ಸಾಣೇಹಳ್ಳಿ:
ಜಿಲ್ಲಾ ಮತ್ತು ಇತರೆ ರಸ್ತೆಗಳು ಬಂಡವಾಳ ವೆಚ್ಚಗಳ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಸಾಣೇಹಳ್ಳಿಯಿಂದ ಅಹಮದ್ ನಗರದ ರಾಷ್ಡ್ರೀಯ ಹೆದ್ದಾರಿಯ ಮುಖ್ಯರಸ್ತೆಯವರೆಗೆ ದ್ವಿಪಥ ರಸ್ತೆ ಕಾಮಗಾರಿಗೆ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ; ಸಾಣೇಹಳ್ಳಿ ಗ್ರಾಮದಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದ್ವಿಪಥ (ಡಬಲ್ ರೋಡ್) ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕು ಎನ್ನುವುದು ಬಹುದಿನಗಳ ಕನಸಾಗಿತ್ತು. ಈ ಕುರಿತು ಸಚಿವ ಸತೀಶ ಜಾರಕಿಹೊಳಿ ಅವರಿಗೆ ಹಾಗೂ ಶಾಸಕರಾದ ಗೋವಿಂದಪ್ಪ ಅವರ ಗಮನಕ್ಕೆ ತರಲಾಗಿತ್ತು. ಅವರ ಸಹಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಪ್ರಯತ್ನದಿಂದಾಗಿ ಯೋಜನೆಯ ಮೊದಲ ಹಂತಕ್ಕೆ ₹4.9೦ ಕೋಟಿ ಮಂಜೂರಾಗಿದೆ.

ಪ್ರಥಮದರ್ಜೆ ಗುತ್ತಿಗೆದಾರರಾದ ಹಾಲಪ್ಪನವರು ಈ ಕಾಮಗಾರಿಯ ಹೊಣೆ ವಹಿಸಿಕೊಂಡಿದ್ದು, ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಾಸಕ ಗೋವಿಂದಪ್ಪನವರು ನೇರವಾಗಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಅವರ ಮಾರ್ಗದರ್ಶನದಂತೆ ನಡೆಯಲಿದೆ.
ಈ ರಸ್ತೆ ಕಾಮಗಾರಿಯು ಸುಮಾರು 18 ಅಡಿ ಅಗಲದೊಂದಿಗೆ 5.5 ಕಿ.ಮೀ ಉದ್ದಕ್ಕೆ ನಿರ್ಮಾಣಗೊಳ್ಳಲಿದ್ದು, ಮುಂಬರುವ ನಾಟಕೋತ್ಸವ ವೇಳೆಗೆ ಪೂರ್ಣಗೊಳ್ಳಲಿ ಎಂದು ಶ್ರೀಗಳು ಹೇಳಿದರು.
ಪ್ರಥಮದರ್ಜೆಯ ಗುತ್ತಿಗೆದಾರ ಸಿ. ಹಾಲಪ್ಪ ಮಾತನಾಡಿ; ತಾಲೂಕಿನ ಅಹಮದ್‌ನಗರ ರಾಷ್ಟ್ರೀಯ ಹೆದ್ದಾರಿಯಿಂದ ವಿ.ವಿ. ನಗರ ಕ್ರಾಸ್, ಸಾಣೇಹಳ್ಳಿ, ಶೆಟ್ಟಿಹಳ್ಳಿ, ಬಾಗೂರು, ಐಲಾಪುರ, ಮಂಟೇನಹಳ್ಳಿ, ಲಕ್ಕೇನಹಳ್ಳಿ ಹಾಗೂ ಮಧುರೆ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಚಾಲನೆ ನೀಡಿದ್ದು ತುಂಬ ಸಂತೋಷವಾಯಿತು.
ಲೆಕ್ಕಶೀರ್ಷಿಕೆ 5054 ಯೋಜನೆಯಡಿ (ಜಿಲ್ಲಾ ಮತ್ತು ಇತರೆ ರಸ್ತೆಗಳು – ಇತರೆ ಬಂಡವಾಳ ವೆಚ್ಚಗಳು) ಈ ರಸ್ತೆ ಅಭಿವೃದ್ಧಿ ಮತ್ತು ಆಸ್ತಿ ನಿರ್ವಹಣೆ ಕಾಮಗಾರಿಗಳು ಕೈಗೊಳ್ಳಲಾಗುತ್ತಿದೆ.

ಅಹಮದ್‌ನಗರ ಮುಖ್ಯ ರಸ್ತೆಯಿಂದ ಸಾಣೇಹಳ್ಳಿವರೆಗಿನ ಪ್ರಮುಖ ಸಂಪರ್ಕ ರಸ್ತೆಯ ಅಭಿವೃದ್ಧಿಯಿಂದ ಈ ಭಾಗದ ಗ್ರಾಮೀಣ ಪ್ರದೇಶಗಳ ಸಂಚಾರ ಸುಗಮವಾಗಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಅಕ್ಕನ ಬಳಗದ ಸದಸ್ಯರು ವಚನಗೀತೆಗಳನ್ನು ಹಾಡಿದರು. ಊರಿನ ಮುಖಂಡರು, ಯುವಕರು ಉಪಸ್ಥಿತರಿದ್ದರು.

ಸಾಣೇಹಳ್ಳಿ ಕೆರೆಗೆ ಭದ್ರಾ ಯೋಜನೆಯ ನೀರು ಹರಿಯುತ್ತಿದ್ದು, ಈ ಮನಮೋಹಕ ದೃಶ್ಯವನ್ನು ಸಾಣೇಹಳ್ಳಿಯ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಕೆರೆಗೆ ನೀರು ಹರಿಯುತ್ತಿರುವುದನ್ನು ಕಂಡು ಹರ್ಷ ವ್ಯಕ್ತಪಡಿಸಿದ ಶ್ರೀಗಳು, ಈ ಭಾಗದ ಜಲಮಟ್ಟ ಹೆಚ್ಚಳಕ್ಕೆ ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ಭದ್ರಾ ನೀರು ಮಹತ್ವದ ನೆರವಾಗಲಿದೆ ಎಂದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6
