ಕನ್ನೇರಿ ಸ್ವಾಮಿ ಹಿಂದೂ ಸಮಾವೇಶಕ್ಕೆ ಕಾಯಕ ಸಮಾಜಗಳ ಒಕ್ಕೂಟದ ವಿರೋಧ

ಕಲಬುರಗಿ:

ನಗರದ ಎನ್.ವಿ. ಮೈದಾನದಲ್ಲಿ ಸೆ. 27ರಂದು ನಡೆಸಲು ಉದ್ದೇಶಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಕರ್ನಾಟಕ ರಾಜ್ಯ ಕಾಯಕ ಶರಣರ ಸಮಾಜಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ನಗರದ ಜಗತ್ ಬಡಾವಣೆಯಲ್ಲಿರುವ ಶರಣ ಢೋಹರ ಕಕ್ಕಯ್ಯ ದೇವಸ್ಥಾನದಲ್ಲಿ ಬುಧವಾರ ಸಭೆ ಸೇರಿದ ಪ್ರಮುಖರು, ಕನ್ನೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಜಿಗೆ ಬಸವತತ್ವದ ಮೇಲೆ ನಂಬಿಕೆಯಿಲ್ಲದಿದ್ದರೆ ಲಿಂಗ ಬಿಚ್ಚಿಟ್ಟು ಜನಿವಾರ ಧರಿಸಿಕೊಳ್ಳಲಿ. ಆದರೆ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ಮಾಡುತ್ತಿರುವುದು ಸರಿಯಲ್ಲ ಎಂದು ಚರ್ಚಿಸಿದರು.

12ನೇ ಶತಮಾನದ ಬಸವಾದಿ ಶರಣರ ದಾರಿಯಲ್ಲಿ 17ನೇ ಶತಮಾನದಲ್ಲಿ ಆಗಿ ಹೋದ ಕನ್ನೇರಿ ಮಠದ ಕಾಡಸಿದ್ಧೇಶ್ವರರು ಶರಣ ಪರಂಪರೆಯಲ್ಲಿ ಅಗ್ರಗಣ್ಯ ಹೆಸರು. ಶರಣ ಪರಂಪರೆಯ ಮಠದಲ್ಲಿ ವೈದಿಕ ಆಚರಣೆ ಮಾಡುತ್ತಿರುವುದು ಕನ್ನೇರಿ ಪೀಠ ಪರಂಪರೆಯನ್ನು ಬುಡಮೇಲು ಮಾಡಿ ಸಮಾಜದಲ್ಲಿ ಶಾಂತಿ ಕದಡುವ ಕಾರ್ಯ ಅವರ ವ್ಯಕ್ತಿತ್ವಕ್ಕೆ ತಕ್ಕುದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೀಗಾಗಿ ಬಸವತತ್ವ ಹಾಗೂ ಸಂವಿಧಾನ ರಕ್ಷಣಾ ಸಮಿತಿ ಸೆಪ್ಟಂಬರ್ 25ರಂದು ಹಮ್ಮಿಕೊಂಡಿರುವ ಪ್ರತಿಭಟನಾ ರ್ಯಾಲಿಯಲ್ಲಿ ವಿವಿಧ ಕಾಯಕ ಸಮಾಜದ ಜನರು ಪಾಲ್ಗೊಳ್ಳಲು ನಿರ್ಧರಿಸಲಾಯಿತು.

ಒಕ್ಕೂಟದ ರಾಜ್ಯಾಧ್ಯಕ್ಷ ಭೀಮಣ್ಣ ಬೋನಾಳ,‌ ಡೋಹರ ಕಕ್ಕಯ್ಯ ಸಮಾಜದ ಸಾಯಿಬಣ್ಣ ಹೋಳ್ಕರ್, ಹೆಳವರ ಸಮಾಜದ ಮಲ್ಲಿಕಾರ್ಜುನ ಹೆಳವರ್, ಹರಳಯ್ಯ ಸಮಾಜದ ಕಾಶಿರಾಯ ನಂದೂರ್, ಶಿವಲಿಂಗಪ್ಪ ಗೌಳಿ, ಹಡಪದ ಅಪ್ಪಣ್ಣ ಸಮಾಜದ ವೀರಣ್ಣ ಸಣ್ಣೂರು, ಮಡಿವಾಳ ಸಮಾಜದ ಧರ್ಮಣ್ಣ ಮಡಿವಾಳ, ಜೇಡರ ದಾಸಿಮಯ್ಯ ಸಮಾಜದ ರೇವಣಸಿದ್ದಪ್ಪ ಗಡ್ಡದ, ಅಂಬಿಗರ ಚೌಡಯ್ಯ ಸಮಾಜದ ತಿಪ್ಪಣ್ಣಪ್ಪ ಕಮಕನೂರ್, ಮೇದಾರ ಕೇತಯ್ಯ ಸಮಾಜದ ಭೀಮಣ್ಣ ಬೋನಾಳ, ಕುರುಬ ಗೊಲ್ಲಾಳೇಶ್ವರ ಸಮಾಜದ ಹಿರಗಪ್ಪ ಪೂಜಾರಿ, ನೂಲಿಯ ಚಂದಯ್ಯ ಸಮಾಜದ ಬಿ.ಹೆಚ್. ಭಜಂತ್ರಿ ಮತ್ತು ರಮೇಶ್ ಹೊಸಮನಿ, ಸಿದ್ದರಾಮೇಶ್ವರ ಸಮಾಜದ ಭಾಷಾ ಘೋರಕನಾಥ,‌‌ ಚೌಗುಲೆ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
3 Comments
  • ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ.ಶರಣು ಶರಣಾರ್ಥಿ.

  • ಈ ಹಿಂದೂ ಸಮಾವೇಶವನ್ನು ನಡೆಸುವ ಸಂಘಟನೆಯ ಮುಖಂಡರು ಮತ್ತು ಅದರ ಇತರೆ ಪ್ರಮುಖರನ್ನು ಖಂಡತುಂಡವಾಗಿ ಈ ಸಮಾವೇಶ ನಡೆಸದಂತೆ ಒತ್ತಡಹಾಕಿ ಎಚ್ಚರಿಕೆ ನೀಡಬೇಕು. ಕಾನೂನು ಸುವ್ಯವಸ್ಥೆ ಅಡಿಯಲ್ಲಿ ಪೋಲೀಸರಿಗೆ ಅರುಹಬೇಕು. ಸಮಾಜದಲ್ಲಿ ಗೊಂದಲ ಉಂಟುಮಾಡುವ ಈ ಸಮಾವೇಶ ರದ್ದುಮಾಡುವಂತೆ ಕಾನೂನುಕ್ರಮ ಜರುಗಿಸುವಂತೆ ಒತ್ತಡವನ್ನು ತರಬೇಕು.

Leave a Reply

Your email address will not be published. Required fields are marked *