“ತರಳಬಾಳು ಗುರುಪರಂಪರೆ” ವಿಷಯದ ಕುರಿತು ‘ದಂದಣ ದತ್ತಣ ಗೋಷ್ಠಿ’
ಹೊಸದುರ್ಗ:
ದಂದಣ ದತ್ತಣ ಗೋಷ್ಠಿಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ, ಸಭೆಯ ಮುಂದೆ ಧೈರ್ಯವಾಗಿ ಮಾತನಾಡುವ ಕಲೆ ಹಾಗೂ ನಾಯಕತ್ವ ಗುಣವನ್ನು ಬೆಳೆಸುತ್ತವೆ ಎಂದು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿಯ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ತರಳಬಾಳು ಗುರುಪರಂಪರೆ” ವಿಷಯದ ಕುರಿತಾದ ‘ದಂದಣ ದತ್ತಣ ಗೋಷ್ಠಿ’ಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
“ಕರ್ನಾಟಕದ ಮಠಾಧೀಶರ ಇತಿಹಾಸದಲ್ಲೇ ಅಪ್ರತಿಮ ಸಾಧನೆ ಮಾಡಿದ ಹಿರಿಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಬದುಕು ಮತ್ತು ಸಾಧನೆ ಅನನ್ಯವಾದದ್ದು. 1914 ರಲ್ಲಿ ಹೊಳಲ್ಕೆರೆ ತಾಲೂಕಿನ ಮುತ್ತಗದೂರಿನಲ್ಲಿ ಜನಿಸಿ, ಕಾಶಿಯಲ್ಲಿ ಸಂಸ್ಕೃತ ಅಧ್ಯಯನ ಮುಗಿಸಿ, ಯಲಹಂಕ ಮಠದ ಜವಾಬ್ದಾರಿ ವಹಿಸಿಕೊಂಡಾಗ ಮಠ ಹಾಗೂ ಭಕ್ತರು ತೀವ್ರ ಬಡತನದಲ್ಲಿದ್ದರು. ಅಂತಹ ಸಂದರ್ಭದಲ್ಲಿ ಕೃಷಿಗೆ ಆದ್ಯತೆ ನೀಡಿ ಮಠವನ್ನು ಅಭಿವೃದ್ಧಿಪಡಿಸಿದರಲ್ಲದೆ, ಗುರು-ಶಿಷ್ಯರ ಸಂಬಂಧಕ್ಕೆ ಹೊಸ ಭಾಷ್ಯ ಬರೆದರು.
1938 ರಲ್ಲಿ ಸಿರಿಗೆರೆಯ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿಗಳು ಲಿಂಗೈಕ್ಯರಾದಾಗ, ಭಕ್ತರ ಒತ್ತಾಸೆಯ ಮೇರೆಗೆ 1940 ರ ಬಸವ ಜಯಂತಿಯಂದು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳಿಗೆ ಪಟ್ಟಾಭಿಷೇಕ ಮಾಡಲಾಯಿತು. ಅಲ್ಲಿಂದ ಸಿರಿಗೆರೆ ಮಠದ ಚರಿತ್ರೆ ಹೊಸ ರೂಪ ಪಡೆದುಕೊಂಡಿತು.
ವಿಶ್ವಬಂಧು ಮರುಳಸಿದ್ಧರ ನಂತರ ಮಠಕ್ಕೆ ಜಾಗತಿಕ ಕೀರ್ತಿ ತಂದುಕೊಟ್ಟ ಹಿರಿಮೆ ಹಾಗೂ ಸಿರಿಗೆರೆ, ಹಾಲ್ಕುರಿಕೆ, ಯಲಹಂಕ ಮಠಗಳ ಏಕೀಕರಣ ಮಾಡಿದ ಶ್ರೇಯಸ್ಸು ಶಿವಕುಮಾರ ಸ್ವಾಮಿಗಳವರಿಗೆ ಸಲ್ಲುತ್ತದೆ. ತಮ್ಮ 60ನೇ ವಯಸ್ಸಿಗೆ ಸ್ವಯಂಪ್ರೇರಿತರಾಗಿ ನಿವೃತ್ತಿ ಘೋಷಿಸಿ, 1979 ರಲ್ಲಿ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳಿಗೆ ಪೂರ್ಣ ಅಧಿಕಾರ ಹಸ್ತಾಂತರಿಸಿದ ಅವರ ನಿರ್ಲಿಪ್ತ ಮನೋಭಾವ ಎಲ್ಲರಿಗೂ ಆದರ್ಶಪ್ರಾಯ ಎಂದು ಸ್ಮರಿಸಿದರು.
ಮಕ್ಕಳು ಸಣ್ಣಪುಟ್ಟ ಕಾರಣಗಳಿಗೆ ಮನಸ್ಸು ದುರ್ಬಲ ಮಾಡಿಕೊಳ್ಳದೆ, ಮಠದ ಸಂಸ್ಥೆಗಳು ಕಲ್ಪಿಸಿರುವ ಉತ್ತಮ ಶಿಕ್ಷಣದ ಅವಕಾಶವನ್ನು ಬಳಸಿಕೊಂಡು ಹೋರಾಟ ಹಾಗೂ ಸಾಧನೆಯ ಬದುಕು ರೂಪಿಸಿಕೊಳ್ಳಬೇಕು. ವಿಷಯಗಳನ್ನು ಕಂಠಪಾಠ ಮಾಡುವುದಕ್ಕಿಂತ ಸ್ವಂತ ಮಾತುಗಳಲ್ಲಿ ಗ್ರಹಿಸಿ ಸಂವಾದ ನಡೆಸಬೇಕು” ಎಂದು ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆದ್ರಿಕಟ್ಟೆಯ ನಿವೃತ್ತ ಮುಖ್ಯ ಶಿಕ್ಷಕ ಬಸವರಾಜಪ್ಪನವರು ಮಾತನಾಡಿ, ಗ್ರಾಮೀಣ ಭಾಗದ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ ತಲೆಯೆತ್ತಿ ಬಾಳುವಂತೆ ಮಾಡಿದ ಕೀರ್ತಿ ಲಿಂಗಾಯತ ಮಠಗಳಿಗೆ ಸಲ್ಲುತ್ತದೆ. ಸಾಣೇಹಳ್ಳಿಯ ಶಾಲಾ ಪರಿಸರ ಮತ್ತು ಇಲ್ಲಿ ದೊರೆಯುವ ಸಂಸ್ಕಾರ ವಿದ್ಯಾರ್ಥಿಗಳ ಬದುಕನ್ನು ಉತ್ತಮ ಹಾದಿಗೆ ತರುತ್ತದೆ.

ತರಳಬಾಳು ಪರಂಪರೆಯ ಸಂವಾದವನ್ನು ಒಂದು ಐತಿಹಾಸಿಕ ರೂಪಕ ಅಥವಾ ನಾಟಕದ ರೂಪದಲ್ಲಿ ರಂಗದ ಮೇಲೆ ತರುವ ಶಕ್ತಿ ಇಲ್ಲಿನ ರಂಗಶಾಲೆಗಿದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಹಿರಿಯ ಶ್ರೀಗಳೊಂದಿಗಿನ ತಮ್ಮ ಹಳೆಯ ನೆನಪುಗಳು ಹಾಗೂ ಅವರ ಅಪಾರ ನೆನಪಿನ ಶಕ್ತಿಯನ್ನು ಶ್ಲಾಘಿಸಿದರು.
ಶ್ರೀ ಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಸದಸ್ಯರಾದ ಆರ್. ಕೃಷ್ಣಮೂರ್ತಿ ಮಾತನಾಡಿ, ಜಾತಿ ಭೇದ, ಭಿನ್ನಭಾವಗಳನ್ನು ಮರೆತು ಬಸವಣ್ಣನವರ ‘ಇವನಾರವ ಇವನಾರವ’ಎನ್ನುವ ತತ್ವ ಸಿದ್ಧಾಂತವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದವರು ಹಿರಿಯ ಜಗದ್ಗುರುಗಳು.

ಅವರು ಜಿಲ್ಲೆಯಾದ್ಯಂತ ಸಂಚರಿಸಿ ಹಳ್ಳಿಗಳಲ್ಲಿ ಪ್ರೌಢಶಾಲೆಗಳನ್ನು ತೆರೆದರು, ಭಕ್ತರನ್ನು ಸಂಘಟಿಸಿ ಅಣ್ಣನ ಬಳಗ, ಅಕ್ಕನ ಬಳಗಗಳನ್ನು ಸ್ಥಾಪಿಸಿ ವಚನ ಸಾಹಿತ್ಯವನ್ನು ಪ್ರಸಾರ ಮಾಡಿದರು. ಇಂದು ಪೂಜ್ಯ ಪಂಡಿತಾರಾಧ್ಯ ಶ್ರೀಗಳು ಸಾಣೇಹಳ್ಳಿಯನ್ನು ದೇಶ-ವಿದೇಶಗಳಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಬೆಳಗ್ಗೆ ಬರುವ ‘ಒಲಿದಂತೆ ಹಾಡುವೆ’ ಚಿಂತನೆಯ ಮೂಲಕ ಅವರು ನೀಡುತ್ತಿರುವ ತತ್ವಗಳು ಮಾನವನ ಬದುಕಿಗೆ ದಾರಿದೀಪವಾಗಿವೆ ಎಂದರು.

ವಿದ್ಯಾರ್ಥಿ ಭಾಷಣಕಾರರಾದ ಪ್ರತೀಕ್ಷ, ಧನುಶ್ರೀ, ರಕ್ಷಿತ, ಮನು, ಗಣೇಶ, ಅರವಿಂದ, ಪ್ರಾರ್ಥನ, ಮಾನಸ ತರಳಬಾಳು ಗುರುಪರಂಪರೆ’ ವಿಷಯ ಕುರಿತು ಮಾತನಾಡಿದರು. ವಿದ್ಯಾರ್ಥಿ ಅಭಯ ಸ್ವಾಗತಿಸಿ, ನಿರೂಪಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ವಚನಗೀತೆಗಳನ್ನು ಭಕ್ತಿಪೂರ್ವಕವಾಗಿ ಹಾಡಿದರು. ಉಭಯ ಶಾಲಾ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
