ನಿಜಾಚರಣೆ: ಬಸವರಾಜ, ಸಂಗೀತ ಅವರ ಸಂಭ್ರಮದ ಕಲ್ಯಾಣ ಮಹೋತ್ಸವ

ರಾಯಚೂರು:

ಯಣ್ಣಿವಡಿಗೇರಿಯ ಲಲಿತಾ ಮತ್ತು ಮಲ್ಲಿಕಾರ್ಜುನ ಗುಡಿಮನಿ ಅವರ ಪುತ್ರ ಜಿ. ಬಸವರಾಜ ಮತ್ತು ಸಂಗೀತ ಅವರ ಕಲ್ಯಾಣ ಮಹೋತ್ಸವವು ಜುಲೈ 8ರಂದು ವಿಜಯಪುರದ ಬಸವನಬಾಗೇವಾಡಿಯಲ್ಲಿ ಬಸವತತ್ವದ ಪ್ರಕಾರ ನಡೆಯಿತು. ಸಂಗೀತಾ ಅವರು ಕಡಕೋಳದ ರೇಣುಕಾ ಮತ್ತು ಲಿಂಗೈಕ್ಯ ಭೀಮಪ್ಪ ಅವರ ಪುತ್ರಿಯಾಗಿದ್ದಾರೆ.

ಬಸವ ಭವನದಲ್ಲಿ ನಡೆದ ಕಲ್ಯಾಣ ಮಹೋತ್ಸವದ ಸಾನಿಧ್ಯವನ್ನು ಇಲಕಲ್ಲ ವಿಜಯ ಮಹಾಂತೇಶ್ವರ ಮಠದ ಪೂಜ್ಯ ಡಾ. ಗುರುಮಹಾಂತಪ್ಪಗಳು ವಹಿಸಿದ್ದರು.

ಅವರು ಅನುಭಾವ ನೀಡುತ್ತಾ, ಅನ್ನ ಜೀವನಾಧಾರಿತ ಪದಾರ್ಥ.  ರೈತ ವರ್ಷವಿಡಿ ದುಡಿದು ಕಷ್ಟಪಟ್ಟು ದವಸ ಧಾನ್ಯಗಳನ್ನು ಬೆಳೆಯುತ್ತಾನೆ. ಆದರೆ ನಾವು ಮದುವೆ ಮಹೋತ್ಸವ, ಮುಂತಾದ ಕಾರ್ಯಕ್ರಮಗಳಲ್ಲಿ ಅದರ ಅರಿವಿಲ್ಲದಂತೆ ಅಕ್ಕಿಕಾಳು ಹಾಕಿ ತುಳಿಯುತ್ತಿರುವುದನ್ನು ಗಮನಿಸಿದರೆ ರೈತನಿಗೆ, ಅನ್ನಕ್ಕೆ ದೊಡ್ಡ ಅಪಚಾರ ಮಾಡಿದಂತಾಗುವದು. ಕಾರಣ ಇಂತಹ ಶುಭ ಕಾರ್ಯಗಳಿಗೆ ಪುಷ್ಪವೃಷ್ಟಿ ಮಾಡಿ ಶುಭ ಕೋರುವದು ಸಮಂಜಸ ಎಂದರು.

ನಮ್ಮ ದೇಶದಲ್ಲಿ ಮೂಢನಂಬಿಕೆಯಿಂದ ಹಾಳು ಮಾಡುತ್ತಿರುವ ಈ ಅಕ್ಕಿಯನ್ನು ಉಳಿಸಿದಂತಾಗುವುದು. ಇದರಿಂದ ದೇಶದ ಆರ್ಥಿಕ ಭದ್ರತೆಗೆ ಸ್ವಲ್ಪಾದರೂ ಸಹಕಾರವಾಗುವುದೆಂದು ತಿಳಿಸಿ, ನೂತನ ವಧು ವರರಿಗೆ ಪುಷ್ಪವೃಷ್ಟಿ ಮಾಡಿ, ದಂಪತಿಗಳ ಹೊಸ ಬದುಕಿಗೆ ಶುಭ ಹಾರೈಸಿದರು.

ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡುತ್ತಾ, ಬಸವಾದಿ ಶರಣರ ಆಶಯದಂತೆ ನೂತನ ದಂಪತಿಗಳ ಹೃದಯಗಳು ಪರಸ್ಪರ ಒಂದಾಗಿ, ಏಕ ದೃಷ್ಟಿಯಿಂದ ಸಂತೋಷದಾಯಕವಾಗಿ, ಸದಾ ಹಸನ್ಮುಖಿಗಳಾಗಿ ಜೀವನ ಸಾಗಿಸಲೆಂದು ಆಶೀರ್ವಚನ ನೀಡಿದರು.

ವೇದಿಕೆ ಮೇಲೆ ಜೈನಾಪುರ ಪೂಜ್ಯ ಸಿದ್ದಲಿಂಗ ಸ್ವಾಮಿಗಳು, ಅನುಭಾವಿ ಪಿ. ರುದ್ರಪ್ಪ, ಚನ್ನಬಸವ ಇಂಜನಿಯರ್, ಜೆ. ಬಸವರಾಜ, ವಧು-ವರರ ತಂದೆ ತಾಯಿಗಳು, ಕುಟುಂಬ ವರ್ಗ, ಬಂಧು ಬಳಗದವರು ಇದ್ದರು.

ವಚನಮೂರ್ತಿ ಪಿ. ರುದ್ರಪ್ಪ ಮತ್ತು ರಾಯಚೂರು ಬಸವ ಕೇಂದ್ರದ ಸದಸ್ಯರು ಕಲ್ಯಾಣ ಮಹೋತ್ಸವ ನಡೆಸಿಕೊಟ್ಟರು. ಜಗದೇವಿ ಚೆನ್ನಬಸವ ಪ್ರಾರ್ಥನೆ ಗೀತೆ ಹಾಗೂ ಷಟಸ್ಥಲ ಧ್ವಜಗೀತೆ ಹಾಡಿದರು. ಮಲ್ಲಿಕಾರ್ಜುನ ಗುಡಿಮನಿ ಸ್ವಾಗತಿಸಿದರು. ಪಿ ರುದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಜಯಶ್ರೀ ಮಹಾಜನಶೆಟ್ಟಿ ನಿರೂಪಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ಶರಣು ಸಮರ್ಪಿಸಿದರು.

ಕಲ್ಯಾಣ ಮಹೋತ್ಸವದಲ್ಲಿ ಬಸವ ಕೇಂದ್ರ, ಅಕ್ಕನ ಬಳಗ, ಜಾಗತಿಕ ಲಿಂಗಾಯತ ಮಹಾಸಭೆ, ರಾಯಚೂರು ಹಾಗೂ ಸಿಂಧನೂರು ಘಟಕದ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಗಮಿಸಿದ ಸಾವಿರಾರು ಜನರು ನೂತನ ದಂಪತಿಗಳಿಗೆ ಪುಷ್ಪವೃಷ್ಟಿ ಮಾಡಿ ಶುಭ ಹಾರೈಸಿದರು.

ನೂತನ ದಂಪತಿಗೆ ಇಷ್ಟಲಿಂಗ ಸಂಸ್ಕಾರ

ಕಲ್ಯಾಣ ಮಹೋತ್ಸವದ ಹಿಂದಿನ ದಿನ ಜುಲೈ 7ರಂದು ನೂತನ ವಧು-ವರರಿಗೆ ಇಷ್ಟಲಿಂಗ ಸಂಸ್ಕಾರ ನೀಡಲಾಯಿತು. ಆ ಸಂದರ್ಭದಲ್ಲಿ ಅವರ ಬಂಧು ಬಳಗದ 70 ಜನ ಸಾಕ್ಷಿಯಾಗಿದ್ದರು.

ಲಿಂಗದೀಕ್ಷೆಯ ಸಂಧರ್ಭದಲ್ಲಿ ನೂತನ ವಧು ವರರಿಗೆ ಸೃಷ್ಟಿಯ ರಚನೆ ಹೇಗಾಯಿತು?, ಸೃಷ್ಟಿ ಮತ್ತು ಮಾನವನ ಸಂಬಂಧಗಳೇನು?, ದೇವರ ಸ್ವರೂಪವೇನು ಎನ್ನುವುದನ್ನು ಸಂಗಮೇಶ್ವರದ ಅಪ್ಪಣ್ಣನವರ ವಚನದ ಮೂಲಕ ತಿಳಿಸಿಕೊಡಲಾಯಿತು.

ಇಷ್ಟಲಿಂಗ ಬಸವಣ್ಣನವರು ಅನ್ವೇಷಣೆ ಮಾಡಿ ಕೊಟ್ಟಂತಹ ಸಾಧನ. ಇದನ್ನು ಧರಿಸಿಕೊಂಡು ಶರಣರ ವಚನಗಳಂತೆ ನಡೆದರೆ, ಬದುಕಿನಲ್ಲಿ ಸಂತೃಪ್ತಿ ಸಾಧ್ಯ ಎನ್ನುವುದನ್ನು ತಿಳಿಸಲಾಯಿತು.

ಲಿಂಗಸಂಸ್ಕಾರ ಪಡೆದುಕೊಂಡ ನೂತನ ವಧು-ವರರು ಸಂತೋಷಪಟ್ಟದ್ದು ವ್ಯಕ್ತವಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *