ಲೋಕೇಶ್ ಮಾನ್ವಿ ಅವರ ‘ಅಲ್ಲಮಸ್ತುತಿ’, ‘ಚಿತ್ತರಗಿಯ ಬಸವ ಜ್ಯೋತಿ’ ಧ್ವನಿಸುರುಳಿ ಲೋಕಾರ್ಪಣೆ
ಮಾನ್ವಿ :
ಬಸವಣ್ಣನವರು ಸಮಾಜಕ್ಕೆ ಸಮಾನತೆ, ಮಾನವೀಯತೆ ಮತ್ತು ಕಾಯಕದ ಮಹತ್ವ ಸಾರಿದ ಮಹಾನ್ ಚಿಂತಕರು. ಬಸವಣ್ಣನವರ ಆದರ್ಶಗಳು ಇಲ್ಲದಿದ್ದರೆ ಸಮಾಜದಲ್ಲಿ ಸಮಾನತೆಯ ಚಿಂತನೆ ಬೆಳೆದು ಬಂದಿರುತ್ತಿರಲಿಲ್ಲ ಎಂದು ಹಾವೇರಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಕ್ಕಣ್ಣ ಕರಿಗಾರ ಹೇಳಿದರು.
ಪಟ್ಟಣದ ಕಾಕತೀಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬಸವ ಕೇಂದ್ರದ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣರು ಸುಮಾರು ಎಂಟನೂರ ಐವತ್ತು ವರ್ಷಗಳ ಹಿಂದೆಯೇ ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತರಿಸಿದ ಮಹಾನ್ ದಾರ್ಶನಿಕರು. ಸಮಾಜದಲ್ಲಿದ್ದ ಅಸಮಾನತೆ, ಶೋಷಣೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ, ಎಲ್ಲರನ್ನು ಒಂದೇ ಮಾನವ ಕುಟುಂಬವೆಂದು ಕಂಡವರು ಬಸವಣ್ಣರು ಎಂದು ಹೇಳಿದರು.

ಬಸವಣ್ಣರ ವಚನಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. “ದಯವೇ ಧರ್ಮದ ಮೂಲ”ಎಂಬ ಸಂದೇಶದ ಮೂಲಕ ಧರ್ಮವು ಮನುಷ್ಯರ ಕಲ್ಯಾಣಕ್ಕಾಗಿ ಇರಬೇಕೆ ಹೊರತು ವಿಭಜನೆಗಾಗಿ ಅಲ್ಲ ಎಂಬುದನ್ನು ಸಾರಿದ್ದಾರೆ. ಕಾಯಕ ಮತ್ತು ದಾಸೋಹದ ತತ್ವಗಳು ಸಮಾಜದಲ್ಲಿ ಶ್ರಮಕ್ಕೆ ಗೌರವ ತಂದುಕೊಟ್ಟಿವೆ ಎಂದು ಹೇಳಿದರು.
ಗ್ರಾಮೀಣ ಭಾಗದ ಜನರು ಬಸವಣ್ಣನವರನ್ನು ದ್ವಿತೀಯ ಶಂಭು ಎಂದು ಭಾವಿಸಿ, ಅವರಲ್ಲಿ ಶಿವತ್ವವನ್ನು ಕಂಡಿದ್ದಾರೆ. ಮಾನವೀಯತೆ, ಸಹೋದರತ್ವ ಮತ್ತು ಸೌಹಾರ್ದತೆಯ ಬದುಕನ್ನು ಕಟ್ಟಿಕೊಡುವ ಶರಣ ಧರ್ಮ ಇಂದಿನ ಯುವಜನತೆಗೆ ಮಾರ್ಗದರ್ಶಕವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಯಚೂರಿನ ಉಪನ್ಯಾಸಕಿ ರೇಖಾ ಪಾಟೀಲ ಬಸವಣ್ಣನವರ ಜೀವನ, ತತ್ವಗಳು ಮತ್ತು ಸಮಾಜ ಸುಧಾರಣೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅಮರೇಶ ಗವಾಯಿ ಕರೆಗುಡ್ಡ ಹಾಗೂ ಮಹಿಳಾ ಬಸವ ಕೇಂದ್ರ ವತಿಯಿಂದ ವಚನ ಗಾಯನ ನಡೆಯಿತು.
ಇದೇ ಸಂದರ್ಭದಲ್ಲಿ ಲೋಕೇಶ್ ಎನ್. ಮಾನ್ವಿ ಅವರ “ಅಲ್ಲಮಸ್ತುತಿ” ಹಾಗೂ “ಚಿತ್ತರಗಿಯ ಬಸವ ಜ್ಯೋತಿ” ಎಂಬ ಎರಡು ಧ್ವನಿಸುರುಳಿಗಳು ಬಿಡುಗಡೆಗೊಂಡವು.

ಕಾರ್ಯಕ್ರಮದಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹರಿಹರ ಪಾಟೀಲ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಪ್ರತಿನಿಧಿ ಸಿದ್ದಲಿಂಗಪ್ಪ ಚಿಕ್ಕಕೋಟ್ನೆಕಲ್ ವಕೀಲರು, ತಾಲೂಕು ಅಧ್ಯಕ್ಷ ಅರುಣ ಚಂದಾ, ಕಾಕತೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ. ಸತ್ಯನಾರಾಯಣ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ ಚಿಮ್ಮಲಾಪುರ, ಚುಕ್ಕಿಸೂಗಪ್ಪ ಸಿರವಾರ, ಬಸವ ಕೇಂದ್ರ ತಾಲೂಕು ಅಧ್ಯಕ್ಷ ಶರಣಬಸವ ಪಾಟೀಲ ಬೆಟ್ಟದೂರು, ತಾಲೂಕು ಗೌರವಾಧ್ಯಕ್ಷ ಡಾ. ಬಸವಪ್ರಭು ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮೀ ಟಿ. ಪಾಟೀಲ, ನಗರ ಘಟಕದ ಅಧ್ಯಕ್ಷ ರವಿಕುಮಾರ ಸಾಹುಕರ, ಕುಮಾರಸ್ವಾಮಿ ಮೇದಾ ಸೇರಿದಂತೆ ಹಲವರು ಭಾಗವಹಿಸಿದ್ದರು.
