ಕಲಬುರಗಿಯಲ್ಲಿ ಮನಸೆಳೆದ ಇವ ನಮ್ಮವ ಬಸವ ಸಂಸ್ಕೃತಿ ಉತ್ಸವ

ದೇವದಾಸಿ ಸಮುದಾಯದ ಯುವ ಜೋಡಿಗಳ ಸರಳ‌ ವಚನ ಮಾಂಗಲ್ಯ

ಕಲಬುರಗಿ:

ಬಸವ ಧರ್ಮ ಮನುಷ್ಯತ್ವದ ಧರ್ಮ. ಇವ ನಮ್ಮವ ಬಸವ ಧರ್ಮದ ಅಸ್ಮಿತೆ ಎಂದು ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಭಿಪ್ರಾಯಪಟ್ಟರು.

ಡಾ. ಶ್ರೀಶೈಲ ಮಸೂತೆ ಅವರ ಕುಟುಂಬದ ಹಿರಿಯರ ಲಿಂಗೈಕ್ಯ ಸಂಸ್ಮರಣೆ ಸ್ಮರಣಾರ್ಥವಾಗಿ ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಇವ ನಮ್ಮವ ಬಸವ ಸಂಸ್ಕೃತಿ ಉತ್ಸವ ಕಲಬುರಗಿ ಉದ್ಘಾಟಿಸಿ ಮಾತನಾಡುತ್ತ, ಇವ ನಮ್ಮವ ಕೇವಲ ಮಾತಾಗಬಾರದು.  ನಡೆಯಾಗಬೇಕು. ಬಸವಣ್ಣನ ಬಗ್ಗೆ ಭಾಷಣ ಮಾಡುವುದಲ್ಲ. ಬಸವಣ್ಣ ನಮ್ಮ ಬದುಕಾಗಬೇಕು ಎಂದು ಹೇಳಿದರು.

ಡಾ. ಶ್ರೀಶೈಲ ಮಸೂತೆ ಬರೆದ ‘ಇವ ನಮ್ಮವ’ ಕೃತಿ ಬಿಡುಗಡೆ ಮಾಡಿ ಅನುಭಾವದ ನುಡಿಗಳನ್ನಾಡಿದ ಬಸವತತ್ವ ಚಿಂತಕ ರಂಜಾನ್ ದರ್ಗಾ, ಸಾವಿರಾರು ವರ್ಷಗಳ  ಹಿಂದೆ ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಇರಲಿಲ್ಲ. ಲಿಂಗಾಯತ ಮಠಗಳು ಪ್ರತಿಯೊಬ್ಬರಿಗೂ ಶಿಕ್ಷಣ ಕೊಟ್ಟಿವೆ. ಶರಣರು ಮಠಗಳನ್ನು ಕಟ್ಟಿದವರಲ್ಲ. ಆದರೆ ಕಾಲದ ಒತ್ತಡದಲ್ಲಿ ಮಠಗಳು ಹುಟ್ಟಿಕೊಂಡವು. ಮನುಷ್ಯನ ಬದುಕಿಗೆ ಶರಣರು ಘನತೆ ತಂದು ಕೊಟ್ಟರು ಎಂದರು.

ಹದಿನಾರು ಸಾವಿರ ಜನ ಪಣ್ಯಾಂಗನೆಯರನ್ನು ಪುಣ್ಯಾಂಗನೆಯರನ್ನಾಗಿ ಮಾಡುವ ಮೂಲಕ ವೇಶ್ಯಾವೃತಿಗೆ ಇತಿಶ್ರೀ ಹಾಡಿದ ಬಸವಣ್ಣನವರು ಲೋಕದ ಸಕಲ ಭವ ಬಂಧನಗಳನ್ನು ಕಳಚಿದರು. ಹೀಗಾಗಿ ಬಸವಣ್ಣ ಕೇವಲ ವ್ಯಕ್ತಿಯಲ್ಲ.‌ ಅವರೊಂದು ಶಕ್ತಿ. ಅದೊಂದು ಪ್ರಜ್ಞೆ ಎಂದು ಕೊಂಡಾಡಿದರು.

ಎಲ್ಲರನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಲಿಂಗಾಯತವು ಒಂದು ಧರ್ಮ. ಆದರೆ ಲಿಂಗಾಯತ ಜಾತಿಯಾಗಿ ಉಳಿದಿದೆ. ಇದು ಧರ್ಮವಾಗಿ ಜಗತ್ತಿಗೆ ಬೆಳಕು ನೀಡಬೇಕು. ವಚನಗಳ ವೈರಿಗಳೆ ವಚನಗಳ ಶಕ್ತಿ ಹರಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ಮಲಗಿದರೆ ಆಗುವುದಿಲ್ಲ. ಎದ್ದೇಳಬೇಕು. ಕಮ್ಯೂನಿಸಂ ಅಂದರೆ ಸಂಕುಲ. ಬಸವಣ್ಣನ ಅರ್ಥಶಾಸ್ತ್ರ ಬಿಟ್ಟು ಮಾರ್ಕ್ಸ್ ವಾದ ಇಲ್ಲ ಎಂದು ದರ್ಗಾ ಹೇಳಿದರು.

ಮುಖ್ಯ ಅತಿಥಿಯಿಯಾಗಿದ್ದ ಚಿಂತಕ ಪ್ರೊ. ಆರ್.ಕೆ. ಹುಡಗಿ ಮಾತನಾಡಿ, ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುವ ಶಕ್ತಿ ವಚನ ಸಾಹಿತ್ಯದಲ್ಲಿದೆ. ನಮ್ಮದು ಶ್ರಮ ಸಂಸ್ಕೃತಿ. ಪರಾವಲಂಬಿ ಜೀವಿಗಳು ಸ್ವಾವಲಂಬಿ ಜನರ ಮೇಲೆ ದಬ್ಬಾಳಿಕೆ ಮಾಡುವ ಪ್ರಕ್ರಿಯೆ ನಿರಂತರ ನಡೆಯುತ್ತಿದೆ. ಬುದ್ದ, ಬಸವ ಅಂಬೇಡ್ಕರ್ ನಮ್ಮ‌ ಬದುಕಿಗೆ ಘನತೆ ತಂದುಕೊಟ್ಟರು. ಭಾರತದ ಸಂವಿಧಾನ ಮನುಷ್ಯನ ಘನತೆಯನ್ನು ಸಂರಕ್ಷಣೆ ಮಾಡುತ್ತಿದೆ ಎಂದು ತಿಳಿಸಿದರು. ನಿವೃತ್ತ ತಹಸೀಲ್ದಾರ ಶಿವರುದ್ರಪ್ಪ ಎನ್.ಬಿ. ಮಾತನಾಡಿದರು.

ಇದೇ ವೇಳೆಯಲ್ಲಿ ಸದ್ಗುರು ಬಸವಪ್ರಭು ಮಹಾಸ್ವಾಮಿಗಳಿಗೆ ‘ಲಿಂಗಾನಂದಶ್ರೀ ಪ್ರಶಸ್ತಿ’, ಡಾ. ಸೀತವ್ವ ದುಂಡಪ್ಪ ಜೋಡಟ್ಟಿ ಅವರಿಗೆ ‘ಚಿನ್ಮೂಲಾದ್ರಿ ಚಿತ್ಕಳೆ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಸಿದ್ರಾಮಪ್ಪ ಧುಲಂಗೆ, ಲಿಂಗಾರತಿ ಅಲ್ಲಮಪ್ರಭು ನಾವದಗೆರೆ ಅವರಿಗೆ ಸನ್ಮಾನಿಸಲಾಯಿತು.

ದೇವದಾಸಿ ಸಮುದಾಯದ ಮೂರು ಜೋಡಿ ಯುವಕ ಯುವತಿಯರ ಸರಳ‌ ವಚನ ಮಾಂಗಲ್ಯ ಕಾರ್ಯಕ್ರಮ ನಡೆಯಿತು. ಪದವಿಪೂರ್ವದಿಂದ ಸ್ನಾತಕೋತ್ತರ ಪದವಿವರೆಗೆ ದೇವದಾಸಿ ಮಕ್ಕಳಿಗೆ ಶಿಕ್ಷಣದ ದತ್ತು ಸ್ವೀಕಾರ ಲೋಕಾರ್ಪಣೆ ಕಾರ್ಯಕ್ರಮ ಸಹ ನಡೆಯಿತು.

ಇಳಕಲ್ಲ ವಿಜಯಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತ ಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಿದ್ದರು.‌ ಗುಳೇದಗುಡ್ಡದ ಗುರುಸಿದ್ಧೇಶ್ವರ ಬೃಹನ್ಮಠದ ಜಗದ್ಗುರು ಬಸವರಾಜ ಪಟ್ಟಾದಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಚನ್ನಬಸವಾನಂದ ಸ್ವಾಮೀಜಿ, ಸಿದ್ಧಬಸವ ಕಬೀರ ಸ್ವಾಮೀಜಿ, ಮಾತೆ ಸತ್ಯದೇವಿ, ಮಾತೆ ಮಹಾನಂದ ತಾಯಿ,  ಪ್ರಭುಶ್ರೀ ತಾಯಿ ಸಮ್ಮುಖ ವಹಿಸಿದ್ದರು.‌

ಸಿದ್ಧರಾಮ ಬೆಲ್ದಾಳ ಶರಣರು ಅಧ್ಯಕ್ಷತೆ ವಹಿಸಿದ್ದರು. ಎಸ್.‌ ದಿವಾಕರ, ಸೂರ್ಯಕಾಂತ ಸೊನ್ನದ, ಸಂಗಮನಾಥ ರೇವತಗಾಂವ, ನಾಗೇಂದ್ರಪ್ಪ ನಿಂಬರ್ಗಿ ಇತರರಿದ್ದರು.

ಧರಣಿ ಅವರಿಂದ ವಚನ ನೃತ್ಯ ನಡೆಯಿತು. ವಿಜಯಲಕ್ಷ್ಮೀ ಕೆಂಗನಾಳ ಹಾಗೂ ಸಂಗಡಿಗರು ಇವ ನಮ್ಮವ ಸಮೂಹ ಗೀತೆ ಹಾಡಿದರು.‌‌ ನವಲಿಂಗ ಪಾಟೀಲ ನಿರೂಪಿಸಿದರು. ಡಾ. ಶ್ರೀಶೈಲ ಮಸೂತೆ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು.

ನಾಡಿನ ಅನೇಕ ಕಡೆಗಳಿಂದ ಆಗಮಿಸಿದ್ದ ಬಸವಾನುಯಾಯಿಗಳು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
2 Comments
  • ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ

  • ತುಂಬಾ ಒಳ್ಳೆಯ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿದೆ ವಿಶ್ವಗುರು ಬಸವಣ್ಣನವರು ನಿಮಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ನೀಡಲಿ ಶರಣು ಶರಣಾರ್ಥಿಗಳು 🙏🙏🙏💐💐💐

Leave a Reply

Your email address will not be published. Required fields are marked *