ಹಳಿಯಾಳ :
ವಿಶ್ವಗುರು ಬಸವಣ್ಣನವರ ಕುರಿತು ‘ಬಸವ ಮಂಟಪ’ ಕೃತಿ ಹಾಗೂ ಅದಕ್ಕೆ ಸಂಬಂಧಿಸಿದ ಸಂದರ್ಶನದಲ್ಲಿ ಲೇಖಕ ರವಿ ಹಂಜ್ ಅವರಿಂದ ವ್ಯಕ್ತವಾಗಿರುವ ಹೇಳಿಕೆಗಳು ಬಸವಣ್ಣನವರು ಮತ್ತು ಲಿಂಗಾಯತ ಸಮುದಾಯದ ಭಾವನೆಗೆ ನೋವುಂಟು ಮಾಡಿವೆ.
ಹಾಗಾಗಿ ರವಿ ಹಂಜ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಲಿಂಗಾಯತ ಮತ್ತು ಬಸವಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರವನ್ನು ಒತ್ತಾಯಿಸಿವೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಬಸವಕೇಂದ್ರ ತಾಲೂಕಾ ಘಟಕಗಳ ನೇತೃತ್ವದಲ್ಲಿ ಮೆರವಣಿಗೆ ನಡೆದು ತಾಲೂಕಾಡಳಿತ ಸೌಧ ತಲುಪಿತು. ಅಲ್ಲಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ ನೇಸರಗಿ ಅವರಿಗೆ ಸಲ್ಲಿಸಲಾಯಿತು.

ಬಸವಣ್ಣನವರು ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯತೆಯನ್ನು ಸಾರಿದ ಮಹಾನ್ ಚಿಂತಕರು. ಅವರ ಕುರಿತು ಆಧಾರರಹಿತ ಹೇಳಿಕೆಗಳು ಸಮಾಜದ ಶಾಂತಿ ಹಾಗೂ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ಸಂಪುಟ ನಿರ್ಧರಿಸಿರುವುದಾಗಿ ವರದಿಯಾಗಿರುವುದನ್ನು ಮನವಿಯಲ್ಲಿ ಉಲ್ಲೇಖಿಸಿ, ಈ ನಿರ್ಧಾರವನ್ನು ಸ್ವಾಗತಿಸಲಾಗಿದೆ. ಸರ್ಕಾರದ ಅಧಿಕೃತ ಆದೇಶವನ್ನು ಕಾನೂನುಬದ್ಧವಾಗಿ ಜಾರಿಗೊಳಿಸಬೇಕು, ತನಿಖೆ ಯಾವುದೇ ಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದು ಕೋರಲಾಗಿದೆ.
ಲೇಖಕ ರವಿ ಹಂಜ್, ಪ್ರಕಾಶಕ ವಿಶ್ವೇಶ್ವರ ಭಟ್ಟ ಸೇರಿ ಸಂಬಂಧಪಟ್ಟವರ ಹೊಣೆಗಾರಿಕೆ ಪರಿಶೀಲಿಸಿ, ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಬಸವಣ್ಣನವರ ಜೀವನ ಹಾಗೂ ವಚನಗಳ ಕುರಿತು ದಾಖಲೆ ಆಧಾರಿತ ಜಾಗೃತಿ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿಯಲ್ಲಿ ಬೇಡಿಕೆ ಇಡಲಾಗಿದೆ.
ಮನವಿ ಯಾವುದೇ ವ್ಯಕ್ತಿಯ ವಿರುದ್ಧದ ವೈಯಕ್ತಿಕ ದ್ವೇಷದಿಂದಲ್ಲ, ಸಂವಿಧಾನಬದ್ಧ ಅಭಿವ್ಯಕ್ತಿ, ಕಾನೂನಿನ ಸಾರ್ವಭೌಮತ್ವ ಹಾಗೂ ಸಾಮಾಜಿಕ ಶಾಂತಿ ಕಾಪಾಡುವ ಉದ್ದೇಶದಿಂದ ಸಲ್ಲಿಸಿರುವುದಾಗಿ ಸ್ಪಷ್ಟಪಡಿಸಲಾಗಿದೆ.
ಮೆರವಣಿಗೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಕಿತ್ತೂರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವದೇವ ದೇಸಾಯಸ್ವಾಮಿ, ಬಸವ ಕೇಂದ್ರದ ಪ್ರಮುಖರಾದ ಪ್ರಕಾಶ ಅಂಗಡಿ, ಸುಮಂಗಲಾ ಅಂಗಡಿ, ಮಹಾದೇವಿ ಅಂಗಡಿ, ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ರವಿ ತೋರಣಗಟ್ಟಿ, ಸುಧಾಕರ ಕುಂಬಾರ, ಅನಿಲ ಮುತ್ನಾಳೆ, ಸೋಮೇಶ ಹುಂಡೇಕರ, ಶಂಕರ ಕಾಜಗಾರ, ಅಶೋಕ ಮೇಟಿ ಮತ್ತಿತರರು ಇದ್ದರು.
