ಬಸವಕಲ್ಯಾಣ :
ಬಸವ ಕೇಂದ್ರದ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಸಮಾರಂಭ ಬಿವಿಬಿ ಕಾಲೇಜಿನ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಇದೇ ಸಂದರ್ಭದಲ್ಲಿ ಬಸವ ಕೇಂದ್ರದ ಬೆಳ್ಳಿ ಮಹೋತ್ಸವ ಪ್ರಯುಕ್ತ ಹೊರತರಲಾದ ಸಾಂಸ್ಕೃತಿಕ ಉತ್ಸವ ಸ್ಮರಣ ಸಂಚಿಕೆಯನ್ನು ಬೀದರ ಲೋಕಸಭಾ ಸದಸ್ಯರಾದ ಸಾಗರ ಖಂಡ್ರೆ ಬಿಡುಗಡೆಗೊಳಿಸಿ ಮಾತನಾಡುತ್ತ, ಮೂಢನಂಬಿಕೆ, ಅಂಧಶ್ರದ್ದೆ, ಕಂದಾಚಾರ ಹೋಗಲಾಡಿಸಲು ಬಸವಣ್ಣನವರು ವಚನಗಳು ನೀಡಿದ್ದಾರೆ. ಅವುಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡರೆ ಇಂದಿನ ದೌರ್ಜನ್ಯ, ಆತ್ಮಹತ್ಯೆ ಸಂಪೂರ್ಣ ತಡೆಗಟ್ಟಬಹುದು.

ದಾರಿ ಅತೀ ಸುಲಭವಾಗಿದೆ, ಆದರೆ ಋಣಾತ್ಮಕ ವಿಚಾರಗಳಿಂದ ಜೀವನ ಜರ್ಝರಿಗೊಳ್ಳುತ್ತಿದೆ. ಇದು ಸಾಮಾಜಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತದೆ. ಪರಿವಾರ, ಕೌಟುಂಬಿಕ ವಾತಾವರಣ ದಿನೇ ದಿನೇ ಕಗ್ಗಂಟಾಗುತ್ತಿದೆ. ಯುವಕರಾದವರು ಸ್ವಲ್ಪ ಮಟ್ಟಿಗೆ ಚಿಂತನೆ ಮಾಡುವುದು ತುಂಬಾ ಅನಿವಾರ್ಯ.
ಬಸವ ಕೇಂದ್ರ ಸಂಸ್ಥೆ ತನ್ನ ಇಪ್ಪತ್ತೈದು ವರ್ಷಗಳ ಕಾಲ ಅನೇಕ ಸಾಮಾಜಿಕ ಕಾರ್ಯಗಳು ಮಾಡಿದ್ದು ಜನರ ಭಾವನೆಗಳಿಗೆ ಸ್ಪಂದಿಸಿರುವುದು ಸಂತಸ. ಬೆಳ್ಳಿ ಹಬ್ಬ ಪ್ರಯುಕ್ತ ಹೊರ ತರಲಾದ ಸ್ಮರಣ ಸಂಚಿಕೆ ತುಂಬಾ ಅಚ್ಚುಕಟ್ಟಾಗಿ ಮುದ್ರಣ ಗೊಂಡಿದ್ದು, ವೈಚಾರಿಕ ಲೇಖನಗಳಿಂದ ಸ್ಮರಣ ಸಂಚಿಕೆಯ ಮೌಲ್ಯ ಹೆಚ್ಚಿಸಿದೆ ಎಂದರು.
ಸಮಾರೋಪ ನುಡಿಯನ್ನು ಪ್ರೊ. ಶಿವರಂಜನ ಸತ್ಯಂಪೇಟೆ ಆಡುತ್ತ, ಅಸಾಧ್ಯವಾದುದನ್ನು ಸಾಧ್ಯ ಮಾಡಿ ತೋರಿಸಿದವರು ಶರಣರು ಮಾತ್ರ. ದೇವರನ್ನು ಹುಡುಕುವವರಿಗೆ ಬಸವ ವಿಳಾಸವಾದವರು. ಬಸವ ಬಡವರ ನಿಧಿ, ರಾಜ್ಯ, ರಾಷ್ಟ್ರದ ಸಿರಿ. ದೇವರನ್ನು ಅರಸುತ್ತ ಹೋಗಿ ಜೀವನ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳದೆ ದೇಹವೇ ದೇವಾಲಯ ಮಾಡಿಕೊಂಡು ದೇವರು ನಮ್ಮೊಳಗೆ ಇದ್ದಾನೆಂಬ ಹೊಸ ಕಲ್ಪನೆ ಸಾಕಾರ ಗೊಳಿಸಿ ನುಡಿದಂತೆ ನಡೆದವರು.
ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸಾಕ್ಷಾತ್ ದೇವರು ಎಂದು ಹೇಳಿ ಅವಳ ಘನತೆ, ಗೌರವ ಎತ್ತಿ ಹಿಡಿದು ಮಾನವೀಯತೆ ಮೆರೆದವರು.
ರಾಹು ಕಾಲ ಗುಳಿಕ ಕಾಲ ಎಂಬ ಗೊಡ್ಡು ಸಂಪ್ರದಾಯಗಳಿಗೆ ಮಾರುಹೋಗದೆ ರಾಶಿ ಕೂಟ ಋಣ ಸಂಬಂಧ ಉಂಟೆಂದು ಹೇಳಿ, ಕೊಲ್ಲುವೆನೆಂಬ ಭಾಷೆ ದೇವನದ್ದಾದರೆ ಗೆಲುವೆನೆಂಬ ಭಾಷೆ ಭಕ್ತನದು ಎಂದು ದೇವರಿಗೆ ಸವಾಲು ಹಾಕಿದ ಶರಣರು ಭುವನದ ಬೆಳಕಾಗಿದ್ದಾರೆ ಎಂದು ತಮ್ಮ ಅನುಭಾವ ನಿವೇದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಪೂಜ್ಯ ಶ್ರೀ ಜಗದ್ಗುರು ನಿರಂಜನ ಸಂಸ್ಥಾನಮಠ ಭಾತಂಬ್ರಾ ಭಾಲ್ಕಿ ಬಸವ ಮುಕ್ತಿ ಮಂದಿರ ಬೀದರನ ಪೂಜ್ಯ ಶಿವಯೋಗೀಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ, ಪ್ರಥಮವಾಗಿ ಶರಣ ಸಂಸ್ಕೃತಿ ಉತ್ಸವಕ್ಕೆ ಸಹಕಾರ ನೀಡಿದ್ದು ಬಸವ ಮುಕ್ತಿ ಮಂದಿರ.

ನನ್ನ ಕಾಯಕದಿಂದ ಬಸವ ಕೇಂದ್ರದ ಚಟುವಟಿಕೆಗಳಿಗೆ ಒಂದು ಲಕ್ಷ ದಾಸೋಹ ನೀಡಿರುವುದು ಅಭಿಮಾನದ ಸಂಕೇತವಾಗಿದೆ.
ಇಂದು ಯುವಕರು ಲಿಂಗ, ವಿಭೂತಿ, ರುದ್ರಾಕ್ಷಿ ಬಿಟ್ಟದ್ದರಿಂದ ನಿಜ ಸಂಸ್ಕಾರ ಸಂಸ್ಕೃತಿ ಹಾಳಾಗುತ್ತಿದೆ. ಪ್ರತಿಯೊಂದು ಸಾರ್ವಜನಿಕ, ವೈಯುಕ್ತಿಕ ಕಾರ್ಯಕ್ರಮಗಳಲ್ಲಿ ವಿಭೂತಿ ಹಚ್ಚಿ ಚಾಲನೆ ನೀಡುವ ಪರಿಪಾಠ ಹಾಕಬೇಕು. ಬಸವ ತತ್ವ ಎಂದೆಂದಿಗೂ ಪ್ರಸ್ತುತ. ಅದರ ವಾರಸುದಾರರಾದ ನಾವಾದರೂ ತತ್ವ ಸಿದ್ಧಾಂತ ಪ್ರಚಾರ ಪ್ರಸಾರ ಮಾಡುವ ಜವಾಬ್ದಾರಿ ಹೊತ್ತುಕೊಂಡಾಗ ಮಾತ್ರ ಬಸವ ತತ್ವ ಬೆಳೆಯುತ್ತದೆ. ಕೇವಲ ಮಾತನಾಡಿ ಸಾಗಿದರೆ ಬಸವಣ್ಣನವರ ವಿಚಾರಕ್ಕೆ ಬೆಲೆ ಬರೋಲ್ಲ, ಅವುಗಳನ್ನು ನಿಜಾಚರಣೆಗೆ ತರಲು ಎಲ್ಲರೂ ಪ್ರಯತ್ನ ಮಾಡಲು ಇಂಥ ಪವಿತ್ರವಾದ ಸಮಾರಂಭದಲ್ಲಿ ಸಂಕಲ್ಪ ಮಾಡಲು ಕರೆ ನೀಡಿದರು.
ವೇದಿಕೆ ಮೇಲೆ ಶಿವಮೂರ್ತಿ ಮುರುಘಾ ಶರಣರು, ಖಾಸಾಮಠ ಗುರುಮಿಟಕಲ್ ನ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಮಹಾ ಸ್ವಾಮಿಗಳು, ಪೂಜ್ಯ ಡಾ. ಗುರುಬಸವ ಸ್ವಾಮಿಗಳು ಭಾತಂಬ್ರಾ, ಆನಂದ ದೇವಪ್ಪ, ಶಿವಶಂಕರ ಕಾಮಶೆಟ್ಟಿ, ಶಾಮರಾವ ಭೀಮರಾವ, ಅಮೃತರಾವ ಚಿಮಕೋಡೆ, ರಾಜಶ್ರೀ ಶ್ರೀಕಾಂತಸ್ವಾಮಿ, ವಿಜುಕುಮಾರ ಆನಂದೆ, ಚಂದ್ರಶೇಖರ ಕಟ್ಟೆ, ಸೋಮಶೇಖರ ಪಾಟೀಲ, ಕೃಪಾಸಿಂಧು ಪಾಟೀಲ, ಹಾವಶೆಟ್ಟಿ ಪಾಟೀಲ, ಸಹಜಾನಂದ ಕಂದಗೂಳ, ಅನೀಲಕುಮಾರ ಪನ್ನಾಳೆ, ಧನರಾಜ ಹಂಗರಗಿ, ಸುರೇಶ ಚೆನ್ನಶೆಟ್ಟಿ, ಶಿವಶಂಕರ ಟೋಕರೆ,
ರಾಜೇಂದ್ರಕುಮಾರ ಗಂದಗೆ, ಸೋಮನಾಥ ಕಂದಗೂಳೆ, ಉಮೇಶ ಪಾಟೀಲ, ರೇವಣಪ್ಪ ಮೂಲಗೆ, ಡಾ. ವಿದ್ಯಾವತಿ ಬಲ್ಲೂರ, ಡಾ. ಬಸವರಾಜ ಬಲ್ಲೂರ, ಡಾ. ದೇವಕಿ ನಾಗೂರೆ, ಶಕುಂತಲಾ ಬೆಲ್ದಾಳೆ, ಭಾಗ್ಯ ಮುದ್ದಾ ಉಪಸ್ಥಿತರಿದ್ದರು.

ಮೊದಲಿಗೆ ತೋಟಪ್ಪ ಉತ್ತಂಗಿ ವಚನ ಗಾಯನ ಮಾಡಿದರೆ, ನೃತ್ಯಾಂಗನ ಕಲಾ ತಂಡದವರ ನೃತ್ಯ ಎಲ್ಲರ ಗಮನ ಸೆಳೆಯಿತು. ಬಾಬುರಾವ ದಾನಿ ಸ್ವಾಗತಿಸಿದರೆ, ವೈಜನಾಥ ಸಜ್ಜನಶೆಟ್ಟಿ ನಿರೂಪಿಸಿದರೆ ಅಶೋಕ ದಿಡಗೆ ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga
