ಹಿಂದುತ್ವದ ವಿಷದಿಂದ ಕನ್ನೇರಿ ಸ್ವಾಮಿ ಹೊರ ಬರಲಿ: ಲಿಂಗಾಯತ ಪೂಜ್ಯರ ಕರೆ

ಕನ್ನೇರಿ ಮಠದ ಸ್ವಾಮಿ ಲಿಂಗಾಯತ ತತ್ವಗಳನ್ನು ಗಾಳಿಗೆ ತೂರಿ ಹೋಮ-ಹವನಗಳಲ್ಲಿ ನಿರತರಾಗಿದ್ದಾರೆ.

ಕಲಬುರಗಿ

ಕನ್ನೇರಿ ಸ್ವಾಮಿಗಳ ನೇತೃತ್ವದಲ್ಲಿ ಕಲಬುರಗಿಯಲ್ಲಿ ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ತೀವ್ರವಾಗಿ ಖಂಡಿಸುವುದಾಗಿ ಆಳಂದ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಪೀಠಾಧಿಪತಿ ಕೋರಣೇಶ್ವರ ಸ್ವಾಮೀಜಿ ಹಾಗೂ ಬಸವಕಲ್ಯಾಣ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ ಹೇಳಿದ್ದಾರೆ.

ಶನಿವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು 17 ನೇ ಶತಮಾನದಲ್ಲಿ ಬಾಳಿದ್ದ ಮಹಾರಾಷ್ಟ್ರದಲ್ಲಿನ ಪೂಜ್ಯ ಕಾಡಸಿದ್ಧೇಶ್ವರರು ಬಸವಾದಿ ಶರಣ ಮಾರ್ಗದ ಉಪಾಸಕರಾಗಿದ್ದರು.

ವೈದಿಕರ ಕರ್ಮಠತನವನ್ನು ಕಾಡಸಿದ್ದೇಶ್ವರರು ತಮ್ಮ ವಚನಗಳಲ್ಲಿ ಖಂಡಿಸಿದ್ದಾರೆ. 500 ವಚನಗಳನ್ನು ರಚಿಸಿ ಶುದ್ಧ ಲಿಂಗಾಯತ ತತ್ವವನ್ನು ಪ್ರತಿಪಾದಿಸಿದ್ದಾರೆ.

ಅಂಥ ಪೀಠದ ಅಧಿಕಾರಿಗಳೆಂದು ಬಿಂಬಿಸಿಕೊಳ್ಳುತ್ತಿರುವ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಗಳು ಈಗ ಪೂರ್ತಿಯಾಗಿ ವೈದಿಕರಿಗೆ ಅರ್ಪಿಸಿಕೊಂಡು ಅವರ ಬಾಲಂಗೋಚಿಯಾಗಿ ಕೆಲಸ ಮಾಡುತ್ತಿದ್ದಾರೆ.

ಕನ್ನೇರಿ ಮಠದ ಸ್ವಾಮಿ ಲಿಂಗಾಯತ ತತ್ವಗಳನ್ನು ಗಾಳಿಗೆ ತೂರಿ ತಮ್ಮ ಮಠದಲ್ಲಿ ಯಜ್ಞೋಪವಿತ ಸಂಸ್ಕಾರ ಮಾಡುತ್ತಿದ್ದು, ಹೋಮ-ಹವನಗಳಲ್ಲಿ ನಿರತರಾಗಿದ್ದಾರೆ. ಅವರ ಕರ್ಮಕಾಂಡದ ವಿಡಿಯೋ ಈಗಾಗಲೇ ವೈರಲ್ ಆಗಿವೆ, ಎಂದು ಲಿಂಗಾಯತ ಪೂಜ್ಯರು ಹರಿಹಾಯ್ದರು.

ಹಿಂದುತ್ವವಾದಿಗಳು ಈವರೆಗೂ ತಪ್ಪಿಯೂ ಬಸವಾದಿ ಶರಣರನ್ನು ತಮ್ಮವರೆಂದು ಹೇಳಿಕೊಂಡಿಲ್ಲ. ತಪ್ಪಿಯೂ ತಮ್ಮ ಶಾಖೆಗಳಲ್ಲಿ ವಚನಗಳನ್ನು ಹೇಳಿಲ್ಲ. ಆದರೆ ಇದೀಗ ಅವರ ಕಾಕದೃಷ್ಟಿ ಬಸವಾದಿ ಶರಣರ ಮೇಲೆ ಬಿದ್ದಿದೆ ಎಂದರು.

ಕರ್ನಾಟಕ ಸರಕಾರ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ಇಟ್ಟದ್ದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡಬೇಕೆಂದು ಶಿಫಾರಸು ಮಾಡಿದ್ದು ವೈದಿಕರಲ್ಲಿ ಭಯ ಮೂಡಿಸಿದೆ ಎಂದು ಸ್ವಾಮಿಗಳು ವಿವರಿಸಿದರು.

ಲಿಂಗಾಯತರನ್ನು ತಮ್ಮ ಮತಬ್ಯಾಂಕ್ ಮಾಡಿಕೊಳ್ಳಲು ಹಾಗೂ ಎಲ್ಲ ಜಾತಿ, ಮತ, ಪಂಥದವರು ಬಸವಾದಿ ಶರಣರ ತತ್ವಾನುಯಾಯಿಗಳಾಗಿದ್ದರಿಂದ ಇವರೆಲ್ಲ ತಮ್ಮ ಕೈಬಿಟ್ಟು ಹೋಗುತ್ತಾರೆ ಎಂಬ ಆತಂಕದಿಂದ
ಅವರು ಶರಣರ ಹೆಸರು ಬಳಸಿಕೊಳ್ಳುವ ಮೂರ್ಖತನಕ್ಕೆ ಇಳಿದಿದ್ದಾರೆ ಎಂದು ದೂರಿದರು.

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಕುತಂತ್ರದಿಂದ ಕನ್ನೇರಿ ಸ್ವಾಮಿಯನ್ನು ವೈದಿಕರು ಬಳಸಿಕೊಳ್ಳುತ್ತಿದ್ದಾರೆ. ಸದರಿ ಸ್ವಾಮಿಗಳು ತಮ್ಮ ಮೂಲ ತತ್ವಗಳನ್ನು ಗಾಳಿಗೆ ತೂರಿ ವೈದಿಕರ ಕೈಗೊಂಬೆಯಾಗಿ ವರ್ತಿಸುವುದಲ್ಲದೆ, ಅಡಿಯಾಳಾಗಿರುವುದು ನಿಜಕ್ಕೂ ಖೇದಕರ.

ಅವರು ಹಿಂದೂ ಸಮ್ಮೇಳನ ಮಾಡಿಕೊಂಡು ಹೋಗಲಿ, ಅಥವಾ ಬಸವಾದಿ ಶರಣರನ್ನು ಕುರಿತು ಸಮಾವೇಶ ಮಾಡಲಿ. ಆದರೆ ಶಿವಶರಣರನ್ನು ವೈದಿಕರೊಂದಿಗೆ, ಹಿಂದುತ್ವದೊಂದಿಗೆ ಜೋಡಿಸುವ ಹುಂಬತನಕ್ಕೆ ಇಳಿಯಬಾರದು. ಅದು ಶರಣರಿಗೆ ಮಾಡುವ ದ್ರೋಹ ಎಂದು ತಿಳಿಸಿದರು.

ಇಂಥ ದ್ರೋಹವನ್ನು ನೋಡಿ ಕಣ್ಣುಮುಚ್ಚಿ ಕೂಡುವಂತಿಲ್ಲ. ಬಸವ ತತ್ವನಿಷ್ಠರಾದ ನಾವು ಕನ್ನೇರಿ ಸ್ವಾಮಿಗಳು ಮಾಡುತ್ತಿರುವ ವೈದಿಕ ಕರ್ಮಠತೆಯನ್ನು ಖಂಡಿಸುತ್ತೇವೆ. ಅವರು ಹಿಂದುತ್ವ ವಿಷಾನಿಲದಿಂದ ಹೊರಬಂದು ನಿಜವಾದ ಬಸವ ತತ್ವಗಳ ಅನುಸಂಧಾನಿಗಳಾಗಬೇಕೆಂದು ಆಗ್ರಹಿಸುತ್ತೇವೆ ಎಂದರು.

ಇಲ್ಲವಾದರೆ ನಮ್ಮ ತಾತ್ವಿಕ ಹೋರಾಟ ನಿಲ್ಲದು ಎಂಬ ಎಚ್ಚರ ಈ ಮೂಲಕ ನೀಡುತ್ತೇವೆ ಎಂದರು. ಗೋಷ್ಠಿಯಲ್ಲಿ ಕಲಬುರ್ಗಿ ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
4 Comments
  • ಕನ್ನೇರಿ ಸ್ವಾಮಿಗಳು ಟೊಂಕ ಕಟ್ಟಿ ನಿಂತಿದ್ದಾರೆ ಲಿಂಗಾಯತ ತುಳಿಯುವ ಕಾರ್ಯಕ್ಕೆ.. ಶರಣು ಶರಣಾರ್ಥಿಗಳು

  • ಕನ್ನೆರಿ ಸ್ವಾಮಿಗೆ ಬುದ್ಧಿ ಭ್ರಮೆ ಆಗಿದೆ. ಅವರನ್ನು ಖಂಡಿಸಿ.ಜೈ ಬಸವ.

  • ಮೂಲ ಕನ್ನೇರಿ ಶರಣರು ಇಂದು ಇದ್ದಿದ್ದರೆ ಈ ಕನ್ನೇರಿ ಸ್ವಾಮಿಗಳ ಅವತಾರಗಳನ್ನು ನೋಡಿ ಕಣ್ಣೀರು ಹಾಕುತ್ತಾ ಇದ್ದರು….

  • ಲಿಂಗಾಯತ ಮಠಾಧಿಪತಿಗಳು ಹಾಗೂ ಮುಖಂಡರುಗಳು ಈ ರೀತಿ ಸಭೆ ಸಮಾರಂಭಗಳಲ್ಲಿ ಹೇಳಿಕೆ ಕೊಡುವುದರಿಂದ ಅವರು ಬಗ್ಗುವುದಿಲ್ಲ ಇಂತಹ ಅನೇಕ ಕಣೇರಿ ಸ್ವಾಮಿ ಅಂತವರು ಹುಟ್ಟುತ್ತಾ ಇರುತ್ತಾರೆ. ಇದಕ್ಕೆ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ರೂಪದಲ್ಲಿ ಹೋರಾಟ ನಡೆಸಿದರೆ ಮಾತ್ರ ಇದಕ್ಕೊಂದು ಅಂತ್ಯ ಹಾಡಬಹುದು. ಮೊದಲು ಮಾಡಬೇಕಾದ ಕೆಲಸ ಮಠಾಧಿಪತಿಗಳು ಲಿಂಗಾಯತ ಸಮುದಾಯವನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ. ಓಂ ಶ್ರೀ ಗುರು ಬಸವ ಲಿಂಗಾಯತ ನಮ

Leave a Reply

Your email address will not be published. Required fields are marked *