ಕನ್ನೇರಿ ಸ್ವಾಮಿ ನಿಷೇಧಿಸಿ, ಹಿಂದೂ ಸಮಾವೇಶ ನಿರ್ಬಂಧಿಸಲು ಬೆಳಗಾವಿಯಲ್ಲಿ ಪ್ರತಿಭಟನೆ

ಸಿ.ಎಂ. ಬೂದಿಹಾಳ
ಸಿ.ಎಂ. ಬೂದಿಹಾಳ

ಬೆಳಗಾವಿ:

ಕನ್ನೇರಿ ಸ್ವಾಮಿಗೆ ನಿಷೇಧ, ಬಸವಕಲ್ಯಾಣ ಸಮಾವೇಶ ನಿರ್ಬಂಧಿಸಬೇಕೆಂದು ಬಸವಪರ ಸಂಘಟನೆಗಳ ಒಕ್ಕೂಟ ಬುಧವಾರ ಪ್ರತಿಭಟಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ ಜಿಲ್ಲೆಯ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು, ಉತ್ತರ ಕರ್ನಾಟಕದ ಅನೇಕ ಸ್ಥಳಗಳಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಎಂಬ ಹೆಸರಿನಲ್ಲಿ ಸಮಾವೇಶಗಳನ್ನು ನಡೆಸಿ, ಲಿಂಗಾಯತ ಮಠಾಧೀಶರನ್ನು, ಲಿಂಗಾಯತ ಧುರೀಣರನ್ನು ಅಶ್ಲೀಲ, ಅವಾಚ್ಯ, ಅಸಂವಿಧಾನಿಕ ಭಾಷೆ ಬಳಸಿ ಅವರ ತೇಜೋವಧೆಯನ್ನು ಮಾಡಿದ್ದಾರೆ.

ಭಾರತದ ಸರ್ವೋಚ್ಛ ನ್ಯಾಯಾಲಯ ಈ ಸ್ವಾಮಿಗಳಿಗೆ ಒಳ್ಳೆಯ ನಾಗರಿಕರಾಗಬೇಕೆಂದು ಛೀಮಾರಿ ಹಾಕಿದೆ. ಆದರೂ ಕೂಡ ಅದನ್ನು ಲೆಕ್ಕಿಸದೆ, ಬಸವಾದಿ ಶರಣರನ್ನು ಅವಹೇಳನ ಮಾಡಿ ವಚನ ಸಾಹಿತ್ಯಕ್ಕೆ ಅಪಚಾರವೆಸಗಿ, ಲಿಂಗಾಯತ ಮಠಾಧೀಶರ ತೇಜೋವಧೆ ಮಾಡಿ, ಲಿಂಗಾಯತ ಧುರೀಣರಿಗೆ ಅಪಮಾನ ಮಾಡುತ್ತಿದ್ದಾರೆ.

ಲಿಂಗಾಯತರನ್ನು ‘ಬಸವ ತಾಲಿಬಾನಿ’ಗಳೆಂದು ಕರೆದ ಕನ್ನೇರಿ ಮಠದ ಸ್ವಾಮಿಗಳು, ಬಸವಣ್ಣನವರ ಕಾರ್ಯಕ್ಷೇತ್ರ, ಲಿಂಗಾಯತ ಧರ್ಮದ ಸಂಸ್ಥಾಪನಾ ಕೇಂದ್ರವಾದ ಅನುಭವ ಮಂಟಪ ಸ್ಥಾಪನೆಯಾದ ಸ್ಥಳದಲ್ಲಿ ಬಸವಾದಿ ಶರಣರ ಆಶಯಕ್ಕೆ ವಿರುದ್ಧವಾಗಿ 28-06-2026 ರಂದು ನಡೆಸಲಿರುವ “ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ”ಅನುಮತಿ ನೀಡಬಾರದೆಂದು, ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಆಗದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಮಧ್ಯ ಪ್ರವೇಶಿಸಿ ಸಮಾವೇಶವನ್ನು ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳವರ ಮೂಲಕ ಎಲ್ಲ ಬಸವಪರ ಸಂಘಟನೆಗಳ ವತಿಯಿಂದ ಕರ್ನಾಟಕ ಸರ್ಕಾರಕ್ಕೆ ಆಗ್ರಹಪೂರ್ವಕ ಮನವಿಯನ್ನು ಸಲ್ಲಿಸಲಾಯಿತು.

ಕರ್ನಾಟಕ ಘನ ಸರ್ಕಾರವು ನಮ್ಮ ಮನವಿಯನ್ನು ಪರಿಗಣಿಸಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸಮಾಜದಲ್ಲಿ ವೈಷಮ್ಯ ಬೆಳೆಸುವ ಸಾರ್ವಜನಿಕ ಶಾಂತಿ ಕದಡುವ ಈ ಸಮಾರಂಭಕ್ಕೆ ಅನುಮತಿ ನೀಡಬಾರದು ಹಾಗೂ ಕನ್ನೇರಿ ಶ್ರೀಗಳ ಪ್ರವೇಶಕ್ಕೆ ನಿಷೇಧ ಹೇರಬೇಕೆಂದು ಎಲ್ಲ ಬಸವ ಭಕ್ತರ ಒತ್ತಾಸೆಯಾಗಿದೆ.

ಆದ್ದರಿಂದ ಬಸವಕಲ್ಯಾಣದಲ್ಲಿ ಜರುಗುವ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ಪ್ರತಿಬಂಧಿಸಬೇಕೆಂದು ವಿನಂತಿಸಿಕೊಳ್ಳಲಾದ ಮನವಿಯನ್ನು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಬಸವರಾಜ ರೊಟ್ಟಿ ಅವರು ನೂರಾರು ಪ್ರತಿಭಟನಾಕಾರರ ಸಮ್ಮುಖದಲ್ಲಿ ಓದಿ ಸಲ್ಲಿಸಿದರು. ಮನವಿಯನ್ನು ಅಪರ ಜಿಲ್ಲಾಧಿಕಾರಿಗಳಾದ ವಿಜಯಕುಮಾರ ಹೊನಕೇರಿ ಅವರು ಸ್ವೀಕರಿಸಿದರು.

ರಾಷ್ಟ್ರೀಯ ಬಸವದಳದ ಅಧ್ಯಕ್ಷ ಅಶೋಕ ಬೆಂಡಿಗೇರಿ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ’ ಉಪಾಧ್ಯಕ್ಷ ಮುರಗೇಶ ಶಿವಪೂಜಿ, ನ್ಯಾಯವಾದಿ ಬಿ.ಎಸ್. ಸುಲ್ತಾನಪುರಿ, ನಗರ ಘಟಕದ ಅಧ್ಯಕ್ಷ ಎಸ್. ಜಿ. ಸಿದ್ನಾಳ, ಪ್ರಧಾನ ಕಾರ್ಯದರ್ಶಿ ಸಿ.ಎಂ. ಬೂದಿಹಾಳ, ಲಿಂಗಾಯತ ಧುರೀಣ ಶಂಕರ ಗುಡಸ, ಖಜಾಂಚಿ ಮುರಿಗೆಪ್ಪ ಬಾಳಿ, ಶಿವಾನಂದ ಮೆಟ್ಯಾಲ, ಪ್ರೇಮಕ್ಕ ಅಂಗಡಿ, ಸುಜಾತಾ ಮತ್ತಿಕಟ್ಟಿ, ರತ್ನಾ ಬೇನಚಣಮರಡಿ, ಕಾವೇರಿ ಕಿಲಾರಿ, ಅನಿತಾ ಚಟ್ಟೇರ, ರಾಜಶ್ರೀ ದೇಯನ್ನವರ, ಗೌರಮ್ಮ ಕರ್ಕಿ, ನೇತ್ರಾವತಿ ರಾಮಾಪುರಿ, ಅನುಸೂಯ ಬಶೆಟ್ಟಿ, ಸರೋಜಿನಿ ನಡುವಿನಹಳ್ಳಿ, ಲಲಿತಾ ಪರ್ವತರಾವ, ಮಹಾನಂದ ಪರುಶೆಟ್ಟಿ, ಉಮಾ ಭದ್ರನ್ನವರ, ಮಂಜುನಾಥ ಕಾಜಗಾರ ನೇತೃತ್ವ ವಹಿಸಿದ್ದರು. ನೂರಾರು ಜನ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *