‘ಬಸವಣ್ಣ ಬಸವಚಾರ್ಯ ಆಗಲು ಬಿಡಬಾರದು’
ಬೆಂಗಳೂರು
“740 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ಮುಂದೆ ನಮ್ಮ ವಿರೋಧಿ ಸಿದ್ಧಾಂತದವರ ಸೊತ್ತಾಗದಿರಲಿ. ಅದಾಗಿ ಹೋದರೆ ಬಸವಣ್ಣ ಬಸವಚಾರ್ಯ ಆಗ್ತಾನೆ ಎಂಬ ಕಟು ಎಚ್ಚರ ನಮಗಿರಬೇಕು,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಎಂ. ಜಾಮದಾರ ರವಿವಾರ ಎಚ್ಚರಿಸಿದರು.
“ಅನುಭವ ಮಂಟಪ ಕಟ್ಟಿ ಮುಗಿಸಿದರಾಗದು. ಅದರ ಸಮರ್ಪಕ ನಿರ್ವಹಣೆಯ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ಅರಿಯಬೇಕು. ನಮ್ಮ ಅಸ್ತಿತ್ವಕ್ಕಾಗಿ ಶಾಶ್ವತ ಹೋರಾಟ ಮಾಡಲೇಬೇಕಿದೆ,” ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಬೆಂಗಳೂರು ಜಿಲ್ಲಾ ಘಟಕ ನಗರದಲ್ಲಿ ಆಯೋಜಿಸಿದ್ದ ‘ಲಿಂಗಾಯತ ಚಳುವಳಿ ಮುಂದಿನ ಹಾದಿ’ ಕುರಿತು ನಡೆದ ಒಂದು ದಿನದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವೈದಿಕರು ನಮ್ಮ ವಿರೋಧಿಗಳು

ಕಲಬುರಗಿಯ ಬಸವತತ್ವ ಚಿಂತಕ ಪ್ರೊ. ಸಂಜಯ ಮಾಕಲ್ ಮಾತಾಡುತ್ತಾ, ವಿರೋಧಿಗಳು ನಮ್ಮ ಮೇಲೆ ಯುದ್ಧ ಮಾಡುತ್ತಿದ್ದಾರೆ. ಆದರೆ ನಾವೆಲ್ಲ ನಿಷ್ಕ್ರಿಯರಾಗಿದ್ದೇವೆ. ವಚನ ಸಾಹಿತ್ಯವೆಂಬ ಖಡ್ಗ ಕೈಬಿಟ್ಟಿದ್ದೇವೆ.
12ನೇ ಶತಮಾನದಲ್ಲಿ ಫ್ರೆಂಚ್ ಕ್ರಾಂತಿಗಿಂತ ಹೆಚ್ಚು ರಕ್ತಪಾತವಾಗಿದೆ. ನಮ್ಮ ವಚನಗಳನ್ನು ನಾಶ ಮಾಡಿದ್ದಲ್ಲದೆ, ಅವುಗಳನ್ನು ಪ್ರಕ್ಷಿಪ್ತವೂ ಮಾಡಿದರು. ಈಗಲೂ ಸಹ ಅದನ್ನೇ ಮಾಡುತ್ತಿದ್ದಾರೆ.
ಲಿಂಗಾಯತರನ್ನು ತುಳಿಯುತ್ತಾ, ಇಲ್ಲವಾಗಿಸುತ್ತ ಬಂದವರು ವೈದಿಕರು, ಮುಸಲ್ಮಾನರಲ್ಲ. ನಮ್ಮ ವೈರಿಗಳು, ವಿರೋಧಿಗಳು ವೈದಿಕರೆ ಆಗಿದ್ದಾರೆ. ನಾವೆಲ್ಲ ಒಂದಾಗಬೇಕು, ನಮ್ಮ ವೈರಿ ಯಾರೆಂದು ಸರಿಯಾಗಿ ಗುರುತಿಸುವುದಾಗಬೇಕು.
ಹರ ಹರ ಮಹಾದೇವ ಎನ್ನುತ್ತಿದ್ದವರು ನಾವು. ಈಗ ಜೈ ಶ್ರೀರಾಮ್ ಎಂದು ನಮ್ಮವರಿಂದಲೇ ಹೇಳಿಸುತ್ತಾ ನಮ್ಮನ್ನು ಗುಲಾಮಗಿರಿಗೆ ತಳ್ಳಿದ್ದಾರೆ, ಎಂದು ಹೇಳಿದರು.
ಶರಣ ಸಂಸ್ಕೃತಿ ನಾಶ ಮಾಡುವ ಹುನ್ನಾರ

ವಿಜಯಪುರದ ಶರಣತತ್ವ ಚಿಂತಕ ಡಾ. ಜೆ.ಎಸ್. ಪಾಟೀಲ ಮಾತನಾಡಿ ಹಿಂದುತ್ವದ, ಬ್ರಾಹ್ಮಣ್ಯದ ಹುನ್ನಾರದ ಮಧ್ಯೆ ಸಂಘಟನೆ ಕಟ್ಟುವುದು ಹೇಗೆ ಜಾಗೃತಿ ಮಾಡುವುದು ಹೇಗೆ ಎಂಬುದನ್ನು ತಿಳಿಯಬೇಕಿದೆ, ಎಂದು ಹೇಳಿದರು.
“ನಾವು ವೈರಿಗಳನ್ನು ಗುರುತಿಸದಿರುವ ಸ್ಥಿತಿಯಲ್ಲಿದ್ದೇವೆ. ಲಿಂಗಾಯತರ ಮನೆಯಲ್ಲೇ ವೈರಿಗಳನ್ನು ಬೆಳೆಸುತ್ತಿದ್ದಾರೆ. ಶರಣ ಸಂಸ್ಕೃತಿ ನಾಶ ಮಾಡುವ ಹುನ್ನಾರ ನಿರಂತರ ನಡೆದಿದೆ. ಶರಣರು ಪ್ರಾಣ ಲೆಕ್ಕಿಸದೆ ಹೋರಾಡಿದರು. ಅವರ ತ್ಯಾಗ, ಬಲಿದಾನದ ಅರಿವು ನಮಗಿಲ್ಲ,” ಎಂದು ಹೇಳುತ್ತ ಪಾಟೀಲರು ತೀವ್ರ ಭಾವುಕರಾದರು.
“ಶರಣರಂತೆ ಹೋರಾಡಬೇಕಾದ ಸಂದರ್ಭ ಬಂದಿದೆ. ಧರ್ಮ, ಸಮಾಜಕ್ಕೆ ಪೂರ್ಣಾವಧಿ ದುಡಿಯಲು ನಾವೆಲ್ಲ ಮುಂದಾಗಬೇಕು. ಸಂಪನ್ಮೂಲ ವ್ಯಕ್ತಿಗಳನ್ನು ತಯಾರು ಮಾಡುವುದಾಗಬೇಕು. ಈಗಿದನ್ನು ಮಾಡಿದರೆ 20 ವರ್ಷದ ನಂತರ ಅದರ ಫಲ ಸಿಗುವುದು, ” ಎಂದರು.
ಕುಂಕುಮ ಶೋಭಿತ ಸ್ವಾಮಿಗಳು

ದಿಕ್ಸೂಚಿ ಭಾಷಣ ಮಾಡಿದ ತುಮಕೂರು ವಚನ ಸಾಹಿತ್ಯ ಮಂದಾರ ಫೌಂಡೇಶನ್ ಅಧ್ಯಕ್ಷ ವಿಜಯಕುಮಾರ ಕಮ್ಮಾರ ಸಂಘ ಪರಿವಾರ ಕೃಪಾಪೋಷಿತ ನಾಟಕ ಮಂಡಳಿಗಳು, ಕುಂಕುಮ ಶೋಭಿತ ವಿರಕ್ತಮಠದ ಸ್ವಾಮಿಗಳು ಬಸವದ್ರೋಹಿ ಕೆಲಸ ಮಾಡುತ್ತಿದ್ದಾರೆ. ಸಮಾನ ಮನಸ್ಕರನ್ನು ಸೇರಿಸಿ ವೈದಿಕರ ಮತ್ತು ಬಸವತತ್ವ ವಿರೋಧಿಗಳ ಅಸಂಬದ್ಧಗಳಿಗೆ ತಕ್ಷಣ ಉತ್ತರ ನೀಡಬೇಕು. ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಎಲ್ಲರೂ ಚಿಂತನ ಮಂಥನ ಮಾಡಿ ಒಂದು ರೂಪರೇಷೆ ನೀಡಬೇಕು, ಎಂದರು.
“ಬಸವಣ್ಣನವರು ಆಳುವವರನ್ನು ಎಚ್ಚರಿಸಲಿಲ್ಲ. ಆಳಿಸಿಕೊಳ್ಳುವವರನ್ನು ಎಚ್ಚರಿಸಿದರು. ಈಗ ನಾವು ಮಠಾಧಿಪತಿಗಳನ್ನು, ರಾಜಕಾರಣಿಗಳನ್ನು, ಶ್ರೀಮಂತರನ್ನು, ದೊಡ್ಡ ದೊಡ್ಡ ಬಸವ ಚಿಂತಕರನ್ನೂ ಎಚ್ಚರಿಸುವ ಪರಿಸ್ಥಿತಿ ಬಂದಿದೆ,” ಎಂದು ಹೇಳಿದರು.

ಬಸವಪರ ಸಂಘಟನೆಗಳ ಪಾತ್ರ
ಲಿಂಗಾಯತ ಚಳುವಳಿಯಲ್ಲಿ ಬಸವಪರ ಸಂಘಟನೆಗಳ ಪಾತ್ರದ ವಿಷಯವಾಗಿ ಅನೇಕ ಬಸವಪರ ಸಂಘಟನೆಗಳ ಮುಖಂಡರು ಮಾತನಾಡಿದರು.
ರಾಷ್ಟ್ರೀಯ ಬಸವದಳದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಚಂದ್ರಮೌಳಿ ಮಾತನಾಡುತ್ತ, ಬಿನ್ನಾಭಿಪ್ರಾಯಗಳಿಂದ ನಾವುಗಳು ದೂರಾಗಿದ್ದೇವೆ. ಎಲ್ಲಾ ಲಿಂಗಾಯತ, ಬಸವಪರ ಸಂಘಟನೆಗಳ ಜಿಲ್ಲಾವಾರು ಒಗ್ಗಟ್ಟಿನ ಸಭೆಗಳಾಗಬೇಕು, ತಳಮಟ್ಟದಲ್ಲಿ ಮಾಡಬೇಕಾದ ಕೆಲಸಗಳನ್ನು ಗುರುತಿಸಿ ಕಾರ್ಯಪ್ರವೃತ್ತರಾಗಬೇಕು, ಎಂದರು.
ಲಿಂಗಾಯತ ಧರ್ಮ ಅಧ್ಯಯನ ಕೇಂದ್ರದ ಶ್ರೀಶೈಲ ಮಸೂತೆ ಮಾತನಾಡುತ್ತಾ, ಬಸವಣ್ಣನವರನ್ನು ಮೆರೆಸುತ್ತಿದ್ದೇವೆ. ಆದರೆ ಬಸವತತ್ವವನ್ನು ಮೆರೆಸುತ್ತಿಲ್ಲ. ಬಸವ ಅನುಭವ ಮಂಟಪಗಳು ನಿರ್ಮಾಣವಾಗಬೇಕು. ಎಲ್ಲ ಹಿಂದುಳಿದ ಲಿಂಗವಂತರನ್ನು ಅವಕ್ಕೆ ಸೇರಿಸಿ, ಅವರನ್ನೂ ಒಳಗೊಂಡಂತೆ ಕಾರ್ಯಕಾರಿ ಮಂಡಳಿ ಮಾಡಬೇಕು, ಎಂದರು.
ವಚನ ಜ್ಯೋತಿ ಬಳಗದ ಪಿನಾಕಪಾಣಿ ಮಾತನಾಡುತ್ತಾ, ವಚನಗಳನ್ನು ಮನೆಮನೆಗೆ ಪರಿಚಯಿಸುವ ಕೆಲಸ ಮೊದಲು ಆಗಬೇಕು. ಮಕ್ಕಳಲ್ಲಿ ವಚನ ಪ್ರಜ್ಞೆ ಮೂಡಿಸುವುದು ಮೊದಲು ನಮ್ಮ ಕಾಳಜಿಯಾಗಬೇಕು. ನಮ್ಮ ಶರಣರ ಪರಿಚಯ ಮಾಡಿಸಬೇಕು. ನಾವು ನಮ್ಮ ಬಳಗದಿಂದ ಅದನ್ನೇ ಮಾಡುತ್ತಿದ್ದೇವೆ, ಎಂದರು.


ನಂಜನಗೂಡಿನ ವಿಶ್ವ ಬಸವ ಸೇನೆಯ ಬಸವಯೋಗೇಶ ಮಾತನಾಡುತ್ತ, ವಚನ ಶಾಲೆಗಳನ್ನು ಮಾಡಿ ಮಕ್ಕಳಿಗೆ ವಚನಗಳನ್ನು ಕಲಿಸುವುದು ಆಗಬೇಕು. ನಮ್ಮ ಸಂಘಟನೆಯಿಂದ ಅದು ನಡೆಯುತ್ತಿದೆ, ಎಂದರು.
ಅಂತರಾಷ್ಟ್ರೀಯ ಲಿಂಗಾಯತ ಯೂತ್ ಫೋರಂನ (ilyf) ಸತೀಶ ಮೂಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಎನ್. ಕೆಂಪೇಗೌಡರ್, ಪ್ರೊ. ವೀರಭದ್ರಯ್ಯ, ಬಿ.ಎಸ್. ಕೃಪಾಶಂಕರ, ಕೆ.ಬಿ. ಮಹಾದೇವಪ್ಪ, ಜಿ.ಬಿ. ನಾಗಭೂಷಣ, ಸಚ್ಚಿದಾನಂದ ಶಿವಕುಮಾರ ಸಿ.ಎ. ಬಸವರಾಜ ಹಂಡಿ, ಮಹಾದೇವಪ್ಪ ಮೈಸೂರು, ಪರಮೇಶ್ವರಪ್ಪ, ಎಸ್. ರೇಣುಕಯ್ಯ, ಗೀತಾ ಪಾಟೀಲ, ಸುರೇಖಾ ದಮ್ಮೂರ ಸೇರಿದಂತೆ ಬಸವಪರ ಸಂಘಟನೆಗಳ ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.

ಬಸವಣ್ಣನವರ ಭಾವ ಚಿತ್ರ ಮೆರವಣಿಗೆ ಕೇವಲ ಸಾಂಕೇತಿಕ. ಬಸವ ತತ್ವ ಪ್ರಸಾರ ಮೆರವಣಿಗೆ ಮೂಲಕ ಜನರಿಗೆ ಮುಟ್ಟಬೇಕು. ತಮ್ಮೆಲ್ಲರ ಆಶಯ ಚಿಂತನೆಗೆ ತಮ್ಮ,ನಮ್ಮೆಲ್ಲರ ಸಹಕಾರವಿರುತ್ತದೆ. ಅನುಭ ಮಂಟಪ ನಿಜವಾಗಲು ಲಿಂಗಾಯತ ಧರ್ಮದ ondu ಬೃಹತ್ ಪ್ರಮಾಣದ ಕೇಂದ್ರವಾಗಿ ಬೆಳೆಯಲಿದೆ. ಅದಕ್ಕೆ ತಕ್ಕ ಎಲ್ಲ ವ್ಯವಸ್ಥೆಗಳನ್ನು : ಮೂಲ ಟ್ರಸ್ಟಿಗಳು, ಅಧಳಿತ ಸಿಬ್ಬಂದಿ, training ತರಬೇತಿ ಸಿಬ್ಬಂದಿ, ನಿರ್ವಹಣಾ ಸಿಬ್ಬಂದಿ, ಮನೆವಾರ್ತೆ ( house keeping) ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ, ದಾಸೋಹ ಸಿಬ್ಬಂದಿ, ಇತ್ಯಾದಿಗಳ ನೇಮಕಾತಿ ಕೂಡ ಮುಂಚಿತವಾಗಿ ಮಾಡಿದ್ದಾದರೆ, ಎಲ್ಲ ಸಾಂಗವಾಗಿ ನಿರ್ಧರಿಸಲಾಗುತ್ತದೆ/ಮಾಡಿಕೊಂಡು ಬರಬಹುದು. ಎಲ್ಲರಿಗೂ ಶುಭವಾಗಲಿ, ಶರಣು ಶರಣಾರ್ಥಿ.