‘ಮುಂದಿನ ಅಂತರಾಷ್ಟ್ರೀಯ ಬಸವ ಜಯಂತಿ ಉತ್ಸವವನ್ನು ಕೀನ್ಯಾ ದೇಶದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ’
ಬೆಂಗಳೂರು
ಬಸವ ತತ್ವವನ್ನು ವಿಶ್ವದ ತುಂಬಾ ಪಸರಿಸುವುದೇ ನಮ್ಮ ಮೂಲ ಆಶಯವಾಗಿದೆ ಎಂದು ಬೆಂಗಳೂರು ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ನುಡಿದರು.
ಮಾರಿಷಸ್ ದೇಶದ ಜೆ.ಎಸ್.ಎಸ್. ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಿದ 892ನೇ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿ, ಗುರುಬಸವ ಫೌಂಡೇಶನ್ ಹೈದರಾಬಾದ ಹಾಗೂ ಚನ್ನಬಸವೇಶ್ವರ ಸಾಮಾಜಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿತ್ತು.

ಅಂತರಾಷ್ಟ್ರೀಯ ಶಾಂತಿ ಯಾತ್ರೆ ಹಾಗೂ ಬಸವ ತತ್ವ ಸಮ್ಮೇಳನವನ್ನು ಪ್ರಥಮ ಬಾರಿಗೆ ನೇಪಾಳದಲ್ಲಿ, ದ್ವಿತೀಯ ಬಾರಿ ಭೂತಾನ್ ದೇಶದಲ್ಲಿ, ತೃತೀಯ ಶ್ರೀಲಂಕಾ, ನಾಲ್ಕನೇ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು.
ಇದೀಗ ಐದನೇ ಬಾರಿಗೆ ಬಸವ ಜಯಂತಿ ಹಾಗೂ ಬಸವ ತತ್ವ ಸಮ್ಮೇಳನವನ್ನು ಮಾರಿಷಸ್ ದೇಶದಲ್ಲಿ ಆಯೋಜಿಸಿ ಬಸವಾದಿ ಶರಣರ ವಚನ ಸಾಹಿತ್ಯದ ಪ್ರಚಾರ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಆರನೇ ಅಂತರಾಷ್ಟ್ರೀಯ ಬಸವ ಜಯಂತಿ ಉತ್ಸವವನ್ನು ಕೀನ್ಯಾ ದೇಶದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಪೂಜ್ಯ ಸ್ವಾಮೀಜಿ ತಿಳಿಸಿದ್ದಾರೆ.

ಜಗತ್ತಿಗೆ ಪ್ರಪ್ರಥಮ ಬಾರಿಗೆ ಅನುಭವ ಮಂಟಪ ಎಂಬ ಸಂಸತ್ತಿನ ಪರಿಕಲ್ಪನೆ ನೀಡಿದವರು ಬಸವಣ್ಣನವರು. ಕ್ರೈಸ್ತ, ಜೈನ, ಬೌದ್ಧ, ಸಿಖ್ ಮತ್ತು ಇಸ್ಲಾಂ ಧರ್ಮಿಯರು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನದಿಂದ ಪ್ರಚಾರ ಮಾಡಿ ವಿಶ್ವಧರ್ಮದ ಸ್ಥಾನ ಪಡೆದುಕೊಂಡಿವೆ. ಆದರೆ ಗುರುಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿ ಒಂಬೈನೂರು ವರ್ಷಗಳಾದರೂ ಭಾರತ ಬಿಟ್ಟು ಹೊರಗಡೆ ಪ್ರಚಾರ ಮಾಡಲು ಸಾಧ್ಯವಾಗಿಲ್ಲ.
ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ಬಸವ ಮೂರ್ತಿ ಸ್ಥಾಪನೆಯಾಯಿತು. ಭಾರತದ ಸಂಸತ್ತಿನಲ್ಲಿ ಬಸವ ಜಯಂತಿ ಆಚರಣೆ ಮಾಡಲಾಯಿತು. ಇದು ಸಂತಸದ ವಿಚಾರ. ಆದರೆ ವಿಶ್ವಮಟ್ಟದಲ್ಲಿ ಬಸವ ತತ್ವದ ಪ್ರಚಾರಕ್ಕೆ ಪೂಜ್ಯರು ಹಾಗೂ ಗೃಹಸ್ಥ ಜಂಗಮರು, ಶರಣ ಶರಣೆಯರು ಹೆಚ್ಚು ಹೆಚ್ಚು ತಯಾರಾಗಬೇಕು. ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಪೂಜ್ಯ ಮಾತೆ ಮಹಾದೇವಿ ತಾಯಿಯವರ ಸತ್ ಸಂಕಲ್ಪದಂತೆ ಬಸವಣ್ಣನವರ ಬೆಳಕು ವಿಶ್ವದ ತುಂಬಾ ಪಸರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾರಿಷಸ್ ಜೆ.ಎಸ್.ಎಸ್. ಅಕಾಡೆಮಿ ಉಪಕುಲಪತಿಗಳಾದ ಪ್ರವೀಣಕುಮಾರ ಮಹಾದೇವ ಮಾತನಾಡಿ, ಒಂಭತ್ತು ಶತಮಾನಗಳ ಹಿಂದೆ ಸ್ತ್ರೀಯರಿಗೆ ಸ್ವಾತಂತ್ರ್ಯ ನೀಡಲು ಹೋರಾಡಿದ ಬಸವೇಶ್ವರರು ಮನುಕುಲದ ಸುಧಾರಣೆಗಾಗಿ ಸಮಾನತೆ, ಕಾಯಕ, ದಾಸೋಹದ ಕುರಿತು ತಿಳಿಸಿದ್ದಾರೆ. ಅವರ ತತ್ವಾದರ್ಶಗಳು ವಿಶ್ವಕ್ಕೆ ಮಾದರಿ. ಅಂತೆಯೇ ಪೂಜ್ಯ ಚನ್ನಬಸವಾನಂದ ಶ್ರೀಗಳು ಮಾರಿಷಸ್ ವರೆಗೆ ಬಂದು ಬಸವ ತತ್ವದ ಪ್ರಚಾರ ಮಾಡಿ, ನಮಗೆಲ್ಲ ತಿಳಿಸಿದ್ದು ಅದ್ಭುತ ಕಾರ್ಯವಾಗಿದೆ ಎಂದರು.
ಮಾರಿಷಸ್ ಜೈನ ಸಮಾಜದ ಅಧ್ಯಕ್ಷ ನರೇಂದ್ರ ಜೈನ್ ಮಾತನಾಡಿ ಮಹಾವೀರರು ಅಹಿಂಸೆ ಕುರಿತು ತಿಳಿಸಿದಂತೆ ಬಸವಣ್ಣನವರು ಕಾಯಕ ದಾಸೋಹ ಆಚಾರ ವಿಚಾರಗಳ ಬಗ್ಗೆ ತಿಳಿಸಿದ್ದಾರೆ ಎಂದರು.

ವೇದಿಕೆ ಮೇಲೆ ಮಾರಿಷಸ್ ಇಂಡಿಯನ್ ಹೈಕಮಿಷನ್ ಕಾರ್ಯದರ್ಶಿ ಶೃತಿ ಪಾಠಕ್, ಮಾರಿಷಸ್ ಹಿಂದೂ ಭವನ ಮುಖ್ಯಸ್ಥೆ ಲಕ್ಷ್ಮೀ ದೇವಿ, ಮಾರಿಷಸ್ ಆರ್ಯಸಭಾ ಅಧ್ಯಕ್ಷ ಪ್ರವೀಣ, ಮಾರಿಷಸ್ ಖ್ಯಾತ ಉದ್ಯಮಿ ಡಾ. ಸುನೀಲ ಪಾಟೀಲ ಸೇರಿದಂತೆ ಸುಮಾರು 200 ಕ್ಕೂ ಅಧಿಕ ಮಾರಿಷಸ್ ದೇಶದ ಶರಣ ಶರಣೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಶಿವಶರಣಪ್ಪ ಪಾಟೀಲ ಹಾರೂರಗೇರಿ, ನಾಗನಾಥ ಪಾಟೀಲ ಹೈದರಾಬಾದ, ಹಿರಿಯೂರಿನ ತಾರಕನಾಥ ಸೇರಿದಂತೆ ಹಲವರಿದ್ದರು.
Very nice gurugale congratulations
I interested to say It is necessary to use lingayat dharma not veerashaivalingayat for basava tatwa followers & donot say it as”” hindu lingayat”
ಬಹಳ ಒಳ್ಳೇದಾಯಿತು ಗುರುಗಳೇ ಇದೆ ರೀತಿ ಜಗತ್ತಿನ ತುಂಬೆಲ್ಲ ಬಸವ ತತ್ವಗಳು ಹರಡಲಿ