ಬಸವಣ್ಣನವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ದಲಿತ ಶಾಸಕ ಬಸವಂತಪ್ಪ

ಬಸವ ಮೀಡಿಯಾ
ಬಸವ ಮೀಡಿಯಾ

ಮೊದಲನೇ ಬಾರಿ ಶಾಸಕರಾಗಿ ಆಯ್ಕೆಯಾಗಿ ಮಂತ್ರಿಯೂ ಆದ ಮಾಯಕೊಂಡ ಕ್ಷೇತ್ರದ ಕೆ.ಎಸ್.ಬಸವಂತಪ್ಪ

ಬೆಂಗಳೂರು

ಥಾವರ್‌ಚಂದ್‌ ಗೆಹಲೋತ್‌ ಅವರು ಸೋಮವಾರ ಕರ್ನಾಟಕ ಸರ್ಕಾರದ ಸಚಿವ ಸಂಪುಟಕ್ಕೆ ಸೇರ್ಪಡೆಯಾದ 19 ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು.

ಲಿಂಗಾಯತ ಶಾಸಕರೂ ಸೇರಿದಂತೆ ಬಹುತೇಕ ಪ್ರತಿನಿಧಿಗಳು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಆದರೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ ಅವರು ಬಸವಣ್ಣನವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ನಾಡಿನ ಬಸವಾಭಿಮಾನಿಗಳ ಗಮನ ಸೆಳೆದು ವೈರಲ್ ಆಗಿದೆ.

ತಮ್ಮ ಸರದಿ ಬಂದಾಗ ಬಸವಂತಪ್ಪ ಅವರು ಬಸವೇಶ್ವರರ ಹೆಸರಿನಲ್ಲಿ ಪ್ರಮಾಣ ವಚನ ಪಡೆಯುತ್ತೇನೆ ಎಂದು ಹೇಳಿದರು. ಹಿಂದೆ ನಿಂತಿದ್ದ ಅಧಿಕಾರಿಯೊಬ್ಬರು ಸೂಚನೆ ನೀಡಿದ ನಂತರ ದೇವರ ಹೆಸರಿನಲ್ಲಿಯೂ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಹೇಳಿದರು.

(ಈ ಹಿಂದೆ ಐತಿಹಾಸಿಕ ಅಥವಾ ಧಾರ್ಮಿಕ ವ್ಯಕ್ತಿಗಳ ಹೆಸರಿನಲ್ಲಿ ಪ್ರಮಾಣ ವಚನ ಪಡೆಯುವುದು ನಿಯಮಕ್ಕೆ ವಿರುದ್ಧವೆಂದು ರಾಜ್ಯಪಾಲರು ಟೀಕಿಸಿದ್ದರು. ಆದ್ದರಿಂದ ಹಿಂದೆ ನಿಂತಿದ್ದ ಅಧಿಕಾರಿ ಈ ರೀತಿ ಸಲಹೆ ನೀಡಿದ್ದಿರಬಹುದು.)

ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಬಸವಂತಪ್ಪ ಕಾಂಗ್ರೆಸ್ ಶಾಸಕ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಳಿಕ ಸಚಿವರಾಗುತ್ತಿರುವುದು ವಿಶೇಷ.

ಕಡು ಬಡತನದಿಂದ ಬೆಳೆದು ಮಂತ್ರಿಗಳಾಗಿರುವುದು ಮತ್ತೊಂದು ವಿಶೇಷ.

ಬಸವಂತಪ್ಪನವರ ತಂದೆ-ತಾಯಿ ಆಸ್ಪತ್ರೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಮನೆಯ ಆರ್ಥಿಕ ಪರಿಸ್ಥಿತಿ ಕಾರಣದಿಂದಾಗಿ ಪಿಯುಸಿ ನಂತರ ವಿದ್ಯಾಭ್ಯಾಸ ಕೈಬಿಟ್ಟ ಅವರು, ಜೀವನ ನಡೆಸಲು ಎಪಿಎಂಸಿ ಸೇರಿದಂತೆ ಹಲವು ಕಡೆ ಕೆಲಸ ಮಾಡಿದ್ದಾರೆ.

ದಾವಣಗೆರೆ ತಾಲೂಕಿನ ಅನಗೋಡು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದರು.

ಅವರು 2018ರಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡಿ ಕಡಿಮೆ ಅಂತರದಲ್ಲಿ ಸೋತಿದ್ದರು. ಬಳಿಕ ಎರಡನೇ ಬಾರಿ ಸ್ಪರ್ಧಿಸಿ ಭಾರೀ ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದರು.

ಶಾಸಕರಾಗಿದ್ದರೂ ಕೂಡ ಬಾಡಿಗೆ ಮನೆಯಲ್ಲೇ ಜೀವನ ಸಾಗಿಸುತ್ತಿರುವ ಬಸವಂತಪ್ಪ ಪಕ್ಷದ ಕಾರ್ಯಕರ್ತರು, ಜನಸಾಮಾನ್ಯರೊಂದಿಗೆ ಸಹಜವಾಗಿ ಬೆರೆಯುವ ಸರಳತೆಯ ಬದುಕನ್ನು ಅಳವಡಿಸಿಕೊಂಡಿದ್ದಾರೆ.

ಆಂಬ್ಯುಲೆನ್ಸ್ ಬಸವಂತಪ್ಪ

ತಮ್ಮ ಕ್ಷೇತ್ರದಲ್ಲಿ ಯಾರಿಗೆ ಅಪಘಾತ ಅಥವಾ ತುರ್ತು ವೈದ್ಯಕೀಯ ನೆರವು ಬೇಕಾದರೂ ತಕ್ಷಣವೇ ಸ್ವತಃ ಧಾವಿಸಿ ಸ್ವಂತ ಖರ್ಚಿನಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುತ್ತಿದ್ದ ಕಾರಣ, ಕ್ಷೇತ್ರದ ಜನರು ಇವರನ್ನು ಪ್ರೀತಿಯಿಂದ ‘ಜನಸಾಮಾನ್ಯರ ಶಾಸಕ’ ಹಾಗೂ ‘ಆಂಬ್ಯುಲೆನ್ಸ್ ಬಸವಂತಪ್ಪ’ ಎಂದೇ ಕರೆಯುತ್ತಿದ್ದಾರೆ.

ಇಡೀ ಕ್ಷೇತ್ರವನ್ನು ಸುತ್ತಾಡುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂಬುದು ಕ್ಷೇತ್ರದ ಜನರ ಮಾತಾಗಿದೆ.

ಆಂಜನೇಯ ಅವರ ಸೋದರಳಿಯ

ದಲಿತ ಎಡಗೈನ ಮಾದಿಗ ಸಮುದಾಯದ ಕೆ.ಎಸ್. ಬಸವಂತಪ್ಪ ಅವರು ಮಾಜಿ ಸಚಿವ‌ ಎಚ್. ಆಂಜನೇಯ ಅವರ ಸೋದರಳಿಯ ಕೂಡ ಹೌದು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರ ಬಸವಂತಪ್ಪ ಅವರ ಪತ್ನಿ ಮಮತಾ “ನಮ್ಮ ಅತ್ತೆ-ಮಾವ ಪೌರ ಕಾರ್ಮಿಕ‌ರಾಗಿದ್ದವರು. ಅವರ ಬಳಿಕ ನಮ್ಮ ಮನೆಯವರು ಕೂಡ ಈ ಕೆಲಸ ಮಾಡಿದ್ದಾರೆ. ಅತ್ತೆ-ಮಾವ ಇದ್ದಿದ್ದರೆ ಖುಷಿಪಡುತ್ತಿದ್ದರು. ಮನೆಯಲ್ಲಿರುವುದಕ್ಕಿಂತ ಜನರ ಸೇವೆ ಮಾಡಿದ್ದೆ ಹೆಚ್ಚು,” ಎಂದು ಹೇಳಿದರು.

ಯಾರು ಯಾರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

ಕೆ. ಎಸ್. ಬಸವಂತಪ್ಪ – ಜಗತ್ಜ್ಯೋತಿ ಬಸವೇಶ್ವರರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

​ವಿಜಯಾನಂದ ಕಾಶಪ್ಪನವರ್ – ದೇವರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು

​ಲಕ್ಷ್ಮಣ ಸವದಿ – ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

ಬಸವರಾಜ್ ರಾಯರೆಡ್ಡಿ – ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡಿ ಪ್ರಮಾಣ ವಚನ ಸ್ವೀಕರಿಸಿದರು

ಎಸ್. ಎಸ್. ಮಲ್ಲಿಕಾರ್ಜುನ್ – ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

​ಪಿ. ಎಂ. ನರೇಂದ್ರಸ್ವಾಮಿ – ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಗಂಗಾದರ ಅಜ್ಜಯ್ಯ ಮತ್ತು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

​ಶಿವರಾಜ್ ತಂಗಡಗಿ – ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.

​ರುದ್ರಪ್ಪ ಲಮಾಣಿ – ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

​ಬಿ. ನಾಗೇಂದ್ರ – ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

​ಟಿ. ರಘುಮೂರ್ತಿ – ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

​ಬಿ. ಝಡ್. ಜಮೀರ್ ಅಹಮದ್ ಖಾನ್ – ಅಲ್ಲಾ ಹಾಗೂ ಅವರ ತಾಯಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

​ರಿಜ್ವಾನ್ ಅರ್ಷದ್ – ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡಿ ಪ್ರಮಾಣ ವಚನ ಸ್ವೀಕರಿಸಿದರು

ಸಂತೋಷ್ ಲಾಡ್ – ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡಿ ಪ್ರಮಾಣ ವಚನ ಸ್ವೀಕರಿಸಿದರು

ಮಧು ಬಂಗಾರಪ್ಪ – ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

ಪುಟ್ಟರಂಗಶೆಟ್ಟಿ – ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

ಡಾ. ಅಜಯ್ ಸಿಂಗ್ – ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

​ಎನ್. ಚಲುವರಾಯ ಸ್ವಾಮಿ – ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

​ಕೆ. ಎಂ. ಶಿವಲಿಂಗೇಗೌಡ – ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು ‌

​ಎಚ್ . ಸಿ. ಬಾಲಕೃಷ್ಣ – ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *