ಸಕಲ ಯೋಗಗಳಲ್ಲಿ ಶಿವಯೋಗ ಶ್ರೇಷ್ಠ: ಗುರುಮಹಾಂತ ಸ್ವಾಮೀಜಿ
ದಾವಣಗೆರೆ:
ಜಗತ್ತಿನ ಸಕಲ ಯೋಗಗಳಲ್ಲಿ ಶಿವಯೋಗವು ಅತ್ಯಂತ ಶ್ರೇಷ್ಠವಾಗಿದೆ ಎಂದು ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಪೂಜ್ಯರಾದ ಗುರುಮಹಾಂತ ಮಹಾಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ನಗರದ ಎಂಸಿಸಿಎನಲ್ಲಿರುವ ಶ್ರೀ ಗುರುಬಸವ ಮಂಟಪದಲ್ಲಿ ಶರಣೆ ಶಾಮನೂರು ಸಾವಿತ್ರಮ್ಮ ಕಲ್ಲಪ್ಪ ಪಬ್ಲಿಕ್ ಟ್ರಸ್ಟ್ ಹಾಗೂ ಟಿ.ಎಸ್. ಪಾಟೀಲ ಭಕ್ತವೃಂದದ ವತಿಯಿಂದ ಆಯೋಜಿಸಲಾಗಿದ್ದ ಇಷ್ಟಲಿಂಗ ದೀಕ್ಷೆ ಹಾಗೂ ಶಿವಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಅನುಭಾವ ನೀಡಿದರು.

12ನೇ ಶತಮಾನದ ಮಹಾನ್ ದಾರ್ಶನಿಕ, ವಿಶ್ವಗುರು ಬಸವಣ್ಣನವರು ಸತತ 12 ವರ್ಷಗಳ ಕಾಲ ಪ್ರಯತ್ನಿಸಿ ಇಷ್ಟಲಿಂಗವನ್ನು ಅನ್ವೇಷಿಸಿದರು. ಇದನ್ನು ಧರಿಸಲು ಯಾವುದೇ ಜಾತಿ, ಲಿಂಗ ಭೇದವಿಲ್ಲದೇ ಸರ್ವರು ತಮ್ಮ ಅಂಗದ ಮೇಲೆ ಧರಿಸಬಹುದಾಗಿದ್ದು, ಇದಕ್ಕೆ ಯಾವುದೇ ರೀತಿಯ ಮಡಿ ಮೈಲಿಗೆ ಇಲ್ಲ ಎಂದರು.
ಇಷ್ಟಲಿಂಗ ಧರಿಸಿದವರು ನಿತ್ಯ ಮುಂಜಾನೆ 3 ರಿಂದ 6 ಗಂಟೆಯೊಳಗೆ ಶಿವಯೋಗವನ್ನು ಸತತವಾಗಿ ಅಭ್ಯಾಸ ಮಾಡಿದರೆ ತಮ್ಮ ಮನಸ್ಸಿನಲ್ಲಿನ ಎಲ್ಲಾ ರೀತಿಯ ನಕಾರಾತ್ಮಕ ಭಾವನೆಗಳು ಕರಗಿ ಸರ್ವರಲ್ಲಿಯೂ ಗುರು ಲಿಂಗ ಜಂಗಮವನ್ನು ಕಾಣುತ್ತಾ ಸಮಚಿತ್ತದಿಂದ ತಮ್ಮ ಬದುಕನ್ನು ಹಸನುಗೊಳಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅವರು ಮಾತನಾಡಿ, ಪ್ರಪ್ರಥಮ ಬಾರಿಗೆ ವಿಶ್ವದಲ್ಲಿ ಬಸವ ಜಯಂತಿಯನ್ನು ಆಚರಿಸಿದ ಕೀರ್ತಿಯು ದಾವಣಗೆರೆಗೆ ಸಲ್ಲುತ್ತದೆ. ಬಸವಾದಿ ಶರಣರ ತತ್ವ ಚಿಂತನೆಗಳನ್ನು ಪ್ರಚಾರ ಹಾಗೂ ಅನುಷ್ಠಾನ ಮಾಡುವಲ್ಲಿ ವಿರಕ್ತಮಠವು ಸದಾ ಅವಿರತವಾಗಿ ಶ್ರಮಿಸುತ್ತದೆ ಎಂದು ಹೇಳಿದರು.
ಇಂದಿನ ಲಿಂಗಾಯತ ಯುವಕರು ನಮ್ಮ ಧರ್ಮದ ಅದ್ಭುತ ವಿಚಾರಗಳನ್ನು ತಿಳಿಯದೆ, ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರಕ್ಕೆ ಬಲಿಯಾಗುತ್ತಿರುವ ಸಂದರ್ಭದಲ್ಲಿ ಅವರಿಗೆ ಇಷ್ಟಲಿಂಗ ದೀಕ್ಷೆ ನೀಡಿ ಆಚರಣೆಗೆ ಅಳವಡಿಸಬೇಕೆಂಬ ಕಾರಣದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಸ್ತಾವಿಕ ನುಡಿಯಲ್ಲಿ ವಿ. ಯೋಗೇಶ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ 103 ದೀಕ್ಷಾರ್ಥಿಗಳು ಪೂಜ್ಯ ಸ್ವಾಮಿಗಳಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶಿವಕುಮಾರ ವಹಿಸಿದ್ದರು. ಶಿವನಹಳ್ಳಿ ರಮೇಶ ಉದ್ಘಾಟನೆ ನೆರವೇರಿಸಿದರು.

ಸಂಘಟಕರು, ವಿಶ್ರಾಂತ ಪ್ರಾಂಶುಪಾಲರಾದ ಜಿ. ರಾಜಶೇಖರ, ಆಶಾ, ಪೂರ್ಣಿಮ, ಅರುಣಾ ಯೋಗೇಶ, ವೀಣಾ, ಪ್ರೇಮ ಮಂಜುನಾಥ್, ಎಚ್ ಕೆ ಲಿಂಗರಾಜು, ನಿರ್ಮಲ ಶಿವಕುಮಾರ್, ವೀಣಾ ಮಂಜುನಾಥ್, ನರೇಷಪ್ಪ, ಐಗೂರು ಹನುಮಂತಪ್ಪ, ಚಂದ್ರಶೇಖರ್, ಸಂಗನಬಸವ, ರವೀಂದ್ರ, ಮಂಜುನಾಥ್ ಹಾಗೂ ಬಸವ ಭಕ್ತರು ಉಪಸ್ಥಿತರಿದ್ದರು.

