ಚಿಕ್ಕಮಗಳೂರು: ಹಂಜ್, ಭಟ್ಟ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

ಬಸವ ಮೀಡಿಯಾ
ಬಸವ ಮೀಡಿಯಾ

ಚಿಕ್ಕಮಗಳೂರು :

ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಮಾಡಲಾದ ಆರೋಪಗಳ ಹಿನ್ನೆಲೆಯಲ್ಲಿ ಅವಹೇಳನಕಾರಿ ಬರಹ ಬರೆದಿರುವ ಲೇಖಕ, ವೇದಿಕೆ ಕಲ್ಪಿಸಿದ ಮಾಧ್ಯಮ ಸಂಸ್ಥೆ ಮತ್ತು ಸಂಪಾದಕರ ವಿರುದ್ಧ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿ ಸುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಗಂಗಾಧರಪ್ಪ ಒತ್ತಾಯಿಸಿದ್ದಾರೆ.

ಪ್ರತಿಭಟನೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಅನಿವಾಸಿ ಭಾರತೀಯ ರವಿ ಹಂಜ್ ಮಾಧ್ಯಮದ ಮೂಲಕ ಬಸವಣ್ಣನವರ ಕುರಿತು ಮಾಡಿರುವ ಹೇಳಿಕೆಗಳು ಬಸವತತ್ವದ ಅಭಿಮಾನಿಗಳಲ್ಲಿ ತೀವ್ರ ಅಕ್ರೋಶ ಮತ್ತು ನೋವನ್ನುಂಟು ಮಾಡಿವೆ.

ಮಾಧ್ಯಮದಲ್ಲಿ ಪ್ರಕಟವಾದ ಅವರ ಸಂದರ್ಶನ ಹಾಗೂ ಅದಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಬಸವಣ್ಣ ಅವರು ಬಿಜ್ಜಳನ ಕೊಲೆಗೆ ಕಾರಣಕರ್ತರು, ಬಿಜ್ಜಳನ ಭಂಡಾರವನ್ನು ದುರುಪಯೋಗಪಡಿಸಿಕೊಂಡು ಶರಣರಿಗೆ ದಾಸೋಹ ಮಾಡಿಸಿದರು. ಬಸವಣ್ಣನವರು ಸುಳ್ಳುಗಾರರು, ಕೊಲೆಗಾರರು ಎಂಬರ್ಥದ ಆರೋಪಗಳನ್ನು ಮಾಡಿರುವುದು ಗಂಭೀರವಾದ ವಿಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕೆಯ ಸಂಪಾದಕೀಯ ಜವಾಬ್ದಾರಿ ಹೊಂದಿರುವ ವ್ಯಕ್ತಿಯೊಬ್ಬರು ಮಾಧ್ಯಮ ಸಂಸ್ಥೆಯ ಹೆಸರಿನಲ್ಲಿ ಪ್ರಸಾರವಾಗುವ ಇಂತಹ ಸೂಕ್ಷ್ಮವಿಚಾರಗಳ ಬಗ್ಗೆ ತಮ್ಮ ಜವಾಬ್ದಾರಿಯನ್ನು ಸ್ಪಷ್ಟಪಡಿಸಬೇಕಾಗಿದೆ. ಈ ಕಾರ್ಯಕ್ರಮದ ಆಯ್ಕೆ ಮತ್ತು ಪ್ರಸಾರದಲ್ಲಿ ಅವರ ನೇರ ಅಥವಾ ಪರೋಕ್ಷ ಪಾತ್ರವೇನು? ಸಂಸ್ಥೆಯ ಸಂಪಾದಕೀಯ ನೀತಿ ಏನು? ಇಂತಹ ಆರೋಪಗಳಿಗೆ ಅವಕಾಶ ನೀಡುವ ಮೊದಲು ಯಾವುದೇ ಪರಿಶೀಲನೆ ನಡೆದಿತ್ತೇ? ಎಂಬ ಪ್ರಶ್ನೆಗಳಿಗೆ ಅವರು ಉತ್ತರ ನೀಡುವುದು ಅವರ ನೈತಿಕ ಮತ್ತು ಸಂಪಾದಕೀಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಬಸವಣ್ಣನವರ ಕುರಿತು ರವಿ ಹಂಜ್ ಅವರು ಮಾಡಿರುವ ಪ್ರತಿಯೊಂದು ಆರೋಪಕ್ಕೂ ಐತಿಹಾಸಿಕ ದಾಖಲೆ ಮತ್ತು ಸಂಶೋಧನಾ ಅಧಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಸೂಚಿಸಬೇಕು. ಮಾಧ್ಯಮ ಆಡಳಿತ ಮಂಡಳಿ ಮತ್ತು ಕಾರ್ಯಕ್ರಮದ ಸಂಪಾದಕೀಯ ನಿರ್ವಹಣೆಯ ಜವಾಬ್ದಾರಿ ಹೊಂದಿರುವವರ ಪಾತ್ರದ ಕುರಿತು ಸ್ವತಂತ್ರ ತನಿಖೆ ನಡೆಸಬೇಕು.

ರವಿ ಹಂಜ್ ಅವರು ಆಧಾರರಹಿತ ಆರೋಪಗಳನ್ನು ಮಾಡಿರುವುದು ದೃಢಪಟ್ಟಲ್ಲಿ ಅವರ ವಿರುದ್ದ ಕಾನೂನು ಮತ್ತು ಸಂಬಂಧಪಟ್ಟ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಬೇಕು. ಬಸವತತ್ವದ ವಿದ್ವಾಂಸರು, ಇತಿಹಾಸಕಾರರು ಮತ್ತು ಶರಣ ಸಾಹಿತ್ಯದ ಸಂಶೋಧಕರಿಗೆ ಅದೇ ಮಾಧ್ಯಮದಲ್ಲಿ ಸಮಾನ ಅವಕಾಶ ನೀಡಿ ಆರೋಪಗಳಿಗೆ ಆಕರ ಸಹಿತ ಉತ್ತರ ನೀಡಲು ಅವಕಾಶ ಕಲ್ಪಿಸಬೇಕು ಎಂದು ಗಂಗಾಧರಪ್ಪ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಎಸ್‌. ಪಿ. ಮುಖಂಡ ಕೆ.ಟಿ. ರಾಧಾಕೃಷ್ಣ, ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರಾದ ಬಾಜೂರು ಚನ್ನಪ್ಪ ಶಿವಮೂರ್ತಿ, ಬಸವರಾಜ, ಗಾಯತ್ರಿ, ಸೌಮ್ಯಾ ನಾಗರಾಜ, ಪ್ರೇಮಾ, ಚಂದ್ರಶೇಖರ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಟನಾ ಮೆರವಣಿಗೆ:
ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ಟರ ವಿರುದ್ಧ ತೀವ್ರ ಕ್ರಮಕೈಕೊಳ್ಳಬೇಕೆಂದು ಆಗ್ರಹಿಸಿ ಜಿಲ್ಲೆಯ ಲಿಂಗಾಯತ ಮತ್ತು ಬಸವಪರ ಸಂಘಟನೆಗಳ ವತಿಯಿಂದ ಶನಿವಾರ ತಾಲೂಕು ಕಚೇರಿಯಿಂದ ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆಯ ಮೂಲಕ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕಡೂರು ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಚಿಕ್ಕಮಗಳೂರು ಬಸವತತ್ವ ಮಂದಿರದ ಬಸವ ಮರುಳಸಿದ್ದ ಸ್ವಾಮೀಜಿ, ಜಯ ಬಸವಾನಂದ ಸ್ವಾಮೀಜಿ, ಲಿಂಗಾಯತ ಸಾಧು ಸಮಾಜದ ನಿರಂಜನಮೂರ್ತಿ, ರಾಷ್ಟ್ರೀಯ ಬಸವದಳದ ಶಿವಾನಂದ ಗದ್ದೆಮನೆ, ಬಸವರಾಜ ಎಚ್.ಬಿ., ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಗಂಗಾಧರಪ್ಪ, ಮಹಿಳಾ ಘಟಕದ ಗಾಯತ್ರಮ್ಮ, ಚಿಕ್ಕಮಗಳೂರು ಲೋಕೇಶ, ತರೀಕೆರೆ ಚಂದ್ರಶೇಖರ, ಕಡೂರು ಗಣೇಶ, ಉದ್ಯಮಿ ಚಿದಾನಂದ, ಬಸವಪರ ಸಂಘಟನೆಗಳು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
Leave a comment

Leave a Reply

Your email address will not be published. Required fields are marked *