‘ಕನ್ನೇರಿ ಸ್ವಾಮಿ ಕಾರ್ಯಕ್ರಮಕ್ಕೆ ಅನುಮತಿ ಬೇಡ’

ಬಸವ ಮೀಡಿಯಾ
ಬಸವ ಮೀಡಿಯಾ

ಜೆಎಲ್ಎಂ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಒತ್ತಾಯ

ಬೀದರ

ಕಲಬುರಗಿಯಲ್ಲಿ ಇದೇ 27ರಂದು ಹಮ್ಮಿಕೊಳ್ಳಲಾಗಿರುವ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರ ನೇತೃತ್ವದ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕನ್ನೇರಿ ಸ್ವಾಮಿ ಅವರ ಕಾರ್ಯಕ್ರಮವು ಸಮಾಜದಲ್ಲಿ ಅನಗತ್ಯ ಗೊಂದಲಕ್ಕೆ ಕಾರಣವಾಗಿ, ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮವನ್ನು ವಿರೋಧಿಸಿ ಬಸವಪರ ಸಂಘಟನೆಗಳು ಹಾಗೂ ಬಸವ ಭಕ್ತರು ಕಲಬುರಗಿಯಲ್ಲಿ ಇದೇ 25ರಂದು ಹಮ್ಮಿಕೊಂಡಿರುವ ಪ್ರತಿಭಟನೆ ನ್ಯಾಯೋಚಿತವಾಗಿದೆ. ಈ ಪ್ರತಿಭಟನೆಗೆ ಜಾಗತಿಕ ಲಿಂಗಾಯತ ಮಹಾಸಭಾದ ಸಂಪೂರ್ಣ ಬೆಂಬಲವಿದ್ದು, ಬಸವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಧನ್ನೂರ ಮನವಿ ಮಾಡಿದ್ದಾರೆ.

“ಕಲ್ಯಾಣ ಕರ್ನಾಟಕ ಬಸವ ಭೂಮಿಯಾಗಿದೆ. ಬಸವಣ್ಣನವರ ತತ್ವ, ವಚನ ಸಾಹಿತ್ಯ ಹಾಗೂ ಶರಣ ಪರಂಪರೆಯನ್ನು ಉಳಿಸಿ ಬೆಳೆಸಲು ಈ ಭಾಗದಲ್ಲಿ ಅನೇಕ ಮಠಾಧೀಶರು, ಬಸವಪರ ಸಂಘಟನೆಗಳು ಹಾಗೂ ಬಸವ ಭಕ್ತರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕನ್ನೇರಿ ಸ್ವಾಮಿ ಇಲ್ಲಿ ಬಸವತತ್ವದ ಹೆಸರಿನಲ್ಲಿ ಕಾರ್ಯಕ್ರಮ ನಡೆಸುವ ಅಗತ್ಯವಿಲ್ಲ,” ಎಂದು ಅವರು ಹೇಳಿದ್ದಾರೆ.

ಶರಣ ಪರಂಪರೆ ಮತ್ತು ಬಸವತತ್ವದ ಕುರಿತು ಸಮರ್ಪಕ ಅರಿವಿಲ್ಲದೆ ಬಸವಾದಿ ಶರಣರ ಸಂದೇಶ ಹಾಗೂ ವಚನ ಸಾಹಿತ್ಯವನ್ನು ಮನಬಂದಂತೆ ವ್ಯಾಖ್ಯಾನಿಸುವುದರಿಂದ ಬಸವಭಕ್ತರಲ್ಲಿ ಗೊಂದಲ ಉಂಟಾಗುತ್ತಿದೆ. ಶರಣರ ಇತಿಹಾಸ ಮತ್ತು ಪರಂಪರೆಯನ್ನು ಗೌರವಿಸುವ ಜವಾಬ್ದಾರಿ ಎಲ್ಲರಿಗೂ ಇದೆ ಎಂದು ಧನ್ನೂರ ತಿಳಿಸಿದ್ದಾರೆ.

ಕನ್ನೇರಿ ಸ್ವಾಮಿ ಈಗಾಗಲೇ ವಿವಿಧ ಸಂದರ್ಭಗಳಲ್ಲಿ ನ್ಯಾಯಾಲಯಗಳು ಹಾಗೂ ಜಿಲ್ಲಾಡಳಿತಗಳ ನಿರ್ಬಂಧಗಳನ್ನು ಎದುರಿಸಿದ್ದಾರೆ. 2026ರ ಜೂನ್ 28ರಂದು ಬಸವಕಲ್ಯಾಣದಲ್ಲಿ ನಡೆದ ಕಾರ್ಯಕ್ರಮಕ್ಕೂ ಅನುಮತಿ ನೀಡಲಾಗಿದ್ದರೂ, ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಅವರ ಭಾಷಣಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಇಂತಹ ಹಿಂದಿನ ಬೆಳವಣಿಗೆಗಳ ನಡುವೆಯೂ ಸಮಾಜದಲ್ಲಿ ಗೊಂದಲ ಮತ್ತು ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದಾದ ಕಾರ್ಯಕ್ರಮಗಳನ್ನು ಮುಂದುವರಿಸುವುದು ಸರಿಯಲ್ಲ.

“ಸಮಾಜದಲ್ಲಿ ಒಡಕು ಉಂಟುಮಾಡುವ, ಪರಸ್ಪರ ನಿಂದನೆ ಮತ್ತು ಅಪಮಾನಕ್ಕೆ ಅವಕಾಶ ನೀಡುವ ಯಾವುದೇ ಕಾರ್ಯಕ್ರಮಗಳಿಂದ ಸಮಾಜಕ್ಕೆ ಪ್ರಯೋಜನವಿಲ್ಲ. ಬಸವಣ್ಣನವರ ಸಂದೇಶವು ಸಮಾನತೆ, ಕಾಯಕ, ದಾಸೋಹ, ಸಹಬಾಳ್ವೆ ಮತ್ತು ಮಾನವೀಯತೆಯ ಸಂದೇಶವಾಗಿದೆ. ಆದ್ದರಿಂದ ಬಸವತತ್ವದ ಹೆಸರಿನಲ್ಲಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನಗಳು ನಡೆಯಬಾರದು,” ಎಂದು ಬಸವರಾಜ ಧನ್ನೂರ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *