ನನ್ನ ಬಸವಣ್ಣ ಪೂಜಿಸುವ ಫೋಟೋವಲ್ಲ, ಅನುಸರಿಸುವ ಆದರ್ಶ

ಗುಂಡ್ಲುಪೇಟೆ

ಇವನು ಮೇಲು, ಇವನು ಕೀಳು, ಇವನು ಶೂದ್ರ, ಇವನು ಅಸ್ಪೃಶ್ಯ, ಎಂದು ಜನರನ್ನು ಒಡೆದು ದೂರ ಇಟ್ಟ ಕಾಲದಲ್ಲಿ “ಇವ ನಮ್ಮವ, ಇವ ನಮ್ಮವ ಎಂದು ತಬ್ಬಿಕೊಂಡದ್ದು” ನನ್ನ ಬಸವಣ್ಣ.

ಹುಟ್ಟಿನಿಂದ ಇವನು ಕನಿಷ್ಠ, ಇವನು ಶ್ರೇಷ್ಠ ಎನ್ನುತ್ತಿದ್ದ ಕಾಲದಲ್ಲಿ:

“ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ” ಎಂದಿದ್ದು ನನ್ನ ಬಸವಣ್ಣ.

ಪೂಜೆ ಅತ್ಯಂತ ಪ್ರಮುಖವೆಂದು ಹೇಳಿ ಅದನ್ನು ಮಾಡುವ, ಮಾಡಿಸುವ ಪುರೋಹಿತರು ಬಹಳ ಶ್ರೇಷ್ಠ ಎಂದು ನಂಬಿದ್ದ ಕಾಲದಲ್ಲಿ “ಬೆವರು ಸುರಿಸಿ ದುಡಿಯುವ ಪ್ರತಿಯೊಬ್ಬರೂ ಶ್ರೇಷ್ಠ” ಕಾಯಕವೇ ಕೈಲಾಸ ಎಂದದ್ದು ನನ್ನ ಬಸವಣ್ಣ.

ದೇವರು ಗುಡಿ ಮಂದಿರಗಳ ಬಗ್ಗೆ ಬಹಳ ನಂಬಿಕೆಯಿಟ್ಟ ಜನರು ಇದ್ದ ಕಾಲದಲ್ಲಿ “ದೇಹವೇ ದೇವಾಲಯ” ಎಂದು ಹೇಳಿ ಗುಡಿ ಗುಂಡಾರ ತಿರಸ್ಕರಿಸಿದ್ದು ನನ್ನ ಬಸವಣ್ಣ.

ಭಕ್ತ ಮತ್ತು ಭಗವಂತನ ಮಧ್ಯೆ ದಲ್ಲಾಳಿಗಳು ಅಂದರೆ ಪುರೋಹಿತರು ಮೆರೆಯುತಿದ್ದ ಕಾಲದಲ್ಲಿ ತನ್ನಾಶ್ರಯದ ರತಿ ಸುಖವನ್ನು ತಾನುಂಬ ಊಟವನ್ನು ತಾನೇ ಮಾಡಬೇಕು ಎಂದು ಉಪಮೆಯ ಮೂಲಕ ಭಕ್ತ ಮತ್ತು ಭಗವಂತನ ಮಧ್ಯೆ “ದಲ್ಲಾಳಿಗಳು” ಬೇಡ ಎಂದಿದ್ದು ನನ್ನ ಬಸವಣ್ಣ.

ವೇದ, ಶಾಸ್ತ್ರ ,ಆಗಮ, ಪುರಾಣಗಳು ವಿಜೃಂಭಿಸುತ್ತಿದೆ ಕಾಲದಲ್ಲಿ ವೇದಕ್ಕೆ ಹೊರೆಯ ಕಟ್ಟುವೆ ಶಾಸ್ತ್ರಕ್ಕೆ ನಿಗಳವನಿಕ್ಕುವೆ ಆಗಮದ ಮೂಗು ಕೊಯ್ಯುವೆ ಎಂದು ವೇದ, ಶಾಸ್ತ್ರ, ಆಗಮ, ಪುರಾಣಗಳನ್ನು ತಿರಸ್ಕರಿಸಿ ಜನರಿಗೆ ಸರಳ ಕನ್ನಡದಲ್ಲಿ “ಮಾನವೀಯ ಮೌಲ್ಯಗಳನ್ನು ತುಂಬಿದ ವಚನ ಸಾಹಿತ್ಯ” ಕೊಟ್ಟಿದ್ದು ನನ್ನ ಬಸವಣ್ಣ ಮತ್ತು ಶರಣರು.

ತೀರ್ಥ ಕ್ಷೇತ್ರ ಸುತ್ತಿದರೆ ಪುಣ್ಯ ಬರುತ್ತದೆ ಎಂದು ಜನರನ್ನು ನಂಬಿಸಿದ್ದ ಕಾಲದಲ್ಲಿ:

“ನೀರ ಕಂಡಲ್ಲಿ ಮುಳುಗುವರಯ್ಯಾ
ಮರವ ಕಂಡಲ್ಲಿ ಸುತ್ತುವರಯ್ಯಾ.
ಬತ್ತುವ ಜಲವ
ಒಣಗುವ ಮರವ ಮೆಚ್ಚಿದವರು
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ.”
ಎಂದಿದ್ದು ನನ್ನ ಬಸವಣ್ಣ.

ಸ್ವರ್ಗ ನರಕ ಕಲ್ಪನೆಯನ್ನು ಜನರಲ್ಲಿ ಬಿತ್ತಿ ಜನರಿಗೆ ಭಯ ಉಂಟುಮಾಡಿ ಜನರನ್ನು ಶೋಷಣೆ ಮಾಡುತಿದ್ದ ಕಾಲದಲ್ಲಿ,
“ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ”
ಎಂದು ತಿಳಿಸಿದ್ದು ನನ್ನ ಬಸವಣ್ಣ.

ನೂರಾರು ಕಾಣದ ದೇವರನ್ನು ಕಲ್ಪಿಸಿಕೊಂಡು ಧಾರ್ಮಿಕ ಕ್ಷೇತ್ರವನ್ನು ಹುಚ್ಚರ ಸಂತೆ ಮಾಡಿಕೊಂಡಿದ್ದ ಕಾಲದಲ್ಲಿ
ಇಬ್ಬರು ಮೂವರು ದೇವರೆಂದು ಉಬ್ಬುಬ್ಬಿ ಮಾತನಾಡಬೇಡ ದೇವನೊಬ್ಬನೇ, “ಕಾಯಕ” “ದುಡಿಮೆಯೇ ದೇವರು” ಎಂದು ಸಾರಿ “ಕಾಯಕವೇ ಕೈಲಾಸ” ಎಂಬ ಪರಿಕಲ್ಪನೆ ಕೊಟ್ಟದ್ದು ನನ್ನ ಬಸವಣ್ಣ.

ದಾನ ಪದ್ಧತಿ ಮೂಲಕ ಪುರೋಹಿತರು ಜನಸಾಮಾನ್ಯರನ್ನು ಶೋಷಣೆ ಮಾಡುತಿದ್ದ ಕಾಲದಲ್ಲಿ “ದಾಸೋಹ” ಪರಿಕಲ್ಪನೆ ಕೊಟ್ಟಿದ್ದು ನನ್ನ ಬಸವಣ್ಣ.

ಹೆಣ್ಣು “ಮುಟ್ಟಾದರೆ” ಮೈಲಿಗೆ ಎಂದು ಮನೆಯಿಂದ ಆಚೆ ಇರಿಸುತ್ತಿದ್ದ ಕಾಲದಲ್ಲಿ ಮಡಿ ಮೈಲಿಗೆ ಇಲ್ಲಿ ಎಂದು ಗೌರವ ಕೊಟ್ಟು ಮನೆ ಒಳಗೇ ಕರೆಸಿಕೊಂಡಿದ್ದು ನನ್ನ ಬಸವಣ್ಣ.

ಹೆಣ್ಣು ಅಸಹ್ಯ, ಕನಿಷ್ಠ, ಮೈಲಿಗೆ ಮಾಯೆ ಎಂದೆಲ್ಲಾ ಹೇಳಿ ಹೀಯಾಳಿಸುತ್ತಿದ್ದ ಕಾಲದಲ್ಲಿ ಹೆಣ್ಣಿಗೆ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಾಂಸ್ಕೃತಿಕ, “ಸಾಮಾನತೆ” ಕೊಟ್ಟದ್ದು ನನ್ನ ಬಸವಣ್ಣ.

ಮನುಷ್ಯರನ್ನು ಮನುಷ್ಯರಂತೆ ಕಾಣದೇ ಇದ್ದ ಕಾಲದಲ್ಲಿ
ಸಕಾಲ ಜೀವಾತ್ಮರಿಗೂ ಒಳಿತು ಬಯಸಿದ್ದು “ದಯವೇ ಧರ್ಮದ ಮೂಲವಯ್ಯ” ಎಂದು ಹೇಳಿದ್ದು ನನ್ನ ಬಸವಣ್ಣ.

12ನೇ ಶತಮಾನದಲ್ಲಿ ಜಗತ್ತಿನಲ್ಲಿ ಮೊಟ್ಟ ಮೊದಲು ಯಾರು ಮೇಲಲ್ಲ, ಕೀಳು ಅಲ್ಲ ಹುಟ್ಟುವಾಗಲು ಮಾನವ, ಸಾಯುವಾಗಲು ಮಾನವ ಎಂದು ಅಂತರ್ಜಾತಿ ವಿವಾಹ ಮಾಡುವ ಮೂಲಕ “ಸಮಾನತೆ” ಸಂದೇಶ ಸಾರಿದ ಮಹಾಪುರುಷರಾದವರು ನನ್ನ ಬಸವಣ್ಣ.

ಪ್ರತಿಯೊಬ್ಬರಲ್ಲೂ 12ನೇ ಶತಮಾನದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸುಧಾರಣೆ ತಂದು ಜಗತ್ತಿನ ಮೊಟ್ಟ ಮೊದಲ “ಸಂಸತ್ ಅಂದರೆ ಅನುಭವ ಮಂಟಪ”ದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆ ಕೊಟ್ಟಿದ್ದು ನನ್ನ ಬಸವಣ್ಣ.

ಶರಣ ಬಂಧುಗಳೇ,
ಇಂಥಹ ಮಹಾಮಹಿಮ, ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ದಿನ ಅವರ ಫೋಟೋ ಪೂಜೆಗಿಂತ ಅವರ ವಿಚಾರಗಳು, ಆದರ್ಶಗಳು, ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರೆಲ್ಲರನ್ನು ಗೌರವಿಸುವುದು ಉತ್ತಮ ಎಂದು ಹೇಳುತ್ತಾ ನಮ್ಮ ಬಾಳಿಗೆ ಬಸವಣ್ಣನ ವಚನಗಳು, ಚಿಂತನೆಗಳು ಬೆಳಕಾಗಲಿ ಎಂದು ಆಶಿಸುವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *