ಬಸವ ಜಯಂತಿ: ಚಾಮರಾಜನಗರದಲ್ಲಿ ಸಾವಿರಾರು ಬಸವ ಭಕ್ತರ ಸಂಭ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಸರ್ಕಾರ ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಶ್ಲಾಘನೀಯ: ಸುತ್ತೂರು ಸ್ವಾಮೀಜಿ

ಚಾಮರಾಜನಗರ

ಸಿದ್ದಮಲ್ಲೇಶ್ವರ ವಿರಕ್ತ ಮಠ ಹಾಗೂ ಬಸವ ಬಳಗಗಳ ಒಕ್ಕೂಟದಿಂದ ಜಿಲ್ಲಾಮಟ್ಟದ ಬಸವ ಜಯಂತ್ಯುತ್ಸವ ನಗರದಲ್ಲಿ ಅದ್ದೂರಿಯಾಗಿ ನಡೆಯಿತು.

ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸಾವಿರಾರು ಮಂದಿ ಭಕ್ತರು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಲ್ಲೆಡೆ ಬಸವೇಶ್ವರರ ಸ್ಮರಣೆ ನಡೆದು, ವರ್ಣಚಿತ್ರಗಳು ರಾರಾಜಿಸಿದವು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಬಸವೇಶ್ವರ ಪುತ್ಥಳಿಗೆ ಸುತ್ತೂರು ಶ್ರೀಗಳು, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಪುಷ್ಪ ನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

652 ವಾಹನಗಳಲ್ಲಿ ಬಸದೇಶ್ವರರ ಚಿತ್ರ

ಜಿಲ್ಲಾಡಳಿತ ಭವನದಿಂದ ಹೊರಟ ಬಸವಣ್ಣನ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಸಿದ್ದಮಲ್ಲೇಶ್ವರ ವಿರಕ್ತ ಮಠದಲ್ಲಿ ಕೊನೆಗೊಂಡಿತು.

ಮೆರವಣಿಯಲ್ಲಿ ಚಾಮರಾಜನಗರ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು. ಮಹಿಳೆಯರ ಚಂಡೆವಾದ್ಯ ಗಾರುಡಿ ಗೊಂಬೆ, ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ಗೊರವರ ಕುಣಿತ, ನಂದಿಧ್ವಜ ಮಂಗಳವಾದ್ಯ ಬ್ಯಾಂಡ್‌ ಸೆಟ್ ಸೇರಿದಂತೆ 10ಕ್ಕೂ ಹೆಚ್ಚು ಕಲಾತಂಡಗಳ ಕಲಾವಿದರು ಮೆರವಣಿಗೆಯುದ್ದಕ್ಕೂ ತಮ್ಮ ಕಲೆ ಪ್ರರ್ದಶನ ಮಾಡುವ ಮೂಲಕ ಮೆರಗು ತಂದರು.

ಮೆರವಣಿಗೆಯಲ್ಲಿ 652ಕ್ಕೂ ಹೆಚ್ಚು ವಾಹನಗಳಲ್ಲಿ ಬಸದೇಶ್ವರರ ವರ್ಣಚಿತ್ರಗಳನ್ನು ಇಡಲಾಗಿತು. ಜೋಡೆತ್ತುಗಳೊಂದಿಗೆ ಕೆಲವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ನೂರಾರು ಯುವಕರು ಬ್ಯಾಂಡ್‌ ಸೆಟ್ ಸದ್ದಿಗೆ ಕುಣಿದು ಕುಪ್ಪಳಿಸಿದರು. ಬಸವೇಶ್ವರರ ಪರವಾಗಿ ಜಯಘೋಷಗಳನ್ನು ಕೂಗುವ ಮೂಲಕ ಸಂಭ್ರಮಿಸಿದರು.

ಪಾನಕ- ಮಜ್ಜಿಗೆ ವಿತರಣೆ

ನಗರದ ಜಿಲ್ಲಾಸತ್ರೆಯ ಮುಂಭಾಗದಲ್ಲಿ ಭಾರತೀಯ ಜನತಾ ಪಾರ್ಟಿಯ ರೈತ ಮುಖಂಡ ಅಮ್ಮನಪುರ ಮಲ್ಲೇಶ್ ಹಾಗೂ ಸಮುದಾಯದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿಗೆ ಪಾನಕ, ಮಜ್ಜಿಗೆ ವಿತರಿಸಿದರು.

ಸಿದ್ದಮಲ್ಲೇಶ್ವರ ಸ್ವಾಮಿ ವಿರಕ್ತ ಮಠದ ಆವರಣದಲ್ಲಿ ಸಾವಿರಾರು ಭಕ್ತರಿಗೆ ಬೆಳಗ್ಗೆ ಉಪಹಾರ ಹಾಗೂ ಮಧ್ಯಾಹ್ನ ಅನ್ನ ದಾಸೋಹ ಮಾಡಲಾಗಿತ್ತು.

ಸಮಾರಂಭ

ಬಸವ ಜಯಂತ್ಯುತ್ಸವದ ಅಂಗವಾಗಿ ನಡೆದ ಸಮಾರಂಭವನ್ನು ಶಾಸಕ ಸಿ. ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಶ್ಲಾಘನೀಯ. ಸಮ ಸಮಾಜದ ಪರಿಕಲ್ಪನೆ ಕೊಟ್ಟು ಪ್ರತಿಯೊಂದು ಕಾಯಕಕ್ಕೂ ಮಹತ್ವ ನೀಡಿ, ಪ್ರತಿಯೊಬ್ಬರಿಗೂ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿದ 12ನೇ ಶತಮಾನದ ಬಸವಣ್ಣ ಹಾಗೂ ಶರಣರ ಆದರ್ಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, 12ನೇ ಶತಮಾನದ ಶ್ರೇಷ್ಠ ಸಮಾಜ ಸುಧಾರಕ ಬಸವಣ್ಣನವರು ಜಾತಿ, ಲಿಂಗ, ವರ್ಗ ತಾರತಮ್ಯವಿಲ್ಲದ ಸಮಾನತೆಯ ಸಮಾಜವನ್ನು
ನಿರ್ಮಿಸಲು ಶ್ರಮಿಸಿದರು ಎಂದರು.

ಬಸವಣ್ಣನ ಆದರ್ಶದ ಮಾರ್ಗದಲ್ಲಿ ನಮ್ಮ ಸರ್ಕಾರ ನಡೆಯುತ್ತಿದ್ದು, 12ನೇ ಶರಣರು ಹೇಗೆ ದೀನ ದಲಿತರಿಗೆ, ನೊಂದವರಿಗೆ, ಶೋಷಿತರಿಗೆ ನೆರವಾದರೋ ಅದೇ ಮಾರ್ಗದಲ್ಲಿ ನಮ್ಮ ಬಡವರ ನೊಂದವರ ಪರ ಕೆಲಸ ಮಾಡುತ್ತಿದೆ ಎಂದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಸವಣ್ಣನವರು 12ನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದಿದರು. ಎಲ್ಲರಿಗೂ ಆರ್ಥವಾಗುವ ರೀತಿಯಲ್ಲಿ ಸರಳವಾಗಿ ವಚನಗಳನ್ನು ರಚನೆ ಮಾಡಿ ಸಮಾಜದ ಅಂಕುಡೊಂಕುಗಳ ವಿರುದ್ಧ ಹೋರಾಡಿದರು ಎಂದು ಬಣ್ಣಿಸಿದರು.

ಇದೇ ವೇಳೆ ಶಾಸಕ ಎಂ. ಗಣೇಶಪ್ರಸಾದ್ ಮಾತನಾಡಿ, ಪ್ರತಿಯೊಬ್ಬರು ಬಸವಣ್ಣನವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಶಾಸಕರಾದ ಎಂ.ಆರ್. ಮಂಜುನಾಥ್ ಇತರ ಗಣ್ಯರು ಮಾತ ನಾಡಿದರು. ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತ ಮಠದ ಮಠಾಧ್ಯಕ್ಷ ಚನ್ನಬಸವ ಸ್ವಾಮೀಜಿ ದಿವ್ಯ ನೇತೃತ್ವ ವಹಿಸಿದ್ದರು, ಮರಿಯಾಲದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.

ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಪಿ. ಮರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮೆರವಣಿಗೆಯಲ್ಲಿ ಮಾಜಿ ಶಾಸಕಿ ಪರಿಮಳ ನಾಗಪ್ಪ, ಕೆ.ಆರ್. ಮಲ್ಲಿಕಾರ್ಜುನಪ್ಪ, ಸಿ.ಎಸ್. ನಿರಂಜನ್ ಕುಮಾರ್, ಜಿ.ಎನ್. ನಂಜುಂಡ ಸ್ವಾಮಿ, ಜಿಲ್ಲಾಧಿಕಾರಿ ಶ್ರೀರೂಪಾ, ಜಿ.ಪಂ. ಸಿಇಒ ಮೋನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಜಿಲ್ಲೆಯ ಮಠಾಧೀಶರುಗಳು, ಸಾವಿರಾರು ಬಸವತತ್ವ ಅನುಯಾಯಿಗಳು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *