ಗುರು ಲಿಂಗ ಜಂಗಮ ತತ್ವ ವಿವರಿಸುವ ಅಪ್ಪಣ್ಣನವರ ವಚನ

ಗುಳೇದಗುಡ್ಡ:

ಬಸವ ಕೇಂದ್ರದ ವತಿಯಿಂದ ಶನಿವಾರ ಶಿವಪುತ್ರಪ್ಪ ಪಂಪಣ್ಣಪ್ಪ ರಾಜನಾಳ ಅವರ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ನಡೆಯಿತು.

ಅಂದು ಚಿಂತನೆಗೆ ಆಯ್ದುಕೊಂಡ ವಚನ ಹೀಗಿದೆ,

ಗುರು ಗುರು ಎಂದು ಪೂಜೆಯ ಮಾಡುವರು.
ಮತ್ತೆಯಾ ಗುರುವ ನರನೆಂದೆಂಬರು, ಅವರು ಗುರುದ್ರೋಹಿಗಳು.
ಲಿಂಗ ಲಿಂಗವೆಂದು ಪೂಜೆಯ ಮಾಡುವರು, ಆ ಲಿಂಗವ ಶಿಲೆ ಎಂಬರು, ಅವರು ಲಿಂಗದ್ರೋಹಿಗಳು.
ಜಂಗಮ ಜಂಗಮವೆಂದು ಪೂಜೆಯ ಮಾಡುವರು, ಆ ಜಂಗಮವ ಜಗದ ಹಂಗಿಗರೆಂಬರು, ಅವರು ಜಂಗಮದ್ರೋಹಿಗಳು.
ಈ ಮೂರು ಕರ್ತರೆಂದು ಅರಿಯದವಂಗೆ ಕುಂಭೀಪಾಕ ನಾಯಕನರಕ ತಪ್ಪದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.

~ ಅಪ್ಪಣ್ಣ ತಂದೆಗಳು

ಪ್ರೊ.ಎಸ್.ಎಂ. ಗಡೇದವರ ಅವರು ಈ ವಚನವನ್ನು ಚಿಂತನೆಗೆ ಒಳಪಡಿಸುತ್ತಾ, ನಿಜಸುಖಿ ಹಡಪದ ಅಪ್ಪಣ್ಣ ತಂದೆಗಳು ಅಪ್ಪ ಬಸವ ತಂದೆಯ ಆಪ್ತ ಕಾರ್ಯದರ್ಶಿಗಳಾಗಿ ನಡೆದುಕೊಂಡು ಕೊನೆಯವರೆಗೂ ಅವರೊಂದಿಗೆ ಕೂಡಿಯೇ ಇದ್ದವರು. ಹಡಪದ ಅಪ್ಪಣ್ಣನವರು ಜಾತಿಯಿಂದ ಮೇಲು ಕೀಳು ಎಂದು ನಿರ್ಧರಿಸುತ್ತಿದ್ದ ಆ ಕಾಲದಲ್ಲಿ ಅದನ್ನು ಕಿತ್ತೆಸೆದು ಇಡೀ ಹಡಪದ ಸಮಾಜವನ್ನು ತಮ್ಮ ತೆಕ್ಕೆಯಲ್ಲಿ ತೆಗೆದುಕೊಂಡು ಆ ಸಮಾಜದ ಅನಿಷ್ಟತೆಯನ್ನೇ ಬಸವಣ್ಣನವರು ಕಿತ್ತೆಸೆದರು.

 ಕೀಳರಿಮೆಯಿಂದ ಮೇಲೆದ್ದು ಬಂದ ಅಪ್ಪಣ್ಣನವರು ಎಂಥ ಜ್ಞಾನಿಗಳಾಗಿ ಹೊರಹೊಮ್ಮಿದರು ಎಂಬುದಕ್ಕೆ ಅವರ ಈ ವಚನವೇ ಸಾಕ್ಷಿಯಾಗಿದೆ. ಲಿಂಗಾಯತದ ಮೂಲತತ್ವವೇ ಆಗಿರುವ ಗುರು ಲಿಂಗ ಜಂಗಮವೆಂದೆಂಬ ತ್ರಿವಿಧವು ಬೇರೆ ಬೇರೆ ಅಲ್ಲˌ ಅವು ಪರಶಿವ ತತ್ವದ ಬೇರೆ ಬೇರೆ ರೂಪಗಳು ಹಾಗೂ ಇವು ಮೂರ್ತವಾಗಿರುವ ವ್ಯಕ್ತಿ ವಸ್ತುಗಳಲ್ಲ; ತತ್ವಗಳು.

ಇಂದು ಗುರು ಜಂಗಮರನ್ನು ವ್ಯಕ್ತಿಗಳನ್ನಾಗಿಸಿ ಲಿಂಗವನ್ನು ಶಿಲೆಯನ್ನಾಗಿಸಿದ್ದವರು ಧರ್ಮ ದ್ರೋಹಿಗಳು. ಮೂಲತಃ ಶಾಂತ ಸ್ವಭಾವದವರಾದ ಹಡಪದ ಅಪ್ಪಣ್ಣನವರು ತತ್ವ ವಿಮುಖಿಗಳನ್ನು ಕಂಡು ಕೆರಳಿದ್ದಾರೆ. ಹಾಗೂ ಗುರು ಲಿಂಗ ಜಂಗಮರೇ ಮೂಲ ಲಿಂಗ ರೂಪಗಳೆಂದು ಈ ವಚನದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕರಾದ ವಸಂತ ಚೌಹಾನ್ ಅವರು, “ಹಡಪದ ಅಪ್ಪಣ್ಣನವರು ಧರ್ಮಗುರು ಬಸವಣ್ಣನವರನ್ನು ಒಪ್ಪಿ ಅಪ್ಪಿಕೊಂಡು ನಡೆದವರು.  ಅದಕ್ಕಾಗಿಯೇ ಇಂಥ ತಾತ್ವಿಕ ಅನುಭವದ ವಚನವನ್ನು ರಚಿಸಲು ಅವರಿಗೆ ಶಕ್ಯವಾಯಿತು. ಶರಣ ಧರ್ಮದ ತತ್ವ ಸಿದ್ಧಾಂತಗಳನ್ನು ಇಂದಿನಂತೆ ಅಂದೆಯೂ ತಪ್ಪಾಗಿ ಅರ್ಥೈಸಿಕೊಂಡವರು ಕೆಲವರಾದರೂ ಇದ್ದಿರಬಹುದು.

ಆ ಗೊಂದಲವನ್ನು ಕಳೆಯಲಿಕ್ಕಾಗಿಯೇ ಅಪ್ಪಣ್ಣ ಶರಣರು ಈ ವಚನದಲ್ಲಿ ಗುರು ಲಿಂಗ ಜಂಗಮರು ಒಂದೇ ತತ್ವದ ಮೂರು ರೂಪಗಳು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಾ, ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದವರಿಗೆ ನರಕಪ್ರಾಪ್ತಿಯಾಗುವುದೆಂದು ಎಚ್ಚರಿಸಿದ್ದಾರೆ.

ಒಮ್ಮೆ ಈ ಶರಣಮಾರ್ಗದಲ್ಲಿ ಸಾಗಿದ ಮೇಲೆ ಮೂಲತತ್ವಗಳಲ್ಲಿ ತಪ್ಪನ್ನು ಅರ್ಥೈಸಲಾಗದು. ಹಾಗೆ ಮಾಡಿದಲ್ಲಿ ಶರಣರಿಗೆ ಅಪಚಾರ ಬಗೆದಂತೆ ಆಗುತ್ತದೆ” ಎಂದು ತಿಳಿ ಹೇಳಿದರು.

ಈ ವಚನದ ಚಿಂತನೆಯನ್ನು ಮುಂದುವರೆಯಿಸುತ್ತ ಹಿರಿಯರಾದ ಸಿದ್ದಲಿಂಗಪ್ಪ ಬರಗುಂಡಿಯವರು “ಹಡಪದ ಅಪ್ಪಣ್ಣ ತಂದೆಗಳು ಬಸವಣ್ಣನವರ ನೆರಳಿನಂತೆ ಇದ್ದು ಲಿಂಗಾಯತ ಧರ್ಮದ ತತ್ವಗಳನ್ನು ಅರೆದು ಕುಡಿದ ಅನುಭಾವಿಗಳಾಗಿದ್ದರು.  ಗುರುವನ್ನು ನರನೆಂದು ಭಾವಿಸಿದವರನ್ನು, ಕಲ್ಲನ್ನು ಶಿಲೆ ಎಂದು ತಿಳಿದವರನ್ನು ಅಂತೆಯೇ ಜಂಗಮವನ್ನು ಬೇಡುವ ಸಾಮಾನ್ಯ ವ್ಯಕ್ತಿ ಎಂದು ತಿಳಿದವರನ್ನು ಅನೇಕ ಶರಣರು ಖಂಡಿಸಿದ್ದಾರೆ. ಇವು ಮೂರು ಆ ಪರಬ್ರಹ್ಮ ಸ್ವರೂಪದ ಭಾಗಗಳೇ. ನೋಡಲಿಕ್ಕೆ ಮೂರಾಗಿ ಕಂಡರೂ ಭಾವಿಸಲು ಒಂದೇ ತತ್ವ ಆಗಿವೆ. ಗುರು ಲಿಂಗ ಜಂಗಮವನ್ನು ಕ್ರಮವಾಗಿ ಅರಿವು ಆಚಾರ ಅನುಭಾವಗಳೆಂದು ಕರೆಯಲಾಗಿದೆ.

ಗುರುವೆಂಬುದು ವ್ಯಕ್ತಿಯಲ್ಲ ಅದೊಂದು ತತ್ವವಾಗಿದೆ.  ಶಿಷ್ಯನಲ್ಲಿರುವ ಅಜ್ಞಾನವನ್ನು ಕಿತ್ತೆಸೆದು ಆತನ ಅರಿವಿನ ಕುರುಹಾಗಿ ಇಷ್ಟಲಿಂಗವನ್ನು ಆತನ ಕರಕಮಲಕ್ಕೆ ನೀಡಿ ಶಿಷ್ಯನ ಸರ್ವಾಂಗದಲ್ಲೆಲ್ಲಾ ಲಿಂಗ ಗುಣಗಳ ತತ್ವ ಅಳವಡಿಸಿದ ಕ್ರಿಯಾಮೂರ್ತಿ ಗುರುವನ್ನು ಕರ್ತ್ರನೆಂದು ಭಾವಿಸದೆ ಸಾಮಾನ್ಯ ನರನೆಂದು ಭಾವಿಸಿದರೆ ಆತನು ಗುರುದ್ರೋಹಿ ಆಗುತ್ತಾನೆ. ಅಂತೆಯೇ ತನ್ನ ಕರಸ್ಥಳದಲ್ಲಿರುವ ಲಿಂಗವು ಸ್ಥೂಲ ಶರೀರಕ್ಕೆ ಇಷ್ಟಲಿಂಗವಾಗಿ, ಸೂಕ್ಷ್ಮ ಶರೀರಕ್ಕೆ ಪ್ರಾಣ ಲಿಂಗವಾಗಿ ಹಾಗೂ ಕಾರಣ ಶರೀರಕ್ಕೆ ಭಾವಲಿಂಗವಾಗಿ ವ್ಯಾಪಿಸುತ್ತದೆ.

ಗುರುವಿನಿಂದ ದೊರೆತ ಈ ಕ್ರಿಯಾಲಿಂಗ ಈಗ ಆಚಾರವಾಗಿರುತ್ತದೆ.  ಅರಿವು ಆಚಾರಗಳ ಸಮ್ಮಿಶ್ರಣವಾದಾಗ ಈ ಲಿಂಗ ಕೇವಲ ಹಾಗೆಂದು ಭಾವಿಸಿದರೆ ಆತ ಲಿಂಗದ್ರೋಹಿ ಎಂದು ಪರಿಗಣಿಸಲ್ಪಡುತ್ತಾನೆ. ಇದಲ್ಲದೆ ಜಂಗಮನು ಸಹ ವ್ಯಕ್ತಿಯಲ್ಲ ಜಾತಿ ಜಂಗಮವಲ್ಲ ಅದೊಂದು ತತ್ವ. ಅರಿವು ಆಚಾರವಾಗಿ ಆಚಾರ ಅನುಭಾವವಾಗಿನ ಸ್ಥಿತಿ ಜಂಗಮತತ್ವ. ಲಿಂಗಾಂಗ ಸಮರಸ ಭಾವದ ಇರುವಿಕೆ ಜಂಗಮವಾಗುತ್ತದೆ. ಇಂಥ ಲಿಂಗಾಂಗ ಸಾಮರಸ್ಯದ ಇರುವಿಕೆಯನ್ನು ಪ್ರತ್ಯಕ್ಷವಾಗಿ ಪಸರಿಸಲು ಹೊರಟ ಜ್ಞಾನಿಯನ್ನು ಬಾಯುಪಚಾರದಲ್ಲಿ ಜಂಗಮನೆನ್ನುತ್ತ ಆತನನ್ನು ವ್ಯಕ್ತಿ ಎಂದು ಭಾವಿಸಿˌ ಕೇವಲ ಭಿಕ್ಷುಕನಂತೆ ಕಂಡವರನ್ನು ಜಂಗಮದ್ರೋಹಿ ಎನ್ನಲಾಗುತ್ತದೆ.

ಹೀಗಾಗಿ ಗುರು ಲಿಂಗ ಜಂಗಮವನ್ನು ಮೂಲ ಪರವಸ್ತುವಾದ ಕರ್ತೃ ಎಂದೆಣಿಸದೆ ಅವರನ್ನು ಸಾಮಾನ್ಯರೆಂದು ಅಪಮೌಲ್ಯೀಕರಿಸಿದವರು ಪಾಪಿಗಳು. ಅವರಿಗೆ ಶಿಕ್ಷೆ ತಪ್ಪದು ಎಂಬ ಭಾವ ಶರಣ ಹಡಪದ ಅಪ್ಪಣ್ಣನವರಾಗಿದೆ ” ಎಂದು ಬರಗುಂಡಿಯವರು ಹೇಳಿದರು.

ಕಾರ್ಯಕ್ರಮದಲ್ಲಿ ಜಯಶ್ರೀ ಬರಗುಂಡಿಯವರಿಂದ ವಚನ ಪ್ರಾರ್ಥನೆಯಾಯಿತು. ಕಾರ್ಯಕ್ರಮವನ್ನು ಸುರೇಶ ರಾಜನಾಳ ಅವರು ನಡೆಯಿಸಿ ಆರಂಭದಲ್ಲಿ ಸ್ವಾಗತಿಸಿದರು. ಕೊನೆಯಲ್ಲಿ ಪ್ರೊ. ಬಸಲಿಂಗಯ್ಯ ಕಂಬಾಳಿಮಠ ಶರಣು ಸಮರ್ಪಣೆಗೈದರು.

ಕಾರ್ಯಕ್ರಮದಲ್ಲಿ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸ, ಬಸವರಾಜ ಇಲಾಳಶೆಟ್ಟರ, ಬಸವರಾಜ ಖಂಡಿ, ಬಸವರಾಜ ರಾಜನಾಳ, ಪ್ರೊ. ಶಿವಪುತ್ರಪ್ಪ ರಾಜನಾಳ ಹಾಗೂ ಅವರ ಕುಟುಂಬ ವರ್ಗ, ರಾಜಶ್ರೀ ಕರಣೆ, ಶರಣೆ ತಿಪ್ಪಾ, ಪ್ರೊ. ನೀಲಕಂಠಮಠ, ಪ್ರೊ. ಮಂಗಳೂರು, ಡಾ. ಗಿರೀಶ, ಕೃಷ್ಣಪ್ಪ ಶಿರೂರ, ಕೃಷ್ಣಾಜಿ ಮಹೇಂದ್ರಕರ ಮೊದಲಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *