಭಾವಿ, ಯಾದಗಿರಿ ಜಿಲ್ಲೆ ಅವರಿಗೆ ‘ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ವಚನ ಸಂಗೀತ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು.
ಈ ಸಮಾರಂಭದಲ್ಲಿ ‘ಕನ್ನಡ ಸಂಶೋಧನ ಮಾರ್ಗ ಸಂಪುಟ-೩ ಗ್ರಂಥ ಬಿಡುಗಡೆ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಚನ್ನಪ್ಪ ಕಟ್ಟಿ ಅವರು ಆಗಮಿಸಿ ಪ್ರಶಸ್ತಿ ಪ್ರದಾನ ಮಾಡುವರು. ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ ಅವರು ಅಧ್ಯಕ್ಷತೆ ವಹಿಸುವರು.

ವಿಶ್ರಾಂತ ಪ್ರಾಧ್ಯಾಪಕರಾದ ಡಾ. ವಿ. ಎಸ್. ಮಾಳಿ ಅವರು ‘ಕನ್ನಡ ಸಂಶೋಧನ ಮಾರ್ಗ ಸಂಪುಟ-೩ ಗ್ರಂಥ ಬಿಡುಗಡೆ ಮಾಡುವರು. ಪ್ರತಿಷ್ಠಾನದ ಸದಸ್ಯರಾದ ಪ್ರೊ. ಶಶಿಧರ ತೋಡಕರ ಅವರು ಅಭಿನಂದನಾ ನುಡಿಗಳನ್ನಾಡುವರು. ಉಮಾದೇವಿ ಎಂ. ಕಲಬುರ್ಗಿ ಅವರು ಹಾಗೂ ಪ್ರತಿಷ್ಠಾನದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.
ಪ್ರಶಸ್ತಿ ಪುರಸ್ಕೃತರಾದ ಬಸವರಾಜ ಜೆ. ಪೂಜಾರಿ(ಭಂಟನೂರ), ಕೆಂಭಾವಿ, ಯಾದಗಿರಿ ಜಿಲ್ಲೆ ಅವರು ಸಮಾರಂಭದ ಪ್ರಾರಂಭದಲ್ಲಿ ವಚನ ಗಾಯನ ಪ್ರಸ್ತುತಪಡಿಸುವರು.
‘ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಸಂಶೋಧನ ಪ್ರಶಸ್ತಿ-೨೦೨೬’ರ ಪುರಸ್ಕೃತರು (ರೂ. ೫೦,೦೦೦/- ಮೊತ್ತದ ಪ್ರಶಸ್ತಿ ಮತ್ತು ಪ್ರಶಸ್ತಿ ಫಲಕ) ಡಾ. ಲಕ್ಷ್ಮಣ ತೆಲಗಾವಿ, ಹಿರಿಯ ಸಂಶೋಧಕರು, ಚಿತ್ರದುರ್ಗ.
‘ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ವಚನ ಸಂಗೀತ ಪ್ರಶಸ್ತಿ-೨೦೨೬’ರ ಪುರಸ್ಕೃತರು (ರೂ. ೨೫,೦೦೦/- ಮೊತ್ತದ ಪ್ರಶಸ್ತಿ ಮತ್ತು ಪ್ರಶಸ್ತಿ ಫಲಕ) ಬಸವರಾಜ ಜೆ. ಪೂಜಾರಿ(ಭಂಟನೂರ), ಕೆಂಭಾವಿ, ಯಾದಗಿರಿ ಜಿಲ್ಲೆ.
ಈ ಇಬ್ಬರು ಸಾಧಕರಿಗೆ ದಿನಾಂಕ: ೨೮.೧೧.೨೦೨೬ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಈ ಸಮಾರಂಭಕ್ಕೆ ಸಂಶೋಧಕರು, ಸಾಹಿತಿಗಳು, ಗಣ್ಯರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಕೋರಿದ್ದಾರೆ.
