ಬಸವನಬಾಗೇವಾಡಿ: ಹಂಜ್, ಭಟ್ಟ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ

ಬಸವರಾಜ ನಂದಿಹಾಳ
ಬಸವರಾಜ ನಂದಿಹಾಳ

ಬಸವನಬಾಗೇವಾಡಿ :

ಕರ್ನಾಟಕದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವಣ್ಣನವರ ಕುರಿತು ‘ಬಸವ ಮಂಟಪ’ ಕೃತಿಯಲ್ಲಿ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಬರಹಗಳನ್ನು ಪ್ರಕಟಿಸಿ, ಬಸವಣ್ಣನವರನ್ನು ಕಳ್ಳ ಹಾಗೂ ಕೊಲೆಗಾರ ಎಂದು ಅವಹೇಳನಕಾರಿಯಾಗಿ ನಿಂದಿಸಿರುವುದನ್ನು ಖಂಡಿಸಿ, ಲೇಖಕ ರವಿ ಹಂಜ್ ಹಾಗೂ ಕೃತಿಗೆ ಸಹಕರಿಸಿದ ವಿಶ್ವೇಶ್ವರ ಭಟ್ಟರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಾಷ್ಟ್ರೀಯ ಬಸವ ಸೈನ್ಯದ ವತಿಯಿಂದ ಬಸವಣ್ಣನವರ ಜನ್ಮಭೂಮಿ ಬಸವನಬಾಗೇವಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆ ಚನ್ನಮ್ಮ ವೃತ್ತ, ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯುದ್ದಕ್ಕೂ ಪ್ರತಿಭಟನಾಕಾರರು ರವಿ ಹಂಜ್ ಹಾಗೂ ಆತನಿಗೆ ಸಹಕರಿಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಘೋಷಣೆಗಳನ್ನು ಕೂಗಿದರು. ಬಳಿಕ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ರವಿ ಹಂಜ್ ಅವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು, ಪ್ರತಿಕೃತಿಯನ್ನು ದಹಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಅವರು, 12ನೇ ಶತಮಾನದಲ್ಲಿಯೇ ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳನ್ನು ಜಗತ್ತಿಗೆ ಸಾರಿದ ವಿಶ್ವಗುರು ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕರು. ಅವರ ವಿಚಾರಧಾರೆಗಳು ಇಡೀ ಮಾನವಕುಲಕ್ಕೆ ದಾರಿದೀಪವಾಗಿವೆ. ಇಂತಹ ಮಹಾನ್ ಮಾನವತಾವಾದಿಗಳ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಹಾಗೂ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುವುದು ಖಂಡನೀಯ ಎಂದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದ ಮಹನೀಯರ ಗೌರವಕ್ಕೆ ಧಕ್ಕೆ ತರುವುದನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ‘ಬಸವ ಮಂಟಪ’ ಕೃತಿಯಲ್ಲಿನ ಆಕ್ಷೇಪಾರ್ಹ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇವೆ. ಲೇಖಕ ರವಿ ಹಂಜ್ ಹಾಗೂ ಕೃತಿಯ ಪ್ರಕಾಶಕ ವಿಶ್ವೇಶ್ವರ ಭಟ್ಟನ ವಿರುದ್ಧ ಕಾನೂನುಬದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸಭೆಯಲ್ಲಿ ರಾಷ್ಟ್ರೀಯ ಬಸವ ಸೈನ್ಯದ ಸಂಚಾಲಕ ಶ್ರೀಕಾಂತ ಕೊಟ್ರಶೆಟ್ಟಿ, ಮುಖಂಡರಾದ ಸುರೇಶಗೌಡ ಪಾಟೀಲ, ಡಿ.ಎಸ್.ಎಸ್. ಸಂಚಾಲಕ ಅರವಿಂದ ಸಾಲವಾಡಗಿ, ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಜಾಗತಿಕ ಲಿಂಗಾಯತ ಮಹಾಸಭಾದ ವಿವೇಕಾನಂದ ಕಲ್ಯಾಣಶೆಟ್ಟಿ, ದಲಿತ ಮುಖಂಡ ಮಾಂತೇಶ ಸಾಸಾಬಾಳ, ಬಸವರಾಜ ಗೊಳಸಂಗಿ, ಬಸವರಾಜ ಅವಟಿ, ಮಲ್ಲಿಕಾರ್ಜುನ ಹಳ್ಳಿ, ಮನ್ನಾನ ಶಾಬಾದಿ ಹಾಗೂ ಪರಶುರಾಮ ಜಮಖಂಡಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಪರವಾಗಿ ಮನವಿ ಪತ್ರವನ್ನು ರಾಷ್ಟ್ರೀಯ ಬಸವ ಸೈನ್ಯದ ವಕ್ತಾರ ಪ್ರಶಾಂತ ಮುಂಜಾನೆ ಸಭೆಯಲ್ಲಿ ಓದಿ, ಉಪತಹಶೀಲ್ದಾರ ಅರಕೇರಿ ಅವರಿಗೆ ಸಲ್ಲಿಸಲಾಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ರಾಷ್ಟ್ರೀಯ ಬಸವ ಸೈನ್ಯದ ತಾಲೂಕು ಅಧ್ಯಕ್ಷ ಸಂಜು ಬಿರಾದಾರ, ಚಂದ್ರಶೇಖರಗೌಡ ಪಾಟೀಲ, ಬದ್ರು ಮಣ್ಣೂರ, ಸಂಕನಗೌಡ ಪಾಟೀಲ, ಸಂಗುಗೌಡ ಜಾಲಗೇರಿ, ಅರವಿಂದ ಗೊಳಸಂಗಿ, ನಿಂಗಪ್ಪ ಅವಟಿ, ಜಟ್ಟಿಂಗರಾಯ ಮಾಲಗಾರ, ರವಿ ನಾಯ್ಕೋಡಿ, ಅಪ್ಪು ಗಬ್ಬೂರ, ಸಂಗু ಬಿದರಿ, ಖಾಜಂಬರ ನದಾಪ, ಸಂಗನಬಸು ಪೂಜಾರಿ, ಬಸವರಾಜ ಚೌರಿ, ದಯಾನಂದ ಜಾಲಗೇರಿ, ಗುರುನಗೌಡ ಬಿರಾದಾರ, ಕಾಶೀನಾಥ ಅವಟಿ, ಬಸವರಾಜ ಗುಡೂರ, ಬಾಬು ಮಸಬಿನಾಳ, ಸಂತೋಷ ನಾಯ್ಕೋಡಿ, ಗುರುರಾಜ ಸಂಪನ್ನವರ, ಅರುಣ ಗೊಳಸಂಗಿ ಹಾಗೂ ಆನಂದ ವನರೊಟ್ಟಿ ಸೇರಿದಂತೆ ನೂರಾರು ಬಸವ ಭಕ್ತರು ಉಪಸ್ಥಿತರಿದ್ದರು.

ವಿಶ್ವಗುರು ಬಸವಣ್ಣನವರು ಹಾಗೂ ಶರಣ ಪರಂಪರೆಯ ಕುರಿತು ರವಿ ಹಂಜ್ ಅವರು ಪ್ರಕಟಿಸಿರುವ ಅವಹೇಳನಕಾರಿ ಬರಹಗಳನ್ನು ಖಂಡಿಸಿ, ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೊಲೀಸ್ ಇನ್ಸ್‌ಪೆಕ್ಟರ್ ಗುರುಶಾಂತ್ ದಾಶಾಳ ಅವರಿಗೆ ದೂರು ಸಲ್ಲಿಸಲಾಯಿತು. ದೂರನ್ನು ಸ್ವೀಕರಿಸಿದ ಪೊಲೀಸ್ ಇಲಾಖೆ ಎಫ್‌ಐಆರ್ ದಾಖಲಿಸಿಕೊಳ್ಳುವ ಪ್ರಕ್ರಿಯೆ ಕೈಗೊಂಡಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *