ಇಂದಿನಿಂದ ಗದಗದಲ್ಲಿ ಎರಡು ದಿನಗಳ ಬಸವಶಕ್ತಿ ಶಿಬಿರ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸಿಕೊಳ್ಳಬೇಕೇ?

ಗದಗ

ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಇಂದಿನಿಂದ ನಗರದಲ್ಲಿ ನಡೆಯಲಿದೆ.

ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ ಸಮಾಜ, ಧರ್ಮದ ಮುಂದಿರುವ ಸವಾಲುಗಳ ಬಗ್ಗೆ ಶ್ರೀ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ದಿನಗಳ ಗಂಭೀರ ಚರ್ಚೆ ನಡೆಯಲಿದೆ.

ವಚನ, ಸಂವಿಧಾನ ಪೀಠಿಕೆ ಪಠಣದಿಂದ ಶುರುವಾಗುವ ಕಾರ್ಯಕ್ರಮಕ್ಕೆ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಚಾಲನೆ ನೀಡಲಿದ್ದಾರೆ.

ಜೆ.ಎಲ್.ಎಂ ಗದಗ ಜಿಲ್ಲೆ ಅಧಕ್ಷ ಕೆ. ಎಸ್. ಚಟ್ಟಿ ಸ್ವಾಗತ ಭಾಷಣ ಮಾಡಿದರೆ, ಬಸವ ಮೀಡಿಯಾದ ಎಂ ಎ ಅರುಣ್ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಬಸವ ಶಕ್ತಿ ಶಿಬಿರಗಳ ಉದ್ದೇಶ ಮತ್ತು ಸ್ವರೂಪ ತಿಳಿಸಲಿದ್ದಾರೆ.

ನಂತರ ನಡೆಯುವ ಚರ್ಚಾಗೋಷ್ಠಿಗಳಲ್ಲಿ ಏಳು ವಿಷಯಗಳನ್ನು ಚರ್ಚಿಸಲಾಗುವುದು:

ವಿಷಯ 1: ಲಿಂಗಾಯತದ ಮೇಲೆ ಸಾಂಸ್ಕೃತಿಕ, ರಾಜಕೀಯ ಆಕ್ರಮಣ

ಬಸವ ಶಕ್ತಿ ಕಾರ್ಯಕ್ರಮ ಒಂದು ಸಂಘರ್ಷದ ಹಿನ್ನಲೆಯಲ್ಲಿ ನಡೆಯುತ್ತಿದೆ.

2022ರ ನಂತರ ಈ ಸಂಘರ್ಷ ತೀವ್ರವಾಗಿದೆ. ಲಿಂಗಾಯತ ಸಮಾಜ, ಧರ್ಮ ನಿರಂತರವಾಗಿ ಒಂದಲ್ಲ ಒಂದು ರೀತಿಯ ದಾಳಿಗಳನ್ನು ಎದುರಿಸುತ್ತಿದೆ.

ಈ ಸಂಘರ್ಷದ ಸ್ವರೂಪ, ಕಾರಣ, ಪರಿಹಾರಗಳ ಬಗ್ಗೆ ನಾವು ಚಿಂತಿಸಬೇಕಾಗಿದೆ.

ಡಾ. ರಾಜಶೇಖರ ನಾರನಾಳ ವಿಷಯದ ಪರಿಚಯ ಮಾಡಿಕೊಡಲಿದ್ದಾರೆ. ಶಶಿಧರ ತೋಡ್ಕರ್ ಚರ್ಚೆಯನ್ನು ವಿಸ್ತರಿಸಲಿದ್ದಾರೆ.

ವಿಷಯ 2: ಬಸವ ಸಂಘಟನೆಗಳಿಗೆ ರಾಜಕೀಯ ಪ್ರಭಾವ, ಪ್ರಜ್ಞೆ ಬೇಕೇ?

ಬಸವ ಶಕ್ತಿ ಕಾರ್ಯಕ್ರಮದ ಮೂಲ ಉದ್ದೇಶ ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸುವುದು.

ಬಸವ ಮೀಡಿಯಾ ಸಮೀಕ್ಷೆಯಲ್ಲಿ ರಾಜಕೀಯ ಪ್ರಜ್ಞೆ ಎಂದರೆ ಏನು, ಬಸವ ಸಂಘಟನೆಗಳಿಗೆ ರಾಜಕೀಯ ಬೇಕೇ ಎನ್ನುವುದು ಸಾಮಾನ್ಯವಾಗಿ ಬಂದ ಪ್ರಶ್ನೆಗಳು.

ಈ ವಿಷಯವನ್ನು ಶಾಂತಕುಮಾರ ಹರ್ಲಾಪುರ ಪರಿಚಯ ಮಾಡಿಕೊಡಲಿದ್ದಾರೆ. ನಂತರ ಏನ್ ಎಂ ಪವಾಡಿ ಗೌಡ್ರ ಅದನ್ನು ವಿಸ್ತರಿಸಲಿದ್ದಾರೆ.

ವಿಷಯ 3: ಸರಕಾರ, ರಾಜಕಾರಣಿಗಳ ಮೇಲೆ ಒತ್ತಡ ತರುವುದು ಹೇಗೆ?

ಇಂದು ಲಿಂಗಾಯತ ಧರ್ಮ, ಸಮಾಜದ ವಿರುದ್ಧವಾಗಿ ಯಾವುದೇ ಬೆಳವಣಿಗೆ ನಡೆದರೂ ಬಸವ ಸಂಘಟನೆಗಳಿಂದ ತೀಕ್ಷ್ಣ ಪ್ರತಿಕ್ರಿಯೆ ಬರುತ್ತಿದೆ.

ಅಲ್ಲಲ್ಲಿ ಮನವಿ ಪತ್ರ, ಸುದ್ದಿಗೋಷ್ಠಿ, ಕೋರ್ಟ್ ಕೇಸ್, ಸಣ್ಣ ಸಣ್ಣ ಪ್ರತಿಭಟನೆ ಮುಂತಾದ ಚಟುವಟಿಕೆಗಳು ನಡೆಯುತ್ತಿವೆ.

ಇವೆಷ್ಟು ಪರಿಣಾಮಕಾರಿಯಾಗಿವೆ? ಸರಕಾರ, ರಾಜಕಾರಣಿಗಳ ಮೇಲೆ ಒತ್ತಡ ತರುವ ಕೆಲಸ ಇನ್ನೂ ವ್ಯವಸ್ಥಿತವಾಗಿ ಮಾಡಬಹುದೇ?

ಈ ವಿಷಯದ ಬಗ್ಗೆ ಎ ವೈ ನವಲಗುಂದ ಅವರು ತಮ್ಮ ಹೋರಾಟದ ಅನುಭವ ಹಂಚಿಕೊಳ್ಳಲಿದ್ದಾರೆ.

ನಂತರ ಎಂ ಎಸ್ ಹಡಪದ್ ಅದನ್ನು ವಿಸ್ತರಿಸಲಿದ್ದಾರೆ.

ವಿಷಯ 4: ಬಸವ ಸಂಘಟನೆಗಳು ಚುನಾವಣೆಗಳಲ್ಲಿ ಸಕ್ರಿಯವಾಗುವುದು ಹೇಗೆ?

ಇಂದು ಲಿಂಗಾಯತ ಧರ್ಮಕ್ಕೆ ರಾಜಕೀಯ ವಿರೋಧವಿದೆ. ಲಿಂಗಾಯತ ಮತಗಳಿಂದ ಗೆದ್ದ ಲಿಂಗಾಯತ ರಾಜಕಾರಣಿಗಳನ್ನೇ ಲಿಂಗಾಯತರ ವಿರುದ್ಧ ಬಳಸಿಕೊಳ್ಳಲಾಗುತ್ತಿದೆ.

ಇದನ್ನು ತಡೆಯಬೇಕಾದರೆ ಬಸವ ಸಂಘಟನೆಗಳು ಕೂಡ ಚುನಾವಣೆಯಲ್ಲಿ ಸಕ್ರಿಯವಾಗಿ ಒಂದಷ್ಟು ಮತಗಳ ಬಗ್ಗೆ ಪ್ರಭಾವ ಬೀರುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕೇ?

2023ರ ಚುನಾವಣೆಯಲ್ಲಿ ಎದ್ದೇಳು ಕರ್ನಾಟಕ ಪ್ರಗತಿಪರ ಸಂಘಟನೆಗಳಿಗೆ ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಬಗ್ಗೆ ತರಭೇತಿ ನೀಡಿತು. ಅದೇ ರೀತಿ ಚುನಾವಣೆ ಎದುರಿಸಲು ನಾವೂ ಕೂಡ ಸಿದ್ಧರಾಗಬೇಕೇ?

ಈ ವಿಷಯದ ಬಗ್ಗೆ ಟಿ ಎಚ್ ಬಸವರಾಜ ಪೀಠಿಕೆ ಮಂಡಿಸಲಿದ್ದಾರೆ. ನಂತರ ಚಿಂತಾಮಣಿ ಸಿಂಧಗಿ ಅದನ್ನು ವಿಸ್ತರಿಸಲಿದ್ದಾರೆ.

ವಿಷಯ 5: ಲಿಂಗಾಯತ ಧರ್ಮದ ಬಗ್ಗೆ ಅಭಿಪ್ರಾಯ ರೂಪಿಸುವುದು ಹೇಗೆ?

ಯಾವುದೇ ಹೋರಾಟಕ್ಕೆ ಜನಬೆಂಬಲ ಬೇಕಾದರೆ ಅದರ ವಿಚಾರಧಾರೆಯನ್ನು ಜನರಿಗೆ ಮನಮುಟ್ಟುವ ಹಾಗೆ ನಿರೂಪಿಸಬೇಕು. ಜನರ ಅಭಿಪ್ರಾಯವನ್ನು ರೂಪಿಸುವ ಬಹಳ ಮುಖ್ಯ ಹಂತವಿದು.

ಜನಸಾಮಾನ್ಯರಿಗೆ ಲಿಂಗಾಯತ ಧರ್ಮದ ಮಾನ್ಯತೆಯ ಹೋರಾಟವನ್ನು ಹೇಗೆ ವಿವರಿಸಬೇಕು? ನಮ್ಮ ಚಳುವಳಿಯನ್ನು ಚುನಾವಣೆಗಳ ಮೇಲೆ ಪ್ರಭಾವ ಬೀರುವಂತೆ ಬೆಳೆಸಬಹುದೇ?

ಈ ವಿಷಯದ ಬಗ್ಗೆ ಡಾ. ಅಕ್ಕಿ ಬಸವೇಶ ಪೀಠಿಕೆ ಹಾಕಲಿದ್ದಾರೆ. ನಂತರ ಡಾ ಜಿ ಬಿ ಪಾಟೀಲ್ ಅದನ್ನು ವಿಸ್ತರಿಸಲಿದ್ದಾರೆ.

ವಿಷಯ 6: ನಾಡು, ನುಡಿಗೆ ಬಸವ ಸಂಘಟನೆಗಳು ಸ್ಪಂದಿಸಲಿ

ಸ್ವಾತಂತ್ರ್ಯ, ಏಕೀಕರಣ ಚಳುವಳಿಗಳಲ್ಲಿ ಲಿಂಗಾಯತ ಸಮುದಾಯ ಮಹತ್ವದ ಕೊಡುಗೆ ನೀಡಿದೆ. ಅದೇ ಮೇಲ್ಪಂಕ್ತಿಯನ್ನು ಇಂದು ನಾವು ಅನುಸರಿಸಬೇಕು. ಬಸವ ಸಂಘಟನೆಗಳು ಸಮುದಾಯದ ವಿಷಯಗಳಿಗೆ ಸೀಮಿತವಾಗಬಾರದು.

ಈ ವಿಷಯದ ಬಗ್ಗೆ ಬಸು ಸೂಳಿಭಾವಿ ನಿಮಿಷ ಪೀಠಿಕೆ ಮಂಡಿಸಲಿದ್ದಾರೆ. ನಂತರ ಬಿ ಎ ಕೆಂಚರೆಡ್ಡಿ ಅದನ್ನು ವಿಸ್ತರಿಸಲಿದ್ದಾರೆ.

ವಿಷಯ 7: ಅನುಭವ ಮಂಟಪ ಜಾಗೃತಿ ಶಿಬಿರ

ಮುಂದಿನ ವರ್ಷ ನೂತನ ಅನುಭವ ಮಂಟಪ ಲೋಕಾರ್ಪಣೆಯಾಗಲಿದೆ. ಅದರ ನಿರ್ವಹಣೆ ಹಾಗೂ ಸಂರಕ್ಷಣೆಗೆ ರಾಜ್ಯಾದ್ಯಂತ ಸ್ವಯಂಸೇವಕರ ಪಡೆ ಕಟ್ಟುವ ಅಗತ್ಯವಿದೆ.

ಅಶೋಕ ಬರಗುಂಡಿ ಹಾಗೂ ಚಂದ್ರಶೇಖರ ವಸ್ತ್ರದ ಅನುಭವ ಮಂಟಪ ಜಾಗೃತಿ ಶಿಬಿರ ನಡೆಸಿಕೊಡಲಿದ್ದಾರೆ.

ಅನುಭವ ಮಂಟಪ ಜಾಗೃತಿ ಶಿಬಿರಗಳು ಬಸವ ಶಕ್ತಿ ಕಾರ್ಯಕ್ರಮದ ಜೊತೆಗೆ ಶುರುವಾಗುತ್ತಿವೆ. ನಂತರ ಅವುಗಳು ಪ್ರತ್ಯೇಕವಾಗಿ ರಾಜ್ಯಾದ್ಯಂತ ವಿಸ್ತಾರವಾಗುತ್ತವೆ.

ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ, ಶರಣ ಸಾಹಿತ್ಯ ಪರಿಷತ್, ಮುಂತಾದ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ.

ಸಂಘಟಕರು, ಕೆ. ಎಸ್. ಚಟ್ಟಿ ಅಧ್ಯಕ್ಷರು ,ಜೆ. ಎಲ್. ಎಂ. ಗದಗ ಶ್ರೀ ಅಶೋಕ ಬರಗುಂಡಿ, ಶ್ರೀ ಶೇಖಣ್ಣ ಕವಳಿಕಾಯಿ, ಕಾರ್ಯದರ್ಶಿ, ಜೆಎಲ್‌ಎಂ. ಶ್ರೀ ಪ್ರಕಾಶ್ ಅಸುಂಡಿ ಬಸವದಳ, ಶ್ರೀ ವಿ. ಕೆ. ಕರೇಗೌಡ್ರ, ಅಧ್ಯಕ್ಷರು ಬಸವದಳ , ಶ್ರೀ ಕೆ.ಎ. ಬಳಿಗೇರಿ ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗದಗ, ಶ್ರೀ ಉಮೇಶ ಪುರದ, ಅಧ್ಯಕ್ಷರು. ಲಿಂಗಾಯತ ಪ್ರಗತಿಶೀಲ ಸಂಘ ಗದಗ ಶ್ರೀಮತಿ ಶ್ರೀದೇವಿ ಶೆಟ್ಟರ್ ಅಧ್ಯಕ್ಷರು ಜಾ.ಲಿಂ.ಮ.ಮಹಿಳಾ ಘಟಕ ಗದಗ ಜಿಲ್ಲಾ ಹಾಗೂ ಗದಗ ಜಿಲ್ಲೆಯ ಯಾವತ್ತೂ ಲಿಂಗಾಯತ ಸಂಘಟನೆಯ ಕಾರ್ಯಕರ್ತರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *