ಬಳ್ಳಾರಿ:
ಕನ್ನೇರಿ ಸ್ವಾಮಿಯ ಬಸವಕಲ್ಯಾಣ ಪ್ರವೇಶ ನಿರ್ಬಂಧಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಬಸವದಳ ಹಾಗೂ ಬಸವಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಬುಧವಾರ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಮುಖರು ಸಲ್ಲಿಸಿದರು.
ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಯು ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತಗಳಿಗೆ ವ್ಯತಿರಿಕ್ತವಾದ, ನಾಗರಿಕ ಸಮಾಜ ತಲೆತೆಗ್ಗಿಸುವಂತಹ ಅಶ್ಲೀಲ ಪದಗಳನ್ನು ಉಪಯೋಗಿಸಿ ಬಸವಾದಿ ಶರಣರ ಅನುಯಾಯಿಗಳನ್ನು, ಮಠಾಧೀಶರುಗಳನ್ನು ನಿಂದಿಸುವ ಕಾರ್ಯ ಮಾಡುತ್ತಿದ್ದಾರೆ.
ಆ ಮೂಲಕ ಕರ್ನಾಟಕದಲ್ಲಿ ಅಶಾಂತಿಯನ್ನು ಹರಡಲು ಕಾರಣರಾಗಿದ್ದಾರೆ. ಅದೇ ರೀತಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್ ಸಹ ಸಮಾಜದ ಸ್ವಾಸ್ಥ್ಯಕ್ಕೆ ಭಂಗತರುವ ದ್ವೇಷಮಯ ಭಾಷಣಗಳನ್ನು ಮಾಡುವ ಮೂಲಕ ಇಬ್ಬರೂ ಸಂಘರ್ಷಕ್ಕೆ ಮತ್ತು ಉದ್ವಿಗ್ನತೆಗೆ ಕಾರಣರಾಗುತ್ತಿದ್ದಾರೆ.

ಕನ್ನೇರಿ ಸ್ವಾಮಿಗೆ ಈಗಾಗಲೇ ಸುಪ್ರೀಂಕೋರ್ಟ್ ನಾಗರಿಕ ಸಮಾಜದಲ್ಲಿ ತಾವು ವಾಸಿಸಲು ಯೋಗ್ಯರಲ್ಲವೆಂದು ಛೀಮಾರಿ ಹಾಕಿದ್ದರೂ, ಬಸವಾದಿ ಶರಣರ ಮತ್ತು ಬಸವತತ್ವ ನಿಷ್ಠರನ್ನು ಸದಾ ಕೆಣಕುವ ಹೇಳಿಕೆಗಳನ್ನು ನಿರಂತರ ಕೊಡುವ ಮೂಲಕ ಕರ್ನಾಟಕದ ಶಾಂತಿ, ನೆಮ್ಮದಿಗೆ ಕಂಟಕರಾಗಿದ್ದಾರೆ.
ಸಕಲ ಮಾನವ ಜನಾಂಗಕ್ಕೆ ಒಳಿತನ್ನು ಬಯಿಸಿದ ಬಸವಾದಿ ಶರಣರ ನಿಂದನೆಯನ್ನು ಬಸವಭಕ್ತರು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಕನ್ನೇರಿ ಸ್ವಾಮಿಯನ್ನು 28-06-2026 ಕ್ಕೆ ಬಸವಕಲ್ಯಾಣದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿ ಮುಂದೆ ಆಗುವ ಸಂಘರ್ಷ ಮತ್ತು ಅನಾಹುತಗಳನ್ನು ತಡೆಯಬೇಕೆಂದು ಆಗ್ರಹಿಸಿವೆ.
ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಂಘಟನೆಗಳ ಪ್ರಮುಖರಾದ ಜಿ.ಆರ್. ನಾಗರಾಜ, ಪಾಲಾಕ್ಷಿ ಗೌಡ, ಎಸ್.ವಿ. ಪಾಟೀಲ, ಮಂಜುನಾಥ, ವಿಶ್ವನಾಥ, ರೂಪನಗುಡಿ ಮಲ್ಲಿಕಾರ್ಜುನ, ಕೆ. ಬಸವನಗೌಡ, ಸಿರಿಗೆರೆ ಶಶಿಧರ, ಕೆ. ಶಶಿಧರ ಸೇರಿದಂತೆ ನೂರಾರು ಬಸವ ಭಕ್ತರು ಭಾಗವಹಿಸಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE
