ಬೆಂಗಳೂರು:
ಬಸವನಗರ ಬಸವ ಸೇವಾ ಸಮಿತಿಯ ಮಾಸಿಕ ವಚನಾಮೃತ ಕಾರ್ಯಕ್ರಮ – ೬೬ರ ಮುಕ್ತ ಚರ್ಚೆ ‘ಕರ್ಮ’ ವಿಷಯವಾಗಿ ನಡೆಯಿತು.
ಬಸವನಗರ, ಕಾಳಪ್ಪ ಬಡಾವಣೆಯ ವಿಶಾಲ ಮತ್ತು ಸದಾಶಿವಪ್ಪ ಅವರ ನಿವಾಸದಲ್ಲಿ ಈಚೆಗೆ ನಡೆದ ಕಾರ್ಯಕ್ರಮ ಮಲಿಕ್ ನದಾಫ್, ಮಂಜುನಾಥ ಹಿರೇಮಠ ಮತ್ತು ರಾಜೇಶ್ವರಿ ಪಾಟೀಲ ಅವರ ವಚನ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನಿಂಗನಗೌಡ ನಾಡಗೌಡರ ಅವರು ಸಮಸ್ತ ಸಭಿಕರನ್ನು ಸ್ವಾಗತಿಸಿದರು.

ಪದ್ಧತಿಯಂತೆ ಸಿ. ಬಸವರಾಜ, ಕಾರ್ಯದರ್ಶಿ, ವಿಭೂತಿಪುರ ವೀರಸಿಂಹಾಸನಮಠ ಇವರನ್ನು ಸರ್ವಾನುಮತದಿಂದ ಸಭಾಧ್ಯಕ್ಷರನ್ನಾಗಿ ಮಾಡಲಾಯಿತು.
ಸಮಿತಿಯ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಹಂಜಿ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ಯೋಗದ ಪ್ರಮುಖ ಅಂಗಗಳಲ್ಲಿ ಒಂದಾದ ಕರ್ಮ ಇತರ ಮೂರು ಅಂಗಗಳಂತೆ ಭಗವಂತನನ್ನು ಸೇರಲು ಇರುವ ಪ್ರಮುಖ ಮಾರ್ಗವೆಂದು ತಿಳಿಸಿದರು.
ವಿಶೇಷವಾಗಿ ಹೆಣ್ಣುಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸುವಲ್ಲಿ ರಾಣಿ ಚೆನ್ನಮ್ಮ ಮಹಿಳಾ ಸಂಘದ ಅಧ್ಯಕ್ಷರಾದ ವಿಶಾಲ ಸಫಲರಾಗುವರೆಂದು ಭಾವಿಸಿ ಕರ್ಮದ ಬಗ್ಗೆ ಹೆಣ್ಣುಮಕ್ಕಳಲ್ಲಿರುವ ತಪ್ಪು ಭಾವನೆಯನ್ನು ಹೋಗಲಾಡಿಸಲು ಈ ವಿಷಯ ಆರಿಸಿಕೊಂಡಿರುವುದಾಗಿ ತಿಳಿಸಿದರು.
ಬಸವಾದಿ ಶರಣರಲ್ಲಿ ಪ್ರಮುಖರಾದ ಅಲ್ಲಮಪ್ರಭು ಶರಣರು ಜ್ಞಾನ ತಿಲಕರಾದರೆ, ಬಸವೇಶ್ವರರು ಭಕ್ತಿ ಭಂಡಾರಿಗಳಾಗಿ, ಸಿದ್ಧರಾಮೇಶ್ವರರು ಕರ್ಮಯೋಗಿಗಳೆನಿಸಿದರು. ಮತ್ತು ಚನ್ನಬಸವಣ್ಣನವರು ರಾಜಮಾರ್ಗ ಹಿಡಿದು ಭಗವಂತನನ್ನು ಸೇರಿದರೆಂದು ವಿವರಿಸಿದರು.

ತಮ್ಮ ಅನಿಸಿಕೆಗಳನ್ನು ಪುಷ್ಟೀಕರಿಸುವಂತೆ ನೆರೆದ ಶರಣರು ವಿಶೇಷವಾಗಿ ಶರಣೆಯರು ತಮ್ಮ ವಿಷಯ ಮಂಡನೆ ಮಾಡಬೇಕೆಂದು ಮತ್ತು ಕನಿಷ್ಠ ನಾವು ತಮಗೆ ಕಳಿಸಿರುವ ಕರ್ಮ ಸಂಬಂಧವಾದ ಒಂದು ವಚನವನ್ನು ಹಾಡಿ ಇಲ್ಲವೇ ಪಠಿಸಿ ಎಂದು ಸರ್ವರನ್ನು ಮುಕ್ತ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಆಹ್ವಾನಿಸಿದರು.
ಸಭಾಧ್ಯಕ್ಷರಾದ ಸಿ. ಬಸವರಾಜ ಅವರು ಕಾರ್ಯಕ್ರವನ್ನು ಜ್ಯೋತಿ ಬೆಳಗಿಸುತ್ತಾ, ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು.
ಅವರು ತಮ್ಮ ಪ್ರಾರಂಭದ ನುಡಿಗಳಲ್ಲಿ ಸ್ವಪ್ರಯತ್ನದಿಂದ ಸರ್ವರೀತಿಯ ಕರ್ಮದ ಕೆಟ್ಟ ಪರಿಣಾಮಗಳನ್ನು ಮೆಟ್ಟಿ ನಿಲ್ಲಬಹುದು ಎಂದು ಅಭಿಪ್ರಾಯಪಡುತ್ತಾ, ಸರ್ವರು ತಮ್ಮ ವಿಷಯ ಮಂಡನೆ ಮಾಡುವಾಗ ವಿಷಯಾಂತರ ಮಾಡದೆ ಸೀಮಿತ ಸಮಯವಾದ ೫ ನಿಮಿಷಗಳಲ್ಲಿ ಸ್ಪುಟವಾಗಿ ವಿಷಯ ತಿಳಿಸಬೇಕೆಂದು ವಿನಂತಿಸಿದರು.

ಗಾಯಕರಾದ ಕೃಷ್ಣಮೂರ್ತಿ ಅವರು ತಮ್ಮ ಜೀವನದ ಅನುಭವಗಳನ್ನು ಮೆಲಕು ಹಾಕುತ್ತಾ, ತಂದೆ ತಾಯಿಗಳ ಆಶಯಗಳನ್ನು ಮಕ್ಕಳು ನಡೆಸಿಕೊಟ್ಟಲ್ಲಿ ಕರ್ಮದ ದುಷ್ಪರಿಣಾಮಗಳನ್ನು ಹೋಗಲಾಡಿಸಬಹುದು ಎಂದು ವಿವರಿಸಿದರು.
ಶಾಬಾದಿ ಗುರುಗಳು ಸಂಚಿತ, ಪ್ರಾರಬ್ಧ ಮತ್ತು ಆಗಾಮಿ ಕರ್ಮಗಳು ಮತ್ತು ಅವುಗಳು ಗುಣಲಕ್ಷಣಗಳನ್ನು ವಿವರಿಸಿದರು.
ಓಂಕಾರಪ್ಪ ಅವರು ಸನಾತನ ಧರ್ಮ ಮತ್ತು ಬಸವಾದಿ ಶರಣರು ಕರ್ಮ ಕುರಿತಂತೆ ಹೇಗೆ ಭಿನ್ನ ಅಭಿಪ್ರಾಯ ಹೊಂದಿದರೆಂದು ತುಲನಾತ್ಮಕವಾಗಿ ವಿವರಿಸಿದರು.
ಶಕುಂತಲಾ ಸಾಲಿಮಠ ಅವರು ಕರ್ಮ ಕುರಿತಾದ ಶ್ರೀ ಸದ್ಗುರು ಅವರ ಅಭಿಪ್ರಾಯವನ್ನು ತಿಳಿಸಿದರು.
ಕಲ್ಲಿನಾಥ ಅವರು ನಿಷ್ಕಾಮ ಕರ್ಮ ಹಾಗೂ ಅದರ ಪ್ರಭಾವಗಳನ್ನು ಆಧುನಿಕ ಕಂಪ್ಯೂಟರ್ ತಂತ್ರಜ್ಞಾನಕ್ಕೆ ಹೋಲಿಸುತ್ತಾ, ಹಿರಿಯರು ನಮ್ಮ ಕರ್ಮ ನಮ್ಮ ಬೆನ್ನ ಹಿಂದೆ ಇರುತ್ತದೆ ಎನ್ನುವುದನ್ನು ಸ್ವಾರಸ್ಯವಾಗಿ ತಿಳಿಸುತ್ತಾ ಕರ್ಮದ ಪರಿಣಾಮಗಳನ್ನು ಹೇಗೆ ಹೋಗಲಾಡಿಸಬಹುದು ಎಂದು ವಿವರಿಸಿದರು.
ಅಶೋಕ ಹಳ್ಳದಮಠ ಅವರು ಕರ್ಮದ ವರ್ಣನೆಯನ್ನು ದೃಷ್ಟಾಂತದ ಮುಖಾಂತರ ವಿವರಿಸಿದರು.
ಸಾಲಿಮಠ ಅವರು ಕರ್ಮದ ವಿವಿಧ ಪ್ರಕಾರಗಳನ್ನು ಬಣ್ಣಿಸಿ ಪ್ರಯತ್ನದಿಂದ ಅವುಗಳ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳುವ ಕುರಿತು ತಿಳಿಸಿದರು.
ಕವಿತಾ ಅವರು ಕರ್ಮ ಸಿದ್ಧಾಂತವನ್ನು ಮಕ್ಕಳಿಗೆ ತಿಳಿಯುವ ರೀತಿಯಲ್ಲಿ ಹೇಳಿದರೆ ಮಾತ್ರ ಅವರು ನಮ್ಮ ಅಭಿಪ್ರಾಯಗಳನ್ನು ಒಪ್ಪಬಹುದು ಎಂದು ಅಭಿಪ್ರಾಯಪಟ್ಟರು.
ಪಾಟೀಲ ಮಲ್ಲೇಶಗೌಡರು ಬಸವಣ್ಣನವರ ವಚನದ ಮುಖಾಂತರ ಕರ್ಮದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದರು.
ಕೊನೆಯದಾಗಿ ಸಮಿತಿಯ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಹಂಜಿ ಅವರು ಅಲ್ಲಮಪ್ರಭು ಅವರು ಜ್ಞಾನ ಕರ್ಮದ ಸಕಲ ಪ್ರಭಾವಗಳನ್ನು ಸುಟ್ಟು ಹಾಕುತ್ತದೆ ಎಂದು ತಿಳಿಸಿದರೆ, ವೈರಾಗ್ಯನಿಧಿಯಾದ ಅಕ್ಕಮಹಾದೇವಿ ಅವರು ಬರುವ ಕಷ್ಟಗಳನ್ನು ಕರ್ಮವೆಂದು ಹಳೆಯದೇ ಅವು ನಮ್ಮನ್ನು ಭಗವಂತ ಪರೀಕ್ಷಿಸಲು ಕಳಿಸಿದ ಅವಕಾಶಗಳೆಂದು ತಿಳಿಸಿದರೆ, ಜಗಜ್ಯೋತಿ ಬಸವೇಶ್ವರರು ನಿಷ್ಕಾಮ ಕರ್ಮವನ್ನು ಸಮಾಜದಲ್ಲಿ ಸಮತೆ ತರಲು ಕಾಯಕದ ಮಹತ್ವ ತಿಳಿಸುತ್ತಾ ಕಾಯಕದಿಂದಲೇ ಕೈಲಾಸ ಎಂದು ಕರ್ಮಕ್ಕೆ ಅಂಟಿದ್ದ ಸಮಸ್ತ ಕೆಟ್ಟ ಅಭಿಪ್ರಾಯಗಳನ್ನು ಜನಸಾಮಾನ್ಯರ ಮನದಿಂದ ಓಡಿಸಿದರು ಎಂದು ತಿಳಿಸಿದರು.
ಸಭಾಧ್ಯಕ್ಷರಾದ ಸಿ. ಬಸವರಾಜ ಅವರು ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸುತ್ತಾ, ಪ್ರಯತ್ನದಿಂದ ಹಣೆಬರಹ ಬದಲಾಯಿಸುವ ಪರಿಯನ್ನು ಬಸವಾದಿ ಶರಣರು ಸುಲಭವಾಗಿ ತಿಳಿಸಿದ್ದಾರೆ. ಇದರಿಂದ ಕರ್ಮದ ಪ್ರಭಾವವನ್ನು ನಾವು ಸುಲಭವಾಗಿ ಮೆಟ್ಟಿ ನಿಲ್ಲಬಹುದು ಎಂದು ತಿಳಿಸಿದರು.
ಮಂಜುನಾಥ ಹಿರೇಮಠ ಅವರ ಪ್ರತಿ ವಿಷಯ ಮಂಡನೆಯ ನಂತರ ಸೂಕ್ತವಾದ ವಚನ ಸಂಗೀತದಿಂದ ಸಭಿಕರನ್ನು ಭಕ್ತಿ ಸಾಗರದಲ್ಲಿ ತೇಲಿಸಿದರು.
ನಂತರ ಶರಣ ದಂಪತಿಗಳಾದ ವಿಶಾಲ ಮತ್ತು ಸದಾಶಿವಪ್ಪ ಕುಟುಂಬದವರು ಸಭೆಗೆ ಆಗಮಿಸಿದ ಹಿರಿಯರೆಲ್ಲರನ್ನು ಸನ್ಮಾನಿಸಿದರು ಮತ್ತು ಎಲ್ಲರಿಗೂ ತಮ್ಮ ಅಭಿನಂದನೆ ತಿಳಿಸಿದರು.
ಬಸವ ಸೇವಾ ಸಮಿತಿ ಬಸವಾರೆಡ್ಡಿ ಕುಟುಂಬದವರನ್ನು ಮತ್ತು ಗಣ್ಯವ್ಯಕ್ತಿಗಳನ್ನು ಅಂಗವಸ್ತ್ರ ಮತ್ತು ಬಸವ ಭಾವಚಿತ್ರ ಮತ್ತು ಬಸವ ಸಾಹಿತ್ಯ ಪುಸ್ತಕಗಳನ್ನು ಕೊಡುವುದರೊಂದಿಗೆ ಸನ್ಮಾನಿಸಿದರು.

ವಿಷಯ ಮಂಡನೆ ಮಾಡಿದ ಸಮಸ್ತರಿಗೆ ಶರಣ ಸಾಹಿತ್ಯ ವಿವರಿಸುವ ಪುಸ್ತಕಗಳನ್ನು ವಿತರಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನಾಡಗೌಡರು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಿ ಕೊಟ್ಟರು. ಸಾಲಿಮಠ ಅವರು ಎಲ್ಲರಿಗೂ ವಂದನಾರ್ಪಣೆ ಮಾಡಿದರು.
ಶಕುಂತಲಾ ಸಾಲಿಮಠ ಅವರು ಮಂಗಳ ಗೀತೆ ಹಾಡಿದರು.
ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಅಣ್ಣೇಗೌಡರು, ಸಮಿತಿಯ ಖಜಾಂಚಿಗಳಾದ ಕೆ. ಸಿ. ಬಸವರಾಜ, ಪದಾಧಿಕಾರಿಗಳಾದ ವೀರೇಶ ಜಿ.ಕೆ. ಮತ್ತು ನಾಗನಗೌಡರ ಉಪಸ್ಥಿತರಿದ್ದರು. ಕಾರ್ಯಕ್ರಮ ಪ್ರಸಾದ ವಿತರಣೆಯೊಂದಿಗೆ ಸಮಾಪ್ತಿಯಾಯಿತು.
