(ರವಿ ಹಂಜ್, ವಿಶ್ವೇಶ್ವರ ಭಟ್ಟರ ಪ್ರಚೋಧನೆಗೆ ಲಿಂಗಾಯತ ಸಮಾಜದಿಂದ ದೊಡ್ಡ ಪ್ರತಿಕ್ರಿಯೆ ಬಂದಿದೆ. ಇದನ್ನು ನಾವು ಹೇಗೆ ಅರ್ಥೈಸಬೇಕು? ಮುಂದೇನು ಮಾಡಬೇಕು? ಬಸವ ಮೀಡಿಯಾ ಕೇಳಿದ ಐದು ಪ್ರಶ್ನೆಗಳಿಗೆ ಇಂದು ಹೊಸಪೇಟೆಯ ಬಸವ ಕಾರ್ಯಕರ್ತ ಟಿ.ಎಚ್. ಬಸವರಾಜ್ ಪ್ರತಿಕ್ರಿಯೆ ನೀಡಿದ್ದಾರೆ.)
ಹೊಸಪೇಟೆ
1) ರವಿ ಹಂಜ್, ವಿಶ್ವೇಶ್ವರ ಭಟ್ಟರ ವಿರುದ್ದ ಆಕ್ರೋಶ ಪ್ರಕಟವಾಗುತ್ತಿದೆ. ಎಲ್ಲಾ ಸಂಘಟನೆ, ರಾಜಕಾರಣಿಗಳು ಒಮ್ಮತದಿಂದ ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಣದಿದ್ದ ಇಷ್ಟು ದೊಡ್ಡ ಬೆಳವಣಿಗೆ ಆಗಿದ್ದು ಹೇಗೆ?
2024ರ ಜನವರಿಯಲ್ಲಿ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಂಸ್ಕೃತಿಕ ನಾಯಕ ಎಂದು ಒಪ್ಪಿ ಘೋಷಿಸಿದ ಮೇಲೆ ಬಸವಣ್ಣನವರ ಕುರಿತಾಗಿ ಹೊಸ ಆಸಕ್ತಿ ಮೂಡಿದೆ.
ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಆಗಿದ್ದನ್ನು ಹೆಚ್ಚು ಸಂಭ್ರಮಿಸಿದ್ದು ದಲಿತ ವರ್ಗ ಮತ್ತು ಹಿಂದುಳಿದ ವರ್ಗ.
ಈ ಸಮುದಾಯಗಳು ಬಸವಣ್ಣನ ಕುರಿತಾಗಿ ಹೆಚ್ಚು ಹೆಚ್ಚು ಚರ್ಚೆಯಲ್ಲಿ ತೊಡಗಿಕೊಂಡಿದ್ದನ್ನು ಗಮನಿಸಿದ ಲಿಂಗಾಯತ ವೈಚಾರಿಕ ವರ್ಗ ಬಸವಣ್ಣನ ವ್ಯಕ್ತಿತ್ವದ ಮರು ವ್ಯಾಖ್ಯಾನಕ್ಕೆ ಒಳಪಡಿಸಿ ಜಾಗೃತರಾಗಿದ್ದಾರೆ.
ಈಗ ಎಂದೆಂದಿಗಿಂತಲೂ ಲಿಂಗಾಯತ ಯುವಕರು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳ ವಿಶ್ವಾಸವನ್ನು ಸಂಪಾದಿಸಿಕೊಂಡು ಸ್ವಸ್ಥ ಸಮಾಜ ಕಟ್ಟುವಲ್ಲಿ ದೃಢಸಂಕಲ್ಪದಿಂದ ಹೆಜ್ಜೆ ಇಡುತ್ತಿದ್ದಾರೆ.
ದಲಿತರು, ಅಲ್ಪಸಂಖ್ಯಾತರು ಮತ್ತು ಲಿಂಗಾಯತರು ಸಮಾನ ಮನಸ್ಸಿನ ವೇದಿಕೆಗಳನ್ನು ನಿರ್ಮಿಸಿಕೊಂಡು ಪ್ರಗತಿಪರ ವಿಚಾರಗಳಲ್ಲಿ ಒಟ್ಟಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.
ಇದರ ಆಚೆಗೆ ಬಸವ ಮೀಡಿಯಾದಂತಹ ಸಂಘಟನೆಗಳು ಕೂಡ ಸೂಕ್ತ ಸಂದರ್ಭದಲ್ಲಿ ಸೂಕ್ತ ಮಾಹಿತಿಯನ್ನು ಒದಗಿಸಲು ಬಸವ ಅಭಿಮಾನಿಗಳಿಗೆ ವೇದಿಕೆಯನ್ನು ಕಲ್ಪಿಸುತ್ತಿರುವುದು ಕೂಡ ಒಂದು ಕಾರಣ ಎನ್ನಲೇಬೇಕಾಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಯೂಟ್ಯೂಬ್ಗಳಲ್ಲಿ ಬಸವಣ್ಣನವರ ತತ್ವ ಸಿದ್ಧಾಂತಗಳ ಕುರಿತಾಗಿ ನಡೆಯುತ್ತಿರುವ ಸಾಲು ಸಾಲು ಸರಣಿ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಉಂಟು ಮಾಡುತ್ತಿವೆ.
ಹಂಜ್, ಭಟ್ಟರ ವಿರುದ್ದ ಇಷ್ಟೊಂದು ತೀವ್ರ ಆಕ್ರೋಶ ಪ್ರಕಟವಾಗಲು ಇವೆಲ್ಲಾ ಕಾರಣವಾಗಿವೆ.
2)ಕೆಲವೊಂದು ಪುಸ್ತಕಗಳು ಮುಂಚೆಯೂ ಲಿಂಗಾಯತರ ಆಕ್ರೋಶ ಎದುರಿಸಿವೆ. ಆ ಘಟನೆಗಳಿಗೂ ರವಿ ಹಂಜ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೂ ಏನಾದರು ವ್ಯತ್ಯಾಸ ಕಾಣುತ್ತಿದೆಯೇ?
ಹಿಂದೆ ಕಪಟರಾಳ ಕೃಷ್ಣಮೂರ್ತಿ, ಟಿಎಸ್ ವೆಂಕಣ್ಣಯ್ಯ, ಬಂಜಗೆರೆ ಪ್ರಕಾಶ್, ಹೆಚ್ ಎಸ್ ಶಿವಪ್ರಕಾಶ್ ಮುಂತಾದ ಲೇಖಕರ ಪುಸ್ತಕಗಳಿಗೆ ಅಂದಿನ ವಿಚಾರವಂತರು ತಿಕ್ಷ್ಣವಾಗಿ ಪ್ರತಿಕ್ರಿಯಿಸಿ, ಲೇಖಕರನ್ನು ಕಟುವಿಮರ್ಶೆಗೆ ಒಳಪಡಿಸಿ ಅವರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವಂತೆ ಮಾಡಲಾಗಿತ್ತು.
ಕಪಟರಾಳರ ಪುಸ್ತಕಕ್ಕೆ ಉತ್ತಂಗಿ ಚನ್ನಪ್ಪನವರು ಅನುಭವ ಮಂಟಪದ ಕುರಿತಾಗಿ ಚಾರಿತ್ರಿಕ ದಾಖಲೆಗಳೊಂದಿಗೆ ಉತ್ತರಿಸಿದ್ದರು.
ಈಗ ಸಾಮಾನ್ಯರಿಂದಲೂ ಪ್ರತಿಕ್ರಿಯೆ ಬರುತ್ತಿರುವುದು ವಿಶೇಷ.
ಸಾಮಾಜಿಕ ಜಾಲತಾಣಗಳ ಪಾರಮ್ಯವಿರುವ ಈ ಕಾಲದಲ್ಲಿ ರವಿ ಹಂಜಿನ ಮತ್ತು ಆತನಂತಹ ಒಂದಿಷ್ಟು ಗ್ರಹಣ ಕ್ರಿಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಾಲಿಗೆ ಹರಿ ಬಿಟ್ಟಾಗ ಅಷ್ಟೇ ತೀಕ್ಷ್ಣವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಬಸವ ಅಭಿಮಾನಿಗಳು ಸಮರ್ಥ ಉತ್ತರಗಳನ್ನು ನೀಡುತ್ತಾ ಬಂದಿದ್ದಾರೆ.
ವಿನಯ್ ಶಿರಹಟ್ಟಿಮಠ ಅವರ ರೀತಿ ಅನೇಕರು ಬಸವಣ್ಣ ಕಟ್ಟಿಕೊಟ್ಟ ಜಂಗಮ ಸಮಾಜ ಮತ್ತು ಇವತ್ತು ಹಿಂದುತ್ವವಾದಿಗಳು, ಜಾತಿ ಜಂಗಮರು ಮಾಡುತ್ತಿರುವ ಸಮಸ್ಯೆಗಳನ್ನು ಬಿಡಿಸಿಟ್ಟು ಸಮಾಜವನ್ನು ಎಚ್ಚರಿಸಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಬಸವಣ್ಣನ ನಿಜವಾದ ವಾರಸುದಾರರಾದ ದಲಿತ ಮತ್ತು ಹಿಂದುಳಿದ ವರ್ಗದವರೂ ಭಾಗವಹಿಸುತ್ತಿರುವುದನ್ನು ಗಮನಿಸಬೇಕು.
3) ಲಿಂಗಾಯತ ಧರ್ಮದ ಹೋರಾಟದ ಮೇಲೆ, ಬಸವ ಸಂಘಟನೆಗಳ ಮೇಲೆ, ಒಟ್ಟಾರೆ ಲಿಂಗಾಯತ ಸಮಾಜದ ಮೇಲೆ ಈ ಘಟನೆ ಏನಾದರು ಪರಿಣಾಮ ಬೀರುತ್ತದೆಯೇ?
ಲಿಂಗಾಯತ ಧರ್ಮದ ಹೋರಾಟದ ಮೇಲೆ ಈ ಘಟನೆ ಬಹಳ ಆರೋಗ್ಯಕರ ಪರಿಣಾಮವನ್ನು ಬೀರುತ್ತಿದೆ. ನಡೆಯುತ್ತಿರುವ ಚರ್ಚೆಗಳ ಮೂಲಕ ಯುವಕರಲ್ಲಿ ಜಾಗೃತಿ ಉಂಟಾಗುತ್ತಿದೆ.
ಬಸವಣ್ಣನ ಗೌರವಕ್ಕೆ ಧಕ್ಕೆಯಾದಾಗ ತಮ್ಮ ಆತ್ಮ ಅಭಿಮಾನಕ್ಕೆ ಧಕ್ಕೆಯಾಗಿದೆ ಎನ್ನುವಷ್ಟರ ಮಟ್ಟಿಗೆ ಯುವಕರು ನೊಂದು ಸಿಡಿದು ಬೀದಿಗಳಿದಿದ್ದಾರೆ. ಈ ಸಂದರ್ಭದಲ್ಲಿ ಇವರೆಲ್ಲರನ್ನು ಸಂಯಮದಿಂದ ಹಿಡಿದಿಟ್ಟುಕೊಂಡು ಚಳುವಳಿಯನ್ನು ಕಟ್ಟಬೇಕಾಗಿದೆ.
ಧರ್ಮದ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟದ ಮುಂಚೂಣಿಯಲ್ಲಿರುವವರು ಕೆಳಗಿಳಿದು ಬಂದು ಯುವಕರನ್ನ ಸಂಘಟಿಸಬೇಕಾಗಿದೆ. ಈ ಸಂದರ್ಭ ಬಹಳ ಪಕ್ವವಾದ ಸಂದರ್ಭ.
ಹಂಚಿನ ಮೇಲಿನ ರೊಟ್ಟಿಯನ್ನು ಒತ್ತಿದಷ್ಟು ಉಬ್ಬುತ್ತದೆ ಮತ್ತು ರುಚಿಕರವಾಗಿ ಬೇಯುತ್ತದೆ. ಬಸವ ತತ್ವಗೂ ಅಷ್ಟೇ ಒತ್ತಿದಷ್ಟು ಉಬ್ಬುತ್ತದೆ ಮತ್ತು ತನ್ನ ಸತ್ಯವನ್ನು ಪ್ರತಿಫಲಿಸುತ್ತದೆ.
4) ಲಿಂಗಾಯತ ವೀರಶೈವ ಸಂಬಂಧದ ಮೇಲೆ ಈ ಘಟನೆ ಏನಾದರು ಪರಿಣಾಮ ಬೀರುತ್ತದೆಯೇ?
ಲಿಂಗಾಯತ ವೀರಶೈವ ಸಂಬಂಧದ ಮೇಲೆ ಈ ಘಟನೆ ಪರಿಣಾಮ ಬೀರಬಾರದು. ಇವ ನಮ್ಮವ ಇವ ನಮ್ಮವ ಎನ್ನುವ ತಾತ್ವಿಕತೆಯ ಮೇಲೆ ಹೋರಾಡುತ್ತಿರುವ ನಾವುಗಳು ವೀರಶೈವರನ್ನು ಕೂಡ ಅಪ್ಪಿಕೊಳ್ಳಬೇಕು ಎಂಬುದು ಸತ್ಯವಾದರೂ ಒಂದಿಷ್ಟು ಸಾಮರಸ್ಯ ಕದಡಿದೆ ಎಂದೇ ಹೇಳಬೇಕು.
ದಲಿತ ಪ್ರಗತಿಪರ ಮತ್ತು ಹಿಂದುಳಿದ ವರ್ಗಗಳ ಯುವಕರು ಈ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡದ್ದು ವೀರಶೈವವಾದಿಗಳಿಗೆ ಒಂದಿಷ್ಟು ಇರುಸು ಮುರುಸು ಮಾಡಿರುವುದು ಸತ್ಯ.
ಇನ್ನೊಂದು ಕಡೆ ಈ ದಲಿತಪರ ಪ್ರಗತಿಪರ ಹಿಂದುಳಿದ ವರ್ಗಗಳ ಯುವಕರು ಪ್ರತಿಭಟನೆಯನ್ನು ಮುನ್ನಡೆಸಿದ ರೀತಿ ಬಸವ ತತ್ವವನ್ನು ಅರ್ಥ ಮಾಡಿಕೊಂಡು ಬದುಕುತ್ತಿರುವ ಲಿಂಗಾಯತರಿಗೆ ಹೊಸ ಹುಮ್ಮಸ್ಸು ಮತ್ತು ಆತ್ಮವಿಶ್ವಾಸ ತಂದಿದೆ
5) ರವಿ ಹಂಜ್ ಹಿಂದೆ ಯಾವುದಾದರು ಸಂಘಟನೆಗಳಿವೆಯಾ? ಅವರ ಉದ್ಧೇಶವೇನು? ಅವರನ್ನು ಲಿಂಗಾಯತರು ಹೇಗೆ ನಿಭಾಯಿಸಬೇಕು?
ರವಿ ಹಂಜಗಿಮಠನಂತಹ ವ್ಯಕ್ತಿಯ ಹಿಂದೆ ಮನುವಾದವನ್ನು ಪ್ರತಿಪಾದಿಸುವ ಸಂಘಟನೆಗಳು ಇರುವುದು ಸ್ಪಷ್ಟ. ಈ ಮನುವಾದಿಗಳ ಉದ್ದೇಶ ಬೌದ್ಧಿಕ ಸಂಪತ್ತು ಮತ್ತು ಬಹುಮತ ಸಂಪತ್ತನ್ನು ನಾಶ ಮಾಡುವುದೇ ಆಗಿದೆ.
ರವಿಹಂಜಗಿಮಠನ ಬರವಣಿಗೆ ಲೈಕ್ ಮಾಡಲು, ಶೇರ್ ಮಾಡಲು ಒಂದಿಷ್ಟು ಜನ ಮನುವ್ಯಾದಿ ಯುವಕರನ್ನು ಜಾತಿ ಶ್ರೇಷ್ಠತೆಯ ವ್ಯಸನಿಗಳು ಸನ್ನದ್ದುಗೊಳಿಸಿದ್ದಾರೆ.
ತಮಗೆ ಸಂಬಂಧವಿಲ್ಲದಿದ್ದರೂ ಬ್ರಾಹ್ಮಣವಾದ ಮತ್ತು ಮನುವಾದವನ್ನು ಅನುಸರಿಸುವ ಇವರು ಲಿಂಗಾಯತದ ವಿಷಯದೊಳಗೆ ಅನಾವಶ್ಯಕವಾಗಿ ಮೂಗು ತೂರಿಸಿ, ಕಾಮೆಂಟುಗಳನ್ನು ಹಾಕಿ ಪ್ರಚೋದಿಸಲು ಪ್ರಯತ್ನಿಸುತ್ತಿರುತ್ತಾರೆ.
ಇದನ್ನು ನಾವು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಲೇಬೇಕು.
