‘ಕನ್ನಡವನ್ನು ಶಕ್ತಿಯುತ ಭಾಷೆಯನ್ನಾಗಿ ಮಾಡಿದ ಬಸವಣ್ಣ’

ಬಸವ ಮೀಡಿಯಾ
ಬಸವ ಮೀಡಿಯಾ

ಕೊಳ್ಳೇಗಾಲ :

ವಿಶ್ವಗುರು ಬಸವಣ್ಣನವರು ಕನ್ನಡವನ್ನು ಕೇವಲ ಸಂಭಾಷಣೆಯ ಭಾಷೆಯನ್ನಾಗಿ ಕಾಣದೆ, ಮಾನವೀಯ ಮೌಲ್ಯಗಳು ಹಾಗೂ ಸದಾಶಯದ ಚಿಂತನೆಗಳನ್ನು ಜನಸಾಮಾನ್ಯರ ಮನಮುಟ್ಟಿಸುವ ಶಕ್ತಿಯುತ ಮಾಧ್ಯಮವನ್ನಾಗಿ ರೂಪಿಸಿದರು.

ಬಸವೇಶ್ವರ ತತ್ವಾದರ್ಶಗಳು ಸಾರ್ವಕಾಲಿಕವಾದವು, ಅವರ ವಿರಚಿತ ವಚನಗಳಲ್ಲಿ ಬದುಕಿನ ಎಲ್ಲ ಸಾರವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಗರಾಜು ಕೊಂಗರಹಳ್ಳಿ ಹೇಳಿದರು.

ಕಾರ್ನರ್ ಸ್ಟೋನ್‌ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಅಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಬಸವಾದಿ ಶರಣರ ವಚನಗಳಲ್ಲಿ ಬದುಕಿನ ನೈಜ ಸತ್ಯ, ಸಾಮಾಜಿಕ ನ್ಯಾಯ, ಸರ್ವಸಮಾನತೆ, ಕಾಯಕನಿಷ್ಠೆ, ದಯೆ, ಪ್ರಾಮಾಣಿಕತೆ ಮತ್ತು ಆತ್ಮಶುದ್ಧಿಯ ಮಹತ್ತರ ಸಂದೇಶಗಳು ಕಾಣಬಹುದಾಗಿದೆ.

‘ಕಾಯಕವೇ ಕೈಲಾಸ’ ಎಂಬ ಶ್ರೇಷ್ಠತತ್ವವು ದುಡಿಮೆಯೇ ಪರಮಪೂಜೆ ಹಾಗೂ ನಿರಂತರ ಪ್ರಾಮಾಣಿಕ ಪರಿಶ್ರಮವೇ ಶ್ರೇಷ್ಠ ಸಾಧನೆ ಎಂಬ ಮೌಲ್ಯವನ್ನು ಜಗತ್ತಿಗೆ ಸಾರಿದೆ ಎಂದು ಹೇಳಿದರು.

ಕನ್ನಡ ನಾಡು, ನುಡಿ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಗಾಗಿ ಹಲವಾರು ಕವಿಗಳು, ಜಾನಪದ ವಿದ್ವಾಂಸರು ಹಾಗೂ ಸಾಹಿತ್ಯಾಸಕ್ತರು ತಮ್ಮ ಬದುಕನ್ನೇ ಮುಡಿಪಾಗಿಟ್ಟು ಸೇವೆ ಸಲ್ಲಿಸಿದ್ದಾರೆ, ಇಂದು ಭಾಷೆ ಗೌರವಿಸುವ ಜತೆಜತೆಗೆ ಅಂತಹ ಅನೇಕ ಮಹನೀಯರನ್ನು ನಾವೆಲ್ಲ ಸ್ಮರಿಸಬೇಕಿದೆ.

ನಾವು ರಾಜ್ಯೋತ್ಸವ ಆಚರಣೆ ಜತೆ ಭಾಷೆಯ ಬೆಳವಣಿಗೆ, ಭಾಷೆಗೆ ಹೆಚ್ಚಿನ ಗೌರವ, ಮನ್ನಣೆ ಸಿಗುವ ನಿಟ್ಟಿನಲ್ಲಿಯೂ ಚಿಂತಿಸಬೇಕಿದೆ ಎಂದರು.

ಚಿಂತಕ ಶಿವಣ್ಣ ಹಿಂದುವಾಡಿ, ಕಾಲೇಜಿನ ಪ್ರಾಂಶುಪಾಲ ಡಾ. ರೋಷನ್‌ ಪ್ರಿನ್, ಕಾಂತರಾಜು, ಸರ್ವೇಶ ಮತ್ತಿತರರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *