ಬಸವನಬಾಗೇವಾಡಿ :
ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳು ವಿದೇಶಗಳಲ್ಲಿಯೂ ಜನರ ಪ್ರಶಂಸೆಗೆ ಪಾತ್ರವಾಗಿವೆ. ಐತಿಹಾಸಿಕ ಆಧಾರಗಳಿಲ್ಲದೆ ಕೆಲವರು ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಬಸವಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ತಾಲೂಕು ಅಧ್ಯಕ್ಷ ಮಹಾಂತೇಶ ಆದಿಗೊಂಡ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರು ಬಿಜ್ಜಳನ ಖಜಾನೆ ಲೂಟಿ ಮಾಡಿದ್ದಾರೆ, ಬಿಜ್ಜಳನನ್ನು ಕೊಲೆ ಮಾಡಿದ್ದಾರೆ ಹಾಗೂ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ವಚನದ ಆಶಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಗಳು ಆಧಾರರಹಿತವಾಗಿವೆ.
ಇಂತಹ ಕೃತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡಿರುವದು ಸ್ವಾಗತಾರ್ಹವಾಗಿದೆ ಎಂದರು.
ಶರಣ ಎಂ.ಎಂ. ಕಲಬುರ್ಗಿ ಸೇರಿದಂತೆ ಶರಣ ಪರಂಪರೆಯ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಪ್ರವೃತ್ತಿ ಖಂಡನೀಯ. ವೈದಿಕ ಪರಂಪರೆಗೆ ಮರು ಹುಟ್ಟು ನೀಡಬೇಕೆನ್ನುವ ಕೆಲವರಿಗೆ ಹಿನ್ನಡೆಯಾಗುತ್ತಿದೆ ಎಂಬ ಕಾರಣಕ್ಕೆ ಕೆಲವರು ಇಂತಹ ಅಪಪ್ರಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆಯೇ ಎಂಬ ಬಗ್ಗೆಯೂ ತನಿಖೆಯಾಗಬೇಕು.
ಲೇಖಕ ರವಿ ಹಂಜ್ ಅವರನ್ನು ಬಂಧಿಸುವುದಷ್ಟೇ ಅಲ್ಲದೆ, ಇದಕ್ಕೆ ಬೆನ್ನೆಲುಬಾಗಿ ನಿಂತು ಪ್ರಚೋದಿಸುತ್ತಿರುವ ಕೆಲವು ಮಠಾಧೀಶರು ಸೇರಿದಂತೆ ಎಲ್ಲರನ್ನೂ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಪ್ರದಾನಕಾರ್ಯದರ್ಶಿ ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿ, ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆಗಳು ಹಲವು ವರ್ಷಗಳಿಂದ ನಡೆಯುತ್ತಿವೆ. ಕಲ್ಯಾಣದಲ್ಲಿ ಕಾಯಕ ಜೀವಿಗಳಿಗೆ ಗೌರವ, ಸಮಾನತೆ ಮತ್ತು ಸೌಲಭ್ಯ ಕಲ್ಪಿಸಿದ ಬಸವಣ್ಣನವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನ ಸಲ್ಲದು. ಬಿಜ್ಜಳನ ಖಜಾನೆ ಕಳವು ಮಾಡಿದರೆಂಬ ಆರೋಪಕ್ಕೆ ಐತಿಹಾಸಿಕ ಆಧಾರಗಳಿಲ್ಲ. ಶರಣರ ಇತಿಹಾಸವನ್ನು ತಿರುಚದೆ ಸತ್ಯಾಸತ್ಯತೆ ಆಧರಿಸಿ ಮಾತನಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಬಸವರಾಜ ಗೊಳಸಂಗಿ, ಎಫ್ ಡಿ ಮೇಟಿ, ಎಸ್.ಎಸ್. ಝಳಕಿ ಅವರೂ ಮಾತನಾಡಿ ಖಂಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶೇಖರ ಗೊಳಸಂಗಿ, ಚಂದ್ರಶೇಖರಗೌಡ ಪಾಟೀಲ, ಸಂಗಮೇಶ ಓಲೇಕಾರ.ಶಂಕರಗೌಡ ಪಾಟೀಲ, ಬಸಮ್ಮ ಹಂಜಗಿ ಸೇರಿದಂತೆ ಇತರರು ಇದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh
