ವೀರಶೈವ-ಲಿಂಗಾಯತ ಮಠಾಧೀಶ, ಭಕ್ತಾದಿಗಳಿಗೆ 2 ಎಕರೆ ಜಾಗ
ಬೆಂಗಳೂರು
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಂತ ಘೋಷಣೆ ಮಾಡಿದ್ದು ನಮ್ಮ ಸರ್ಕಾರ. ನಾನು ಬಸವಣ್ಣನವರ ಹಾದಿಯಲ್ಲಿ, ಪ್ರಜಾಸವೇಕನಾಗಿ ನಡೆಯುತ್ತಿದ್ದೇನೆ, ಎಂದು ಸಿಎಂ ಡಿ.ಕೆ. ಶಿವಕುಮಾರ್ ಭಾನುವಾರ ಹೇಳಿದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಆಯೋಜಿಸಿರುವ ‘ವೀರಶೈವ
ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನ’ವನ್ನು ಭಾನುವಾರ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಉದ್ಘಾಟಿಸಿ ಮಾತನಾಡಿದರು.
‘ವಿಶ್ವದ ಮೊದಲ ಸಂಸತ್ತನ್ನು ಪರಿಚಯಿಸಿದ್ದು ಬಸವಣ್ಣನವರು. ಹಾಗಾಗಿ, ಬಸವಣ್ಣನವರನ್ನು ವಿಶ್ವಗುರು ಎಂದು ಕರೆಯುತ್ತೇವೆ.
ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಕೊಟ್ಟ ಬಸವಣ್ಣನರ ಭಾವಚಿತ್ರವನ್ನು ರಾಜ್ಯ ಸರಕಾರವು ಸರಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿದೆ. ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟಿದ್ದು ವೀರಶೈವ ಲಿಂಗಾಯತ ಧರ್ಮ, ಎಂದರು.
ವೀರಶೈವ ಲಿಂಗಾಯತರು ಒಗ್ಗಟ್ಟಾಗಲಿ
ವೀರಶೈವ ಲಿಂಗಾಯತರು ತಾವು ಒಗ್ಗಟ್ಟಾಗಿದ್ದರೆ ಸಾಲದು. ಇಡೀ ರಾಜ್ಯವನ್ನು ಎಲ್ಲಾ ಸಮಾಜಗಳನ್ನು ಒಗ್ಗೂಡಿಸಬೇಕು,ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದರು.
ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಸಾರಿದ ವೀರಶೈವ ಧರ್ಮವನ್ನು ಕಾಪಾಡಬೇಕು ಎಂದು ಹೇಳಿದರು.
ಒಗ್ಗಟ್ಟಿನಲ್ಲಿ ಶಕ್ತಿ ಇದೆ. ಅರಿವಿನಲ್ಲಿ ಬೆಳಕು, ಕಾಯಕದಲ್ಲಿ ಗೌರವವಿದೆ, ದಾಸೋಹದಲ್ಲಿ ಮಾನವೀಯತೆ ಇದೆ ಎಂದು ಸಾರಿದ್ದು ಲಿಂಗಾಯತ ಧರ್ಮ.

ಜಾತಿ, ಧರ್ಮ
ನೀವು ಜಾತಿ ಬೇಡ ಅಂದರೂ ಜಾತಿಗೆ ನೀವು ಬೇಕಾಗುತ್ತದೆ. ಹುಟ್ಟುವಾಗ ಯಾರೂ ಕೂಡ ಇಂಥ ಜಾತಿಯಲ್ಲೇ ಹುಟ್ಟಬೇಕು ಅಂತ ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ.
ಮಠ ಬೇಡ, ಧರ್ಮ ಬೇಡ ಎಂದು ಹೇಳುವವರು ಇದ್ದಾರೆ. ಮಗುವಿಗೆ ಮೂಗು ಚುಚ್ಚುವಾಗ, ಕಿವಿ ಚುಚ್ಚುವಾಗ, ನಾಮಕರಣ ಮಾಡುವಾಗ ಯಾವುದೋ ಒಂದು ಸಿದ್ದಾಂತ, ಧರ್ಮ ಬರಲೇಬೇಕು. ಸತ್ತಾಗ ಮಣ್ಣು ಮಾಡಬೇಕೋ, ಅಗ್ನಿಸ್ಪರ್ಷ ಮಾಡಬೇಕು ಎಂದು ತೀರ್ಮಾನಿಸುವುದು ಧರ್ಮ ಎಂದು ವಿವರಿಸಿದರು.
ಹುಟ್ಟು ಒಕ್ಕಲಿಗ
ನಾನು ಹುಟ್ಟುವಾಗ ಒಕ್ಕಲಿಗ. ನನಗೆ ಅರಿವು ಕೊಟ್ಟುವರು ಲಿಂಗಾಯತ ಸಮುದಾಯದ ವೀರ ಗಂಗಾಧರ ಅಜ್ಜಯ್ಯ. ನಾನು ಅಜ್ಜಯ್ಯನ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದಾಗ ಬೇಕಾದಷ್ಟು ಟೀಕೆಗಳು ಬಂದವು. ಎಲ್ಲರಿಗೂ ಅಜ್ಜಯ್ಯನ ಶಕ್ತಿಯ ಬಗ್ಗೆ ಹೇಳಿದ್ದೇನೆ. ಪ್ರಚಾರಕ್ಕಾಗಿ ನನ್ನ ಅಜ್ಜನ ಹೆಸರನ್ನು ಬಳಸುವುದಕ್ಕೆ ನಾನು ತಯಾರಿಲ್ಲ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ, ಎಂದು ಹೇಳಿದರು.
ನನ್ನ ಜನ್ಮತಾಳುವಾಗ ನನ್ನ ತಾಯಿ ಕೆಂಪೇಗೌಡರ ಧರ್ಮ ಪತ್ನಿ ಗೌರಮ್ಮ. ನಮ್ಮ ಊರಿನ ಪಕ್ಕದಲ್ಲಿ ಶಿವಾಲಯದ ಮೂರ್ತಿ ಬೆಟ್ಟ ಇದೆ. ಮಗುವಾದರೆ ಶಿವನ ಹೆಸರು ಇಡುತ್ತೇನೆ ಎಂದು ಶಿವಕುಮಾರ್ ಅಂತ ಇಟ್ಟರು.
ನಮ್ಮ ಕುಟುಂಬದಲ್ಲಿ ಮಗು ಹುಟ್ಟಿದ ತಕ್ಷಣ ಕೆಂಪೇಗೌಡ ಅಂತ ಹೆಸರಿಡುವ ಪದ್ಧತಿ ಇದೆ. ಆದರೆ, ನಾನು ಹುಟ್ಟುವುದು ತಡವಾಯ್ತು ಅಂತ ನನ್ನ ತಾಯಿ ಗೌರಮ್ಮ ನಮ್ಮೂರ ಪಕ್ಕದ ಬೆಟ್ಟದಲ್ಲಿರುವ ಶಿವಾಲಯ ಮೂರ್ತಿಗೆ ಅರಸಿಕೊಂಡರಂತೆ. ಹಾಗಾಗಿ, ನನ್ನ ಹೆಸರನ್ನು ಶಿವಕುಮಾರ ಅಂತ ಇಟ್ಟರು.
ಕಾಕತಾಳೀಯ ಅಂದರೆ ಗಂಗಾಧರ ಅಜ್ಜ ಸ್ಥಾಪನೆ ಮಾಡಿರುವ ರೇಣುಕಾಚಾರ್ಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದೆ. ಅವರ ಪಾದ ಸ್ಪರ್ಷ ಮಾಡಿದಾಗ 8ನೇ ಅದ್ಬುತ ಅನಿಸಿತು. ಹಾಗಾಗಿ, ಅವರಿಗೆ ಶರಣಾದೆ. ಅಂದಿನಿಂದ ಇಂದಿನವರೆಗೆ ನನ್ನ ಪ್ರತಿ ನಿಮಿಷ, ಗಳಿಗೆ, ಮಾತು ಅವರ ಆಶೀರ್ವಾದಿಂದ ಬರುತ್ತಿದೆ ಅಂತ ನಂಬಿದ್ದೇನೆ ಎಂದು ತಿಳಿಸಿದರು.

ಎರಡು ಎಕರೆ ಜಾಗ
ಹೊರ ಊರುಗಳಿಂದ ನಗರಕ್ಕೆ ಆಗಮಿಸುವ ವೀರಶೈವ-ಲಿಂಗಾಯತ ಮಠಾಧೀಶರು ಹಾಗೂ ಭಕ್ತಾದಿಗಳು ತಂಗಲು ಅನುಕೂಲವಾಗುವಂತೆ ಬೆಂಗಳೂರಿನ ಹೊರವಲಯದಲ್ಲಿ 2 ಎಕರೆ ಜಾಗ ಮಂಜೂರು ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
“ಹೊರ ಊರುಗಳಿಂದ ಬಂದ ಮಠಾಧೀಶರು, ಭಕ್ತರು ಉಳಿದುಕೊಳ್ಳಲು ಜಾಗ ಬೇಕು ಅಂತ ನೀವೆಲ್ಲಾ ಮನವಿ ಮಾಡಿದ್ದೀರಿ.
ಹೊರವಲಯದಲ್ಲಿ ಇದಕ್ಕಾಗಿ ಎರಡು ಎಕರೆ ಜಾಗ ಕೊಡುತ್ತೇನೆ. ವೀರಗಂಗಾಧರ ಹೆಸರು ಇಡುತ್ತೀರೋ, ಬೇರೆ ಯಾರ ಹೆಸರು ಇಡುತ್ತೀರೋ ನಿಮಗೆ ಬಿಟ್ಟ ವಿಚಾರ. ಅವರ ಆಶಯವನ್ನು ಜಾರಿ ಮಾಡಿ. ಜಾಗ ನಮ್ಮದು. ಕಟ್ಟಡ ನಿಮ್ಮದು.
ಕಾಲ, ಸಮಸ್ಯೆ ಬದಲಾಗಬಹುದು. ಮೌಲ್ಯ ಬದಲಾಗಬಾರದು. ಉಪಕಾರ ಸ್ಮರಣೆ ಇರಬೇಕು. ನುಡಿದರೆ ಮುತ್ತಿನ ಹಾರದಂತೆ ಇರಬೇಕು. ಲಿಂಗ ಮೆಚ್ಚುವಂತಿರಬೇಕು ಎಂದಿದ್ದಾರೆ ಬಸವಣ್ಣನವರು. ಕಾಯಕವೇ ಕೈಲಾಸ ಅಂತ ನಂಬಿದ್ದೇನೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಿಮ್ಮನ್ನು ರಕ್ಷಣೆ ಮಾಡುವ ವ್ಯಕ್ತಿ ನನಗಿಂತ ಮತ್ತೊಬ್ಬರು ಸಿಗಲು ಸಾಧ್ಯವಿಲ್ಲ, ಎಂದು ಸಿ ಎಂ ಹೇಳಿದರು.
ಸಮಾರಂಭದಲ್ಲಿ ಜಗದ್ಗುರು ಪಂಚಪೀಠಾಧೀಶ್ವರರಾದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ಶ್ರೀಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು, ಶ್ರೀಶೈಲ ಡಾ.ಚನ್ನಸಿದ್ಧರಾಮ ಜಗದ್ಗುರುಗಳು, ಶ್ರೀಕಾಶೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ಸಾನ್ನಿಧ್ಯ ವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ಕಾರ್ಯದರ್ಶಿ ಶ್ರೀಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ವಕ್ತರರಾದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ 300ಕ್ಕೂ ಹೆಚ್ಚು ಮಠಾಧೀಶರು, ಸಚಿವ ವಿಜಯಾನಂದ ಕಾಶಪ್ಪನವರ್, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಗಣೇಶ ಹುಕ್ಕೇರಿ, ಸಂಸದ ರಾಜಶೇಖರ್ ಹಿಟ್ನಾಳ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಕೆವಿವಿಎಸ್ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಡಿ.ಎಸ್.ಮ್ಯಾಕ್ಸ್ ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.
