ಬೈಲಹೊಂಗಲ:
ಬಸವಣ್ಣನವರು ಸ್ಥಾಪಿಸಿದ್ದ ಲಿಂಗಾಯತ ಧರ್ಮ ಹಾಗೂ ಕಟ್ಟಬಯಸಿದ ಸುಂದರ ಸಮಾಜ ನಿರ್ಮಾಣ ಕಾರ್ಯದಲ್ಲಿ ಪ್ರೇರಕ ಶಕ್ತಿಯಾಗಿದ್ದ ಹಡಪದ ಅಪ್ಪಣ್ಣನವರು ಬಸವಣ್ಣವರ ಆಪ್ತ ಕಾರ್ಯದರ್ಶಿಯಾಗಿ ಅವರ ಸಮಗ್ರ ಜೀವನ ಸಾಧನೆಗೆ ಪ್ರೇರಕ ಶಕ್ತಿಯಾಗಿದ್ದರು, ಎಂದು ಸುವರ್ಣ ಬಿಜುಗುಪ್ಪಿ ಹೇಳಿದರು.
ಪಟ್ಟಣದ ಪತ್ರಿಬಸವನಗರ ಅಭಿವೃದ್ಧಿ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಜಾಗತಿಕ ಲಿಂಗಾಯತ ಮಹಾಸಭಾ ಇವರ ಸಂಯುಕ್ತಾಶ್ರಯದಲ್ಲಿ ಪತ್ರಿಬಸವೇಶ್ವರ ಅನುಭವ ಮಂಟಪದಲ್ಲಿ ನಡೆದ 44ನೇ ಮಾಸಿಕ ಅನುಭಾವ ಗೋಷ್ಠಿ, ಹಡಪದ ಅಪ್ಪಣ್ಣನವರ ಜಯಂತಿ ನಿಮಿತ್ಯ ಉಪನ್ಯಾಸ ನೀಡಿದರು.
ನೇತೃತ್ವ ವಹಿಸಿದ್ದ ಪ್ರೇಮಕ್ಕ ಅಂಗಡಿ, ಕೆಳವರ್ಗದ ಕೀಳರಿಮೆ ಕಳೆದುಕೊಂಡು ಕಲ್ಯಾಣದ ಅನುಭವ ಮಂಟಪಕ್ಕೆ ಬಂದು ಶರಣನಾದ ಅಪ್ಪಣ್ಣನವರು ಬಸವಣ್ಣವರ ಆಪ್ತರಾಗಿದ್ದು ಕ್ಷೌರಿಕ ಕಾಯಕದ ಸಮಾನತೆ ಸಾರಿ ಸಮಸಮಾಜ ಕಟ್ಟುವ ರೂವಾರಿಗಳಾದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಅಶೋಕ ಸಾಲಿ, ವಚನಗಳು ಅಧ್ಯಯನಕ್ಕೆ ಸರಳವಾಗಿದ್ದು, ಪ್ರಸ್ತುತ ಬದುಕಿನ ದುಃಖ ದುಮ್ಮಾನ, ಮಾನ ಅಪಮಾನ, ಹಾನಿ ವೃದ್ದಿಗಳನ್ನು ಲೆಕ್ಕಿಸದೆ ನೆಮ್ಮದಿಯ ಬದುಕಿಗೆ ಸಹಕಾರಿಯಾಗಿವೆ ಎಂದರು.
ಶಾರದಾ ಮುನವಳ್ಳಿಮಠ ವಚನ ಚಿಂತನೆಗೈದರು. ಬಾಲಕಿ ಸಾನಿಧ್ಯ ಹುಲಿಕಟ್ಟಿ ವಚನ ಪಠಿಸಿದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂತೋಷ್ ಕೊಳವಿ, ಜಾಗತಿಕ ಲಿಂಗಾಯತ ಮಹಾ ಸಭಾ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ದ್ಯಾಮನಗೌಡರ, ಪತ್ರಿಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷ ದುಂಡಯ್ಯ ಕುಲಕರ್ಣಿ, ಅಜಗಣ್ಣ ಹಾಗೂ ಮುಕ್ತಾಯಕ್ಕ ಬಳಗದ ನೂರಾರು ಶರಣ ಶರಣೆಯರು ಉಪಸ್ಥಿತರಿದ್ದರು.

ಗೀತಾ ಅರಳಿಕಟ್ಟಿ ಸ್ವಾಗತಿಸಿದರು. ವೀರಭದ್ರಪ್ಪ ಕಾಪಸೆ ವಂದಿಸಿದರು. ಸಾವಿತ್ರಿ ಹೊತ್ತಿಗಿಮಠ ಪರಿಚಯಿಸಿದರು. ಕಾಡಪ್ಪ ರಾಮಗುಂಡಿ ನಿರೂಪಿಸಿದರು.
