ಹುನಗುಂದ :
ಲೇಖಕ ರವಿ ಹಂಜ್ ಬರೆದಿರುವ ಬಸವ ಮಂಟಪ ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಅವಹೇಳನ ಖಂಡಿಸಿ ಇಳಕಲ್ಲನ ಪೂಜ್ಯ ಗುರುಮಹಾಂತ ಸ್ವಾಮೀಜಿ ನೇತೃತ್ವದಲ್ಲಿ ಬಸವಾಭಿಮಾನಿಗಳು ಗುರುವಾರ ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಸ್ವಾಮೀಜಿಗಳ ನೇತೃತ್ವದಲ್ಲಿ ಬಸವಾಭಿಮಾನಿಗಳು ಪಟ್ಟಣದ ಉಚಿತ ಪ್ರಸಾದ ನಿಲಯದಿಂದ ತಹಶೀಲ್ದಾರ್ ಕಚೇರಿವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಲೇಖಕ ರವಿ ಹಂಜ್ ಹಾಗೂ ಪುಸ್ತಕ ಪ್ರಕಾಶಕ ವಿಶ್ವೇಶ್ವರ ಭಟ್ ವಿರುದ್ಧ ಧಿಕ್ಕಾರ ಕೂಗಿ ಕ್ರಮಕ್ಕೆ ಆಗ್ರಹಿಸಿದರು.

ಶಿರೂರನ ಪೂಜ್ಯ ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಲೇಖಕ ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ ಅವರು ಜನರ ಮನಸ್ಸನ್ನು ಕೊಳಕು ಮಾಡುವ ಅಜ್ಞಾನಿಗಳು ಹಾಗೂ ಕೊಳಕು ಮನಸ್ಥಿತಿ ಉಳ್ಳವರು ಎಂದರು.
ಗುರುಮಹಾಂತ ಸ್ವಾಮೀಜಿ ಮಾತನಾಡಿ, ಬಸವಣ್ಣ ಲಿಂಗಾಯತ ಸಮುದಾಯದ ಬೆನ್ನೆಲಬು. ಲೇಖಕ ರವಿ ಹಂಜ್ ಬಸವಣ್ಣವರನ್ನು ಬಸವ ಮಂಟಪದಲ್ಲಿ ಪುಸ್ತಕದಲ್ಲಿ ಅವಹೇಳನ ಮಾಡಿರುವುದು ಖಂಡನೀಯ. ಶರಣರ ಚಾರಿತ್ರ್ಯ ಹರಣ ಮಾಡಿದರೆ ಲಿಂಗಾಯತ ಧರ್ಮದ ಆಸ್ತಿತ್ವ ಹಾಳಗುತ್ತದೆ ಎಂಬ ಮನೋಧೋರಣೆಯನ್ನು ಕೆಲವರು ಹೊಂದಿದ್ದಾರೆ. ಬಸವಣ್ಣ ಸಮಾನತೆ ಸಮಾಜ ಕಟ್ಟಿದವರು. ಅವರ ಮಹಿಮೆ, ಪ್ರಚಾರ ಸಹಿಸಿಕೊಳ್ಳದವರು (ಕೊಂಡಿ ಮಂಚಣ್ಣನಂತೆ) ಈ ರೀತಿ ದಾಳಿಗೆ ಹಾಗೂ ಅವಹೇಳನಕ್ಕೆ ಮುಂದಾಗುತ್ತಿದ್ದಾರೆ.
ಬಸವಣ್ಣನವರ ನಿಂದನೆ ಮಾಡಿದವರಿಗೆ ಉಳಿಗಾಲವಿಲ್ಲ. ಶರಣರ ಬಗ್ಗೆ ಮಾತನಾಡುವ ಹಾಗೂ ಬರೆಯುವ ಮುನ್ನ ಅವರ ಉನ್ನತ ಸಾಧನೆಗಳನ್ನು ಅರಿಯಬೇಕು ಎಂದರು.

ಅಮೀನಗಡ ಪ್ರಭು ಶಂಕರರಾಜೇಂದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ಅಪಪ್ರಚಾರ ಮಾಡುವುದು ಸರಿಯಲ್ಲ. ಅವರ ವಿಚಾರಗಳು ಇಡೀ ಜಗತ್ತಿಗೆ ದಾರಿ ದೀಪವಾಗಿವೆ. ವೀರಶೈವ ಲಿಂಗಾಯತರು ಒಗ್ಗಟ್ಟಿಲ್ಲದ್ದರಿಂದ ಈ ರೀತಿ ಆಗುತ್ತಿದೆ. ಒಗ್ಗಟ್ಟಾಗಿ ನಾವೆಲ್ಲರೂ ಒಂದೇ ಎಂದಾಗ ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗುತ್ತದೆ ಎಂದರು.
ಡಾ. ಮಹಾಂತೇಶ ಕಡಪಟ್ಟಿ, ಎಸ್.ಎಸ್. ಹಾದಿಮನಿ, ಶೇಖರಪ್ಪ ಬಾದವಾಡಗಿ, ಬಸವರಾಜ ಕಡಪಟ್ಟಿ, ನಾಗರಾಜ ನಾಡಗೌಡ, ಅಶೋಕ ಬಾವಿಕಟ್ಟಿ, ಎಸ್.ಜಿ. ಎಮ್ಮಿ, ಮಹಾಂತೇಶ ಅವಾರಿ, ಮಹಾಂತೇಶ ಪರೂತಿ, ರಾಜಕುಮಾರ ಬಾದವಾಡಗಿ, ಎಸ್.ಆರ್. ಕಡಿವಾಲ, ಮಹೇಶ ಬೆಳ್ಳಿಹಾಳ, ಬಸವರಾಜ ಗೊಣ್ಣಾಗರ, ಮುತ್ತಕ್ಕ ಭಾವಿಕಟ್ಟಿ, ನಾಗರತ್ನ ಬಾವಿಕಟ್ಟಿ ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್, ಅಕ್ಕನ ಬಳಗ, ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳ ನೂರಾರು ಸದಸ್ಯರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh
