ಬಸವತತ್ವ ದರ್ಶನ ಪ್ರವಚನ: ವಚನಗಳೇ ಲಿಂಗಾಯತ ಧರ್ಮದ ಮೂಲ ಗ್ರಂಥ

ಶರಣು ಶಿಣ್ಣೂರ್
ಶರಣು ಶಿಣ್ಣೂರ್

(ಕಲಬುರ್ಗಿಲ್ಲಿ ನಡೆಯುತ್ತಿರುವ  893ನೇ ಬಸವ ಜಯಂತಿ ಅಂಗವಾಗಿ ‘ಬಸವತತ್ವ ದರ್ಶನ ಪ್ರವಚನ’ ಮುಖ್ಯಾಂಶಗಳು)

ದಿನಾಂಕ: 12 ಏಪ್ರಿಲ್ 2026

ಪ್ರವಚನಕಾರರು:

ಪೂಜ್ಯ ಬಸವೇಶ್ವರಿ ಮಾತಾಜಿ, ಬಸವಧಾಮ, ಅತ್ತಿವೇರಿ

ಸ್ಥಳ: ಬಸವ ಮಂಟಪ, ಮಾಕಾ ಲೇಔಟ್‌, ಕಲಬುರಗಿ

ಆಯೋಜನೆ: ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ

ಇಂದಿನ ಪ್ರವಚನದಲ್ಲಿ ಪ್ರವಚನಕಾರರು ಬಸವ ತತ್ವದ ಆಳವಾದ ಅರ್ಥವನ್ನು ಮನಮುಟ್ಟುವಂತೆ ವಿವರಿಸಿದರು. ಪ್ರವಚನದ ಆರಂಭದಲ್ಲಿ ಅನುಭವ ಮಂಟಪವು ಜಾತಿ, ಲಿಂಗ, ವರ್ಗ ಭೇದವಿಲ್ಲದೆ ಎಲ್ಲರಿಗೂ ಮುಕ್ತವಾಗಿದ್ದ ಸಮಾನತೆಯ ವೇದಿಕೆ ಎಂಬುದನ್ನು ಪುನರುಚ್ಚರಿಸಲಾಯಿತು.

ಎಲ್ಲಾ ಕಾಯಕ ಶರಣರ ವಚನಗಳೇ ಲಿಂಗಾಯತ ಧರ್ಮದ ಮೂಲ ಗ್ರಂಥಗಳಾಗಿವೆ, ಕೇವಲ ಬಸವಣ್ಣನವರ ವಚನಗಳಿಗೆ ಮಾತ್ರ ಸೀಮಿತವಲ್ಲ ಎಂದು ಸ್ಪಷ್ಟಪಡಿಸಿದರು. ದೇಶದ ಸಂವಿಧಾನವು ಸಮಾನತೆ ಸಾರಿದಂತೆ, 12ನೇ ಶತಮಾನದಲ್ಲಿಯೇ ಅನುಭವ ಮಂಟಪವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಂಡಿತ್ತು ಎಂದು ಹೇಳಿದರು.

ಬಸವಣ್ಣನವರು “ಜ್ಯೋತಿ ಮುಟ್ಟಿ ಜ್ಯೋತಿಯಾಗುವ” ತತ್ವವನ್ನು ನೀಡಿದ್ದು, ಇದರಿಂದ ಪ್ರೇರಿತರಾಗಿ ದೇಶ-ವಿದೇಶಗಳಿಂದ ಎಲ್ಲ ವರ್ಗದ ಜನರು ಕಲ್ಯಾಣಕ್ಕೆ ಆಗಮಿಸುತ್ತಿದ್ದರು. ತಪ್ಪುಗಳನ್ನು ದಂಡಿಸುವ ಬದಲು ತಿದ್ದುವ ಮಾತೃಗುಣ ಬಸವಣ್ಣನವರಲ್ಲಿ ಇತ್ತು.

ಜೋಳಕ್ಕೆ ಫಕೀರವಾದ ಕಥೆ, ಬದನೆಕಾಯಿ ಲಿಂಗವಾಗಿ ಕಟ್ಟಿಕೊಂಡು ಬಂದ ನಾಸ್ತಿಕರ ಘಟನೆ ಮತ್ತು ಅದಕ್ಕೆ ಬಸವಣ್ಣನವರು ನೀಡಿದ ಮಾನವೀಯ ಸ್ಪಂದನೆಗಳನ್ನು ಉದಾಹರಿಸಿ, ಮನ ಪರಿವರ್ತನೆ ಬಹಳ ಮುಖ್ಯ ಎಂಬುದನ್ನು ವಿವರಿಸಿದರು.

ಮುಂದುವರೆದು, ಕಳ್ಳನನ್ನೂ ಶರಣನನ್ನಾಗಿ ಪರಿವರ್ತಿಸಿದ ಬಸವಣ್ಣನವರ ಉದಾತ್ತತೆ, ಕಲ್ಲು-ಸುಣ್ಣವನ್ನು ಪವಿತ್ರವಾಗಿ ಪರಿವರ್ತಿಸಿದ ಮನೋಭಾವ, ಹಾಗೂ ಕಳ್ಳತನ ಮಾಡಿದವರಿಗೂ ಮಾನವೀಯತೆಯಿಂದ ಸ್ಪಂದಿಸಿದ ಘಟನೆಗಳನ್ನು ವಿವರಿಸಿ, ಇದು ಮತಾಂತರವಲ್ಲ, ಮಾನಸಾಂತರ ಎಂಬುದನ್ನು ಒತ್ತಿ ಹೇಳಿದರು. ಕಿನ್ನರಿ ಬೊಮ್ಮಯ್ಯನಿಗೆ ಮಾಡಿದ ದಾಸೋಹ, ಅಲ್ಲಮಪ್ರಭುಗಳ “ದೇವನಾಗಲುಬಹುದು, ಬಸವಣ್ಣನಾಗಲು ಬಾರದಯ್ಯಾ” ಎಂಬ ವಚನದ ಉಲ್ಲೇಖದಿಂದ ಬಸವಣ್ಣನವರ ಮಹತ್ವವನ್ನು ಬಿಂಬಿಸಿದರು.

ವೇಶ್ಯಾವೃತ್ತಿಯಲ್ಲಿದ್ದವರನ್ನೂ ಶರಣೆಯರಾಗಿ ಪರಿವರ್ತಿಸಿದ ಬಸವಣ್ಣನವರ ಸಮಾಜಶುದ್ಧಿ ಕಾರ್ಯ, ಸಮಾನತೆ ಮತ್ತು ಕರುಣೆಯ ಉದಾತ್ತ ಉದಾಹರಣೆ ಎಂದು ಹೇಳಿದರು. ಅನುಭವ ಮಂಟಪದಲ್ಲಿ ಎಲ್ಲ ವರ್ಗದ ಜನರು ತಮ್ಮ ಅನುಭವಗಳನ್ನು ಹಂಚಿಕೊಂಡು ಕಾಯಕದ ಮೂಲಕ ಜೀವನ ಸಾರ್ಥಕ ಮಾಡಿಕೊಂಡರು ಎಂಬುದನ್ನು ವಿವರಿಸಿದರು. “ಕಾಯಕವೇ ಕೈಲಾಸ” ಎಂಬ ತತ್ವದಂತೆ ಯಾವುದೇ ಕೆಲಸ ಶ್ರೇಷ್ಠ-ಕನಿಷ್ಠ ಎಂಬ ಭೇದವಿಲ್ಲ ಎಂದು ತಿಳಿಸಿದರು.

ಮಾನಸಿಕ ಸ್ವಾಸ್ಥ್ಯಕ್ಕಾಗಿ ಒಳ್ಳೆಯ ವಿಚಾರಗಳನ್ನು ಮಾತ್ರ ಮನಸ್ಸಿನಲ್ಲಿ ತುಂಬಬೇಕು, ದುಷ್ಪ್ರವೃತ್ತಿ ಮತ್ತು ದುಶ್ಚಟಗಳನ್ನು ದೂರವಿಡಬೇಕು ಎಂದು ಸಲಹೆ ನೀಡಿದರು. ಜೀವನದ ನಶ್ವರತೆಯನ್ನು ಉದಾಹರಣೆಗಳ ಮೂಲಕ ವಿವರಿಸಿ, ಸತ್ಯದ ಮಾರ್ಗದಲ್ಲಿ ನಡೆಯುವ ಅಗತ್ಯವನ್ನು ಒತ್ತಿ ಹೇಳಿದರು. “ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು” ಎಂದು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮಹತ್ವವನ್ನು ಉಲ್ಲೇಖಿಸಿದರು.

ಮಾತಿನ ಮಹತ್ವವನ್ನು ವಿವರಿಸಿ, “ಮಾತೆಂಬುದು ಜ್ಯೋತಿರ್ಲಿಂಗ” ಎಂಬ ಬಸವಣ್ಣನವರ ವಚನವನ್ನು ಉದಾಹರಿಸಿ, ಮಾತು ಮತ್ತು ಮನಸ್ಸು ಶುದ್ಧವಾಗಿರಬೇಕು ಎಂದು ಹೇಳಿದರು. ಶರಣ ಸರ್ವಜ್ಞರು ಮತ್ತು ಕಾಳವ್ವೆ ಶರಣೆಯರ ಉದಾಹರಣೆಗಳಿಂದ ಜೀವನದಲ್ಲಿ ನಿಯಂತ್ರಣ ಮತ್ತು ಮಿತಿಯ ಅಗತ್ಯವನ್ನು ವಿವರಿಸಿದರು. ಆಹಾರ, ಮಾತು ಮತ್ತು ವರ್ತನೆಯಲ್ಲಿ ಮಿತಿ ಇರಬೇಕು ಎಂಬ ಸಂದೇಶವನ್ನು ನೀಡಿದರು.

ಒಟ್ಟಾರೆ, ಈ ಪ್ರವಚನವು ಬಸವ ತತ್ವದ ಆಳವಾದ ಮೌಲ್ಯಗಳನ್ನು ಸಮಾಜಕ್ಕೆ ಪುನಃ ಪರಿಚಯಿಸುವಲ್ಲಿ ಮಹತ್ವದ ಪಾತ್ರವಹಿಸಿತು. ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಮತ್ತು ಸತ್ಯನಿಷ್ಠ ಜೀವನವೇ ನಿಜವಾದ ಮುಕ್ತಿಯ ಮಾರ್ಗ ಎಂಬ ಸಂದೇಶವನ್ನು ಸ್ಪಷ್ಟವಾಗಿ ಸಾರಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *

ಕಲಬುರ್ಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾಯಕ ಮಾಡುತ್ತಾರೆ.