ನೀಲಿ, ಕೇಸರಿ ಶಾಲು ಹೊದ್ದು ರಸ್ತೆಗಿಳಿದ ಅಂಬೇಡ್ಕರ್, ಬಸವಣ್ಣ ಅಭಿಮಾನಿಗಳು
ಬಳ್ಳಾರಿ
ಬಸವ ಮಂಟಪ ಕೃತಿ ರಚಿಸಿ ಬಸವಣ್ಣ ಹಾಗೂ ಶರಣ ಪರಂಪರೆಗೆ ಅಪಮಾನ ಮಾಡಿರುವ ಲೇಖಕ ರವಿ ಹಂಜ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಬಳ್ಳಾರಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಸಾಹಿತಿ ಕುಂ. ವೀರಭದ್ರಪ್ಪ ಸಾಂಸ್ಕೃತಿಕ ನಾಯಕ ಬಸವೇಶ್ವರರನ್ನು ಹೀನವಾಗಿ ದಾಖಲಿಸಲು ಮುಂದಾದ ರವಿ ಹಂಜ್ ಮತ್ತು ಇತರರನ್ನು ರಾಜ್ಯದಿಂದ ಹೊರಗಿಡುವ ಕಾರ್ಯ ತುರ್ತಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಬಸವಣ್ಣ ಅಂಬೇಡ್ಕರ್, ಮಹಮ್ಮದ್ ಪೈಗಂಬರ್ ಮತ್ತಿತರರು ಸಮಾನತೆಯ ಪ್ರತೀಕ. ಈ ಕಾರಣಕ್ಕಾಗಿ ಜನತೆ ಬಸವಣ್ಣರನ್ನು ಪೂಜ್ಯ ಸ್ಥಾನದಲ್ಲಿ ಇರಿಸಿ ಸ್ಮರಣೀಯ ಭಾವನೆಯಿಂದ ಸದಾ ನೋಡುತ್ತಿದ್ದಾರೆ.
ಈ ಕಾರ್ಯಕ್ಕೆ ಚ್ಯುತಿ ತರುವ ಉದ್ದೇಶವಿರಿಸಿಕೊಂಡು ರವಿ ಹಂಜ್ ಮತ್ತಿತರರು ಪ್ರಯತ್ನ ನಡೆಸಿರುವುದು ಖಂಡನೀಯ. ಈ ಕೃತ್ಯ ವಿರೋಧಿಸಿ ರಾಜ್ಯದ ಎಲ್ಲೆಡೆ ದೊಡ್ಡಮಟ್ಟದ ಪ್ರತಿಭಟನೆ ನಡೆಯುತ್ತಿದೆ.
ಇಂತಹ ಹೋರಾಟದಲ್ಲಿ ಲಕ್ಷಾಂತರ ಜನರ ಭಾಗವಹಿಸಬೇಕಿದೆ ಎಂದು ಕರೆ ನೀಡಿದರು.

ಇದೇ ವೇಳೆ ಮಾತನಾಡಿದ ದಲಿತ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಎ. ಮಾನಯ್ಯ ಹಾಗೂ ದಲಿತ ಮುಖಂಡ ವಿ.ಎಸ್.ಶಿವಶಂಕರ್ 12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಮೇಲು-ಕೀಳು ಭಾವನೆ ಹಾಗೂ ಧಾರ್ಮಿಕ ಕಂದಾಚಾರಗಳ ವಿರುದ್ಧ ಧ್ವನಿ ಎತ್ತಿದ ಮಹಾನ್ ಸಾಮಾಜಿಕ ಕ್ರಾಂತಿಕಾರಿಯಾಗಿದ್ದಾರೆ.
ಕಾಯಕ ಮತ್ತು ದಾಸೋಹದ ತತ್ವಗಳ ಮೂಲಕ ಶ್ರಮದ ಗೌರವ ಎತ್ತಿಹಿಡಿದ ಬಸವಣ್ಣನವರ ವಚನಗಳು ಮಾನವೀಯತೆ, ಸಮಾನತೆ, ಸಹಬಾಳ್ವೆ, ಕಾಯಕನಿಷ್ಠೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯ ಸಾರುವ ಜೀವನ ದರ್ಶನಗಳಾಗಿವೆ.
ಇಂತಹ ಮಹಾನ್ ಶರಣರ ಕುರಿತು ಅವಹೇಳನಕಾರಿ ರೀತಿಯಲ್ಲಿ ಬರೆಯುವುದು ಹಾಗೂ ಶರಣ ಪರಂಪರೆಯ ಘನತೆಗೆ ಧಕ್ಕೆ ತರುವಂತಹ ವಿಚಾರ ಪ್ರತಿಪಾದಿಸುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರಹಗಾರ್ತಿ ನಿರ್ಮಲಾ ಶಿವನಗುತ್ತಿ ಮಾತನಾಡಿ, ಬಸವಣ್ಣನವರ ಶ್ರೇಷ್ಠ ವ್ಯಕ್ತಿತ್ವಕ್ಕೆ ವ್ಯವಸ್ಥಿತ ಸಂಘಟನೊಂದಿಗೆ ಧಕ್ಕೆ ತರುವ ಕಾರ್ಯ ಕೈಗೊಂಡಿರುವ ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ಟರಂತಹ ಸನಾತನವಾದಿಗಳನ್ನು ಸಾಮಾಜಿಕವಾಗಿ ದೂರವಿರಿಸುವ ಕಾರ್ಯ ನಿರಂತರ ನಡೆಯಬೇಕು
ನಡೆಸಬೇಕು. ಎಲ್ಲರೊಂದಿಗೆ ಕೂಡಿಕೊಂಡು ಸಮಸಮಾಜ ನಿರ್ಮಿಸುವ ಕಾರ್ಯ ಪ್ರತಿಯೊಬ್ಬರು ಮಾಡುವತ್ತ ಮುಂದಾಗಬೇಕು ಎಂದರು.
ಬಸವೇಶ್ವರರ ಆಶಯಗಳಿಗೆ ಸರ್ವ ಸಮಾಜ ಸ್ಪಂದಿಸಿ ಅವರೊಂದಿಗೆ ಗುರ್ತಿಸಿಕೊಳ್ಳುತ್ತದೆ ಮತ್ತು ವಿರೋಧಿಗಳು ಮಾಡುವ ಕೃತ್ಯಕ್ಕೆ ಸದಾ ಎದುರೇಟು ನೀಡಲು ಮುಂದಾಗುತ್ತೇವೆಂದು ಎಚ್ಚರಿಸಿದರು.

ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಶಿವಣ್ಣ, ವಕೀಲ ಈ. ಹನುಮಂತಪ್ಪ, ಮಲ್ಲಿಕಾರ್ಜುನ ಗುಡಿಯಾ, ಎಸ್. ತಿಂದಪ್ಪ, ಸಾವಜ್ಜಿ ರಾಜೇಂದ್ರ ಪ್ರಸಾದ್, ಬಿ.ಮರಿಸ್ವಾಮಿ, ಪಂಪಾಪತಿ ಅಂಗಡಿ ಮತ್ತಿತರರು ಮಾತನಾಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ದೊಡ್ಡರಾಮಣ್ಣ, ಬಿ.ಎಸ್.ವೀರೇಶ, ಬೋರ್ ವೆಲ್ ತಿಪ್ಪೇಸ್ವಾಮಿ, ಬಿ.ದುರುಗೇಶ, ಪಿ. ಶ್ರೀಧರ ಶೆಟ್ಟಿ, ಪ್ರಕಾಶ ಮಂಡಕ್ಕಿ, ಬಿ.ಆರ್. ವಿಕ್ರಮ್, ಶಿವುಕುಮಾರ, ಚಾಪಿ ಚಂದ್ರಪ್ಪ, ಎಂ.ಎಸ್. ಶಿವನಗುತ್ತಿ, ದೇವರಮನಿ ಕೊಟ್ರೇಶ, ಕೆ. ಪರಮಜ್ಯೋತಿಗೌಡ ಮತ್ತಿತರ ಪ್ರಮುಖರು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ದಲಿತರು ಬಸವಣ್ಣನವರ ಬಗ್ಗೆ ತಿಳಿದುಕೊಂಡಿದ್ದಾರೆ. ಹೆಮ್ಮೆ ಆಗುತ್ತೆ. ಹಿಂದುಳಿದ ವರ್ಗಗಳು ಮತ್ತು ದಲಿತರು, ಬಸವಾಭಿಮಾನಿಗಳು , ಪ್ರಗತಿಪರ ಸಂಘಟನೆಗಳ, ಮಠಾಧೀಶರು ವಿವಿಧ ಸಂಘಟನೆಗಳು ಒಗ್ಗೂಡಿ ದಿಟ್ಟತನದಿಂದ ಹೋರಾಟ ಮುಂದುವರಿಲಿ. ರವಿ ಹಂಜ ಮತ್ತು ವಿಶ್ವೇಶ್ವರ ಭಟ್ ರೈಗೆ ಶಿಕ್ಷೆ ಆಗಬೇಕು. ಜೈ ಬಸವ ಶರಣು ಶರಣಾರ್ಥಿ