ಮಂಡ್ಯ: ಹಂಜ್, ಭಟ್ಟ ಬಂಧಿಸುವಂತೆ ಎಸ್ಪಿಗೆ ದೂರು

ಬಸವ ಮೀಡಿಯಾ
ಬಸವ ಮೀಡಿಯಾ

ಮಂಡ್ಯ:

ಕರ್ನಾಟಕ ಸಾಂಸ್ಕೃತಿಕ ನಾಯಕ “ವಿಶ್ವಗುರು” ಬಸವಣ್ಣನವರನ್ನು ಅವಹೇಳನ ಮಾಡಿರುವ ಲೇಖಕ ರವಿ ಹಂಜ್ ಹಾಗೂ ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾ ರಾಣಿ ಅವರಿಗೆ ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಮತ್ತು ಕಂಬಳಗೋಡು ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಡಾ. ಚನ್ನಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ದೂರು ನೀಡಿದರು.

ನಗರದಲ್ಲಿರುವ ಎಸ್ಪಿ ಕಚೇರಿ ಮುಂದೆ ಜಮಾಮಣೆಗೊಂಡ ಮಹಾಸಭಾ ಪದಾಧಿಕಾರಿಗಳು ಬಸವಣ್ಣ ಅವರ ಘನತೆ ಹಾಗೂ ಗೌರವಕ್ಕೆ ಅವಹೇಳನಕಾರಿ ಮಾಡಿರುವ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಬಳಿಕ ಮಾತನಾಡಿದ ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಡಾ. ಚನ್ನಬಸವಾನಂದ ಸ್ವಾಮೀಜಿ, ಕರ್ನಾಟಕ ಸಾಂಸ್ಕೃತಿಕ ನಾಯಕ “ವಿಶ್ವಗುರು” ಬಸವಣ್ಣನವರನ್ನು ಅವಹೇಳನ ಮಾಡಿರುವ ಲೇಖಕ ರವಿ ಹಂಜ್ ಹಾಗೂ ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ದೂರು ನೀಡಿದ್ದೇವೆ ಎಂದು ಹೇಳಿದರು.

ಕರ್ನಾಟಕ ಘನ ಸರಕಾರವು “ವಿಶ್ವಗುರು” ಬಸವಣ್ಣನವರನ್ನು ಜನವರಿ 2024 ರಂದು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಅತ್ಯಂತ ಹೆಮ್ಮೆ ಹಾಗೂ ಸಂತಸದ ವಿಷಯ. ಅದಕ್ಕಾಗಿ ನಾಡಿನ ಸಮಸ್ತ ಬಸವಾಭಿಮಾನಿಗಳ ಪರವಾಗಿ ಹೃದಯ ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದರು.

ಆದರೆ, ಅನಿವಾಸಿ ಭಾರತೀಯನಾದ ರವಿ ಹಂಜ್ (ರವಿ ಹಂಜಗಿಮಠ) ಎಂಬ ವ್ಯಕ್ತಿಯು ಇತ್ತೀಚೆಗೆ “ವಿಶ್ವವಾಣಿ” ವಾಹಿನಿಯ ಮೂಲಕ ಸಂದರ್ಶನವನ್ನು ನೀಡಿ ಬಸವಣ್ಣನವರ ಬಗ್ಗೆ ಅತ್ಯಂತ ಕೀಳು ಭಾಷೆಯನ್ನು ಬಳಸಿ ಕಳ್ಳ, ಸುಳ್ಳ, ಕೊಲೆಗಾರ ಎಂದು ಏಕವಚನದಲ್ಲಿ ನಿಂದಿಸಿರುತ್ತಾನೆ. ವಚನ ಸಾಹಿತ್ಯದ ಬಗ್ಗೆಯೂ ಹಾಗೂ ಹನ್ನೆರಡನೆ ಶತಮಾನದ ಸಮಸ್ತ ಶರಣರನ್ನು ನಿಂದಿಸಿರುತ್ತಾನೆ. ಅಲ್ಲದೆ ಲಿಂಗಾಯತರನ್ನು “ಲಿಂಗಾಹತರು” ಎಂದು ಸಂಬೋಧಿಸಿ ಅವಹೇಳನ ಮಾಡಿ ಲಿಂಗಾಯತರ ಮನಸನ್ನು ಘಾಸಿಗೊಳಿಸಿದ್ದಾನೆ ಎಂದು ಕಿಡಿ ಕಾರಿದರು.

ಇದು ಕೇವಲ ಬಸವಣ್ಣನವರಿಗೆ ಹಾಗೂ ಸಮಸ್ತ ಶರಣರಿಗೆ ಮಾಡಿರುವ ಅಪಮಾನಷ್ಟೇ ಅಲ್ಲ, ಬಸವಣ್ಣನವರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿರುವ ಕರ್ನಾಟಕ ಸರಕಾರಕ್ಕೆ ಮಾಡಿರುವ ಘೋರ ಅಪಮಾನವಾಗಿದೆ. ಜಗತ್ತಿನಲ್ಲಿರುವ ಸಮಸ್ತ ಬಸವಾಭಿಮಾನಿಗಳ ಭಾವನೆಗಳೊಂದಿಗೆ ಚೆಲ್ಲಾಟವಾಡಿದ್ದಾನೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕದಡುವ ವಾತಾವರಣ ನಿರ್ಮಾಣ ಮಾಡಿದ್ದಾನೆ ಎಂದು ಆಕ್ರೋಶ ಹೊರ ಹಾಕಿದರು.

ಬಳಿಕ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ ಶಿವಕುಮಾರ್, ಬಸವದ್ರೋಹಿ ರವಿ ಹಂಜ್ ಎಂಬ ವ್ಯಕ್ತಿಯನ್ನು ಬಸವಾದಿ ಶರಣರಿಗೆ ಅವಮಾನ ಮಾಡಿದ ಪ್ರಕರಣದಲ್ಲಿ ಬಿ.ಎನ್.ಎಸ್ ಕಾಯ್ದೆಯ ಅಡಿಯಲ್ಲಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ವಿವಾದಾತ್ಮಕ “ಬಸವ ಮಂಟಪ” ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಬಸವ ದ್ರೋಹಿ ರವಿ ಹಂಜ್ ಸಂದರ್ಶನಕ್ಕೆ ಅವಕಾಶ ಮಾಡಿ ವೇದಿಕೆ ಒದಗಿಸಿಕೊಟ್ಟ “ವಿಶ್ವವಾಣಿ” ವಾಹಿನಿಯ ಸಂಪಾದಕ ವಿಶ್ವೇಶ್ವರ ಭಟ್ ಅವರು ಕೂಡ ಈ ದುಷ್ಕೃತ್ಯದಲ್ಲಿ ಪಾಲುದಾರರಾಗಿದ್ದಾರೆ. ಆದ್ದರಿಂದ ರವಿ ಹಂಜಗಿಮಠ ಹಾಗೂ ವಿಶ್ವೇಶ್ವರ ಭಟ್ ಅವರ ಮೇಲೆ ಬಿಎನ್ಎಸ್ 299, ಬಿಎನ್ಎಸ್ 196, ಬಿಎನ್ಎಸ್ 353, ಬಿಎನ್ಎಸ್ 356, ಐಟಿ 75 ಹಾಗೂ ಬಿಎನ್ಎಸ್ 1/4 ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ದೂರು ನೀಡಿ ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಬಸವದಳ ಮಹಿಳಾ ಗಣದ ಅಧ್ಯಕ್ಷೆ ಜಗದೇವಿ ಜಟ್ಟಿ ಕಲ್ಬುರ್ಗಿ, ಬಸವ ಫೌಂಡೇಶನ್ ಅಧ್ಯಕ್ಷ ಅಪರ್ಣ, ಬಸವಶ್ರೀ ಕಟ್ಟಾಳೆ, ಜ್ಯೋತಿ ಕಟ್ಟಾಳೆ, ಲಕ್ಷ್ಮಿ ಕಣಜ ಸೇರಿದಂತೆ ಹಲವರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
Leave a comment

Leave a Reply

Your email address will not be published. Required fields are marked *