ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದಲ್ಲಿ, ರಾಷ್ಟ್ರೀಯ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣದ ವತಿಯಿಂದ, ಇದೇ ಆಗಸ್ಟ್ ೦೫ ರಿಂದ ಒಂದು ತಿಂಗಳ ಕಾಲ ಮನೆಮನೆಗೆ ವಚನ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವು ದಿನಾಲು ಸಂಜೆ ೦೬.೩೦ಕ್ಕೆ ಪ್ರಾರಂಭಗೊಳ್ಳಲಿದ್ದು, ೦೪ರಂದು ಧರ್ಮಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮದಿಂದ ಬಸವಜ್ಯೋತಿ ಹೊತ್ತಿಸಿಕೊಂಡು ಬಂದು, ದಿನಕ್ಕೊಂದರಂತೆ ಮನೆಯಿಂದ ಮನೆಗೆ ತೆರಳಿ, ಕುಟುಂಬದವರನ್ನು ಸಂಗಮಗೊಳಿಸಿಕೊಂಡು, ಮನ ಮುಟ್ಟುವಂತೆ ಗುರುಪೂಜೆ, ಲಿಂಗಪೂಜೆ ನಂತರ ಬಸವಾದಿ ಶಿವಶರಣರ ಜೀವನ ಚರಿತ್ರೆಯ ಆದಿಯಾಗಿ ವಚನಗಳ ವಿಶ್ಲೇಷಣೆ ಮತ್ತು ಶರಣರು ತೋರಿಸಿಕೊಟ್ಟ ಸತ್ಯಶುದ್ಧ ಕಾಯಕದ ಪರಿಕಲ್ಪನೆಯ ಕುರಿತಾಗಿ ಅನುಭಾವ ನೀಡಲಾಗುವದು.
ಮೌಢ್ಯಾಚರಣೆಗಳಿಂದ ಜನರನ್ನು ದೂರಮಾಡಿ, ಅವರ ಮನಪರಿವರ್ತನೆ ಮಾಡುವ ಕಾರ್ಯ ಈ ವಚನಜ್ಯೋತಿ ಕಾರ್ಯಕ್ರಮದ ಉದ್ದೇಶವಾಗಿದೆ. ಕಾರಣ ಸುತ್ತ ಮುತ್ತಲಿನ ಗ್ರಾಮದ ಶರಣ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಲು ಕಾರಣೀಭೂತರಾಗಬೇಕೆಂದು ಈ ಮಾಧ್ಯಮದ ಮೂಲಕ ರಾಷ್ಟ್ರೀಯ ಬಸವ ದಳದ ಗೌರವಾದ್ಯಕ್ಷರಾದ ಶರಣ ಬಸವನಗೌಡ ಪೋಲಿಸಪಾಟೀಲ, ಅಧ್ಯಕ್ಷರಾದ ಬಸವರಾಜ ಎಸ್ ಹೂಗಾರ ಮನವಿ ಮಾಡಿಕೊಂಡಿದ್ದಾರೆ.