‘ಪ್ರಾಣ ತೆತ್ತಾದರೂ ಶರಣ ತತ್ವ ಉಳಿಸಿಕೊಳ್ಳುತ್ತೇವೆ; ನಮ್ಮಲ್ಲೂ ಗಣಾಚಾರಿಗಳಿದ್ದಾರೆ’
ಕಲಬುರಗಿ
ಬಸವಕಲ್ಯಾಣದಲ್ಲಿ ಜೂನ್ 28 ಬೆಳಗ್ಗೆ 10 ಗಂಟೆಗೆ ಬಂಗ್ಲಾ (ಪ್ರವೇಶದ್ವಾರ) ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ ತಿಳಿಸಿದರು.
ಅದೇ ದಿನ ಆಯೋಜಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶ ವಿರೋಧಿಸಿ, ಸೋಗಲಾಡಿಗಳ ಬಣ್ಣ ಬಯಲು ಮಾಡಲು ಹೋರಾಟ ನಡೆಯಲಿದೆ ಎಂದು ಶೆಟಗಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
“ವರ್ಣಾಶ್ರಮ ಧರ್ಮವನ್ನು ಅಪ್ಪಿಕೊಂಡ ಸನಾತನಿಗಳ ಮತ್ತವರ ವೇದಾಗಮಗಳನ್ನು ಧಿಕ್ಕರಿಸಿದ ಬಸವಾದಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ಎಂಬ ಹೊಸ ಸೋಗು ಹಾಕಿಕೊಂಡು ಬರುತ್ತಿದ್ದಾರೆ.
೧೨ನೇ ಶತಮಾನದಲ್ಲಿ ಬಸವಾದಿ ಶರಣರನ್ನು ಅಟ್ಟಾಡಿಸಿಕೊಂಡು ಕೊಲೆಗೈದವರು ಈಗ ವಚನಗಳನ್ನು ಪುರಸ್ಕರಿಸಲು ಸಾಧ್ಯವೇ ಇಲ್ಲ.
ಎಲ್ಲ ಬಗೆಯ ಅಸಮಾನತೆಯನ್ನು ಅಸ್ತಿತ್ವಗೊಳಿಸಿದ ಮನುಸ್ಮೃತಿಯನ್ನು ಒಪ್ಪುವವರಿಗೆ ಮತ್ತು ಶರಣರಿಗೂ ಯಾವುದೇ ಸಂಬಂಧವಿಲ್ಲ. ಜನಸಾಮಾನ್ಯರ ದಿಕ್ಕು ತಪ್ಪಿಸಲು ಹೊರಟಿದ್ದಾರೆ. ಸಂಘ ಗ್ಯಾಂಗಿನ ಕಟ್ಟಾಳುಗಳು ಕರ್ನಾಟಕದಲ್ಲಿ ಬಸವ ತತ್ವಗಳನ್ನು ನಾಶ ಮಾಡುತ್ತ ಹೊರಟಿದ್ದಾರೆ.
ವಚನಗಳನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸುತ್ತ, ಅರ್ಧ ಮರ್ಧ ವಚನಗಳನ್ನು ಉದಾಹರಿಸುತ್ತ, ಸಾಮಾನ್ಯ ಜನರಿಗೆ ದಾರಿತಪ್ಪಿಸುತ್ತಾ ದಿನಕ್ಕೊಂದು ವೇಷ ತೊಟ್ಟುಕೊಂಡು ಕುಣಿಯುತಿದ್ದಾರೆ.
ಸಂಘಿಗಳು ಈಗ ಕರ್ನಾಟಕದಲ್ಲಿ ಲಿಂಗಾಯತರನ್ನು ಗುರಿಯಾಗಿಸಿಕೊಂಡು ಜನರ ಮುಗ್ಧತೆ ಮತ್ತು ದೈವಭೀರುತ್ವವನ್ನು ದುರ್ಬಳಕೆ ಮಾಡಿಕೊಂಡು ಎಲ್ಲೆಡೆ ಬಸವಾದಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ
ಮಾಡುತ್ತಿದ್ದಾರೆ,” ಎಂದು ಶೆಟಗಾರ ಟೀಕಿಸಿದರು.
“ಬಸವಾದಿ ಹೆಸರಿನಲ್ಲಿ ನಡೆಸುತ್ತಿರುವ ಹಿಂದೂ ಸಮಾವೇಶಗಳಿಗೆ ಎಲ್ಲೆಡೆ ವಿರೋಧವಾಗುತ್ತಿದೆ.
ಈ ಎಲ್ಲ ಚಟುವಟಿಕೆಗಳ ಮೂಲ ಇರುವುದೇ ಆರ್. ಎಸ್.ಎಸ್. ಎಂಬ ಅಕ್ರಮ ಸಂಘದಲ್ಲಿ. ಆರ್. ಎಸ್. ಎಸ್. ಕಟ್ಟಾಳುಗಳು 2027ರಲ್ಲಿ ನಡೆಸುತ್ತಿರುವ ಬಸವ ಭಾರತ ಸಂಸ್ಕೃತಿ ಉತ್ಸವದ ಅಂಗವಾಗಿಯೇ ಈ ಎಲ್ಲ ಚಟುವಟಿಕೆಗಳು ನಡೆಯುತ್ತಿವೆ.
ಬಸವ ಪರಂಪರೆಯ ಮಠಾಧೀಶರನ್ನು ಬಳಸಿಕೊಂಡು ಅವರು ಜನಸಮುದಾಯಗಳ ದಿಕ್ಕು ತಪ್ಪಿಸುತ್ತಿದ್ದಾರೆ. ಸನಾತನಿಗಳು ಅದೆಷ್ಟೇ ಬಸವಾದಿಗಳ ಹೆಸರಿನಿಂದ ನಾಟಕ ನಡೆಸಲು ಹೊರಟರೂ ನೈಜ ಬಸವಾಭಿಮಾನಿಗಳು ಅವರ ಮರೆ-ಮೋಸಗಳನ್ನು ಬಯಲು ಮಾಡದೆ ಬಿಡುವುದಿಲ್ಲ,” ಎಂದು ಎಚ್ಚರಿಸಿದರು.
“ಬಸವಾದಿ ಶರಣ ತತ್ವಗಳು ಇಂದು ವಿಶ್ವದಾದ್ಯಂತ ಪಸರಿಸಿ ಎಲ್ಲರೂ ಕಲ್ಯಾಣವನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಇದು ಸನಾತನವಾದಿಗಳಲ್ಲಿ ನಡುಕ ಹುಟ್ಟಿಸಿದೆ. ಮೌಡ್ಯ, ಕಂದಾಚಾರ, ಜ್ಯೋತಿಷ್ಯ ಇತ್ಯಾದಿಗಳ ಮೂಲಕ ತಮ್ಮ ಅಂಗಡಿಗಳನ್ನು ನಡೆಸುತ್ತ ಅಪಾರ ಧನ-ಧಾನ್ಯಗಳನ್ನು ಲೂಟಿ ಹೊಡೆದು ದುಡಿಯದೆ ಸಂಪತ್ತನ್ನು ಬಾಚಿಕೊಂಡು ಬರುತ್ತಿರುವ ಪುರೋಹಿತರಿಗೆ ಸಮಾನತೆ ಮತ್ತು ದೇಹವೆ ದೇವಾಲಯ ಎಂದಿರುವ ಬಸವತತ್ವಗಳು ರುಚಿಸಲು ಸಾಧ್ಯವಿಲ್ಲ,” ಎಂದು ಹೇಳಿದರು.
ಬಸವ ಚಿಂತಕಿ ಡಾ. ಮೀನಾಕ್ಷಿ ಬಾಳಿ ಮಾತನಾಡಿ, ಇದು ಶರಣ ತತ್ವ ಮತ್ತು ಸನಾತನ ತತ್ವಗಳ ನಡುವಿನ ತಾತ್ವಿಕ ಸಂಘರ್ಷವಾಗಿದೆ. ಬಸವಣ್ಣನವರ ಕಾಲದಿಂದಲೇ ಪ್ರಾರಂಭವಾಗಿರುವ ಸಂಘರ್ಷ ಈ ಕ್ಷಣಕ್ಕೂ ಮುಂದುವರೆದುಕೊಂಡು ಬರುತ್ತಿದೆ. ಬಸವ ತತ್ವಗಳನ್ನು ಯಾವುದೇ ಕಾರಣಕ್ಕೂ ತಿರುಚಲು ಬಿಡುವುದಿಲ್ಲ. ಪ್ರಾಣ ತೆತ್ತಾದರೂ ಶರಣ ತತ್ವಗಳನ್ನು ಉಳಿಸಿಕೊಳ್ಳುತ್ತೇವೆ. ಶರಣರು ಯಾರಿಗೂ ಅಂಜುವವರಲ್ಲ ಎಂದು ತಿಳಿಸಿದರು.
ಪ್ರಗತಿಪರ ಚಿಂತಕ ಪ್ರೊ.ಆರ್.ಕೆ. ಹುಡಗಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡಬೇಕೆಂಬ ಹೋರಾಟ ಪ್ರಾರಂಭವಾದ ಕೂಡಲೇ ಲಿಂಗಾಯತರನ್ನು ದಿಕ್ಕು ತಪ್ಪಿಸುವ ಹುನ್ನಾರ ಶುರುವಾಗಿದೆ. ಕತ್ತಲೆ ಬೆಳಕನ್ನು ಸೇರಿಸುವ ಹುನ್ನಾರವಾಗಿದೆ. ಎರಡೂ ವೈರುಧ್ಯಗಳು ಒಂದೇ ಕಡೆ ಸೇರುವುದಿಲ್ಲ ಎಂದರು.
ಬಸವಪರ ಸಂಘಟನೆಗಳ ಪ್ರಮುಖರಾದ ರವೀಂದ್ರ ಶಾಬಾದಿ ಮಾತನಾಡಿ, ಕಾವಿ ತೊಟ್ಟವರ ಬಾಯಿಯಲ್ಲಿ ಅಸಾಂವಿಧಾನಿಕ ಮಾತು ಆಡುವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ನಮ್ಮಲ್ಲೂ ಗಣಾಚಾರಿಗಳಿದ್ದಾರೆ ಎಂದು ಎಚ್ಚರಿಸಿದರು.
ಅಶೋಕ ಘೂಳಿ, ನೀಲಕಂಠ ಅವಂಟಿ, ರಾಜಶೇಖರ ಯಂಕಂಚಿ, ಶಾಂತಪ್ಪ ಪಾಟೀಲ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಹನುಂಮತರಾಯ ಪಾಟೀಲ, ಶರಣಪ್ಪ ನಿಂಗೊಂಡಿ, ಸೋಮನಾಥ ಬಿರಾದಾರ, ಶಿವಶರಣಪ್ಪ ದೇಗಾಂವ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

