ರವಿ ಹಂಜ್, ವಿಶ್ವೇಶ್ವರ ಭಟ್ಟ ವಿರುದ್ಧ ತೀವ್ರ ಕಾನೂನು ಕ್ರಮಕೈಗೊಳ್ಳಲು ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರಗಿ

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣವರ ಬಗ್ಗೆ ಇಲ್ಲ‌ ಸಲ್ಲದ ಮಾತುಗಳನ್ನು ಆಡುವ ಮೂಲಕ ವಚನ ಪರಂಪರೆಗೆ ಮಸಿ ಬಳಿಯಲು ಯತ್ನಿಸಿದ ರವಿ ಹಂಜ್ ಎನ್ನುವ ಗುಲಾಮನನ್ನು ಜೈಲಿಗಟ್ಟಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಜಿ.‌ ಶೆಟಗಾರ ಸರ್ಕಾರವನ್ನು ಒತ್ತಾಯಿಸಿದರು.

ಶನಿವಾರ ಬೆಳಗ್ಗೆ 11 ಗಂಟೆಗೆ ಜಗತ್ ವೃತ್ತದ ಬಳಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹನ ಮಾಡಲಾಗುವುದು ಎಂದು ಎಂದು ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಡಿನಲ್ಲಿ ಶಾಂತಿ, ಸುವ್ಯವಸ್ಥೆ ಉಳಿಯಬೇಕಾದರೆ ರವಿ ಹಂಜ್ ಬರೆದ ಕೃತಿಯನ್ನು ಸರಕಾರ ಮುಟ್ಟಗೋಲು ಹಾಕಿಕೊಳ್ಳಬೇಕು. ಹಂಜನೆಂಬ ಮತಿಭ್ರಷ್ಟನ ವೀಸಾ, ಪಾಸ್ ಪೋರ್ಟ್ ರದ್ದುಪಡಿಸಿ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಬೇಕು. ಉದ್ದೇಶಪೂರ್ವಕವಾಗಿ ಇಂಥ ಪುಸ್ತಕ ಬರೆಯಲು ಕುಮ್ಮಕ್ಕು ನೀಡಿದ ವಿಶ್ವೇಶ್ವರ ಭಟ್ಟನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಕುತ್ಸಿತ ಮತೀಯ ಲೇಖನಗಳನ್ನು ಪ್ರಕಟಿಸುತ್ತಿರುವ ವಿಶ್ವವಾಣಿ ಪತ್ರಿಕೆಯ ಪರವಾನಗಿ ರದ್ದುಪಡಿಸಬೇಕು. ನಾಡಿನಲ್ಲಿ ದೊಂಬಿ, ಗಲಭೆಗಳಿಗೆ ಪ್ರೇರಣೆ ನೀಡುತ್ತಿರುವ ವಿಶ್ವೇಶ್ವರ ಭಟ್ಟನ ಇತಿಹಾಸವನ್ನು ಬಯಲಿಗೆಳೆದು ಗೂಂಡಾ ಕಾಯ್ದೆಯಡಿ ಆತನನ್ನು ಬ೦ಧಿಸಿ ಜೈಲಿಗಟ್ಟಬೇಕು ಎಂದು ತಿಳಿಸಿದರು.

ಪ್ರಗತಿಪರ ಚಿಂತಕ ಪ್ರೊ. ಆರ್.ಕೆ. ಹುಡಗಿ ಮಾತನಾಡಿ, ೧೨ನೇ ಶತಮಾನದಲ್ಲಿ ಶರಣರ ಕಗ್ಗೊಲೆ ಮಾಡಿದವರ ತಾತ್ವಿಕ ಸಂತತಿಯೆ ಇಂದು ಶರಣ ತತ್ವಗಳ ಮೇಲೆ ದಾಳಿ ಮಾಡುತ್ತಿದೆ. ಶರಣ ತತ್ವಗಳನ್ನು ಇಲ್ಲವಾಗಿಸುವ ಅವರ ದುಸ್ಸಾಹಸ ಅದು ಸಾಧ್ಯವಿಲ್ಲ ಎಂದೆನಿಸಿದಾಗ ಅದನ್ನು ತಿರುಚುವ ಇಲ್ಲವೆ ವಿಕೃತ, ವಿಕಾರಗೊಳಿಸುವ ದುಷ್ಟ ಯತ್ನಗಳು ಎಗ್ಗಿಲ್ಲದೆ ನಡೆದುಕೊಂಡು ಬರುತ್ತಿವೆ.

ಶೂದ್ರರನ್ನು ಶೂದ್ರರಿಂದಲೆ ದಮನಿಸುವ ಕಾರ್ಯತಂತ್ರಗಳನ್ನು ರೂಪಿಸಿಕೊಂಡು ಬರುತ್ತಿರುವ ಸನಾತನಿಗಳು ಇದೀಗ ರವಿ ಹಂಜಗಿಮಠ ಎಂಬ ವ್ಯಕ್ತಿಯನ್ನು ಮುಂದೆ ಮಾಡಿ ತಮ್ಮ ತಾತ್ವಿಕ ದ್ವೇಷವನ್ನು ತೀರಿಸಿಕೊಳ್ಳುತ್ತಿವೆ ಎಂದು ಆಪಾದಿಸಿದರು. ಬಸವಾದಿ ಶರಣ ತತ್ವಗಳನ್ನು ನಿರ್ನಾಮ ಮಾಡುವ ಮಿಷನ್ ದೇಶದಲ್ಲಿ ಹತ್ತು ಹಲವು ವರ್ಷಗಳಿಂದ ಹಲವಾರು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬುದಕ್ಕೆ ವಸ್ತುನಿಷ್ಠ ಸಂಶೋಧಕರಾದ ಡಾ.
ಎಂ.ಎಂ. ಕಲಬುರಗಿಯವರ ಹತ್ಯೆಯೆ ಸಾಕ್ಷಿಯಾಗಿದೆ.

ತನ್ನ ಜಾತಿ ಐಡೆಂಟಿಟಿಯಾಗಿರುವ ಹಂಜಗಿಮಠ ಹೆಸರನ್ನು ಪೂರ್ತಿ ಹಚ್ಚಿಕೊಳ್ಳಲು ಹೆದರುತ್ತಿರುವ ಈ ರವಿ ಹಂಜ್ ಎಂಬ ವ್ಯಕ್ತಿಯು ತಾನೇ ನಿಜವಾದ ಸಂಶೋಧಕ ಎಂದು ಬೊಗಳೆ ಕೊಚ್ಚಿಕೊಳ್ಳುತ್ತ ಇದೀಗ ಬಸವಣ್ಣನವರನ್ನು ಮತ್ತು ಶರಣ ಸಂಕುಲವನ್ನು ಕುರಿತು ಬಾಯಿಗೆ ಬಂದಂತೆ ಅರಚುತ್ತಿದ್ದಾನೆ. ಇದಕ್ಕೆ ವಿಶ್ವೇಶ್ವರ ಭಟ್ಟನೆಂಬ ವೈದಿಕ ಮಾಣಿಯೊಬ್ಬ ತನ್ನ ಅನೈತಿಕ ವ್ಯವಹಾರಗಳನ್ನು ಮುಂದಿಟ್ಟುಕೊಂಡು ಕುಮ್ಮಕ್ಕು ಕೊಡುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶರಣ ಚಿಂತಕಿ ಡಾ.‌ಮೀನಾಕ್ಷಿ ಬಾಳಿ ಮಾತನಾಡಿ, ವೈದಿಕರ ಕೈಯಲ್ಲಿನ ಲಾಠಿಯಂತೆ ವರ್ತಿಸುತ್ತಿರುವ ರವಿ ಮಹಾಶಯನು ಇತ್ತೀಚೆಗೆ ಬಸವ ಮಂಟಪ ಎಂಬ ಬೋಗಸ್ ಪುಸ್ತಕವನ್ನು ಬರೆದಿರುವುದಲ್ಲದೆ ತನ್ನ ಪುಸ್ತಕವನ್ನು ತಾನೇ ಪ್ರಶಂಸಿಕೊಳ್ಳುತ್ತ ಬಸವಣ್ಣನವರು ಕೊಲೆಗಡುಕ, ಲೂಟಿಕೋರ, ಸುಳ್ಳುಗಾರ, ಮಹಾಮೋಸಗಾರ. ಶರಣರೆಲ್ಲರೂ ಸಂಚುಕೋರರು ಎಂದು ಮನಸೋಚ್ಛೆ ಮಾತಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಸಲಿಗೆ ದೇಶ ತೊರೆದು ಹೊಟ್ಟೆಪಾಡಿಗಾಗಿ ಅಮೆರಿಕದಲ್ಲಿ ದುಡಿಯುತ್ತಿರುವ ಈತನಿಗೆ ಭಾರತೀಯ ದರ್ಶನಗಳ ಬಗೆಗೆ ಕನಿಷ್ಠ ತಿಳುವಳಿಕೆ ಇಲ್ಲ ಎನ್ನುವುದು ಆತನ ಬೇಕಾಬಿಟ್ಟಿ ಮಾತುಗಾರಿಕೆಯಿಂದಲೆ ವಿದಿತವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಾಹಿತಿ ತಂತ್ರಜ್ಞಾನದ ಮೂಲಕ ಶರಣರ ಕುರಿತು ಉದ್ದೇಶಪೂರ್ವಕವಾಗಿ ಹರಿಬಿಡಲಾಗುತ್ತಿರುವ ಸುಳ್ಳು-
ಪೊಳ್ಳುಗಳನ್ನು ಗುಡ್ಡೆ ಹಾಕಿಕೊಂಡು ಅದನ್ನೇ ಮಹಾನ್ ಸಂಶೋಧನೆ ಎಂಬಂತೆ ಗೀಚುತ್ತಿದ್ದಾನೆ. ವಸ್ತುನಿಷ್ಠ ಸಂಶೋಧಕನಿಗಿರಬೇಕಾದ ವಿದ್ವತ್ತು, ವಿನಯ, ಸಹೃದಯ ವಾಗ್ವಾದ, ಅರಿವಿನ ಕ್ಷಿತಿಜ ವಿಸ್ತರಿಸಿಕೊಳ್ಳುವ ತಹತಹಗಳಿಲ್ಲದ ಈ ಸ್ವಯಂಘೋಷಿತ ಫ್ಯಾಸಿಸ್ಟ್ ಸಂಶೋಧಕನಿಗೆ ಬುದ್ಧಿಭ್ರಮಣೆಯಾಗಿದೆ ಎಂದರು.

ಕಳಬೇಡ ಎಂದು ಹೇಳಿದ ಬಸವಣ್ಣನವರು ಬಿಜ್ಜಳನ ಬಂಢಾರವನ್ನು ಲೂಟಿ ಮಾಡಿದರಂತೆ. ಅಷ್ಟೇ ಅಲ್ಲ ಬಿಜ್ಜಳನನ್ನು ಕೊಲ್ಲಿಸಿದರಂತೆ. ಹುಸಿಯ ನುಡಿಯಲು ಬೇಡ ಎಂದು ಹೇಳುತ್ತಲೆ ಮಹಾಸುಳ್ಳುಗಾರರಾಗಿದ್ದರು, ಮುಂದುವರಿದು ಶರಣರೆಲ್ಲರೂ ವಿರೋಧಾಭಾಸಗಳಿಂದ ಕೂಡಿದ್ದರೆಂದು ಮಾತಾಡಿದ್ದಾನೆ.

ತಳಬುಡವಿಲ್ಲದ ಈತನ ಮಾತುಗಾರಿಕೆಯ ಹಿಂದೆ ವೈದಿಕ ವಿಧ್ವಂಸಕರ ಹೊಂ ವರ್ಕ್ ಎದ್ದು ಕಾಣಿಸುತ್ತದೆ. ಹಂಜ್ ತನ್ನ ಡಾಲರ್ ಸೊಕ್ಕು ತೋರಿಸಲೆಂದೆ ಭಾರತಕ್ಕೆ ಬಂದಂತಿದೆ. ಈತನ ಹಿಂದೆ ಆರ್ ಎಸ್ ಎಸ್ ವಿಚಾರಧಾರೆಯು ತೆರೆಮರೆಯಲ್ಲಿ ನಿಂತು ಯಥಾಪ್ರಕಾರ ರಣಹೇಡಿ ಕೆಲಸ ಮಾಡಿಸುತ್ತಿದೆ ಎಂಬದಕ್ಕೆ ಪುರಾವೆ ವಿಶ್ವೇಶ್ವರ ಭಟ್ಟನೆ ಸಾಕು.

ಸಂಘಿಗಳು; ಹಂಜನಿಂದ ಮೊದಲು ಕಲಬುರಗಿ ಸರ್ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಲು ಹಚ್ಚಿದರು. ಅಷ್ಟಾಗಿ ಪ್ರತಿರೋಧ ಬರಲಿಲ್ಲ ಎಂಬುದನ್ನು ಗಮನಿಸಿ ಈಗ ನೇರವಾಗಿ ಬಸವಣ್ಣನವರ ಕುರಿತು ತೀರ ಅವಹೇಳನಕಾರಿ ಮಾತುಗಳನ್ನು ಆಡಿಸುತ್ತ ಸನಾತನಿಗಳು ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯುತ್ತಿದ್ದಾರೆ ಎಂದು ಅವರು ಆಪಾದಿಸಿದರು.

ಹಂಜನಿಗೆ ಬಸವ ಭಕ್ತರ ಬಿಸಿ ತಟ್ಟಿದೊಡನೆ ಕ್ಷಮೆ ಕೇಳುವ ನಾಟಕವೇನೋ ಮಾಡಿದ್ದಾನೆ. ಆದರೆ ಇದು ಕ್ಷಮಾರ್ಹ ಅಪರಾಧವಲ್ಲವಾದ್ದರಿಂದ ರವಿ ಹಂಜನನ್ನು ಸುಮ್ಮನೆ ಬಿಟ್ಟು ಬಿಡುವ ಮಾತೇ ಇಲ್ಲ. ಉಪ್ಪು ತಿಂದವನು ನೀರು ಕುಡಿಯಲೇಬೇಕು‌. ಬಸವಭಕ್ತರೆಲ್ಲರೂ ಸೇರಿ ನೀರು ಕುಡಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಸಿದರು.

ಎಂಥ ದುಷ್ಟನಿಗೂ ಬಸವಣ್ಣನವರ ಕುರಿತು ಇಂಥ ಕೊಳಕು ಮಾತುಗಳನ್ನಾಡಲು ಧೈರ್ಯವಾಗುವುದಿಲ್ಲ. ಮಹಾಮೂರ್ಖನೂ ಇಂಥ ಹುಚ್ಚುತನಕ್ಕೆ ಇಳಿಯಲಾರ. ರವಿ ಹಂಜ ಮತ್ತು ವಿಶ್ವೇಶ್ವರ ಬಟ್ಟ ಈರ್ವರ ಮೇಲೆ ಸರಕಾರ ಕಾನೂನು ಕ್ರಮ ಕೈಕೊಂಡು ನಾಡಿನ ಸ್ವಾಸ್ಥ್ಯವನ್ನು ಕಾಪಾಡಬೇಕೆಂದು ಆಗ್ರಹಿಸಿದರು.

ಒಂದೆಡೆ ‌ಕನ್ನೇರಿಸ್ವಾಮಿಯಂಥ ಬಸವದ್ರೋಹಿ, ಇನ್ನೊಂದೆಡೆ ಹಂಜನೆಂಬ ಡಾಲರ್ ಗುಲಾಮ, ಇನ್ನೊಂದೆಡೆ ಪಂಚಾಚಾರ್ಯರೆಂಬ ವೀರಶೈವ ಮಠಗಳ ಎಂಜಲು ಕಾಸಿನ ಕಾವಿಧಾರಿಗಳು, ಮತ್ತೊಂದೆಡೆ ಎಂ ಎಲ್ ಎ, ಎಂ.ಪಿ ಗಿರಿಗೆ ತಮ್ಮನ್ನೆ ಮಾರಿಕೊಂಡ ಲಿಂಗಾಯತ ರಾಜಕಾರಣಿಗಳು. ಇವೆಲ್ಲಕ್ಕಿಂತ ಹೆಚ್ಚಾಗಿ ತತ್ವಕ್ಕೆ ಸಂಚುಕಾರ ಬಂದಾಗ ತಲೆ ಮರೆಸಿಕೊಳ್ಳುವ ಪುಕ್ಕಲು ಪ್ರವಚನ ಪಟುಗಳು. ಇಂಥ ಎಲ್ಲ ರಣಹೇಡಿಗಳಿಂದಾಗಿಯೆ ಇಂದು ಬಸವತತ್ವದ ಮೇಲೆ ದಾಳಿ-ದುರ್ದಾಳಿಗಳು ಸಂಘ ಗ್ಯಾಂಗಿನ ಕುಮ್ಮಕ್ಕನಿಂದಾಗಿ ದಾಂಗುಡಿ ಇಡುತ್ತಿವೆ.

ಆದರೆ ವಿಶ್ವದ ತುಂಬ ಹರಡಿಕೊಂಡಿರುವ ಬಸವ ತತ್ವನಿಷ್ಟರು ಸಂಘ ಗ್ಯಾಂಗಿನ ಈ ಕುತಂತ್ರವನ್ನು ಫಲಿಸಲು ಬಿಡುವುದಿಲ್ಲ. ಪ್ರಾಣ ತೆತ್ತಾದರೂ ಬಸವ ತತ್ವಉಳಿಸಲು ಹೋರಾಟಕ್ಕೆ ಇಳಿದಿದ್ದೇವೆ. ತನ್ನಯುಕ್ತ ಮೊದಲ ಹಂತವಾಗಿ ಸರಕಾರಕ್ಕೆ ಆಗ್ರಹಿಸುತ್ತ ಈ ಕೆಳಗಿನ ಕ್ರಮಗಳನ್ನು ಕೂಡಲೇ ಕೈ ಕೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಇಂಥ ಹುಚ್ಚಾಟವನ್ನು ತಕ್ಷಣ ನಿಲ್ಲಿಸುವಂತಾಗಬೇಕು. ಇಲ್ಲವಾದರೆ ಮುಂದಿನ ಅವಘಡಗಳ ನಾವೇನೂ ಹೇಳಲಾರೆವು ಎಂದು ಎಚ್ಚರಿಸಿದರು.

ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರಕಾರ ಘೋಷಿಸಿದಾಗಿನಿಂದ ಸನಾತನವಾದಿಗಳಿಗೆ ಬೆಂಕಿ ಇಟ್ಟಂತಾಗಿದೆ. ಶ್ರೇಣಿಕೃತ ಸಮಾಜ ವ್ಯವಸ್ಥೆಯನ್ನು ದೈವೀಕೃತ ಎಂದು ನಂಬಿಸಿಕೊಂಡು ಬಂದಿದ್ದ ಸನಾತನವಾದಿಗಳ ಬುಡವನ್ನು ಅಲ್ಲಾಡಿಸಿದ್ದ ಬಸವ ದರ್ಶನವು ವೈದಿಕ ದಲ್ಲಾಳಿಗಳಿಗೆ ನುಂಗಲಾರದ ತುತ್ತು. ಯಾವ ಕಾಲಕ್ಕಾದರೂ ವಚನ ತತ್ವಗಳು ವೈದಿಕರ ಕೆಂಗಣ್ಣಿಗೆ ಗುರಿಯಾಗುತ್ತಲೆ ಬರುತ್ತಿವೆ ಎಂದು ಬಾಳಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹಣಮಂತರಾಯ ಪಾಟೀಲ, ಶಾಂತಪ್ಪ ಪಾಟೀಲ, ಅಶೋಕ ಘೂಳಿ, ಶಿವಕುಮಾರ ಬಿದರಿ, ಶಿವಶರಣಪ್ಪ ದೇಗಾಂವ, ಮನೋಹರ ಜೀವಣಗಿ ಮುರಗ್ರೇಂದ್ರಸ್ವಾಮಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *