ಸಾಣೇಹಳ್ಳಿ :
ನಾಟಕೋತ್ಸವಗಳು ಕೇವಲ ಸಾಂಕೇತಿಕವಾಗಿರದೆ, ಅರ್ಥಪೂರ್ಣವಾಗಿ ಮೂಡಿಬರಬೇಕು. ರಂಗಭೂಮಿ ಎಂಬುದು ಕಲಾವಿದನಿಗೆ ಕೇವಲ ಅಭಿನಯವನ್ನಷ್ಟೇ ಕಲಿಸಿಕೊಡುವುದಿಲ್ಲ, ಬದಲಿಗೆ ಅದು ಬದುಕಿನ ಸಂಸ್ಕೃತಿ, ಸಂಸ್ಕಾರ ಹಾಗೂ ಬದುಕುವ ವಿಧಾನವನ್ನು ಕಲಿಸುತ್ತದೆ ಎಂದು ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಇಲ್ಲಿನ ಎಸ್ಸೆಸ್ ರಂಗಮಂದಿರದಲ್ಲಿ ಕಳೆದ ಐದು ದಿನಗಳಿಂದ ಯಶಸ್ವಿಯಾಗಿ ನಡೆದ ಶಿವಕುಮಾರ ರಂಗಶಾಲೆಯ ರಂಗಶಾಲಾ ನಾಟಕೋತ್ಸವದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಳೆದ 18 ವರ್ಷಗಳಿಂದ ನಿರಂತರವಾಗಿ ವರ್ಷಕ್ಕೆ ಕನಿಷ್ಠ 4 ನಾಟಕಗಳನ್ನು ಪ್ರಯೋಗಿಸುತ್ತಾ ಬರಲಾಗಿದ್ದು, ಈ ವರ್ಷ ವಿಶೇಷವಾಗಿ ಐದು ನಾಟಕಗಳ ಮರುಪ್ರಯೋಗದೊಂದಿಗೆ ನಾಟಕೋತ್ಸವ ಹಮ್ಮಿಕೊಳ್ಳಲಾಗಿತ್ತು ಯಶಸ್ವಿಯಾಗಿ ನೆರವೇರಿತು.
“ಇಲ್ಲಿನ ಸುಸಜ್ಜಿತ ರಂಗಮಂದಿರದಲ್ಲಿ ನಟಿಸುವುದು ಸುಲಭ. ಆದರೆ ನಿಜವಾದ ಪರೀಕ್ಷೆ ಆರಂಭವಾಗುವುದೇ ‘ಶಿವಸಂಚಾರ’ದ ಪ್ರವಾಸದಲ್ಲಿ. ಅಲ್ಲಿ ಎದುರಾಗುವ ಸೌಲಭ್ಯಗಳ ಕೊರತೆಯ ನಡುವೆಯೂ ಪ್ರೇಕ್ಷಕರನ್ನು ಸೆಳೆಯುವ ಕಲೆ ಕಲಾವಿದನಿಗೆ ಸಿದ್ಧಿಸಬೇಕು.
ಸಾರ್ವಜನಿಕರು ಕಲಾವಿದರ ನೈತಿಕತೆ ಮತ್ತು ಸಾಮಾಜಿಕ ಪರಿಜ್ಞಾನವನ್ನು ಸೂಕ್ಷ್ಮವಾಗಿ ಗಮನಿಸುವುದರಿಂದ, ಸಾರ್ವಜನಿಕ ಜೀವನದಲ್ಲಿ ನಮ್ಮ ನಡವಳಿಕೆ ಅತ್ಯಂತ ಮುಖ್ಯ” ಎಂದು ಕಲಾವಿದರಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಂಗ ಶಿಕ್ಷಕ ವೆಂಕಟೇಶ ಮಾತನಾಡಿ, “ವಿದ್ಯಾರ್ಥಿಗಳು ನೀಡಿದ ಪ್ರದರ್ಶನಗಳು ಕೇವಲ ಸಾಧಾರಣ ನಾಟಕಗಳಾಗಿರದೆ, ಪ್ರಬುದ್ಧ ರೆಪರ್ಟರಿ ಮಟ್ಟದ ಪ್ರದರ್ಶನಗಳಾಗಿದ್ದವು. ಇಂದಿನ ಬಹುತೇಕ ಶಿಕ್ಷಣ ಸಂಸ್ಥೆಗಳು ಕಾರ್ಖಾನೆಗಳಂತೆ ಕೇವಲ ‘ಉತ್ಪನ್ನ’ಗಳನ್ನು ತಯಾರಿಸುತ್ತಿರುವಾಗ, ಶಿವಕುಮಾರ ರಂಗಶಾಲೆಯು ಸಮಾಜಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಸಂವೇದನಾಶೀಲ ವ್ಯಕ್ತಿಗಳನ್ನು ಹಾಗೂ ಪ್ರಜ್ಞಾವಂತ ನಾಗರಿಕರನ್ನು ರೂಪಿಸುತ್ತಿದೆ” ಎಂದು ಶ್ಲಾಘಿಸಿದರು.
ಹೊಸದುರ್ಗದ ಜೀವವಿಮೆ ಅಧಿಕಾರಿ ನವೀನಕುಮಾರ ಮಾತನಾಡಿ, “ಭಾವನೆಗಳ ಸಂಸ್ಕಾರವೇ ನಿಜವಾದ ಶಿಕ್ಷಣ. ಕೇವಲ ದೊಡ್ಡ ನಟರಾಗುವುದು ಅಥವಾ ಸಿನಿಮಾ-ಸೀರಿಯಲ್‌ಗಳಲ್ಲಿ ಮಿಂಚುವುದಷ್ಟೇ ಶಿಕ್ಷಣವಲ್ಲ; ಅದಕ್ಕಿಂತ ಮಿಗಿಲಾಗಿ ಪರಿಪೂರ್ಣ ಮನುಷ್ಯರಾಗಿ ಸಮಾಜಕ್ಕೆ ಕೊಡುಗೆ ನೀಡುವುದು ಮುಖ್ಯ. ರಂಗಭೂಮಿ ಬದುಕಿನ ಎಲ್ಲ ಪಾಠಗಳನ್ನು ಅಚ್ಚುಕಟ್ಟಾಗಿ ಕಲಿಸಿಕೊಡುತ್ತದೆ” ಎಂದರು.
ರಂಗಶಾಲೆಯ ಪ್ರಾಚಾರ್ಯ ರಾಘು ಪುರಪ್ಪೆಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಧಾರ್ಮಿಕ ಮಠದ ಆಶ್ರಯದಲ್ಲಿದ್ದರೂ ಪೂಜ್ಯ ಪಂಡಿತಾರಾಧ್ಯ ಶ್ರೀಗಳು ಆಧುನಿಕ ರಂಗಭೂಮಿಯ ಪಠ್ಯಕ್ರಮಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು ಇಡೀ ವರ್ಷದ ಯಶಸ್ಸಿಗೆ ಕಾರಣ ಎಂದರು.
ಆರಂಭದಲ್ಲಿ ವಿದ್ಯಾರ್ಥಿಗಳ ಕೊರತೆ ಇದ್ದಾಗ ರಾಜ್ಯಾದ್ಯಂತ ಮರು ಪ್ರಕಟಣೆ ನೀಡಿ 18 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ರಾಜ್ಯ ಹಾಗೂ ಹೊರರಾಜ್ಯಗಳ ಒಟ್ಟು 17 ಪ್ರಮುಖ ರಂಗತಜ್ಞರು ವಿದ್ಯಾರ್ಥಿಗಳಿಗೆ ಲೈಟಿಂಗ್, ರಂಗವಿನ್ಯಾಸ, ರಂಗಸಂಗೀತ, ನಾಟ್ಯಶಾಸ್ತ್ರ, ಪಾಶ್ಚಾತ್ಯ ರಂಗಭೂಮಿ ಸಿದ್ಧಾಂತ ಹಾಗೂ ಕೇರಳದ ಪ್ರಸಿದ್ಧ ಸಮರ ಕಲೆ ‘ಕಲರಿಪಯಟ್ಟು’ ಮತ್ತು ‘ಯಕ್ಷಗಾನ’ದ ವಿಶೇಷ ತರಬೇತಿ ನೀಡಿದ್ದಾರೆ ಎಂದರು.

ಸಮಾರೋಪದ ಅಂಗವಾಗಿ ಚಂದ್ರಶೇಖರ ವಸ್ತ್ರದ ಮತ್ತು ಜಿ.ಹೆಚ್. ಹನ್ನೆರಡುಮಠ ಅವರ ರಚನೆ ಹಾಗೂ ಮಹಾಂತೇಶ ರಾಮದುರ್ಗ ನಿರ್ದೇಶನದ, ಶ್ರೀ ಶಿವಕುಮಾರ ರಂಗಶಾಲಾ ವಿದ್ಯಾರ್ಥಿಗಳ ಅಭಿನಯದ ‘ಕಾಯಕಯೋಗಿ ನುಲಿಯ ಚಂದಯ್ಯ’ ನಾಟಕ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಕೊನೆಯಲ್ಲಿ ನಾಟಕೋತ್ಸವದಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರನ್ನು ಗೌರವಿಸಲಾಯಿತು. ವೇದಿಕೆಯ ಮೇಲೆ ರಂಗಶಾಲಾ ಶಿಕ್ಷಕಿ ಸಂಗೀತ ಬಿಡೆ ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa
