ನಿಜಾಚರಣೆ: ನಟಿ ದಿವ್ಯಾಂಜಲಿಯ ಬಸವತತ್ವದ ಕಲ್ಯಾಣ ಮಹೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

ಗಡಿಭಾಗದಲ್ಲಿ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ನಿರ್ಗತಿಕರು, ಬಡವರು, ದುರ್ಬಲ ವರ್ಗದವರಿಗೆ ಅನ್ನ, ಅಕ್ಷರ ಮತ್ತು ಆಶ್ರಯ ಕಲ್ಪಿಸಿ ಜೀವನದಲ್ಲಿ ಹೊಸ ಭರವಸೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ನಗರದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಗುರುವಾರ ನಡೆದ ದಿವ್ಯಾಂಜಲಿ ಮತ್ತು ಪವನಕುಮಾರ ಅವರ ಕಲ್ಯಾಣ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪೂಜ್ಯರು ಮಾಡುತ್ತಿರುವ ಸಮಾಜಪರ ಕಳಕಳಿ, ಸೇವೆ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ. ಹೆತ್ತವರಿಗೆ ಬೇಡವಾದ ಮಕ್ಕಳನ್ನು ಕರೆತಂದು ಪಾಲನೆ, ಪೋಷಿಸಿ ಗುಣಾತ್ಮಕ ಶಿಕ್ಷಣ ಮತ್ತು ಸಂಸ್ಕಾರ ನೀಡಿ ಸಮಾಜಕ್ಕೆ ಉತ್ತಮ ನಾಗರಿಕರನ್ನಾಗಿ ಕೊಡುಗೆ ನೀಡುತ್ತಿದ್ದಾರೆ.

ಪೂಜ್ಯರ ಆಶ್ರಯದಲ್ಲಿ ಬೆಳೆದಿರುವ ದಿವ್ಯಾಂಜಲಿ ರಿಯಾಲಿಟಿ ಟಿವಿ ಶೋನಲ್ಲಿ ರಾಜ್ಯದ ಮನೆ ಮಗಳಾಗಿ‌ ಬೆಳೆದಿದ್ದಾಳೆ. ಮುಂದೆಯು ಉತ್ತಮ ಸಾಧನೆ ಕೈಗೊಂಡು ಈ ಭಾಗದ ಕೀರ್ತಿ ಪಸರಿಸಲಿ ಎಂದು ಶುಭ ಹಾರೈಸಿದರು.

ಸಾನಿಧ್ಯ ವಹಿಸಿದ್ದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ದಿವ್ಯಾಂಜಲಿಗೆ ಬಾಲ್ಯದಿಂದಲೇ ಕಲೆ, ನಾಟಕ, ಅಭಿನಯದ ಬಗ್ಗೆ ಅಭಿರುಚಿ ಇತ್ತು. ಅದನ್ನು ಗುರುತಿಸಿ ಬೆಳಕಿಗೆ ತರುವ ಪ್ರಯತ್ನ ಮಾಡಿದ್ದೇವೆ. ಆಕೆಯು ಸಿಕ್ಕ‌ ಅವಕಾಶಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆ ತೋರುವ ಪ್ರಯತ್ನ ಮಾಡುತ್ತಿದ್ದಾಳೆ. ಮಹಾನಟಿ ಶೋ ಮೂಲಕ ಕನ್ನಡಿಗರ ಮನಸ್ಸು ಗೆದ್ದು ತಮ್ಮದೇ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾಳೆ ಎಂದು ಹೆಮ್ಮೆ ವ್ಯಕ್ತ ಪಡಿಸಿದರು.

ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿ ಮಾತನಾಡುತ್ತ, ಡಾ. ಬಸವಲಿಂಗ ಪಟ್ಟದ್ದೇವರು ತಮ್ಮ ಇಡೀ ಬದುಕು ಸಮಾಜ ಸೇವೆಗಾಗಿ ಧಾರೆಯೆರೆದಿದ್ದಾರೆ. ಅನಾಥರು, ನಿರಾಶ್ರಿತರು, ನಿರ್ಗತಿಕರ ಬಗ್ಗೆ ಪರಮ ಪೂಜ್ಯರಿಗೆ ಎಲ್ಲಿಲ್ಲದ ಕಾಳಜಿಯಿದೆ.

ಪೂಜ್ಯರ ಆಶ್ರಯದಲ್ಲಿ ಬೆಳೆದ ದಿವ್ಯಾಂಜಲಿ ಉತ್ತಮ ಶಿಕ್ಷಣ, ಸಂಸ್ಕಾರ ಪಡೆದು ತನ್ನ ಅಭಿನಯದ ಮೂಲಕ ರಾಜ್ಯದ ಜನರ ಮೆಚ್ಚುಗೆ ಪಾತ್ರರಾಗಿದ್ದಾಳೆ. ಇದೀಗ ಆಕೆಗೆ ವಿವಾಹ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ ಎಂದರು.

ಮಹಾಲಿಂಗ ಸ್ವಾಮೀಜಿ, ಸಿದ್ದಬಸವ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಬಸವಪ್ರಿಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಹಣಮಂತರಾವ ಚವ್ಹಾಣ, ಸೋಮನಾಥಪ್ಪ ಅಷ್ಟೂರೆ, ಚನ್ನಬಸವ ಬಳತೆ, ಚಂದ್ರಕಾಂತ ಪಾಟೀಲ, ಧನರಾಜ ಬಂಬುಳಗೆ, ಮೋಹನ ರೆಡ್ಡಿ, ಗಣಪತಿ ಬಾವುಗೆ, ಅನಿಲ ಹಾಲಕುಡೆ, ಜಯಕ್ಕ ಗಾಂವಕರ್ ಸೇರಿದಂತೆ ಹಲವರು ಇದ್ದರು.

ಹಾಸ್ಯ ಕಲಾವಿದ ನವಲಿಂಗ ಪಾಟೀಲ ನಿರೂಪಿಸಿದರು. ದೀಪಕ ಠಮಕೆ ವಂದಿಸಿದರು.

ಹಸೆಮಣೆ ಏರಿದ ದಿವ್ಯಾಂಜಲಿ

ಮಹಾಮಟಿ ಸೀಸನ್-2ರ ನಟಿ ದಿವ್ಯಾಂಜಲಿಗೆ ಗುರುವಾರ ಕಂಕಣ ಭಾಗ್ಯ ಲಭಿಸಿದೆ. ಮೈಸೂರು ಮೂಲದ ಯುವಕ ಪವನಕುಮಾರ ವೈ ಎಂಬುವರೊಂದಿಗೆ ವಿವಾಹ ನೆರವೇರಿದೆ‌.

2005ರಲ್ಲಿ ಹೆತ್ತವರಿಗೆ ಬೇಡವಾಗಿ ಚನ್ನಬಸವೇಶ್ವರ ಗುರುಕುಲ ಪ್ರವೇಶಿಸಿದ ದಿವ್ಯಾಂಜಲಿಗೆ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಆಶ್ರಯ ನೀಡಿದರು. ಬಾಲ್ಯದಿಂದಲೇ ಆಕೆಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿದರು. ಪದವಿ ವರೆಗೂ ವಿಧ್ಯಾಭ್ಯಾಸ ಮಾಡಿದ ದಿವ್ಯಾಂಜಲಿಯ ಕಲೆ, ಅಭಿನಯ ಆಸಕ್ತಿ ಗುರುತಿಸಿ ನಾಟಕ, ನಟನೆ ತರಬೇತಿಗಾಗಿ ಸಾಣೇಹಳ್ಳಿ ಮಠಕ್ಕೆ ಸೇರಿಸಿದರು.

ನಂತರ ಅಲ್ಲಿ ತರಬೇತಿ ಪಡೆದ ಈ ಯುವತಿ ಮಹಾನಟಿ ಸೀಸನ್-2ರ ಸ್ಪರ್ಧೆಗೆ ಆಯ್ಕೆಗೊಂಡು ತನ್ನ ಅಭಿನಯದ ಮೂಲಕ ಉತ್ತಮ ಪ್ರದರ್ಶನ ತೋರಿ ರಾಜ್ಯದ ಜನರ ಗಮನ ಸೆಳೆದಳು.

ಇದೀಗ ಧಾರವಾಹಿ, ಸಿನಿಮಾಗಳಲ್ಲಿ ನಟನೆಗೆ ಅವಕಾಶ ಗಿಟ್ಟಿಸಿಕೊಂಡಿರುವ ದಿವ್ಯಾಂಜಲಿ ಗುರುವಾರ ಹಸೆಮಣೆ ಏರಿದಳು.

ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಬಸವತತ್ವ ವಿಧಿ ವಿಧಾನದಂತೆ ಸಂಭ್ರಮದಿಂದ ಕಲ್ಯಾಣ ಮಹೋತ್ಸವ ಜರುಗಿತು. ಸಚಿವ ಈಶ್ವರ ಖಂಡ್ರೆ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ವಧು-ವರರಿಗೆ ಶುಭ ಕೋರಿದರು.

ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *