ಸಿಂದಗಿ :
ಪಟ್ಟಣದಲ್ಲಿ ಬಸವ ಮಂಟಪ ಪುಸ್ತಕದ ರವಿ ಹಂಜ್ ಹಾಗೂ ಪುಸ್ತಕ ಪ್ರಕಟಿಸಿದ ವಿಶ್ವೇಶ್ವರ ಭಟ್ಟರ ವಿರೋಧವಾಗಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮೆರವಣಿಗೆ ನೇತೃತ್ವವನ್ನು ಅಲಮೇಲದ ಶ್ರೀ ಮಲ್ಲಿಬೊಮ್ಮಯ್ಯ ವಿರಕ್ತಮಠದ ಪೂಜ್ಯ ಮಲ್ಲಿಬೊಮ್ಮಯ್ಯ ಶ್ರೀಗಳು, ಹಿಕ್ಕನುಗುತ್ತಿ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುಲಿಂಗ ಶ್ರೀಗಳು ಹಾಗೂ ಸಿಂದಗಿಯ ಗುರುದೇವ ಆಶ್ರಮದ ಪೂಜ್ಯ ಶಾಂತಗಂಗಾಧರ ಶ್ರೀಗಳು ನೇತೃತ್ವ ವಹಿಸಿದ್ದರು.
ನೂರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದ ಮೆರವಣಿಗೆ ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ ಅವರ ವಿರೋಧವಾಗಿ ತಹಶೀಲ್ದಾರ್ ಕಾರ್ಯಾಲಯದ ಮುಂದೆ ಪ್ರತಿಭಟನಾ ಸಭೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ಟನಿಗೆ ದಿಕ್ಕಾರ ಕೂಗುತ್ತಾ, ಹಂಜ್ ಬರೆದ ಪುಸ್ತಕದ ಪ್ರತಿಕೃತಿ ದಹಿಸಿದರು. ಇಬ್ಬರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ, ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದರು.

ಸಭೆಯಲ್ಲಿ ಮುಖಂಡ ಜಗದೀಶ ಕಲಬುರ್ಗಿ ಮಾತನಾಡಿ, ರವಿ ಹಂಜ್ ಭಾರತದ ಅನಿವಾಸಿ ವ್ಯಕ್ತಿ. ಈತ ಗಡಿಪಾರು ಆಗಬೇಕು ಮತ್ತು ಅವನಿಗೆ ಕಠಿಣ ಕಾನೂನು ಶಿಕ್ಷೆ ಕೊಡಬೇಕು ಎಂದು ಹೇಳಿದರು. ವಿಶ್ವಗುರು ಬಸವಣ್ಣನವರಿಗೆ ಆದಂತ ಅವಮಾನ ಇದು ಮಾನವೀಯ ಮೌಲ್ಯವುಳ್ಳ ಎಲ್ಲ ಜನರ ಅವಮಾನವಾಗಿದೆ ಎಂದು ಹೇಳಿದರು.
ನಂತರ ಮಲ್ಲಿಬೊಮ್ಮಯ್ಯ ಶ್ರೀಗಳು, ಶಾಂತಗಂಗಾಧರ ಶ್ರೀಗಳು, ಶಿವಾನಂದ ಕಲಬುರ್ಗಿ, ಬಸವ ಸಮಿತಿಯ ನಾನಾಗೌಡ ಪಾಟೀಲ, ದಲಿತ ಸೈನ್ಯದ ಬೆಳಗಾವಿ ವಿಭಾಗೀಯ ಅಧ್ಯಕ್ಷರಾದ ಮಹೇಶ ಜಾಬಾನೂರ ಅವರುಗಳು ಮಾತನಾಡಿದರು.
ಮಲಕಣ್ಣ ತಳವಾರ, ಸಂಗಣ್ಣ ಬ್ಯಾಕೋಡ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ಮಲ್ಲಿಕಾರ್ಜುನ ಅರ್ಜುನಗಿ, ಶೈಲಜಾ ಸ್ಥಾವರಮಠ, ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಂಗರಗಿ, ದಾನಪ್ಪ ಜೋಗೂರ, ರಾಘವೇಂದ್ರ ಹೂಗಾರ ರೈತಸಂಘದ ಅಧ್ಯಕ್ಷರು ಹಾಗೂ ರೈತಸಂಘದ ಕಾರ್ಯಕರ್ತರು ಹಾಗೂ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು, ಬಸವಾಭಿಮಾನಿಗಳು ಭಾಗವಹಿಸಿದ್ದರು.
